ಬೈಕ್ ಗೆ ಡಿಕ್ಕಿ ಹೊಡೆದ ಬೊಲೆರೊ | ಬೈಕ್ ಸವಾರ ಸ್ಥಳದಲ್ಲಿಯೇ ಸಾವು
08/02/2021
ಬಂಟ್ವಾಳ: ಬೈಕ್ ನ ಹಿಂಭಾಗಕ್ಕೆ ಬೊಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವಿಟ್ಲ ಸಮೀಪದ ಕಾಶಿಮಠ ಎಂಬಲ್ಲಿ ನಡೆದಿದೆ.
ಮಾಣಿ ಬರಿಮಾರು ನಿವಾಸಿ 55 ವರ್ಷದ ಬಾಲಕೃಷ್ಣ ಮೃತಪಟ್ಟ ಬೈಕ್ ಸವಾರ ಎಂದು ತಿಳಿದು ಬಂದಿದೆ. ಬೈಕ್ ಹಾಗೂ ಬೊಲೆರೊ ವಿಟ್ಲದಿಂದ ಉಕ್ಕುಡ ಮಾರ್ಗವಾಗಿ ತೆರಳುತ್ತಿದ್ದ ವೇಳೆ, ಕಾಶಿಮಠ ಬಳಿಯಲ್ಲಿ ಬೊಲೆರೊ ಬೈಕ್ ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.
ಈ ವೇಳೆ ಬೈಕ್ ನಿಂದ ರಸ್ತೆಗೆಸೆಯಲ್ಪಟ್ಟ ಬಾಲಕೃಷ್ಣ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿಟ್ಲ ಠಾಣೆ ಎಸ್ಸೈ ವಿನೋದ್ ರೆಡ್ಡಿ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆದಿದೆ. ಮೃತದೇಹವನ್ನು ವಿಟ್ಲ ಸರ್ಕಾರಿ ಆಸ್ಪತ್ರೆ ಶವಗಾರದಲ್ಲಿಡಲಾಗಿದೆ. ಅಪಘಾತಕ್ಕೆ ಕಾರಣವಾದ ವಾಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.