ಅಪ್ಪನಿಗೂ, ಮಗನಿಗೂ ಒಬ್ಬಳೇ ಹೆಂಡತಿ | ವಿಚಿತ್ರ ಕೇಸ್ ನೋಡಿ ಶಾಕ್ ಆದ ಪೊಲೀಸರು - Mahanayaka
10:47 PM Saturday 13 - September 2025

ಅಪ್ಪನಿಗೂ, ಮಗನಿಗೂ ಒಬ್ಬಳೇ ಹೆಂಡತಿ | ವಿಚಿತ್ರ ಕೇಸ್ ನೋಡಿ ಶಾಕ್ ಆದ ಪೊಲೀಸರು

marriage
04/07/2021

ಲಕ್ನೋ: ಪತಿಯಿಂದ ದೂರವಾಗಿದ್ದ ಯುವತಿಯೋರ್ವಳು, ತನ್ನ ಮಾವ(ಗಂಡನ ತಂದೆ)ನನ್ನೇ ವಿವಾಹವಾಗುವ ಮೂಲಕ ತನ್ನ ಪತಿಗೆ ಬಿಗ್ ಶಾಕ್ ನೀಡಿದ್ದು, ತನ್ನ ಪತ್ನಿ ತನ್ನ ತಂದೆಯನ್ನು ವಿವಾಹವಾಗಿದ್ದರ ವಿರುದ್ಧ ಯುವಕ ಕಾನೂನು ಹೋರಾಟ ಮಾಡಿದರೂ ಆತ ಸೋತು ಹೋಗಿದ್ದಾನೆ.


Provided by

2016ರಲ್ಲಿ ಯುವತಿಯೋರ್ವಳನ್ನು ಯುವಕ ವಿವಾಹವಾಗಿದ್ದ. ಆದರೆ ಈ ಸಂದರ್ಭದಲ್ಲಿ ಇವರಿಬ್ಬರು ಕೂಡ ಅಪ್ರಾಪ್ತ ವಯಸ್ಸಿನವರಾಗಿದ್ದರು. 6 ತಿಂಗಳ ಕಾಲ ಇಬ್ಬರು ಕೂಡ ಜೊತೆಯಾಗಿ ಸಂಸಾರ ಮಾಡಿದ್ದಾರೆ. ಆದರೆ, ಆ ಬಳಿಕ ಯುವಕ ಮದ್ಯಪಾನ ಮಾಡುತ್ತಾನೆ ಎನ್ನುವ ನೆಪದಲ್ಲಿ ಯುವತಿ ಆತನನ್ನು ಬಿಟ್ಟು ತನ್ನ ತವರಿಗೆ ಹೋಗಿದ್ದಾಳೆ.

ಪತ್ನಿ ಬಿಟ್ಟು ಹೋಗಿದ್ದರಿಂದ ಯುವಕ ತೀವ್ರವಾಗಿ ನೋವು ಅನುಭವಿಸಿದ್ದ. ಆದರೆ, ಹೇಗೋ ಮದುವೆ ವಿಚಾರ ಮರೆತು, ತನ್ನ 48 ವರ್ಷ ವಯಸ್ಸಿನ ತಂದೆಯೊಂದಿಗೆ ಬದುಕಲು ಕಲಿತಿದ್ದ. ತಂದೆ ಮಗನಿಗೆ ಹಣ ನೀಡುತ್ತಿದ್ದ. ತಂದೆಯ ಹಣದಿಂದ ಮಗ ಬದುಕು ಸಾಗಿಸುತ್ತಿದ್ದ. ಈ ನಡುವೆ  ಒಂದು ದಿನ ಆತನ ತಂದೆ ಮನೆ ಬಿಟ್ಟು ಹೋಗಿದ್ದಾನೆ. ಹಾಗೆಯೇ ಮಗನಿಗೆ ಹಣ ಕೊಡುವುದನ್ನು ಕೂಡ ನಿಲ್ಲಿಸಿದ್ದಾನೆ. ಇದರಿಂದ ಬೇಸರಗೊಂಡ ಯುವಕ ಆರ್ ಟಿಐಗೆ ಅರ್ಜಿ ಸಲ್ಲಿಸಿದ್ದು, ತಂದೆಯ ಮಾಹಿತಿಯನ್ನು ಕೋರಿದ್ದ ಎಂದು ಹೇಳಲಾಗಿದೆ.

ಅರ್ಜಿಯ ವರದಿಯಲ್ಲಿ ಯುವಕನ ತಂದೆ ಎರಡನೇ ವಿವಾಹವಾಗಿರುವುದು ತಿಳಿದು ಬಂದಿದ್ದು, ಅದು ಕೂಡ ತನ್ನ ಮಗನ ಪತ್ನಿಯನ್ನೇ ಆತ ವಿವಾಹವಾಗಿರುವುದು ತಿಳಿದು ಬಂದಿದೆ. ಇದನ್ನು ನೋಡಿ ತೀವ್ರ ಕೋಪಗೊಂಡ ಮಗ ಪೊಲೀಸರಿಗೆ ದೂರು ನೀಡಿದ್ದಾರೆ.

ಮಗನ ದೂರು ಸ್ವೀಕರಿಸಿದ ಪೊಲೀಸರು, ತಂದೆ ಹಾಗೂ ಪತ್ನಿಯನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ, ನಾನು ಮೊದಲ ಮದುವೆ ಆಗಿದ್ದ ವೇಳೆ ಅಪ್ರಾಪ್ತ ವಯಸ್ಕಳಾಗಿದ್ದೆ. ಹಾಗಾಗಿ ಆ ಮದುವೆ ಅಸಿಂಧುವಾಗಿದ್ದು, ಈಗ ನನ್ನ ಎರಡನೇ ಗಂಡನೊಂದಿಗೆ ನಾನು  ಸಂತೋಷದಿಂದಿದ್ದೇನೆ ಎಂದು ಯುವತಿ ವಾದಿಸಿದ್ದಾಳೆ. ನನ್ನ ಮೊದಲ ಗಂಡನೊಂದಿಗೆ ನಾನು ಹೋಗುವುದಿಲ್ಲ ಎಂದು ಆಕೆ ಹೇಳಿದ್ದಾಳೆ.

ಇತ್ತೀಚಿನ ಸುದ್ದಿ