ಮಾರ್ಚ್‌ 4ರ ದಾವಣಗೆರೆ ಸಮಾವೇಶಕ್ಕೆ ಅರವಿಂದ್‌ ಕೇಜ್ರಿವಾಲ್, ಭಗವಂತ್‌ ಮಾನ್ - Mahanayaka
11:11 AM Friday 20 - September 2024

ಮಾರ್ಚ್‌ 4ರ ದಾವಣಗೆರೆ ಸಮಾವೇಶಕ್ಕೆ ಅರವಿಂದ್‌ ಕೇಜ್ರಿವಾಲ್, ಭಗವಂತ್‌ ಮಾನ್

aam aadmi party
24/02/2023

ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹಾಗೂ ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ರವರು ಮಾರ್ಚ್‌ 4ರಂದು ದಾವಣಗೆರೆಗೆ ಆಗಮಿಸಲಿದ್ದು, ಆಮ್‌ ಆದ್ಮಿ ಪಾರ್ಟಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪೃಥ್ವಿ ರೆಡ್ಡಿ, “ಐದು ವರ್ಷಗಳ ಕಾಲ ಭ್ರಷ್ಟಾಚಾರ ಮಾಡಿ, ಚುನಾವಣೆ ಸಮೀಪವಿರುವಾಗ ಜನರಿಗೆ ಆಮಿಷಗಳನ್ನು ನೀಡಿ ಮತ್ತೆ ಅಧಿಕಾರಕ್ಕೆ ಬರಬಹುದೆಂದು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಭಾವಿಸಿವೆ. ಆದರೆ ಈ ಸಲ ಕರ್ನಾಟಕದ ಜನರು ದೆಹಲಿ ಹಾಗೂ ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಾರ್ಟಿ ತಂದಿರುವ ಸುಧಾರಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. 10%, 40% ಕಮಿಷನ್ ಸರ್ಕಾರಗಳಿಂದ ಬದಲಾವಣೆ ಸಾಧ್ಯವಿಲ್ಲ ಹಾಗೂ ಆಮ್‌ ಆದ್ಮಿ ಪಾರ್ಟಿಯ 0% ಕಮಿಷನ್‌ ಸರ್ಕಾರಗಳು ಮಾತ್ರ ಜನರ ತೆರಿಗೆ ಹಣವನ್ನು ಸಮರ್ಪಕವಾಗಿ ಬಳಸಬಹುದು ಎಂಬುದು ಜನರಿಗೆ ಮನವರಿಕೆಯಾಗಿದೆ” ಎಂದು ಹೇಳಿದರು.

“ದೆಹಲಿಯ ಜನರಿಗೆ 200 ಯೂನಿಟ್‌ ತನಕ ವಿದ್ಯುತ್, 20,000 ಲೀಟರ್‌ ನೀರು, ಗುಣಮಟ್ಟದ ಶಿಕ್ಷಣ, ಮಾತ್ರೆಯಿಂದ ಸರ್ಜರಿ ತನಕ ಎಲ್ಲ ವೈದ್ಯಕೀಯ ಸೌಲಭ್ಯಗಳು ಹಾಗೂ ಮಹಿಳೆಯರಿಗೆ ಸಾರಿಗೆ ಸೌಲಭ್ಯ ಉಚಿತವಾಗಿ ಸಿಗುತ್ತಿದೆ. ಆದರೆ ಅಷ್ಟೇ ತೆರಿಗೆ ಕಟ್ಟುವ ಕರ್ನಾಟಕದಲ್ಲೇಕೆ ಇವು ಉಚಿತವಾಗಿ ಸಿಗುತ್ತಿಲ್ಲ ಎಂದು ಕರ್ನಾಟಕದ ಜನರು ಪ್ರಶ್ನಿಸುತ್ತಿದ್ದಾರೆ. ಈ ಮೂಲಕ ಈಗಾಗಲೇ ಜನಾಂದೋಲನವೊಂದು ರೂಪುಗೊಂಡಿದ್ದು, ಇದಕ್ಕೆ ಅಧಿಕೃತ ಚಾಲನೆ ನೀಡಲು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹಾಗೂ ಪಂಜಾಬ್‌ ಸಿಎಂ ಭಗವಂತ್‌ ಮಾನ್‌ರವರು ಮಾರ್ಚ್‌ 4ರಂದು ದಾವಣಗೆರೆಗೆ ಬರುತ್ತಿದ್ದಾರೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.


Provided by

“ದಾವಣಗೆರೆ ಸಮಾವೇಶದಲ್ಲಿ ರಾಜ್ಯದ ಪ್ರತಿ ಜಿಲ್ಲೆ, ತಾಲೂಕು, ಬ್ಲಾಕ್‌, ಸರ್ಕಲ್‌ ಹಾಗೂ ಬೂತ್‌ ಮಟ್ಟದ ಆಮ್‌ ಆದ್ಮಿ ಪಾರ್ಟಿ ಪದಾಧಿಕಾರಿಗಳು ಭಾಗವಹಿಸಿ, ಅರವಿಂದ್‌ ಕೇಜ್ರಿವಾಲ್‌ರವರಿಂದ ಪ್ರತಿಜ್ಞೆ ಸ್ವೀಕರಿಸಲಿದ್ದಾರೆ. ರಾಜ್ಯದ ಭ್ರಷ್ಟ ಆಡಳಿತವನ್ನು ಅಂತ್ಯಗೊಳಿಸಿ, ಪ್ರಾಮಾಣಿಕ ಆಡಳಿತವನ್ನು ತರಲು ಶ್ರಮಿಸುತ್ತೇನೆ ಎಂದು ಪ್ರತಿಜ್ಞೆ ಮಾಡಲಾಗುತ್ತದೆ. ದೆಹಲಿಯ ಎಎಪಿ ಸರ್ಕಾರವು ವ್ಯವಸ್ಥಿತವಾಗಿ ಜಾರಿಗೆ ತಂದಿರುವ ಯೋಜನೆಗಳನ್ನು ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ನಕಲು ಮಾಡಿ ಜನರಿಗೆ ಸುಳ್ಳು ಆಶ್ವಾಸನೆ ನೀಡುತ್ತಿದ್ದು, ಈ ವಿಧಾನಸಭಾ ಚುನಾವಣೆಯು ಅಸಲಿ ಹಾಗೂ ನಕಲಿ ನಡುವಿನ ಹೋರಾಟವಾಗಿದೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಪ್ರಚಾರ ಹಾಗೂ ಜನಸಂಪರ್ಕ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, “ಅರವಿಂದ್‌ ಕೇಜ್ರಿವಾಲ್‌ರವರು ದೇಶದ ರಾಜಕೀಯಕ್ಕೆ ಹೊಸ ಚೈತನ್ಯ ತಂದಿರುವ ನಾಯಕ. ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ವ್ಯಕ್ತಿಯೊಬ್ಬರು ಹೊಸ ಪಕ್ಷವನ್ನು ಕಟ್ಟಿ, ಕೇವಲ ಹತ್ತು ವರ್ಷಗಳಲ್ಲಿ ಎರಡು ರಾಜ್ಯಗಳಲ್ಲಿ ಅಧಿಕಾರಕ್ಕೆ ತರುವುದು ಹಾಗೂ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಗಳಿಸುವುದು ಸಾಮಾನ್ಯ ಸಂಗತಿಯಲ್ಲ. ಇದು ದೇಶದ ಅಭಿವೃದ್ಧಿಯಲ್ಲಿ ಅವರಿಗೆ ಇರುವ ಬದ್ಧತೆಗೆ ಸಾಕ್ಷಿ. ಪ್ರಾಮಾಣಿಕ ಹಾಗೂ ಜನಪರ ಆಡಳಿತ ನೀಡಿದರೆ ಹಾಗೂ ಸರ್ಕಾರಿ ಶಿಕ್ಷಣ, ಆರೋಗ್ಯ ಮುಂತಾದವುಗಳಿಗೆ ಆದ್ಯತೆ ನೀಡಿದರೆ ಪ್ರಜ್ಞಾವಂತ ಜನತೆ ಕೈಹಿಡಿಯುತ್ತಾರೆ ಎಂಬುದನ್ನು ಕೇಜ್ರಿವಾಲ್‌ ಸಾಬೀತುಪಡಿಸಿದ್ದಾರೆ” ಎಂದು ಹೇಳಿದರು.

“ಕರ್ನಾಟಕದ ರಾಜಕೀಯದಲ್ಲಿ ಭ್ರಷ್ಟಾಚಾರ, ಅಕ್ರಮ ಚಟುವಟಿಕೆಗಳು, ಅಧಿಕಾರದ ದುರ್ಬಳಕೆ, ಕೋಮುದ್ವೇಷ, ಕೆಳಮಟ್ಟದ ಟೀಕೆಗಳು, ಸುಳ್ಳು ಆಶ್ವಾಸನೆಗಳು, ಸ್ವಜನಪಕ್ಷಪಾತ, ಹಣ ಹಾಗೂ ತೋಳ್ಬಲದ ರಾಜಕೀಯ – ಮುಂತಾದ ಕಸಗಳೇ ತುಂಬಿಹೋಗಿವೆ. ಇದನ್ನೆಲ್ಲ ಗುಡಿಸಲು ಪೊರಕೆ ಅಧಿಕಾರಕ್ಕೆ ಬರಬೇಕಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳಿಗೆ ಈಗಾಗಲೇ ಎಎಪಿ ಕುರಿತು ಭಯ ಶುರುವಾಗಿದ್ದು, ಆದ್ದರಿಂದಲೇ ಎರಡೂ ಪಕ್ಷಗಳು ಕೇಜ್ರಿವಾಲ್‌ ಸರ್ಕಾರದ ಯೋಜನೆಗಳನ್ನು ಕಾಪಿ ಹೊಡೆಯುತ್ತಿವೆ. ಬಿಜೆಪಿಯ ನಮ್ಮ ಕ್ಲಿನಿಕ್‌ ಯೋಜನೆ, ಕಾಂಗ್ರೆಸ್‌ನ ಉಚಿತ ವಿದ್ಯುತ್‌ ಆಶ್ವಾಸನೆಯು ಕೇಜ್ರಿವಾಲ್‌ ಸರ್ಕಾರದಿಂದ ಕದ್ದಿದ್ದಾಗಿದೆ. ಸಿಎಂ ಬೊಮ್ಮಾಯಿಯವರ ಸರ್ಕಾರಕ್ಕೆ ಇತ್ತೀಚಿನ ದಿನಗಳಲ್ಲಿ ದಿಢೀರ್‌ ಅಂತ ಶಾಲಾ ಕೊಠಡಿಗಳು ನೆನಪಾಗಿರುವುದಕ್ಕೂ ಆಮ್‌ ಆದ್ಮಿ ಪಾರ್ಟಿ ಕುರಿತ ಆತಂಕ ಕಾರಣ. ಡಿ.ಕೆ.ಶಿವಕುಮಾರ್‌ ಹಾಗೂ ಎಚ್‌.ಡಿ.ಕುಮಾರಸ್ವಾಮಿಯವರು ಸುಳ್ಳು ಆಶ್ವಾಸನೆಗಳನ್ನು ನೀಡಿ ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ. ಆದರೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳಿಗೆ ಯಾವುದೇ ಯೋಜನೆಯನ್ನು ವ್ಯವಸ್ಥಿತವಾಗಿ ಜಾರಿಗೆ ತರಲು ಸಾಧ್ಯವಾಗುವುದಿಲ್ಲ ಎಂಬುದು ಜನರಿಗೆ ತಿಳಿದಿರುವುದರಿಂದ, ಅವುಗಳು ಕಾಪಿ ಹೊಡೆದರೂ ಜನರು ಎಎಪಿಯನ್ನೇ ಬೆಂಬಲಿಸಲಿದ್ದಾರೆ” ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆಮ್‌ ಆದ್ಮಿ ಪಾರ್ಟಿ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್‌ ಕಾಳಪ್ಪ, ರಾಜ್ಯ ಉಪಾಧ್ಯಕ್ಷ ಚನ್ನಪ್ಪಗೌಡ ನೆಲ್ಲೂರು ಹಾಗೂ ರಾಜ್ಯ ಜಂಟಿ ಕಾರ್ಯದರ್ಶಿ ಉಷಾ ಮೋಹನ್ ಭಾಗವಹಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ