ಇದು ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ಮಾಡಿದ ಅವಮಾನವಲ್ಲ, ಮಹಿಳಾ ಕುಲಕ್ಕೆ ಮಾಡಿದ ಅವಮಾನ!
ಆರ್ ಸಿಬಿ ಗೆಲ್ಲದೇ ಇರಲು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ಕಾರಣ ಎಂದು ಗಡಪಡೆ ಎಂಬ ಪೇಜ್ ನಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿ ಬರೆದುಕೊಂಡಿರುವುದು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಇದು ಕೇವಲ ಅಶ್ವಿನಿ ಅವರಿಗೆ ಮಾತ್ರವಲ್ಲದೇ ಇಡೀ ಮಹಿಳಾ ಕುಲಕ್ಕೆ ಮಾಡಿರುವ ಅವಮಾನವಾಗಿದೆ.
ಇಂತಹ ಅವಮಾನಗಳು ಈ ದೇಶದಲ್ಲಿ ಇಂದಿಗೂ ಜೀವಂತವಿದೆ ಎಂದರೆ ಅದನ್ನು ಬೇರು ಸಮೇತವಾಗಿ ಕಿತ್ತೊಗೆಯಲೇ ಬೇಕು. ಮನುವಾದ ಬೇಧ ಭಾವಗಳನ್ನು ಬೇರು ಸಮೇತವಾಗಿ ಕಿತ್ತೊಗೆಯ ಬೇಕು ಎಂದು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಇದೇ ಕಾರಣಕ್ಕೆ ಹೋರಾಟ ಮಾಡಿದ್ದರು. ಮನುಸ್ಮೃತಿಯನ್ನು ಸುಟ್ಟು ಹಾಕಿದ್ದರು.
ಗಂಡ ಸತ್ತರೆ, ಮಹಿಳೆ ಅಪವಿತ್ರಳಂತೆ, ಆಕೆಯನ್ನು ಕಂಡರೆ ಅಶುಭವಂತೆ, ಆಕೆಯ ಕೈಯಿಂದ ಯಾವುದೇ ಶುಭ ಕಾರ್ಯ ಮಾಡಿಸಬಾರದು, ಹೀಗೆ ಎಷ್ಟೋ ಶತಮಾನಗಳಿಂದ ಹೆಣ್ಣಿನ ಜೀವನವನ್ನು ನರಕ ಮಾಡಲಾಗಿತ್ತು. ಹೆಣ್ಣಿಗೂ ಸಮಾನ ಅವಕಾಶಗಳನ್ನು ನೀಡಿ ಆಕೆಯನ್ನೂ ಸಮಾಜದಲ್ಲಿ ಗೌರವಯುತವಾಗಿ ಬದುಕಲು ಕಾನೂನು ರೂಪಿಸಿದವರು.
ಡಾ.ಬಿ.ಆರ್.ಅಂಬೇಡ್ಕರ್ ಅವರು. ಇಂದು ಮಹಿಳೆಯರು ದೇವರ ಸ್ಥಾನದಲ್ಲಿ ಅಂಬೇಡ್ಕರ್ ಅವರನ್ನು ಪೂಜೆ ಮಾಡಿದರೂ ಅವರ ಋಣ ತೀರಿಸಲು ಸಾಧ್ಯವಿಲ್ಲ.
ಇಂದಿಗೂ ಮನುವಾದದ ಅಸಹ್ಯಗಳು ಆಗಾಗ ನಮ್ಮ ಸಮಾಜದಲ್ಲಿ ದುರ್ನಾತ ಬೀರುತ್ತವೆ. ಅದರ ಪೈಕಿ ಗಡಪಡೆ ಎನ್ನುವ ಪೇಜ್ ನಲ್ಲಿ ಪೋಸ್ಟ್ ಮಾಡಿರುವ ವ್ಯಕ್ತಿಯೂ ಮನುವಾದದ ಮನೋ ರೋಗಿಯೇ ಆಗಿದ್ದಾನೆ. ಇಂತಹ ರೋಗಿಗಳು ಸಾಕಷ್ಟು ಜನ ಇನ್ನೂ ನಮ್ಮ ಸಮಾಜದಲ್ಲಿದ್ದಾರೆ.
ನಮ್ಮ ದೇಹದಲ್ಲೇ ಬೇಧ ಭಾವಗಳನ್ನು ಸೃಷ್ಟಿರುವ ವಿಕಾರವೇ ಮನುವಾದ. ಬಲ ಕೈಯಲ್ಲಿ ಕೊಟ್ಟರೆ ಶುಭವಂತೆ, ಎಡಗೈಯಲ್ಲಿ ಕೊಟ್ಟರೆ ಅಶುಭವಂತೆ ಹೀಗೆ ನೂರಾರು ಬೇಧ ಭಾವಗಳು ನಮ್ಮ ಸಮಾಜದಲ್ಲಿ ಇಂದಿಗೂ ಜೀವಂತವಿದೆ. ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಮನುವಾದದಿಂದ ಅವಮಾನವಾದಾಗ ಒಂದು ಬಾರಿ ಅದರ ವಿರುದ್ಧ ಎಲ್ಲರೂ ಆಕ್ರೋಶ ವ್ಯಕ್ತಪಡಿಸುತ್ತಾರೆ. ಮರುದಿನ ಅದನ್ನೇ ನಮ್ಮ ಸಂಸ್ಕೃತಿ ಎಂದು ಒಪ್ಪಿಕೊಳ್ಳುವ ಕೊಳಕು ಜಾಯಮಾನ ಆರಂಭವಾಗುತ್ತದೆ.
ಇಂದಿಗೂ ನಮ್ಮ ಸಮಾಜದಲ್ಲಿ ಧ್ವನಿಯಿಲ್ಲದ ಎಷ್ಟೋ ಮಹಿಳೆಯರು ತಮ್ಮದಲ್ಲದ ತಪ್ಪಿಗೆ ಅವಮಾನ ಎದುರಿಸುತ್ತಿದ್ದಾರೆ. ಇಂತಹ ಎಷ್ಟೋ ಕೊಳಕು, ಮೂಢನಂಬಿಕೆಗಳನ್ನು ಇಂದಿಗೂ ಕೆಲವರು ಅದು ಸಂಪ್ರದಾಯ, ಸಂಸ್ಕೃತಿ ಅಂತ ಆಚರಿಸುತ್ತಿದ್ದಾರೆ. ಹೆಣ್ಣನ್ನು ತಾಯಿ ಅಂತ ಒಂದೆಡೆ ಕರೆಯೋದು, ಇನ್ನೊಂದೆಡೆ ಆಚರದ ಹೆಸರಿನಲ್ಲಿ ಅವಮಾನಿಸುವುದು. ಇಂತಹ ವಿಕೃತಿಗಳಿಗೆ ಕಾನೂನಿನ ಮೂಲಕ ತಕ್ಕ ಉತ್ತರ ನೀಡಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth