ಅರವಿಂದ ಲಿಂಬಾವಳಿ ಸಹಿತ ಎಲ್ಲಾ ಆರೋಪಿಗಳನ್ನು ಬಂಧಿಸಿ: ಸಿದ್ದರಾಮಯ್ಯ ಒತ್ತಾಯ - Mahanayaka
11:58 PM Thursday 12 - December 2024

ಅರವಿಂದ ಲಿಂಬಾವಳಿ ಸಹಿತ ಎಲ್ಲಾ ಆರೋಪಿಗಳನ್ನು ಬಂಧಿಸಿ: ಸಿದ್ದರಾಮಯ್ಯ ಒತ್ತಾಯ

siddaramaya
03/01/2023

ಉದ್ಯಮಿ ಪ್ರದೀಪ್ ಅವರ ಆತ್ಮಹತ್ಯೆ ದುರದೃಷ್ಟಕರ. ಅವರ ಆತ್ಮಹತ್ಯೆಗೆ ಕಾರಣರಾದ ಶಾಸಕ ಅರವಿಂದ ಲಿಂಬಾವಳಿ ಸಹಿತ ಇತರೆ ಎಲ್ಲಾ ಆರೋಪಿಗಳನ್ನು ಈ ಕೂಡಲೇ ಬಂಧಿಸಿ, ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ಉದ್ಯಮಿ ಪ್ರದೀಪ್ ಮನೆಗೆ ಭೇಟಿ ನೀಡಿದ ಸಿದ್ದರಾಮಯ್ಯ ಬಳಿಕ ಘಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ದಿವಂಗತ ಪ್ರದೀಪ್ ಅವರು ಉದ್ಯಮವೊಂದಕ್ಕೆ ಸುಮಾರು 1.5 ಕೋಟಿ ರೂಪಾಯಿ ಬಂಡವಾಳ ಹೂಡಿದ್ದರು, ಆದರೆ ಈವರೆಗೆ ನಯಾಪೈಸೆ ಲಾಭದ ಹಣ ಅವರ ಕೈಸೇರಿಲ್ಲ. ಈ ವಿವಾದದಲ್ಲಿ ಶಾಸಕ ಅರವಿಂದ ಲಿಂಬಾವಳಿ ಅವರು ಮಧ್ಯಸ್ಥಿಕೆ ವಹಿಸಿದ್ದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ತನ್ನ ಪತಿಯ ಸಾವಿಗೆ ನ್ಯಾಯ ಸಿಗಬೇಕು ಮತ್ತು ಸಾಲಮಾಡಿ ಹೂಡಿಕೆ ಮಾಡಿದ್ದ ಹಣವನ್ನು ವಾಪಾಸು ಕೊಡಿಸಬೇಕು ಎಂಬುದು ಮೃತನ ಪತ್ನಿ ನಮಿತಾ ಅವರ ಮನವಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಪೊಲೀಸ್ ಇಲಾಖೆ ತಕ್ಷಣ ಕ್ರಮವಹಿಸಿ, ಈ ಹಣವನ್ನು ವಾಪಾಸು ಕೊಡಿಸುವ ಕೆಲಸ ಮಾಡಬೇಕು.
ಡೆತ್ ನೋಟ್ ನಲ್ಲಿ ಆಡಳಿತದ ಪಕ್ಷದ ಶಾಸಕರ ಹೆಸರಿದೆ ಎಂಬ ಕಾರಣಕ್ಕೆ ಪೊಲೀಸರು ಅಪರಾಧಿಗಳನ್ನು ಬಂಧಿಸದಿದ್ದರೆ ಅವರು ಸಾಕ್ಷ್ಯನಾಶ ಮಾಡುವ ಸಾಧ್ಯತೆಗಳಿರುತ್ತದೆ. ಹೀಗಾದಾಗ ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ನ್ಯಾಯ ಸಿಗಲು ಸಾಧ್ಯವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಪೊಲೀಸರು ಮೃತನ ಮೊಬೈಲ್ ಕೊಡಿ ಎಂದು ಮಧ್ಯರಾತ್ರಿಯಲ್ಲಿ ಕುಟುಂಬದವರ ಬಳಿ ಬಂದು ಕೇಳಿದ್ದಾರೆ. ಸಾವಿಗೂ ಮುನ್ನ ಪ್ರದೀಪ್ ಅವರು ಬರೆದ ಡೆತ್ ನೋಟ್ ನಲ್ಲಿ ಸಾವಿಗೆ ಕಾರಣರಾದವರ ಹೆಸರು ಸ್ಪಷ್ಟವಾಗಿರುವಾಗ ತನಿಖೆಯನ್ನು ಬೇರೆ ಆಯಾಮಗಳಿಗೆ ತಿರುಗಿಸುವ ಅಗತ್ಯವೇನಿದೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಈ ಹಿಂದೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ ಸೂಕ್ತ ತನಿಖೆ ನಡೆಸದೆ ಪ್ರಕರಣವನ್ನು ಮುಚ್ಚಿಹಾಕಲಾಗಿದೆ. ಈ ಪ್ರಕರಣವು ಅದೇ ರೀತಿ ಆಗುವುದು ಬೇಡ. ತನಿಖೆಯಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದಾಗಿ ಹಲವರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ, ದಯಾಮರಣ ಕೋರಿ ಅರ್ಜಿ ಹಾಕಿದ್ದಾರೆ. ಬಿಜೆಪಿಯವರ ಹಣದಾಸೆಗೆ ಇಂಥಾ ಇನ್ನೆಷ್ಟು ಜೀವಗಳು ಬಲಿಯಾಗಬೇಕು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ