ಶಿರೂರು ಬಳಿಕ ಮತ್ತೊಂದು ಬೃಹತ್ ಭೂಕುಸಿತ: ಬೆಚ್ಚಿಬೀಳಿಸಿದ ಘಟನೆ - Mahanayaka
9:04 PM Thursday 26 - December 2024

ಶಿರೂರು ಬಳಿಕ ಮತ್ತೊಂದು ಬೃಹತ್ ಭೂಕುಸಿತ: ಬೆಚ್ಚಿಬೀಳಿಸಿದ ಘಟನೆ

sakaleshapura
30/07/2024

ಹಾಸನ: ರಾಜ್ಯದ ಹಲವೆಡೆಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಮಳೆಯ ಜೊತೆಗೆ ಭೀಕರವಾದ ಗಾಳಿ ಎದೆ ಝಲ್ಲೆನಿಸುವಂತೆ ಬೀಸುತ್ತಿದೆ. ಇತ್ತ ಹಾಸನದಲ್ಲಿ ಮಳೆಯಿಂದಾಗಿ ಬೃಹತ್ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ.

ಸಕಲೇಶಪುರ ತಾಲೂಕಿನ ಕುಂಬರಡಿ ಸಮೀಪ ರಸ್ತೆ 200 ಮೀಟರ್​ಗೂ ಹೆಚ್ಚು ದೂರ ಕುಸಿದು ಹೋಗಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಕುಂಬರಡಿ ಹಾಗೂ ಹಾರ್ಲೇ ಎಸ್ಟೇಟ್ ಮಧ್ಯೆ ಈ ಭೂ ಕುಸಿತ ಸಂಭವಿಸಿದೆ.

ರಸ್ತೆ ಕೊಚ್ಚಿ ಹೋಗಿರುವ ಕಾರಣ ಹತ್ತಾರು ಗ್ರಾಮಗಳ ಸಂಪರ್ಕ ಕಡಿದು ಹೋಗಿದೆ. ಈ ರಸ್ತೆಯ ಸಮೀಪದಲ್ಲಿ ಎತ್ತಿನಹೊಳೆ ಕಾಮಗಾರಿ ಕೆಲಸ ಮಾಡಲಾಗಿತ್ತು. ಇದರಿಂದಾಗಿ ಮಣ್ಣ ಸಡಿಲಗೊಂಡು ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎತ್ತಿನಹೊಳೆ ಅವೈಜ್ಞಾನಿಕ ಕಾಮಗಾರಿ ವಿರುದ್ಧ ಇಲ್ಲಿನ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.

ಇತ್ತೀಚೆಗಷ್ಟೇ ಶಿರೂರಿನಲ್ಲಿ ಬೃಹತ್ ಪ್ರಮಾಣದ ಭೂ ಕುಸಿತ ಸಂಭವಿಸಿ 8 ಮಂದಿಯ ಮೃತದೇಹ ಸಿಕ್ಕಿದ್ದು, ಇನ್ನೂ ಮೂವರ ಮೃತದೇಹಕ್ಕಾಗಿ ಶೋಧ ನಡೆಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಸಕಲೇಶಪುರದಲ್ಲಿ ಕೂಡ ಬೃಹತ್ ಪ್ರಮಾಣದ ಭೂಕುಸಿತ ಸಂಭವಿಸಿದೆ. ಭೂ ಕುಸಿತದ ವೇಳೆ ಯಾವುದೇ ವಾಹನ ಇಲ್ಲದೇ ಇರುವುದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಭೂ ಕುಸಿತ ಸಂಭವಿಸುತ್ತಿದೆ. ಆದರೂ ಅವೈಜ್ಞಾನಿಕ ಕಾಮಗಾರಿ ಮಾಡುತ್ತಿರುವ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಸಾರ್ವಜನಿಕರ ಪ್ರಾಣಕ್ಕೆ ಬೆಲೆ ಇಲ್ಲವೇ ಎನ್ನುವ ಪ್ರಶ್ನೆಗಳು ಕೂಡ ಕೇಳಿ ಬಂದಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ