ಅರಣ್ಯಾಧಿಕಾರಿಗಳ ವಿರುದ್ಧ ದಲಿತ ದೌರ್ಜನ್ಯ ಕೇಸು | ಸೇಡಿಗಾಗಿ ದಲಿತ ದೌರ್ಜನ್ಯ ತಡೆ ಕಾಯ್ದೆ ದುರುಪಯೋಗವೇ?
ಬೆಳ್ತಂಗಡಿ : ದಕ ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೆಟಾಲ್ಕರ್ ಕುಂದಾಪುರ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೋ ಹಾಗೂ ಉಡುಪಿ ಅರಣ್ಯ ಸಂಚಾರಿ ದಳ ವಲಯಾರಣ್ಯಾಧಿಕಾರಿ ಸಂಧ್ಯಾ ಅವರ ಮೇಲೆ ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ಐತ ಎಂಬವರು ಜಾತಿನಿಂದನೆ ಪ್ರಕರಣವನ್ನು ದಾಖಲಿಸಿದ್ದಾರೆ.
40 ವರ್ಷಗಳಿಂದ ಸ್ವಾಧೀನ ಹೊಂದಿರುವ ಭೂಮಿಯಲ್ಲಿ ಅಡಕೆ ಕೃಷಿ ಮಾಡುವ ಉದ್ದೇಶದಿಂದ ಡಿ.9ರಂದು ಮರಗಳನ್ನು ಕಡಿದು ಹೊರಗಡೆ ದಾಸ್ತಾನು ಮಾಡುತ್ತಿದ್ದ ಸಂದರ್ಭ ಅರಣ್ಯ ಇಲಾಖೆಯ ಅಧಿಕಾರಿಗಳು ಮರಗಳನ್ನು ಕಾನೂನು ರೀತಿಯಲ್ಲಿ ವಶ ಪಡಿಸಿಕೊಂಡಿದ್ದಾರೆ.
ಬಳಿಕ ಡಿ.10ರಂದು ಯಾವುದೇ ನೋಟೀಸು ನೀಡದೆ ಅರಣ್ಯ ಇಲಾಖೆಯ ಅಧಿಕಾರಿಗಳು ತನ್ನ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ತಾಯಿ ಹಾಗೂ ತನ್ನನ್ನು ವಿಚಾರಿಸಿ ಹೆಚ್ಚಿನ ಪ್ರಕರಣಗಳನ್ನು
ದಾಖಲಿಸುವುದಾಗಿ ತಿಳಿಸಿ, ರೂ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು ತನ್ನ ಬಳಿ ಇಷ್ಟು ದೊಡ್ಡ ಮೊತ್ತ ನೀಡಲು ಅನುಕೂಲವಿಲ್ಲವೆಂದು ತಿಳಿಸಿದಾಗ ಜಾತಿ ನಿಂದನೆ ಮಾಡಿ ಮರಗಳನ್ನು ಡಿಪೋಗೆ ಸಾಗಾಟ ಮಾಡಿರುತ್ತಾರೆ ಎಂದು ಐತ ಅವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ದ್ವೇಷ ಸಾಧನೆಗಾಗಿ ದಲಿತ ದೌರ್ಜನ್ಯ ಕೇಸು : ಶೇಖರ್ ಲಾಯಿಲಾ
ಅರಣ್ಯ ಸಂಚಾರಿ ದಳದ ಅರಣ್ಯಾಧಿಕಾರಿ ಸಂಧ್ಯಾ ಅವರ ವಿರುದ್ಧ ವೈಯಕ್ತಿಕ ದ್ವೇಷ ಸಾಧನೆಗಾಗಿ ದಲಿತ ದೌರ್ಜನ್ಯ ತಡೆ ಕಾಯ್ದೆಯನ್ನು ದುರುಪಯೋಗ ಮಾಡಿಕೊಂಡು ಸುಳ್ಳು ಕೇಸ್ ದಾಖಲಿಸಿರುವ ಕ್ರಮ ಪ್ರಜಾಪ್ರಭುತ್ವ ವಿರೋಧಿಯಾದುದು.
ಇದು ಸರ್ವಾಧಿಕಾರಿ ಧೋರಣೆಯ ಪ್ರತೀಕ ಎಂದು ಬೆಳ್ತಂಗಡಿ ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಶೇಖರ್ ಲಾಯಿಲ ಕಟುವಾಗಿ ಟೀಕಿಸಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಕಲ್ಮಂಜ ಗ್ರಾಮದಲ್ಲಿ ಶಾಸಕರ ಪರಮಾಪ್ತ ಬಾಲಕೃಷ್ಣ ಶೆಟ್ಟಿ ಎಂಬಾತ ಕೋಟ್ಯಂತರ ರೂಪಾಯಿ ಮೌಲ್ಯದ ಮರಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಂಚಾರಿ ದಳದ ಅರಣ್ಯಾಧಿಕಾರಿ ಸಂಧ್ಯಾ ಅವರು ದಾಳಿ ನಡೆಸಿ ಕೇಸ್ ದಾಖಲಿಸಿದ್ದು
ಇದನ್ನು ಸಹಿಸಿಕೊಳ್ಳದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಅರಣ್ಯಾಧಿಕಾರಿ ಸಂಧ್ಯಾ ಅವರನ್ನು ದೂರದ ಬೀದರ್ ಗೆ ವರ್ಗಾವಣೆ ಮಾಡಲು ಮುಖ್ಯಮಂತ್ರಿಗೆ ಪತ್ರ ಬರೆದ ಬಗ್ಗೆ ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಬಳಿಕ ವರ್ಗಾವಣೆಯೂ ಆಗಿತ್ತು ಬಳಿಕ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ನ್ಯಾಯ ಸಮ್ಮತವಲ್ಲದ ವರ್ಗಾವಣೆ ಎಂದು ರದ್ದು ಪಡಿಸಿದೆ. ದ್ವೇಷದಿಂದ ಸಂಧ್ಯಾ ಅವರನ್ನು ವರ್ಗಾಯಿಸಲು ಶ್ರಮಿಸಿ ವಿಫಲರಾಗಿ ಮರಗಳ್ಳ ಪ್ರಭಾವಿಗಳಿಗೆ ತೀವ್ರ ಮುಖಭಂಗಕ್ಕೆ ಕಾರಣವಾಯಿತು.
ಪೊಲೀಸ್ ಠಾಣೆ ಮುಂದೆ ಮೃತದೇಹವಿಟ್ಟು ಪ್ರತಿಭಟನೆ
ಇನ್ನೊಂದೆಡೆ ಮೊನ್ನೆ ಹೃದಯಾಘಾತದಿಂದ ನಿಧನರಾದ ಬದ್ಯಾರ್ ಸಮೀಪದ ರಾಮನಾಯ್ಕ ಅವರ ಮೃತದೇಹವನ್ನು ಬೆಳ್ತಂಗಡಿ ಪೋಲಿಸ್ ಠಾಣೆಯ ಮುಂದಿಟ್ಟು ಪ್ರತಿಭಟನೆ ನಡೆಸಿದ್ದಲ್ಲದೆ , ಇದೀಗ ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ಘಟನೆಗೆ ಸೇಡು ತೀರಿಸಿಕೊಳ್ಳುವ ಭಾಗವೆಂಬಂತೆ ಏಪ್ರಿಲ್ 7 ರಂದು ಜಾತಿ ನಿಂದನೆ ಕೇಸ್ ದಾಖಲಿಸಿರುವುದು ಯಾವ ನ್ಯಾಯ ? ಇದು ದಲಿತ ದೌರ್ಜನ್ಯ ತಡೆ ಕಾಯ್ದೆಯ ಸ್ಪಷ್ಟ ದುರುಪಯೋಗ ಹಾಗೂ ಉಲ್ಲಂಘನೆಯಾಗಿದೆ ಎಂದು ಶೇಖರ್ ಆರೋಪಿಸಿದ್ದಾರೆ.
ದಲಿತ ದೌರ್ಜನ್ಯ ಕಾಯ್ದೆಯಡಿ ಈ ರೀತಿಯಾಗಿ ದ್ವೇಷ ಸಾಧನೆಗಾಗಿ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಶೇಖರ್ ಲಾಯಿಲ ಸರ್ವಾಧಿಕಾರಿ ಧೋರಣೆಯ ಹಿಟ್ಲರ್ ಆಡಳಿತವನ್ನು ನೆನಪಿಸುವಂತಿದೆ. ಪೊಲೀಸರ ಮೇಲೆ ಬಲವಂತವಾಗಿ ಒತ್ತಡ ಹೇರಿ ಕೇಸ್ ದಾಖಲಿಸುವ ಮೂಲಕ ತಮ್ಮ ವಿರುದ್ಧ ಧ್ವನಿ ಎತ್ತುವವರನ್ನು ನಿರಂತರ ದಮನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka