ಕೊರೊನಾ ನಡುವೆಯೇ ಕಾಣಿಸಿಕೊಂಡಿತು ನಿಗೂಢ ಕಾಯಿಲೆ | ಆಂಧ್ರದಲ್ಲಿ 1 ಸಾವು, 347 ಜನರು ಅಸ್ವಸ್ಥ
ಎಲ್ಲೂರು: ಆಂಧ್ರಪ್ರದೇಶದ ಎಲ್ಲೂರಿನಲ್ಲಿ ನಿಗೂಢ ಕಾಯಿಲೆಯೊಂದು ಹರಡಿದ್ದು, ಈಗಾಗಲೇ 347 ಜನರಿಗೆ ಈ ರೋಗ ಹರಡಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ . ಭಾನುವಾರ 292 ಜನರು ಅನಾರೋಗ್ಯಕ್ಕೆ ಗುರಿಯಾಗಿದ್ದಾರೆ.
ನಿಗೂಢ ರೋಗದ ಹಿನ್ನೆಲೆಯಲ್ಲಿ ಮಂಗಳಗಿರಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರ ತಂಡ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಂದ ರಕ್ತದ ಮಾದರಿ ಸಂಗ್ರಹಿಸಿದ್ದು, ತನಿಖೆ ನಡೆಸಲಾಗುತ್ತಿದೆ.
20ರಿಂದ 30 ವರ್ಷ ವಯಸ್ಸಿನವರಲ್ಲಿ ಈ ಕಾಯಿಲೆ ಕಂಡು ಬಂದಿದೆ. 12 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲೂ ಈ ರೋಗ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಈ ಕಾಯಿಲೆಗೆ ಗುರಿಯಾದವರು ದಿಢೀರ್ ಆಗಿ ಕುಸಿದು ಬೀಳುವುದು, ವಾಕರಿಕೆ, ಮೂರ್ಛೆ ಹೋಗುವುದು ಮೊದಲಾದ ರೋಗ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಈ ರೋಗಕ್ಕೆ ಕಾರಣ ಏನು ಎಂಬ ಬಗ್ಗೆ ನಾನಾ ಗೊಂದಲಗಳೂ ಸೃಷ್ಟಿಯಾಗಿವೆ. ಸೊಳ್ಳೆಗೆ ಬಳಸಲಾಗಿರುವ ಹೊಗೆಯಿಂದ ಈ ಕಾಯಿಲೆ ಹರಡಿತೇ ಅಥವಾ ಕಲುಷಿತ ನೀರಿನಿಂದ ಈ ರೋಗ ಹರಡಿತೇ? ಮೊದಲಾದ ಅನುಮಾನಗಳು ಸೃಷ್ಟಿಯಾಗಿವೆಯಾದರೂ ಇದ್ಯಾವುದೂ ಇನ್ನೂ ಸ್ಪಷ್ಟಗೊಂಡಿಲ್ಲ.
ಇನ್ನೂ ವಿಚಾರ ತಿಳಿಯುತ್ತಿದ್ದಂತೆಯೇ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ. ಬಿಜೆಪಿ ಸಂಸದ ಜಿ.ವಿ.ಎಲ್ ನರಸಿಂಹ ರಾವ್, ‘ವಿಷಕಾರಿ ಆರ್ಗನೋಕ್ಲೋರಿನ್ ಎಂಬ ಪದಾರ್ಥವು ರೋಗಕ್ಕೆ ಕಾರಣವಿರಬಹುದು ಎಂದು ತಜ್ಞರು ಹೇಳಿದ್ದಾರೆ ಎಂದು ಹೇಳಿದ್ದಾರೆ. ಆದರೆ ಇದು ಸ್ಪಷ್ಟ ಮಾಹಿತಿಯೇ ಎನ್ನುವುದು ತಿಳಿದು ಬಂದಿಲ್ಲ.