ಅಪಘಾತದ ಬಳಿಕ ಸ್ಥಳದಲ್ಲಿ ಕುಸಿದು ಬಿದ್ದಿದ್ದ ಜಗ್ಗೇಶ್ ಪುತ್ರ ಯತಿರಾಜ್
ಬೆಂಗಳೂರು: ಕನ್ನಡದ ಹಿರಿಯ ನಟ ಜಗ್ಗೇಶ್ ಅವರ ಪುತ್ರ ಯತಿರಾಜ್ ಅವರ ಕಾರು ಬೆಂಗಳೂರು-ಹೈದರಾಬಾದ್ ಹೈವೇಯಲ್ಲಿ ಭೀಕರ ಅಪಘಾತಕ್ಕೀಡಾಗಿತ್ತು. ಅಪಘಾತ ನಡೆದ ಬಳಿಕದ ವಿಡಿಯೋಗಳು ಇದೀಗ ಮಾಧ್ಯಮಗಳಿಗೆ ಲಭಿಸಿದ್ದು, ವಿಡಿಯೋ ಬೆಚ್ಚಿ ಬೀಳಿಸುವಂತಿದೆ.
ಅಪಘಾತದ ತೀವ್ರತೆಗೆ ಯತಿರಾಜ್ ಅವರ ಕಾರು ನಜ್ಜುಗುಜ್ಜಾಗಿತ್ತು. ಅಪಘಾತದ ಸಂದರ್ಭದಲ್ಲಿ ಸ್ಥಳೀಯರು ಗುರುರಾಜ್ ಅವರನ್ನು ಕಾರಿನಿಂದ ಹೊರಗೆ ಬರಲು ಸಹಾಯ ಮಾಡಿದ್ದಾರೆನ್ನಲಾಗಿದೆ. ಕಾರಿನಿಂದ ಹೊರ ಬರುತ್ತಿದ್ದಂತೆಯೇ ತಮ್ಮ ಕುಟುಂಬಸ್ಥರಿಗೆ ಕರೆಮಾಡಲು ಗುರುರಾಜ್ ಯತ್ನಿಸಿದ್ದಾರೆ.
ಯತಿರಾಜ್ ಅವರ ಮೈಮೇಲೆ ಯಾವುದೇ ಗಾಯಗಳು ಕಂಡು ಬಾರದಿದ್ದರೂ, ಅಪಘಾತದ ಪರಿಣಾಮ ಅವರು ತೀವ್ರ ಆಘಾತಕ್ಕೊಳಗಾಗಿದ್ದರು ಮತ್ತು ತೀವ್ರ ಬಸವಳಿದಿರುವುದು ಕಂಡು ಬಂತು. ಸ್ಥಳೀಯರ ಸಹಾಯದೊಂದಿಗೆ ಅವರು ಎದ್ದು ನಿಲ್ಲಲು ಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ತಮ್ಮ ಮೊಬೈಲ್ ಫೋನ್ ನೀಡಿ ಕುಟುಂಬಸ್ಥರಿಗೆ ಕರೆ ಮಾಡಲು ಹೇಳಿದ್ದಾರೆ. ಆದರೆ ಅವರಿಂದ ಮಾತನಾಡಲು ಸಾಧ್ಯವಾಗಿರಲಿಲ್ಲ.
ಎದ್ದು ನಡೆಯಲು ಯತ್ನಿಸಿದರಾದರೂ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದು, ತೀವ್ರ ನಿತ್ರಾಣ ಸ್ಥಿತಿಯಲ್ಲಿದ್ದರು ಎಂದು ವಿಡಿಯೋಗಳಲ್ಲಿ ಕಂಡು ಬಂದಿದೆ. ಅವರ ಬಿಎಂಡಬ್ಲ್ಯು ಕಾರು ನಜ್ಜುಗುಜ್ಜಾಗಿರುವುದನ್ನು ಕಂಡರೆ, ಅಪಘಾತದ ತೀವ್ರತೆ ಎಷ್ಟಿದ್ದಿರಬಹುದು ಎನ್ನುವುದು ತಿಳಿದು ಬರುತ್ತದೆ.