ಕೊವಿಡ್ ಹೆಸರಿನಲ್ಲಿ ಪೊಲೀಸರಿಂದ ದೌರ್ಜನ್ಯ: ಅಸ್ವಸ್ಥರಾಗಿ ರಸ್ತೆಯಲ್ಲೇ ನರಳಾಡಿದ ಅನಾರೋಗ್ಯ ಪೀಡಿತ
09/05/2021
ನಂಜನಗೂಡು: ತಂದೆಯನ್ನು ಚಿಕಿತ್ಸೆಗೆ ಕರೆದುಕೊಂಡುಹೋಗಿ ವಾಪಸ್ ಆಗುತ್ತಿದ್ದ ವೇಳೆ ವ್ಯಕ್ತಿಯೋರ್ವನ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿದ್ದು, ಸಂತ್ರಸ್ತ ವ್ಯಕ್ತಿ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಚಂದ್ರಶೇಖರಯ್ಯ ಎಂಬವರು, ಬಿಪಿ, ಶುಗರ್ ರೋಗಿಯಾಗಿರುವ ತಮ್ಮ ತಂದೆಯನ್ನು ಎಂದಿನಂತೆಯೇ ಬೈಕ್ ನಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಹುಲ್ಲಹಳ್ಳಿ ರಸ್ತೆಯ ಆದರ್ಶ ಶಾಲೆ ಬಳಿ ಬರುತ್ತಿದ್ದ ವೇಳೆ ಪೊಲೀಸರು ಅಡ್ಡಹಾಕಿದ್ದಾರೆ.
ಪೊಲೀಸರು ಕೊವಿಡ್ ನಿಯಮದ ಹೆಸರಿನಲ್ಲಿ ಅನಾರೋಗ್ಯ ಪೀಡಿತ ತಂದೆ ಹಾಗೂ ಮಗನ ಜೊತೆಗೆ ರಾದ್ದಾಂತ ಸೃಷ್ಟಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದಾಗಿ ತಂದೆ ಅಸ್ವಸ್ಥರಾಗಿ ರಸ್ತೆಯಲ್ಲಿಯೇ ನರಳಾಗಿದ್ದಾರೆ ಎಂದು ಚಂದ್ರಶೇಖರಯ್ಯ ಆರೋಪಿಸಿದ್ದಾರೆ.