ಸಿದ್ದರಾಮಯ್ಯನವರಿಗೆ ಕ್ಷಮೆಯಾಚಿಸಿ ಪತ್ರ ಬರೆದ ಅರವಿಂದ್ ಬೆಲ್ಲದ - Mahanayaka
4:09 PM Friday 20 - September 2024

ಸಿದ್ದರಾಮಯ್ಯನವರಿಗೆ ಕ್ಷಮೆಯಾಚಿಸಿ ಪತ್ರ ಬರೆದ ಅರವಿಂದ್ ಬೆಲ್ಲದ

aravind bellada
03/09/2024

ಬೆಂಗಳೂರು: ಸಿದ್ದರಾಮಯ್ಯನವರ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಜಿಂದಾಲ್ ಅವರಿಗೆ ಕಡಿಮೆ ದರದಲ್ಲಿ ಭೂಮಿ ಕೊಡುವುದಕ್ಕೆ “ಸಿದ್ದರಾಮಯ್ಯನವರದ್ದು ಏನು ಅಪ್ಪನ ಮನೆ ಆಸ್ತಿನಾ” ಎಂದು ಹೇಳಿಕೆ ನೀಡಿದ್ದ ವಿರೋಧ ಪಕ್ಷ ಉಪ ನಾಯಕ ಅರವಿಂದ್ ಬೆಲ್ಲದ ಇದೀಗ ಸಿಎಂ ಸಿದ್ದರಾಮಯ್ಯನವರ ಕ್ಷಮೆಯಾಚಿಸಿದ್ದಾರೆ.

ಈ ಬಗ್ಗೆ ಸಿಎಂಗೆ  ಕ್ಷಮೆಯಾಚಿಸಿ ಪತ್ರ ಬರೆದಿರುವ ಅರವಿಂದ್ ಬೆಲ್ಲದ, ಈ ಪದ ಬಳಕೆ ನನಗೆ ಶೋಭೆ ತಂದಿರುವುದಿಲ್ಲ, ತಮಗೆ ನಾನು ಈ ಪತ್ರದ ಮೂಲಕ ಕ್ಷಮೆ ಯಾಚಿಸುತ್ತೇನೆ ಎಂದು ಅರವಿಂದ್ ಬೆಲ್ಲದ ಬರೆದಿದ್ದಾರೆ.

ಅರವಿಂದ್ ಬೆಲ್ಲದ ಅವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ರಾಜಕೀಯದಲ್ಲಿ ಟೀಕೆ, ಟಿಪ್ಪಣಿಗಳು ಸಹಜ. ಕೆಲವೊಮ್ಮೆ ಉದ್ವೇಗದಲ್ಲಿ ಮತ್ತೊಬ್ಬರ ಘನತೆಗೆ ಚ್ಯುತಿ ತರುವಂತಹ ಹೇಳಿಕೆ ಅರಿವಿಗೆ ಬಾರದೆಯೇ ಬಂದು ಬಿಡುತ್ತದೆ ಎಂದಿದ್ದಾರೆ.


Provided by

ಜಿಂದಾಲ್‌ ಕಂಪನಿಗೆ ಭೂಮಿ ನೀಡಿರುವ ನಮ್ಮ ಸರ್ಕಾರದ ತೀರ್ಮಾನವನ್ನು ವಿರೋಧಿಸಿ ಮಾತನಾಡುವಾಗ ವಿರೋಧ ಪಕ್ಷದ ಉಪನಾಯಕರಾದ ಅರವಿಂದ ಬೆಲ್ಲದ್‌ ಅವರು ವೈಯಕ್ತಿಕವಾಗಿ ನನ್ನನ್ನು ನಿಂದನೆ ಮಾಡಿದ್ದರು. ತಮ್ಮ ತಪ್ಪಿನ ಅರಿವಾಗಿ ಪತ್ರದ ಮೂಲಕ ಕ್ಷಮೆ ಕೋರಿದ್ದಾರೆ. ಅವರ ಈ ನಡೆಯನ್ನು ನಾನು ಅತ್ಯಂತ ಮುಕ್ತವಾಗಿ ಸ್ವಾಗತಿಸುತ್ತೇನೆ, ಜೊತೆಗೆ ಅವರ ಬಗ್ಗೆ ನನ್ನ ಮನಸ್ಸಿನಲ್ಲಿ ದ್ವೇಷವಾಗಲೀ, ಬೇಸರವಾಗಲೀ ಯಾವುದು ಇಲ್ಲವೆಂಬುದನ್ನು ಈ ಮೂಲಕ ತಿಳಿಸಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ನಾನು ಒಂದೆರಡು ಬಾರಿ ಬಾಯ್ತಪ್ಪಿನಿಂದ ಏಕವಚನ ಬಳಕೆ ಮಾಡಿ ನಂತರ ವಿಷಾದ ವ್ಯಕ್ತಪಡಿಸಿದ್ದೇನೆ, ಆ ತಪ್ಪು ಮರುಕಳಿಸದಂತೆ ತಿದ್ದಿಕೊಳ್ಳುವ ಪ್ರಯತ್ನವನ್ನು ಮಾಡಿದ್ದೇನೆ. ನನ್ನ ಸುದೀರ್ಘ 40 ವರ್ಷಗಳ ರಾಜಕೀಯ ಜೀವನದಲ್ಲಿ ವಿಪಕ್ಷಗಳ ಹಲವು ಕಿರಿಯ, ಹಿರಿಯ ನಾಯಕರಿಂದ ವೈಯಕ್ತಿಕ ನಿಂದನೆ, ಚಾರಿತ್ರ್ಯಹನನ ಮಾಡುವಂತಹ ಪದಬಳಕೆ  ಎಲ್ಲವನ್ನೂ ಕೇಳಿದ್ದೇನೆ, ಎದುರಿಸಿದ್ದೇನೆ.  ಮೊದಲ ಬಾರಿಗೆ ಅರವಿಂದ ಬೆಲ್ಲದ್‌ ಅವರು ತಾವು ಬಳಸಿದ ಪದದ ಬಗ್ಗೆ ಸ್ವತಃ ಅವರೇ ಬೇಸರ ವ್ಯಕ್ತಪಡಿಸಿ, ಪತ್ರದ ಮೂಲಕ ಕ್ಷಮೆ ಕೇಳಿ ಹೊಸ ತಲೆಮಾರಿನ ರಾಜಕಾರಣಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅರವಿಂದ್ ಅವರ ತಂದೆ ಚಂದ್ರಕಾಂತ ಬೆಲ್ಲದ್ ಅವರು ನನ್ನ ದೀರ್ಘಕಾಲದ ಸ್ನೇಹಿತರು. ಅವರೊಬ್ಬ ಸಜ್ಜನ ರಾಜಕಾರಣಿ. ಅವರ ಸಜ್ಜನಿಕೆಯ ಪರಂಪರೆಯನ್ನು ಅರವಿಂದ್ ಮುಂದುವರಿಸಿಕೊಂಡು ಹೋಗಲಿ ಎಂದು ಹಾರೈಸುತ್ತೇನೆ ಎಂದು ಅವರು ಹೇಳಿದ್ದಾರೆ.

ರಾಜಕೀಯವು ಬರೀ ಟೀಕೆ, ಆರೋಪ–ಪ್ರತ್ಯಾರೋಪಗಳಿಂದಲೇ ತುಂಬಿಹೋಗುತ್ತಿರುವ ಈ ಕಾಲದಲ್ಲಿ ಅರವಿಂದ ಬೆಲ್ಲದ್‌ ಅವರ ನಡೆ ಮೌಲ್ಯಯುತ ರಾಜಕಾರಣದ ಜೀವಂತಿಕೆಯ ಸಂಕೇತವಾಗಿ ಕಾಣುತ್ತಿದೆ. “ಪಶ್ಚಾತಾಪಕ್ಕಿಂತ ದೊಡ್ಡ ಪ್ರಾಯಶ್ಚಿತ ಬೇರೊಂದಿಲ್ಲ” ಎಂಬ ಮಾತು ಈ ಸಂದರ್ಭಕ್ಕೆ ಹೆಚ್ಚು ಅರ್ಥಪೂರ್ಣವೆನಿಸುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ