ಅಪಾರ್ಟ್ ಮೆಂಟ್ ನೊಳಗೆ ಅಪಾಯಕ್ಕೆ ಸಿಲುಕಿದ್ದ ವೃದ್ಧೆಯನ್ನು ರಕ್ಷಿಸಿದ ಪೊಲೀಸರು
ಇಂದೂರ್: ಅಪಾರ್ಟ್ ಮೆಂಟ್ ವೊಂದರಲ್ಲಿ ಅಪಾಯದಲ್ಲಿದ್ದ ವೃದ್ಧೆಯನ್ನ ರಕ್ಷಿಸುವ ಮೂಲಕ ಪೊಲೀಸರು ಮಾನವೀಯತೆ ಮೆರೆದಿದ್ದು, ಹಲವು ದಿನಗಳಿಂದ ಏಕಾಂಗಿಯಾಗಿ ವಾಸಿಸುತ್ತಿದ್ದ ವೃದ್ಧೆ ಮನೆಯೊಳಗೆ ಅಪಾಯಕ್ಕೆ ಸಿಲುಕಿದ್ದರು.
ಅಪಾರ್ಟ್ ಮೆಂಟ್ ನ ನಾಲ್ಕನೇ ಮಹಡಿಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ವೃದ್ಧೆಯ ಮನೆಯ ಗೇಸ್ ಓಪನ್ ಆಗಿರಲಿಲ್ಲ. ಇದರಿಂದ ಅನುಮಾನಗೊಂಡ ನೆರೆ ಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಲಾಸಿಯಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ಮುರಿದು ಒಳಪ್ರವೇಶಿಸಿದ್ದಾರೆ. ಈ ವೇಳೆ ವೃದ್ಧೆ ಪ್ರಜ್ಞಾ ಹೀನ ಸ್ಥಿತಿಯಲ್ಲಿರುವುದು ಕಂಡು ಬಂದಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ವೃದ್ಧೆಯ ಪತಿ ಮತ್ತು ಇಬ್ಬರು ಮಕ್ಕಳು ಆಸ್ಟ್ರೇಲಿಯಾದಲ್ಲಿ ವಾಸವಿದ್ದಾರೆ. ಏಕಾಏಕಿ ಲಾಕ್ ಡೌನ್ ಆಗಿರುವುದರಿಂದಾಗಿ ವೃದ್ಧೆಗೆ ಆಸ್ಟ್ರೇಲಿಯಾಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ ಎಂದು ತಿಳಿದು ಬಂದಿದೆ,
ವೃದ್ಧೆಗೆ ದೇಹದಲ್ಲಿ ಸೋಡಿಯಂ ಮಟ್ಟ ಕಡಿಮೆಯಾಗುವ ಕಾಯಿಲೆ ಇದ್ದು, ಈ ಕಾಯಿಲೆ ಬಂದಾಗಲೆಲ್ಲ ಅವರು ಅಸ್ವಸ್ಥರಾಗಿ ಕುಸಿದು ಬಿಡುತ್ತಾರೆ. ಪೊಲೀಸರು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಹೋಗದೇ ಇರುತ್ತಿದ್ದರೆ, ವೃದ್ಧೆ ಅಪಾಯಕ್ಕೊಳಗಾಗುವ ಸಾಧ್ಯತೆ ಇತ್ತು. ಇದೀಗ ವೃದ್ಧೆ ಪೊಲೀಸರ ನಿಗಾದಲ್ಲಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.