ಪತ್ರಕರ್ತರಿಗೆ ಲಂಚ ಆರೋಪ: ಅನುಮಾನಕ್ಕೆ ಕಾರಣವಾದ ಸುದ್ದಿವಾಹಿನಿಗಳ ಮೌನ!
ಬೆಂಗಳೂರು: ದೀಪಾವಳಿ ನೆಪದಲ್ಲಿ ಪತ್ರಕರ್ತರಿಗೆ ಲಂಚ ನೀಡಿದ ಆರೋಪ ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಜೊತೆಗೆ ಉಡುಗೊರೆ ಸ್ವೀಕರಿಸಿದ ಪತ್ರಕರ್ತರ ಮೌನದ ವಿರುದ್ಧ ಪತ್ರಕರ್ತರ ವಲಯದಲ್ಲೇ ತೀವ್ರ ಅಸಮಾಧಾನ ಸೃಷ್ಟಿಯಾಗಿದೆ.
ರಾಜಕೀಯ ವರದಿಗಾರಿಕೆ ವಿಭಾಗದಲ್ಲಿರುವ ಕೆಲವು ಹಿರಿಯ ಪತ್ರಕರ್ತರು ತಮಗೆ ಅ.22 ರಂದು ಹಬ್ಬದ ಉಡುಗೊರೆ ಬಾಕ್ಸ್ ಗಳಲ್ಲಿ ಸಿಹಿ ಹಾಗೂ ಡ್ರೈ ಫ್ರೂಟ್ಸ್ ಇರುವ ಬಾಕ್ಸ್ ಗಳು ಹಾಗೂ ಒಂದು ಲಕ್ಷ ರೂಪಾಯಿ ನಗದು ಇರುವ ಲಕೋಟೆ ಬಂದಿತ್ತು ಎಂದು ಆರೋಪಿಸಲಾಗಿದೆ.
ಇನ್ನೂ ಪತ್ರಕರ್ತರಿಗೆ ಲಂಚ ನೀಡಿರುವ ವಿಚಾರದ ಬಗ್ಗೆ ಸಾಕಷ್ಟು ಮಾಧ್ಯಮಗಳು ಮೌನವಹಿಸಿವೆ. ಕನ್ನಡ ಸುದ್ದಿವಾಹಿನಿಗಳಲ್ಲಿ ಈ ವಿಚಾರ ಚರ್ಚೆಗೀಡಾಗದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಾಧ್ಯಮಗಳು ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಬೇಕು, ಆದರೆ, ಕೆಲವು ಮಾಧ್ಯಮಗಳು ಸರ್ಕಾರದ ಪ್ರತಿನಿಧಿಗಳಂತೆ ಕಾರ್ಯನಿರ್ವಹಿಸುತ್ತಿವೆ. ಈ ಮಾಧ್ಯಮಗಳು ಉಡುಗೊರೆ ಪಡೆಯುವ ಸಂಸ್ಕೃತಿಯ ಮಾಧ್ಯಮಗಳೇ ಅಂತ ಜನ ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆತ್ತಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಇಷ್ಟೊಂದು ಗಂಭೀರವಾದ ಘಟನೆ ನಡೆದಿದ್ದರೂ, ಸುದ್ದಿವಾಹಿನಿಗಳಲ್ಲಿ ಇದು ಇನ್ನೂ ಚರ್ಚೆಗೇ ಬಂದಿಲ್ಲ, ಇದು ಸುದ್ದಿವಾಹಿನಿಗಳ ಪ್ರಾಮಾಣಿಕತೆಯ ಬಗೆಗೆ ಅನುಮಾನಗಳನ್ನು ಸೃಷ್ಟಿಸಿದೆ.
ಸಿಎಂಒ ಮೂಲಗಳ ಪ್ರಕಾರ, ಮುಖ್ಯಮಂತ್ರಿಗಳು ಕ್ಷಮೆ ಕೋರಿದ್ದು ತಮಗೆ ನಗದು ಉಡುಗೊರೆ ಬಗ್ಗೆ ಮಾಹಿತಿ ಇರಲಿಲ್ಲ ಈ ಬಗ್ಗೆ ತನಿಖೆಗೆ ಆದೇಶಿಸುತ್ತಿರುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಸರ್ಕಾರ ಪತ್ರಕರ್ತರಿಗೆ ಹಣ ಹಂಚಿರುವುದನ್ನು ಹಲವು ಪತ್ರಕರ್ತರು ತೀವ್ರವಾಗಿ ವಿರೋಧಿಸಿದ್ದಾರೆ. ಆದರೆ ಎಷ್ಟು ಮಂದಿಗೆ ಎಷ್ಟೆಷ್ಟು ಲಂಚ ಹಂಚಲಾಗಿದೆ ಅನ್ನೋದು ತಿಳಿದು ಬಂದಿಲ್ಲ.
ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಈ ವಿಷಯವಾಗಿ ಸ್ಪಷ್ಟನೆ ನೀಡಿರುವ ಸಿಎಂಒ, “ಸಿಎಂ ಬೊಮ್ಮಾಯಿಯವರಿಗಾಗಲೀ, ಅಥವಾ ಮಾಧ್ಯಮಗಳೊಂದಿಗೆ ಸಮನ್ವಯ ಕಾರ್ಯದಲ್ಲಿ ತೊಡಗಿರುವವರಿಗಾಗಲೀ ನಗದು ಉಡುಗೊರೆ ಬಗ್ಗೆ ಮಾಹಿತಿ ಇಲ್ಲ, ನಾವು ಹಲವು ಪತ್ರಕರ್ತರು ಹಾಗೂ ಸಂಪಾದಕರಿಗೆ ಸ್ವೀಟ್ ಬಾಕ್ಸ್ ಗಳನ್ನು ಕಳಿಸಿಕೊಟ್ಟಿದ್ದೇವೆ ಆದರೆ ಅದರಲ್ಲಿ ನಗದು ಉಡುಗೊರೆ ಇದ್ದದ್ದು ತಿಳಿದಿರಲಿಲ್ಲ ಎಂದು ಹೇಳಿದೆ.
ಪತ್ರಕರ್ತರಿಗೆ ಲಂಚ ನೀಡಿರುವ ವಿಚಾರ ಇದೀಗ ಜನರಲ್ಲಿ ಮಾಧ್ಯಮಗಳ ಬಗ್ಗೆ ಅಪನಂಬಿಕೆಯನ್ನು ಸೃಷ್ಟಿಸಿದೆ. ಮಾಧ್ಯಮ ಸರ್ಕಾರ ಹಾಗೂ ಬಿಜೆಪಿ ಪರವಾಗಿ ಯಾವುದೇ ಮಾತುಗಳನ್ನಾಡಿದರೂ, ಜನರು ಅನುಮಾನದಿಂದ ನೋಡುವಂತಾಗಿದೆ. ಈ ನಡುವೆ ಉಡುಗೊರೆ ಸ್ವೀಕರಿಸಿದ ಪತ್ರಕರ್ತರು ವೃತ್ತಿ ಧರ್ಮ ಮರೆತು ಮೌನವಾಗಿರುವುದು ನಾಚಿಕೆಗೇಡಿನ ಸಂಗತಿ ಎನ್ನುವ ಮಾತುಗಳು ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka