ವಿಶ್ವೇಶರ ಹೆಗಡೆ ಕಾಗೇರಿ ಸೇರಿದಂತೆ ಮೂವರ ಮೇಲೆ ಅನಂತ್ ಕುಮಾರ್ ಹೆಗಡೆ ಹಲ್ಲೆ ನಡೆಸಿದ್ದರು | ಆನಂದ್ ಅಸ್ನೋಟಿಕರ್ ಗಂಭೀರ ಆರೋಪ
ಕಾರವಾರ: ಅನಂತ್ ಕುಮಾರ್ ಹೆಗಡೆ ಬದುಕಿದ್ದರೇನು ಸತ್ತರೇನು ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಇದೀಗ ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದು, ಅನಂತ್ ಕುಮಾರ್ ಹೆಗಡೆ ಸಾಯಲಿ ಎಂಬ ಅರ್ಥದಲ್ಲಿ ನಾನು ಹೇಳಿಕೆ ನೀಡಿಲ್ಲ ಎಂದು ಅವರು ಹೇಳಿದ್ದಾರೆ.
ಕಾರವಾರದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರು ಬಾರಿ ಸಂಸದರಾಗಿ ಆಯ್ಕೆಯಾದ ಅನಂತಕುಮಾರ್ ಹೆಗಡೆ ಜಿಲ್ಲೆಯಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡಿಲ್ಲ. ಅದಕ್ಕಾಗಿ ಅವರು ಇದ್ದರೇನು, ಹೋದರೇನು ಅಂದಿದ್ದೆ. ನನ್ನ ಈ ಹಿಂದಿನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತೇನೆ. ಆದರೆ ಅವರು ಸಾಯಲಿ ಎಂದು ನಾನು ಬಯಸಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಮೋದಿ ಅಭಿಮಾನಿ, ಸಂಸತ್ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕೆ ಇಳಿದಾಗ ಮೋದಿ ವಿರುದ್ಧ ಒಂದೇ ಒಂದು ಮಾತನ್ನೂ ಹೇಳಿರಲಿಲ್ಲ. ಅನಂತಕುಮಾರ್ ಬಾಯಿಗೆ ಬಂದಂತೆ ಮಾತನಾಡಿ ಮೋದಿಯವರಿಗೆ ಮುಜುಗರ ತಂದಿದ್ದಾರೆ ಎಂದು ತಿಳಿಸಿದರು ಹೇಳಿದರು.
ಈ ಹಿಂದೆ ಹಾಲಿ ವಿಧಾನಸಭಾಧ್ಯಕ್ಷ ವಿಶ್ವೇಶರ ಹೆಗಡೆ ಕಾಗೇರಿ, ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹಾಗೂ ಕಾರವಾರದ ಜಗದೀಶ್ ಬಿರ್ಕೋಡಿಕರ್ ಎನ್ನುವವರ ಮೇಲೂ ಅನಂತಕುಮಾರ್ ಹೆಗಡೆ ಹಲ್ಲೆ ಮಾಡಿದ್ದರು ಎಂದರು. ಅನಂತಕುಮಾರ್ ಬಗ್ಗೆ ಮಾತನಾಡಿದೆ ಎಂದು ನನ್ನ ನಡತೆ ಬಗ್ಗೆ ಬಿಜೆಪಿಯ ಕೆಲವು ಮರಿ ಪುಢಾರಿಗಳು ಮಾತನಾಡುತ್ತಾರೆ. ಈ ಮೂವರು ಅನಂತಕುಮಾರ್ ನಮ್ಮ ಮೇಲೆ ಹಲ್ಲೆ ಮಾಡಿಲ್ಲವೆಂದು ದೇವರ ಬಳಿ ಬಂದು ಪ್ರಮಾಣ ಮಾಡಲಿ. ಅವಾಗ ಯಾರ ನಡತೆ ಏನು ಎಂದು ಎಲ್ಲರಿಗೂ ಗೊತ್ತಾಗಲಿದೆ ಎಂದು ಸವಾಲು ಹಾಕಿದರು. ತನ್ನ ತಾಯಿಯ ಚಿಕಿತ್ಸೆಗೆ ಒಂದೈದು ನಿಮಿಷ ತಡವಾಯಿತೆಂದು ಶಿರಸಿ ಟಿಎಸ್ ಎಸ್ ಆಸ್ಪತ್ರೆಯ ವೈದ್ಯರಿಗೇ ಅನಂತಕುಮಾರ್ ಹಿಗ್ಗಾಮುಗ್ಗ ಹೊಡೆದಿದ್ದರು. ಇದು ಅವರ ಸಂಸ್ಕೃತಿಯನ್ನು ತಿಳಿಸುತ್ತದೆ ಎಂದು ಅವರು ಹೇಳಿದರು.