ಪಕ್ಷೇತರ ಅಭ್ಯರ್ಥಿಯಾಗಿ ನಾಳೆ ನಾಮಪತ್ರ ಸಲ್ಲಿಸಲಿರುವ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಬಿಜೆಪಿ ವಿರುದ್ಧ ಬಂಡಾಯ ಎದ್ದಿರುವ ಕೆ.ಎಸ್.ಈಶ್ವರಪ್ಪನವರು ನಾಳೆ 25,000 ಬೆಂಬಲಿಗರ ಸಮ್ಮುಖದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಈ ಬಗ್ಗೆ ರಾಷ್ಟ್ರಭಕ್ತ ಬಳಗದ ಸದಸ್ಯ ಇ.ವಿಶ್ವಾಸ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾಳೆ ಬೆಳಿಗ್ಗೆ 10 ಗಂಟೆಗೆ ರಾಮಣ್ಣ ಶ್ರೇಷ್ಠಿ ಪಾರ್ಕ್ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಗೋಪಿ ವೃತ್ತಕ್ಕೆ ಬಂದು ಸಭೆ ನಡೆಸಲಾಗುವುದು. ನಂತರ ನಾಮಪತ್ರ ಸಲ್ಲಿಸಲಿದ್ದಾರೆ. ಬೈಂದೂರು ಸೇರಿದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಲ್ಲಾ ಕಡೆಗಳಿಂದ ರಾಷ್ಟ್ರಭಕ್ತರು ಆಗಮಿಸಲಿದ್ದಾರೆ ಎಂದರು.
ಶಿವಮೊಗ್ಗದಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಬಿಜೆಪಿ ಹೈಕಮಾಂಡ್ ಸತತ ಪ್ರಯತ್ನ ಮಾಡಿದರೂ, ಈಶ್ವರಪ್ಪನವರನ್ನು ಸಮಾಧಾನ ಪಡಿಸಲು ಸಾಧ್ಯವಾಗಿರಲಿಲ್ಲ.
ಬಿ.ವೈ.ರಾಘವೇಂದ್ರ ಅವರನ್ನು ಸೋಲಿಸಿದರೆ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ. ವಿಜಯೇಂದ್ರ ರಾಜೀನಾಮೆ ನೀಡಬೇಕಾಗುತ್ತದೆ ಎನ್ನುವುದು ಕೆ.ಎಸ್.ಈಶ್ವರಪ್ಪ ಅವರ ಲೆಕ್ಕಾಚಾರವಾಗಿದೆ.
ಈಶ್ವರಪ್ಪನವರ ಪುತ್ರನಿಗೆ ಟಿಕೆಟ್ ಕೈತಪ್ಪಲು ಬಿ.ಎಸ್.ಯಡಿಯೂರಪ್ಪನವರೇ ಕಾರಣ ಎಂದು ಈಶ್ವರಪ್ಪನವರು ಭಾವಿಸಿದ್ದು, ಯಡಿಯೂರಪ್ಪ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದ್ದರು. ಇದೀಗ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸುವುದಕ್ಕೂ ಮೊದಲೇ ಈಶ್ವರಪ್ಪ ನಾಮಪತ್ರ ಸಲ್ಲಿಸಲಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth