ಅಪ್ರಾಪ್ತೆಗೆ ಮಾದಕ ವ್ಯಸನ ಕಲಿಸಿ ಲೈಂಗಿಕ ದೌರ್ಜನ್ಯ: ಬೆಚ್ಚಿ ಬೀಳಿಸಿದ ಯುವಕರ ಗ್ಯಾಂಗ್ ನ ಕೃತ್ಯ - Mahanayaka
1:13 PM Sunday 14 - September 2025

ಅಪ್ರಾಪ್ತೆಗೆ ಮಾದಕ ವ್ಯಸನ ಕಲಿಸಿ ಲೈಂಗಿಕ ದೌರ್ಜನ್ಯ: ಬೆಚ್ಚಿ ಬೀಳಿಸಿದ ಯುವಕರ ಗ್ಯಾಂಗ್ ನ ಕೃತ್ಯ

drugs
08/07/2021

ಪಾಲಕ್ಕಾಡ್: ಬಾಲಕಿಯೋರ್ವಳನ್ನು ಮಾದಕ ವ್ಯಸನಕ್ಕೆ ದೂಡಿ ಆಕೆಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಕೇರಳದ ಪಾಲಕ್ಕಾಡ್ ನ ಪಟ್ಟನೆಬಿ ಕರಕಪುಥೂರಿನಲ್ಲಿ ನಡೆದಿದ್ದು, ಬಾಲಕಿಯ ತಾಯಿ ಈ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಈ ಬಗ್ಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.


Provided by

ಬಾಲಕಿಗೆ ಮಾನಸಿಕ ಅಸ್ವಸ್ಥತೆ ಕಂಡು ಬಂದಾಗ ತಾಯಿ ಆಕೆಯನ್ನು  ತ್ರಿಶೂರ್ ನ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ಈ ವೇಳೆ ಆಕೆ ಮಾದಕ ವ್ಯಸನಿಯಾಗಿದ್ದಾಳೆ ಎನ್ನುವುದು ಅವರಿಗೆ ತಿಳಿದು ಬಂದಿತ್ತು ಎಂದು ಹೇಳಲಾಗಿದೆ. ಇದರೊಂದಿಗೆ ಯುವತಿಯರನ್ನು ಮಾದಕ ವ್ಯಸನಕ್ಕೆ ಸಿಲುಕಿಸಿ ಅವರ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಕೃತ್ಯವೊಂದು ಬೆಳಕಿಗೆ ಬಂದಿದೆ.

ಖಾಸಗಿ ಕಂಪ್ಯೂಟರ್ ಕೇಂದ್ರವೊಂದರಲ್ಲಿ ಪರಿಚಯವಾದ 25 ವರ್ಷ ವಯಸ್ಸಿನ ಯುವಕನೋರ್ವ, ಸಂತ್ರಸ್ತ 15 ವರ್ಷ ವಯಸ್ಸಿನ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿದ್ದು, ಆಕೆ ವಯಸ್ಸಿಗೆ ಬಂದಾಗ ಮದುವೆಯಾಗುವುದಾಗಿ ಹೇಳಿದ್ದಾನೆ. ಆ ಬಳಿಕ ಬಾಲಕಿಗೆ ಗಾಂಜಾ, ಕೋಕೇನ್, ಡ್ರಗ್ಸ್ ಗಳನ್ನು ನೀಡಿ ಮಾದಕ ವ್ಯಸನಿಯಾಗಿ ಪರಿವರ್ತಿಸಿದ್ದಾನೆ. ಆ ಬಳಿಕ ಬಾಲಕಿಯ ನಗ್ನ ಚಿತ್ರಗಳನ್ನು ತೆಗೆಯಲಾಗಿತ್ತು.  ಲೈಂಗಿಕ ದೌರ್ಜನ್ಯ ಎಸಗಿದ್ದು, ಈತನ ಜೊತೆಗೆ ಇನ್ನೂ 10 ಮಂದಿ ಇದ್ದು, ಇಂತಹ ಕೃತ್ಯಗಳನ್ನು ನಡೆಸುವ ಗ್ಯಾಂಗ್ ವೊಂದು ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.

ವಸತಿ ಗೃಹಗಳ ಕೊಠಡಿಗಳನ್ನು ಬಾಡಿಗೆಗೆ ಪಡೆದುಕೊಂಡು, ಅಲ್ಲಿ ಯುವತಿಯರಿಗೆ ಮಾದಕ ವ್ಯಸನಕ್ಕೆ ಪ್ರೇರೇಪಣೆ ನೀಡುವ ಯುವಕರು, ಬಳಿಕ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾರೆ. ಯುವತಿಯರನ್ನು ಪ್ರೀತಿಯ ಹೆಸರಿನಲ್ಲಿ ಬಲೆಗೆ ಬೀಳಿಸುವುದು, ಬಳಿಕ ನಗ್ನ ಚಿತ್ರಗಳನ್ನು ತೆಗೆದು ಬ್ಲ್ಯಾಕ್ ಮೇಲ್ ಮಾಡುವುದು ಮೊದಲಾದ ಕೃತ್ಯಗಳನ್ನು ಈ ಯುವಕರ ಗುಂಪು ಮಾಡುತ್ತಿದೆ ಎಂದು ಹೇಳಲಾಗಿದೆ. ಮಾದಕ ವ್ಯಸನವನ್ನು ಕಲಿತ ಬಳಿಕ ಈ ಯುವಕರು ಹೇಳಿದಂತೆ ಯುವತಿಯರು ಕೇಳುತ್ತಾರೆ ಎಂದು ಹೇಳಲಾಗಿದೆ.

ಸಂತ್ರಸ್ತ ಬಾಲಕಿಯನ್ನು ಪಟ್ಟಂಬಿಯ ಲಾಡ್ಜ್ ಗೆ ಕರೆದೊಯ್ದು ಚಿತ್ರಹಿಂಸೆ ನೀಡಲಾಗಿದೆ ಎಂದು ಹೇಳಲಾಗಿದೆ. ಈ ಲಾಡ್ಜ್ ನಲ್ಲಿ ಸುಮಾರು 10 ಜನರು ಸೇರಿ ಡ್ರಗ್ಸ್ ಬಳಸಿದ್ದಾರೆ ಎಂದು ಹೇಳಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಹುಡುಗಿಯರ ಫೋನ್ ನಿಂದ  ಚಿತ್ರಗಳು ಸೇರಿದಂತೆ ಹಲವು ಮಾಹಿತಿಗಳನ್ನು ಪಡೆಯಲಾಗಿದೆ ಎಂದು ವರದಿಯಾಗಿದೆ.

ಇನ್ನೂ ಸಂತ್ರಸ್ತ ಬಾಲಕಿ ಮಾತ್ರವಲ್ಲದೇ 18 ವರ್ಷದೊಳಗಿನ ಹಲವಾರು ಹೆಣ್ಣು ಮಕ್ಕಳು ಈ ಗ್ಯಾಂಗ್ ನಿಂದ ಕಿರುಕುಳಕ್ಕೊಳಗಾಗಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಇನ್ನೂ ಈ ವಿಚಾರ ತಿಳಿಯುತ್ತಿದ್ದಂತೆಯೇ ಸಂತ್ರಸ್ತೆಯ ತಾಯಿ ಕೇರಳ ಸಿಎಂ ಪಿಣರಾಯಿ ವಿಜಯನ್ ಗೆ ಹಾಗೂ ಡಿಜಿಪಿಗೆ ದೂರು ನೀಡಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ