ಗೃಹ ಸಚಿವರು ಬೈದು ಕಳಿಸಿದ್ರು: ಹರ್ಷ ಸಹೋದರಿ ಹೇಳಿಕೆಗೆ ಅರಗ ಜ್ಞಾನೇಂದ್ರ ಹೇಳಿದ್ದೇನು?
ಬೆಂಗಳೂರು: ನ್ಯಾಯ ಕೇಳಲು ಹೋದರೆ, ಗೃಹ ಸಚಿವರು ಬೈದು ಕಳಿಸಿದ್ದಾರೆ ಎನ್ನುವ ಹರ್ಷ ಸಹೋದರಿ ಆರೋಪಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಅವರು ಏನೇನೋ ಮಾತನಾಡಿದ್ರು, ಆ ರೀತಿ ಮಾತನಾಡಿದ್ರೆ ನಾವೇನು ಮಾಡೋಣ ಎಂದು ಸಚಿವರು ಪ್ರಶ್ನಿಸಿದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅರಗ ಜ್ಞಾನೇಂದ್ರ, ರಾಜುನನ್ನ ಅತ್ಯಂತ ಆಪ್ತ ಮಿತ್ರ ಎಂದು ಮೊದಲು ಹೇಳಿದರು. ಈ ವೇಳೆ ಪತ್ರಕರ್ತರು ರಾಜು ಅಲ್ಲ ಹರ್ಷ ಎಂದು ನೆನಪಿಸಿದ್ದು, ಈ ವೇಳೆ ಸಚಿವರು, ಸಾರಿ ಹರ್ಷನನ್ನ ಅತ್ಯಂತ ಆಪ್ತಮಿತ್ರ ಎಂದರು.
ಹರ್ಷ ವಿಚಾರದಲ್ಲಿ ಆ ಕುಟುಂಬಸ್ಥರಿಗೆ ಎಷ್ಟ ಹೊಟ್ಟೆ ಉರಿದಿದ್ಯೋ ಅಷ್ಟೇ ನನಗೂ ಹೊಟ್ಟೆ ಉರಿದಿದೆ. ಹರ್ಷ ಕೊಲೆಯಾದ ಅವತ್ತಿನಿಂದ ಇವತ್ತಿನವರೆಗೆ, ಈ ಕೇಸ್ ನಲ್ಲಿ ನಾನು ಕೂಡ ಬೆನ್ನು ಬಿದ್ದಿದ್ದೇನೆ. ಅವರಿಗೆ ಶಿಕ್ಷೆ ವಿಧಿಸಲು ಏನೇನು ಮಾಡಬೇಕೋ ಅದೆಲ್ಲ ಮಾಡುತ್ತಿದ್ದೇವೆ ಎಂದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿಗಳು ಫೋನ್ ನಲ್ಲಿ ಮಾತನಾಡೋದು, ವಿಡಿಯೋ ಕಾಲ್ ಮಾಡೋದು ಕಂಡು ಬಂದಿತ್ತು. ಹಿರಿಯ ಪೊಲೀಸರಿಗೆ ಹೇಳಿ, ರೈಡ್ ಮಾಡಿಸಿದ್ದೇವೆ. ಇಡೀ ಜೈಲ್ ನ್ನು ಜಾಲಾಡಿಸಿದ್ದೇವೆ. ಏನೇನು ಉಪಕರಣ ಸಿಕ್ಕಿದ್ಯೋ ಹಿಡಿದಿದ್ದೇವೆ. ಬಳಕೆ ಮಾಡಿದವರ ಮೇಲೆ ಹಾಗೂ ಅದನ್ನು ಒಳಗೆ ಬಿಟ್ಟವರ ಮೇಲೆ ಎಫ್ ಐಆರ್ ಮಾಡಿಸಿದ್ದೇವೆ. ಉಪಕರಣಗಳನ್ನು ಒಳಗೆ ಬಿಟ್ಟ ಅಧಿಕಾರಿಗಳನ್ನು ಇದೀಗ ಅದೇ ಜೈಲಿನಲ್ಲಿ ಹಾಕಿದ್ದೇವೆ ಎಂದರು.
ಹರ್ಷ ಸಹೋದರಿ ಏನೇನೋ ಮಾತನಾಡ್ತಿದ್ರು ಮೊನ್ನೆ. ಅವರು ಏನೇನೋ ಹೇಳ್ತಾರೆ, ಯಾವತ್ತು ಮಾಡ್ತೀರಿ?, ಯಾಕಾಗಿಲ್ಲ? ಇದೆಲ್ಲ ಪ್ರಶ್ನೆ ನನಗೆ ಕೇಳಿದ್ರೆ ಏನ್ ಮಾಡ್ಲಿ? ಇಲ್ಲಮ್ಮ ಇದಕ್ಕಿಂತಹ ಜಾಸ್ತಿ ಮಾತಾಡಕ್ಕಾಗಲ್ಲ ಎಂದೆ. ಸಮಾಧಾನದಿಂದ ಮಾತನಾಡಿದ್ರೆ ಮಾತನಾಡಬಹುದು. ಆದ್ರೆ ನನ್ನ ಮಾತನ್ನು ಕೇಳುವ ವ್ಯವಧಾನ ಅವರಿಗಿಲ್ಲ. ಅವರು ಹೇಳಿದ ಹಾಗೆ ನಾನು ಮಾಡಕ್ಕಾಗಲ್ಲ. ಕಾಯ್ದೆ ಕಾನೂನು ನೋಡಬೇಕಾಗುತ್ತದೆ. ನಾನು ಹೋಮ್ ಮಿನಿಸ್ಟರ್ ಆಗಿ ಆರೋಪಿಗಳನ್ನು ಎಳೆದುಕೊಂಡು ಹೊಡೆಯಲು ಆಗುತ್ತಾ?, ಫೈರ್ ಮಾಡಕ್ಕಾಗುತ್ತಾ? ಎಂದು ಪ್ರಶ್ನಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka