ಅಂಗಾಂಗ ದಾನಕ್ಕೆ ಸಿದ್ಧವಾಗುತ್ತಿರುವಾಗಲೇ ಕಣ್ಣು ತೆರೆದು ಉಸಿರಾಡಿದ ಯುವಕ!
ಲಂಡನ್: ಸತ್ತ ಮನುಷ್ಯರು ಜೀವ ಪಡೆದುಕೊಳ್ಳುವಂತಹ ಹಲವಾರು ಘಟನೆಗಳು ನಡೆಯುತ್ತಿರುತ್ತದೆ. ಇದನ್ನು ಕೆಲವರು ಪುನರ್ಜನ್ಮ ಎಂದೋ, ಪವಾಡ ಎಂದೂ ಹೇಳುತ್ತಾರೆ. ಆದರೆ ಇದಕ್ಕೆ ವಿಜ್ಞಾನದಲ್ಲಿ ಸ್ಪಷ್ಟ ಕಾರಣಗಳನ್ನು ನೀಡಲಾಗುತ್ತದೆ. ಆದರೆ, ಇಲ್ಲೊಬ್ಬ 18 ವರ್ಷದ ಯುವಕ ವಿಜ್ಞಾನಿಗಳಿಗೆ ಸವಾಲಾಗಿದ್ದಾನೆ.
ಆತನ ಹೆಸರು ಲೆವೀಸ್ ರಾಬರ್ಟ್ಸ್. ಮಾರ್ಚ್ 13ರಂದು ವ್ಯಾನ್ ವೊಂದು ಈತನಿಗೆ ಡಿಕ್ಕಿ ಹೊಡೆದಿತ್ತು. ಈ ಘಟನೆ ನಡೆದು ನಾಲ್ಕು ದಿನಗಳ ನಂತರ ರಾಬರ್ಟ್ ನ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡಿದೆ ಎಂದು ವೈದ್ಯರಿಗೆ ತಿಳಿದು ಬಂತು. ಹೀಗಾಗಿ ರಾಬರ್ಟ್ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು.
ಈ ಸಂದರ್ಭ ರಾಬರ್ಟ್ ನ ಪೋಷಕರು, ತಮ್ಮ ಮಗ ಸಣ್ಣ ವಯಸ್ಸಿನಲ್ಲೇ ಸಾವಿಗೀಡಾಗಿದ್ದಾನೆ. ಆತನ ಅಂಗಾಂಗಗಳಿಂದ ಇನ್ನಷ್ಟು ಜೀವಗಳು ಉಳಿಯಲಿ ಎಂದು ಹಾರೈಸಿ, ಪುತ್ರನ ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ.
ರಾಬರ್ಟ್ ನ ಅಂಗಾಂಗಳನ್ನು ಸಂಗ್ರಹಿಸಲು ವೈದ್ಯರು ಸರ್ಜರಿ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಂಡರು. ಸರ್ಜರಿ ಮಾಡಲು ವೈದ್ಯರು ಮುಂದಾಗುತ್ತಿದ್ದಂತೆಯೇ ಏಕಾಏಕಿ ರಾಬರ್ಟ್ ಉಸಿರಾಡಿದ್ದಾನೆ. ಇದರಿಂದ ವೈದ್ಯರೇ ಬೆಚ್ಚಿಬಿದ್ದಿದ್ದಾರೆ.
ಯುವಕ ಜೀವಂತವಾಗಿದ್ದಾನೆ ಎನ್ನುವುದು ತಿಳಿಯುತ್ತಿದ್ದಂತೆಯೇ ಸರ್ಜರಿಯನ್ನು ಕೈಬಿಟ್ಟ ವೈದ್ಯರು ತಕ್ಷಣವೇ ರಾಬರ್ಟ್ ಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಸದ್ಯ ರಾಬರ್ಟ್ ಗೆ ಚಿಕಿತ್ಸೆ ಮುಂದುವರಿದಿದೆ.