4 ತಿಂಗಳಿನಿಂದ ನಿದ್ದೆ ಮಾಡ್ತಾ ಇದ್ದೀರಾ?: ಸಚಿವ ಅಂಗಾರಗೆ ಸಿದ್ದರಾಮಯ್ಯ ತರಾಟೆ - Mahanayaka
6:20 PM Thursday 12 - December 2024

4 ತಿಂಗಳಿನಿಂದ ನಿದ್ದೆ ಮಾಡ್ತಾ ಇದ್ದೀರಾ?: ಸಚಿವ ಅಂಗಾರಗೆ ಸಿದ್ದರಾಮಯ್ಯ ತರಾಟೆ

siddaramaiha
26/12/2022

ಕರಾವಳಿಯ ಮೀನುಗಾರರಿಗೆ ಸರ್ಕಾರದಿಂದ ಕೊಡಲಾಗುತ್ತಿರುವ ಸಬ್ಸಿಡಿ ಸೀಮೆ ಎಣ್ಣೆ ವಿಚಾರವಾಗಿ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ಹಾಗೂ ಸಚಿವ ಅಂಗಾರ ಅವರನ್ನು ಪ್ರತಿಪಕ್ಷ ನಾಯಕರು ಹಿಗ್ಗಾಮುಗ್ಗಾ ತರಾಟೆಗೆತ್ತಿಕೊಂಡ ಘಟನೆ ನಡೆದಿದೆ.

ಮೀನುಗಾರರ ಸಮಸ್ಯೆ ವಿಚಾರವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಪ್ರಶ್ನೆ ಕೇಳುತ್ತಾ,  ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಈ ಭಾಗದಲ್ಲಿ ನಾಡ ದೋಣಿಯಲ್ಲಿ ಮೀನುಗಾರಿಕೆ ಮಾಡುವ ಬಡ ಮೀನುಗಾರರಿದ್ದಾರೆ. ಅವರಿಗೆ ವರ್ಷದ 10 ತಿಂಗಳು, ಮೀನುಗಾರಿಕೆಗಾಗಿ ಒಬ್ಬನಿಗೆ ತಿಂಗಳಿಗೆ 300 ಲೀ, ನಂತೆ ಸೀಮೆ ಎಣ್ಣೆಯನ್ನು ಸಬ್ಸಿಡಿಯಲ್ಲಿ ಕೇಂದ್ರ ಸರ್ಕಾರ ಒದಗಿಸುತ್ತಿದೆ. ಆದರೆ, ಮೀನುಗಾರಿಕೆ ಆರಂಭಗೊಂಡು 5 ತಿಂಗಳಾದರೂ ಕೇವಲ ಒಂದು ತಿಂಗಳ ಸಬ್ಸಿಡಿ ಸೀಮೆ ಎಣ್ಣೆಯನ್ನು ಮಾತ್ರವೇ ಒದಗಿಸಿದ್ದಾರೆ. ಬಾಕಿ ನಾಲ್ಕು ತಿಂಗಳ ಸೀಮೆ ಎಣ್ಣೆ ಒದಗಿಸಿಲ್ಲ. ಸಚಿವರು ಉತ್ತರ ನೀಡುವ ವೇಳೆ ಕೇಂದ್ರದಿಂದ 18 ಸಾವಿರದ 618 ಕಿ.ಲೋ. ಲೀಟರ್ ಸೀಮೆ ಎಣ್ಣೆ ಕೇಂದ್ರದಿಂದ ಬರಬೇಕಿತ್ತು. ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಇದಕ್ಕೆ ಬದಲಿ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.

ಶಾಸಕರ ಪ್ರಶ್ನೆಗೆ ಉತ್ತರಿಸಿದ ಮೀನುಗಾರಿಕಾ ಸಚಿವ ಎಸ್.ಅಂಗಾರ, ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಸೀಮೆ ಎಣ್ಣೆ ಬಿಡುಗಡೆಯಾಗುವ ಸಮಯದಲ್ಲಿ ನಮಗೆ ಸ್ವಲ್ಪ ತೊಂದರೆಯಾಗಿದೆ. ಆದರೆ ಕಳೆದ 1 ತಿಂಗಳ ಹಿಂದೆ ಸುಮಾರು 3 ಸಾವಿರ ಕಿ.ಲೋ. ಲೀಟರ್ ಬಿಡುಗಡೆಯಾಗಿದೆ. ಆ ಬಿಡುಗಡೆಯಾಗಿರುವ ಸೀಮೆ ಎಣ್ಣೆಯನ್ನು ನಾವು ಹಂತ ಹಂತವಾಗಿ ಮೀನುಗಾರರಿಗೆ ತಲುಪಿಸುವಂತಹ ಕೆಲಸವನ್ನು ಮಾಡಿದ್ದೇವೆ.  ಆದರೆ ನಮಗೆ ಇನ್ನು ಕೂಡ ಪ್ರತಿ ತಿಂಗಳು ಕೇಂದ್ರ ಸರ್ಕಾರದಿಂದ ಸೀಮೆ ಎಣ್ಣೆ ಬಿಡುಗಡೆಯಾದ ಸಂದರ್ಭದಲ್ಲಿ, ಮೀನುಗಾರರಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ್ದೇವೆ. ಮೀನುಗಾರರಿಗೆ ತೊಂದರೆಯಾಗದೇ ಇಂಡಸ್ಟ್ರಿಯಲ್ ಸೀಮೆ ಎಣ್ಣೆಯನ್ನು ಯಾವ ರೀತಿಯಲ್ಲಿ ಒದಗಿಸಿಕೊಡಬೇಕು. ಆ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉತ್ತರಿಸಿದ್ದಾರೆ.

ಸಚಿವರ ಉತ್ತರಕ್ಕೆ ತೃಪ್ತರಾಗದ ಸಂಜೀವ ಮಠಂದೂರು, ರಾಜ್ಯ ಸರ್ಕಾರ ತಕ್ಷಣವೇ ಬದಲಿ ವ್ಯವಸ್ಥೆಯನ್ನು ಮಾಡಬೇಕು ಎಂದು ಮತ್ತೆ ಒತ್ತಾಯ ಮಾಡಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ರೀ, ಸಂಜೀವ ಮಠಂದೂರುರವರೆ, ಉತ್ತರ ಕೇಳಿಸಿಕೊಂಡಿಲ್ವಾ? ಅವರು ಬದಲಿ ವ್ಯವಸ್ಥೆ ಮಾಡಿಕೊಡುತ್ತಾರೆ ಎಂದು ಹೇಳಿದ್ದಾರೆ ಎಂದರು. ಇದೇ ವೇಳೆ ಮತ್ತೆ ಉತ್ತರಿಸಿದ ಅಂಗಾರ ಸೀಮೆ ಎಣ್ಣೆ ಬಿಡುಗಡೆ ಆಗುವ ಸಂದರ್ಭದಲ್ಲಿ ತಡ ಆಗಿಯೇ ಆಗುತ್ತದೆ. ಹಾಗಾಗಿ ಬದಲಿ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದಿದ್ದಾರೆ.

ಸಚಿವ ಅಂಗಾರ ಅವರ ಉತ್ತರದಿಂದ ಅಸಮಾಧಾನಗೊಂಡ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಮುಂದೆ ಸೀಮೆ ಎಣ್ಣೆ ಕೊಡುತ್ತೋ ಇಲ್ವೋ ಗೊತ್ತಿಲ್ಲ, ಒಂದೋ ಕೇಂದ್ರ ಸರ್ಕಾರಕ್ಕೆ ಹೋಗಿ ಸೀಮೆ ಎಣ್ಣೆ ಕೊಡಿಸ್ಬೇಕು. ಇಲ್ಲವಾದರೆ, ರಾಜ್ಯ ಸರ್ಕಾರವಾದ್ರೂ ಸೀಮೆ ಎಣ್ಣೆ ಕೊಡಬೇಕು. ಆದ್ರೆ ಏನೂ ಮಾಡದೇ 4 ತಿಂಗಳಿನಿಂದ ಸೀಮೆ ಎಣ್ಣೆ ಕೊಡದೇ ಹೋದ್ರೆ, ಮೀನುಗಾರರು ಏನು ಮಾಡಬೇಕು? ಮೀನು ಹಿಡಿಯುವವರ ಬದುಕೇ ಅದು, ಮೀನು ಹಿಡಿಯ ಬೇಕು, ಜೀವನ ಮಾಡ್ಬೇಕು. ಸೀಮೆ ಎಣ್ಣೆಯೇ ಕೊಡದಿದ್ರೆ, ಜೀವನ ಹೇಗೆ ಮಾಡುತ್ತಾರೆ? 4 ತಿಂಗಳಿನಿಂದ ಸರ್ಕಾರ ನಿದ್ದೆ ಮಾಡ್ತಾ ಇದ್ದೀರಾ? ಎಂದು ತರಾಟೆಗೆತ್ತಿಕೊಂಡರು.

ಈ ವೇಳೆ ಇದು ಪ್ರಶ್ನೋತ್ತರ ಎಂದು ಸಿದ್ದರಾಮಯ್ಯ ಮಾತುಗಳನ್ನು ತಡೆಯಲು ಸಭಾಧ್ಯಕ್ಷರು ಮುಂದಾದಾಗ. ಅಧ್ಯಕ್ಷರೇ ನಿಮ್ಮ ಕ್ಷೇತ್ರದಲ್ಲೂ ಮೀನುಗಾರರಿದ್ದಾರೆ ಎಂದು ಸಿದ್ದರಾಮಯ್ಯ ನೆನಪಿಸಿದಲ್ಲದೇ, ಸೀಮೆ ಎಣ್ಣೆ ಇಲ್ಲದಿದ್ರೆ, ಮೀನುಗಾರರು ಏನು ಮಾಡಬೇಕು? ಆತ್ಮಹತ್ಯೆ ಮಾಡಿಕೊಳ್ಳಬೇಕಾ? ಎಂದು ಪ್ರಶ್ನಿಸಿದರು. ಬದುಕಕ್ಕಾಗುತ್ತಾ ಅವರು, ಈ ಥರದ ಉತ್ತರ ಸರ್ಕಾರದಿಂದ ನಿರೀಕ್ಷೆ ಮಾಡಕ್ಕಾಗಲ್ಲ. ನಾಲ್ಕು ತಿಂಗಳು ಬೇಕೇನ್ರಿ ಮೀನುಗಾರರಿಗೆ ಸೀಮೆ ಎಣ್ಣೆ ಕೊಡ್ಲಿಕ್ಕೆ?  ಎಂದು ಸಚಿವರನ್ನು ತರಾಟೆಗೆತ್ತಿಕೊಂಡರು.

ಈ ವೇಳೆ ಉತ್ತರಿಸಿದ ಅಂಗಾರ, ಸೀಮೆ ಎಣ್ಣೆಗಾಗಿ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ. ರಾಜ್ಯ ಸರ್ಕಾರದಿಂದ ಬದಲಿ ವ್ಯವಸ್ಥೆಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ಉಪ ನಾಯಕ ಯು.ಟಿ.ಖಾದರ್, ಈ ವಿಚಾರದಲ್ಲಿ ನಾನೊಂದು ಸ್ಪಷ್ಟತೆ ಕೊಡುತ್ತೇನೆ. ಇದರಲ್ಲಿ ಗೊಂದಲವಾಗುವುದು ಬೇಡ, ಕೇಂದ್ರ ಸರ್ಕಾರ ಮೀನುಗಾರರಿಗೆ ಸೀಮೆ ಎಣ್ಣೆ  ಕೊಡುವಂತಹ ಕಾನೂನೇ ಇಲ್ಲ, ಕೊಡುವದೇ ಇಲ್ಲ. ಕೇಂದ್ರ ಸರ್ಕಾರ ಡೊಮೆಸ್ಟಿಕ್ ಯೂಸ್ ಗೆ ಮಾತ್ರವೇ ಸೀಮೆ ಎಣ್ಣೆ ಕೊಡುತ್ತದೆ. ಮುಂಚೆ ಏನಿತ್ತು, ಕೇಂದ್ರ ಸರ್ಕಾರ ಕೊಡುತ್ತಿದ್ದ ಸೀಮೆ ಎಣ್ಣೆಯನ್ನು ನಾವು ಸಬ್ಸಿಡಿಯಾಗಿ ಸ್ವಲ್ಪ ಮೀನುಗಾರರಿಗೆ ಕೊಡುತ್ತಿತ್ತು. ಈಗ ಎಲ್ಲ ಮನೆಗಳಿಗೂ ಗ್ಯಾಸ್ ಬಂದಿದೆ. ಹಾಗಾಗಿ ಕೇಂದ್ರ ಸರ್ಕಾರ ನಮಗೆ ಕೊಡಬೇಕಾದ ಸೀಮೆ ಎಣ್ಣೆಯನ್ನು ಕಡಿತಗೊಳಿಸಿ, ಬೇರೆ ಯಾರಿಗೂ ಕೊಡಬಾರದು ಅಂತ ಸ್ಪಷ್ಟವಾದ ನಿರ್ದೇಶನ ಕೊಟ್ಟಿದ್ದಾರೆ. ನೀವು ರಾಜ್ಯದಿಂದ ಬಿಡುಗಡೆ ಮಾಡಿ ಮೀನುಗಾರರಿಗೆ ಸೀಮೆ ಎಣ್ಣೆ ಕೊಡಿ. ಕೇಂದ್ರದಿಂದ ಸೀಮೆ ಎಣ್ಣೆ ಬರುದೇ ಇಲ್ಲ. ಪ್ರಾಬ್ಲಂ ಏನು ಅನ್ನೋದನ್ನೇ ನೋಡದೇ  ಬರೇ ಕೇಂದ್ರ ಕೇಂದ್ರ ಅಂತ ಹೇಳಿದ್ರೆ ಆಗುದಿಲ್ಲ ಎಂದು ತರಾಟೆಗೆತ್ತಿಕೊಂಡರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ