ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುವಾಗಲೇ ಎದ್ದು ಕಣ್ಣೀರು ಹಾಕಿದ ವೃದ್ಧೆ
ನವದೆಹಲಿ: ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದ್ದ ವೇಳೆ ಸತ್ತಿದ್ದಾರೆ ಎಂದುಕೊಂಡಿದ್ದ ವೃದ್ಧೆ ಏಕಾಏಕಿ ಎದ್ದು ಕುಳಿತು ಕಣ್ಣೀರು ಹಾಕಿದ ಘಟನೆ ಮಹಾರಾಷ್ಟ್ರದ ಬಾರಾಮತಿ ಜಿಲ್ಲೆಯ ಮುಧಲೆ ಗ್ರಾಮದಲ್ಲಿ ನಡೆದಿದೆ.
ಕೆಲವು ದಿನಗಳ ಹಿಂದೆ 76 ವರ್ಷ ವಯಸ್ಸಿನ ಶಾಕುಂತಲಾ ಎಂಬವರು ಕೊರೊನಾ ಸೋಂಕಿಗೊಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಪ್ರಜ್ಞೆ ತಪ್ಪಿದ್ದರು.
ವೃದ್ಧೆ ಪ್ರಜ್ಞೆ ತಪ್ಪಿರುವುದನ್ನು ಕಂಡ ಕುಟುಂಬಸ್ಥರು ವೃದ್ಧೆ ಸಾವನ್ನಪ್ಪಿರಬೇಕು ಅಂದುಕೊಂಡು ಮತ್ತೆ ಮನೆಗೆ ಕರೆದುಕೊಂಡು ಹೋಗಿದ್ದು, ಗ್ರಾಮದಲ್ಲಿ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದಾರೆ. ಆದರೆ ಈ ನಡುವೆ ಏಕಾಏಕಿ ಎದ್ದು ಕುಳಿತ ಶಾಕುಂತಲಾ ಅವರು ತನ್ನ ಅಂತ್ಯಸಂಸ್ಕಾರಕ್ಕೆ ನಡೆಸಲಾಗಿರುವ ಸಿದ್ಧತೆ ಕಂಡು ಕಣ್ಣೀರಿಟ್ಟಿದ್ದಾರೆ. ಈ ವೇಳೆ ತಕ್ಷಣ ಎಚ್ಚೆತ್ತುಕೊಂಡ ಕುಟುಂಬಸ್ಥರು ಶಾಕುಂತಲಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.