ಮರಳು ಸಾಗಾಟದ ಟ್ರ್ಯಾಕ್ಟರ್ ಮಗುಚಿ ಬಿದ್ದು ಇಬ್ಬರು ಸಹೋದರರ ಸಾವು!

28/04/2021
ರಾಯಚೂರು: ಮರಳು ಸಾಗಣೆಯ ಟ್ರ್ಯಾಕ್ಟರ್ ಮಗುಚಿ ಬಿದ್ದ ಪರಿಣಾಮ ಸಹೋದರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ರಾಯಚೂರಿನ ಬುಳ್ಳಾಪುರ ಗ್ರಾಮದಲ್ಲಿ ನಡೆದಿದೆ.
ಗಿಲ್ಲೆಸುಗೂರು ಕ್ಯಾಂಪ್ ನ 29 ವರ್ಷ ವಯಸ್ಸಿನ ಸಾಮ್ಯುವೆಲ್ ಹಾಗೂ 25 ವರ್ಷ ವಯಸ್ಸಿನ ಶಾಂತರಾಜ್ ಮೃತಪಟ್ಟ ಸಹೋದರರಾಗಿದ್ದಾರೆ. ತುಂಗಭದ್ರಾ ನದಿಯಿಂದ ಮರುಳು ಸಾಗಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಈ ಭಾಗದಲ್ಲಿ ಮರಳುದಂಧೆ ಎಗ್ಗಿಲ್ಲದೇ ಸಾಗಿದ್ದು, ಸಂಜೆ ಆರರ ಬಳಿಕ ಟ್ರ್ಯಾಕ್ಟರ್ ಮೂಲಕ ಅವಸರವಸರವಾಗಿ ಮರಳು ಸಾಗಿಸುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಘಟನೆ ಸಂಬಂಧ ರಾಯಚೂರು ಡಿವೈಎಸ್ ಪಿ ಶಿವನಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇಡಪನೂರು ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.