ಅಸ್ಪೃಶ್ಯತೆಯನ್ನು ಮುಚ್ಚಿಟ್ಟು ಮತಾಂತರದ ಹಿಂದೆ ಬಿದ್ದ ಬಿಜೆಪಿ ಪರಿವಾರ!
-ಸಂಪಾದಕೀಯ
ದೇಶದಾದ್ಯಂತ ಸದ್ಯ ಮತಾಂತರ ಎಂಬ ವಿಚಾರದಲ್ಲಿ ಬಿಜೆಪಿ ಪರಿವಾರ ವಿವಿಧ ಚಟುವಟಿಕೆಯಲ್ಲಿ ತೊಡಗಿದೆ. ರಾಜ್ಯದಲ್ಲಿ ಕೂಡ ಮತಾಂತರ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಕೂಡ ಚರ್ಚೆ ನಡೆದಿದೆ. ಸ್ವತಃ ಗೃಹಸಚಿವ ಅರಗ ಜ್ಞಾನೇಂದ್ರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ, ತಾನೊಬ್ಬ ಗೃಹ ಸಚಿವ ಎನ್ನುವುದನ್ನು ಮರೆತು ಒಂದು ಧರ್ಮದ ಪ್ರತಿಪಾದಕ ಎಂಬಂತೆ ಹೇಳಿಕೆ ನೀಡಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕೂಡ ಮತಾಂತರದ ಬಗ್ಗೆ ಮಾತನಾಡಿದ್ದಾರೆ. ಆದರೆ, ರಾಜ್ಯದಲ್ಲಿ ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕೆ ದಂಡ ಹಾಕಿರುವ ಎರಡು ಪ್ರಕರಣಗಳು ನಡೆದರೂ, ಇದರ ಬಗ್ಗೆ ಯಾರು ಕೂಡ ಯಾಕೆ ಮಾತನಾಡುತ್ತಿಲ್ಲ? ಎನ್ನುವ ಪ್ರಶ್ನೆಗಳು ಇದೀಗ ಕೇಳಿ ಬಂದಿದೆ.
ಭಾರತದ ಕಾನೂನಿನ ಪ್ರಕಾರ ಒಬ್ಬ ವ್ಯಕ್ತಿ ಅವನಿಗೆ ಇಷ್ಟ ಬಂದ ಧರ್ಮವನ್ನು ಆಯ್ಕೆ ಮಾಡಲು ಅವನಿಗೆ ಅವಕಾಶ ಇದೆ. ಬಲವಂತದ ಮತಾಂತರಕ್ಕೆ ಕಾನೂನಿನಲ್ಲಿ ಈ ಹಿಂದಿನಿಂದಲೇ ಅವಕಾಶ ಇಲ್ಲ. ಆದರೆ, ಇದೊಂದು ಹೊಸ ಪ್ರಕರಣ ಎಂಬಂತೆ ಮತಾಂತರದ ವಿಚಾರಕ್ಕೆ ಸರ್ಕಾರ, ಸ್ವತಃ ಗೃಹ ಸಚಿವರೇ ತಾನು ಒಂದು ಧರ್ಮದ ಪ್ರತಿನಿಧಿ ಮಾತ್ರ ಎಂಬಂತ ಮಾತನಾಡುತ್ತಿರುವುದು, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ರಾಜಕೀಯ ದಾಳಕ್ಕೆ ಶರಣಾಗಿದೆಯೇ? ಎನ್ನುವ ಅನುಮಾನಗಳಿಗೆ ಕಾರಣವಾಗಿದೆ.
ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕೆ 2 ವರ್ಷದ ಮಗು ಎಂದೂ ನೋಡದೇ ದಂಡ ವಿಧಿಸಲಾಗಿದೆ. ಇದರ ಬಗ್ಗೆ ಯಾವ ರಾಜಕಾರಣಿಗಳು ಒಂದು ಶಬ್ಧ ಮಾತನಾಡುತ್ತಿಲ್ಲ. ರಾಜ್ಯದಲ್ಲಿ ದಲಿತ ದೌರ್ಜನ್ಯ ಪ್ರಕರಣಗಳು ಸಾಲು ಸಾಲು ನಡೆಯುತ್ತಿದೆ. ಇದರ ಬಗ್ಗೆ ಮಾತನಾಡುತ್ತಿಲ್ಲ. ರಾಜ್ಯದಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದೆ. ಇದರ ಬಗ್ಗೆ ಸರ್ಕಾರವಾಗಲಿ ಬಿಜೆಪಿ ಪರಿವಾರವಾಗಲಿ ಮಾತನಾಡುತ್ತಿಲ್ಲ. ಜಾತಿ ಪದ್ಧತಿಯ ಕರಾಳತೆಯಿಂದಾಗಿ ದಲಿತರು ನೆಮ್ಮದಿಯಿಂದ ಬದುಕಲು ಸಾಧ್ಯವಾಗದಂತ ಪರಿಸ್ಥಿತಿ ಬಂದಿದೆ. ಇದರ ಬಗ್ಗೆ ಬಿಜೆಪಿ ಪರಿವಾರ ಯಾಕೆ ಮಾತನಾಡುತ್ತಿಲ್ಲ?
ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡುತ್ತಾ, “ಭಾರತೀಯ ಹಿಂದೂ ಧರ್ಮ” ಎಂಬ ಪದ ಬಳಕೆ ಮಾಡಿದ್ದಾರೆ. ಆದರೆ, ಭಾರತವು ಯಾವುದೇ ಒಂದು ನಿಶ್ಚಿತ ಧರ್ಮದ ಆಧಾರದಲ್ಲಿ ಗುರುತಿಸಿಕೊಂಡಿಲ್ಲ. ಇಲ್ಲಿ ಸರ್ವ ಧರ್ಮವೂ ಸಮಾನವಾಗಿದೆ. ಆದರೆ ಅವರು ಮಾತನಾಡುತ್ತಾ, ಭಾರತೀಯ ಹಿಂದೂ ಧರ್ಮ ಇದು ಎಲ್ಲ ಧರ್ಮಗಳಿಗೆ ಆಶ್ರಯ, ನೆರಳನ್ನು ನೀಡಿದ ಶ್ರೇಷ್ಠವಾದ ಧರ್ಮ . ಇಡೀ ವಿಶ್ವವೇ ಒಂದು ಕುಟುಂಬ ಎಂದು ಭಾವಿಸಿರುವ ಪರಂಪರೆ ನಮ್ಮದು. ಈ ಪರಂಪರೆಯನ್ನು ನಾಶ ಮಾಡುವ ಕೆಲಸ ಆಗುತ್ತಿದೆ. ಮೊನ್ನೆ ಶಾಸಕರೊಬ್ಬರು ವಿಧಾನಸಭೆಯಲ್ಲಿ ಮಾತನಾಡುತ್ತ, ತನ್ನ ತಾಯಿಯನ್ನೇ ಕನ್ವರ್ಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಗಂಡ ಹೆಂಡತಿ ಬೇರೆಯಾಗಿದ್ದಾರೆ. ತಾಯಿ ಮಕ್ಕಳು ಬೇರೆಯಾಗಿದ್ದಾರೆ. ಊರು ಊರಿನಲ್ಲಿ ಜಗಳ ಶುರುವಾಗಿದೆ. ಶಾಂತಿ ಸುವ್ಯವಸ್ಥೆಗೆ ಭಂಗ ಬರುತ್ತಿದೆ. ಹಾಗಾಗಿ ಇದರ ಬಗ್ಗೆ ನಾವು ಮತಾಂತರ ತಡೆ ಬಿಲ್ ತರುತ್ತಿದ್ದೇವೆ ಎಂದು ಕಾರಣ ಹೇಳಿದ್ದಾರೆ. ಆದರೆ, ಮತಾಂತರದ ಬಗ್ಗೆ ಇಷ್ಟೆಲ್ಲ ಮಾತನಾಡಿದ ಅವರು, ಎಲ್ಲಿ ಬಲವಂತದ ಮತಾಂತರ ನಡೆದಿದೆ? ಯಾರನ್ನು ಮನೆಯಿಂದ ಬಲವಂತವಾಗಿ ಎಳೆದುಕೊಂಡು ಹೋಗಿ ಮತಾಂತರ ಮಾಡಲಾಗಿದೆ. ಯಾರನ್ನು ಕೈ ಕಾಲು ಕಟ್ಟಿ ಅಪಹರಿಸಿ ಬಲವಂತವಾಗಿ ಮತಾಂತರ ಮಾಡಲಾಗಿದೆ? ಇಂತಹ ಎಷ್ಟು ಕೇಸ್ ಗಳು ದಾಖಲಾಗಿದೆ ಎನ್ನುವುದನ್ನು ಅವರು ಯಾಕೆ ಬಹಿರಂಗ ಪಡಿಸುತ್ತಿಲ್ಲ ಎನ್ನುವ ಪ್ರಶ್ನೆಗಳು ಕೂಡ ಕೇಳಿ ಬಂದಿದೆ.
ಹಿಂದೂ ಧರ್ಮದೊಳಗೆ ಸಮಾನತೆಯನ್ನು ಸೃಷ್ಟಿಸದೇ, ದಲಿತರನ್ನು ಪದೇ ಪದೇ ಅವಮಾನಿಸುತ್ತಾ, ಅಸ್ಪೃಶ್ಯತೆ ಆಚರಿಸಲಾಗುತ್ತಿದೆ. ಈ ಬಗ್ಗೆ ಹಲವಾರು ಪ್ರಕರಣಗಳು ದಾಖಲಾಗಿದ್ದರೂ, ಬಿಜೆಪಿಗೆ ಇದೊಂದು ಸಮಸ್ಯೆ ಎನ್ನುವುದು ಇಲ್ಲಿಯವರೆಗೆ ತಿಳಿಯದಿರುವುದು ವಿಪರ್ಯಾಸ. ಅಸ್ಪೃಶ್ಯತೆ ನಿವಾರಣೆಗೆ ಬಿಜೆಪಿ ಸರ್ಕಾರ ಹೊಸ ಬಿಲ್ ತಂದಿದ್ದರೆ, ಅದನ್ನು ಒಪ್ಪಬಹುದಾಗಿತ್ತು. ಆದರೆ, ಬಿಜೆಪಿ ಪರಿವಾರ, ಅಸ್ಪೃಶ್ಯತೆಯ ಪ್ರಕರಣಗಳು ನಡೆದಾಗ ಮೌನವಹಿಸುತ್ತಿವೆ. ಈ ಮೂಲಕ ಮೌನ ಸಮ್ಮತದ ಲಕ್ಷಣ ಎನ್ನುವುದನ್ನು ಪರೋಕ್ಷವಾಗಿ ತೋರುತ್ತಿದೆಯೇ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ. ಅಸ್ಪೃಶ್ಯತೆಯ ಪ್ರಕರಣಗಳು ನಡೆದಾಗ ಬಿಜೆಪಿ ಯಾವಾಗಲು ಮೇಲ್ವರ್ಗದ ಜೊತೆಗೆ ನಿಂತು ದಲಿತರನ್ನು ತುಳಿಯುವ ಕೆಲಸ ಮಾಡಿರುವುದಕ್ಕೆ ಸಾಕಷ್ಟು ಉದಾಹರಣೆಗಳು ರಾಜ್ಯ ಮತ್ತು ಇಡೀ ದೇಶದಲ್ಲಿಯೇ ಇದೆ. ಅಸ್ಪೃಶ್ಯತೆಯ ವಿರುದ್ಧ ಮಾತನಾಡಿದರೆ, ಮುಂದುವರಿದ ಜಾತಿಗಳ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ ಎನ್ನುವ ಭಯದಿಂದ ಬಿಜೆಪಿ ಅಸ್ಪೃಶ್ಯತೆಯ ವಿರುದ್ಧ ಮಾತನಾಡುತ್ತಿಲ್ಲವೇ ಎನ್ನುವ ಸಾಲು ಸಾಲು ಪ್ರಶ್ನೆಗಳು ದಲಿತ ಸಮುದಾಯದಲ್ಲಿವೆ.
ಅಸ್ಪೃಶ್ಯತೆಯನ್ನು ಮರೆಮಾಚುತ್ತಲೇ ಬಂದಿರುವ ಬಿಜೆಪಿ ಹಾಗೂ ಕಾಂಗ್ರೆಸ್, ಜೆಡಿಎಸ್ ನೇತೃತ್ವದ ಸರ್ಕಾರಗಳು, ಇಲ್ಲಿಯವರೆಗೆ ರಾಜ್ಯದಲ್ಲಿ ಅಸ್ಪೃಶ್ಯತೆಯ ಬಗ್ಗೆ ಪ್ರಬಲವಾದ ಕ್ರಮಗಳನ್ನು ಕೈಗೊಳ್ಳಲು ವಿಫಲವಾಗಿದೆ. ಆದರೆ, ಇದೀಗ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ, ದೇವಸ್ಥಾನಗಳನ್ನು ಒಡೆದು ಹಾಕಿದ್ದು, ಇದರಿಂದಾಗಿ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಹಿಂದೂ ಮಹಾಸಭಾವು ಬಿಜೆಪಿಯ ಕೃತ್ಯಕ್ಕೆ ನೇರವಾಗಿ ವಿರೋಧ ವ್ಯಕ್ತಪಡಿಸಿದೆ. ರಾಜ್ಯದ ಬಿಜೆಪಿ ಸರ್ಕಾರ ದೇವಸ್ಥಾನವನ್ನು ಒಡೆದು ನುಚ್ಚುನೂರು ಮಾಡಿ ಆಂಜನೇಯನ ಪ್ರತಿಮೆಯನ್ನು ತಿಪ್ಪೆಗೆಸೆದಿದೆ. ಈ ಕೃತ್ಯವನ್ನು ಮಾಡುವಾಗ ಹಿಂದುತ್ವ ಗೊತ್ತಿರಲಿಲ್ಲವೇ? ಜೈ ಶ್ರೀರಾಮ್ ಗೊತ್ತಿರಲಿಲ್ಲವೇ?, ಹಿಂದೂಗಳು ಗೊತ್ತಿರಲಿಲ್ಲವೇ? ಈ ಕೃತ್ಯವನ್ನು ಯಾವುದೋ ಕ್ರೈಸ್ತ ಮಿಷನರಿ ಮಾಡಿಲ್ಲ, ಮುಸ್ಲಿಮ್ ಸಂಘಟನೆಗಳೋ ಮಾಡಿಲ್ಲ. ಹಿಂದುತ್ವದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಬಿಜೆಪಿಯೇ ಮಾಡಿದೆ. ಈ ಕೃತ್ಯದಿಂದ ರಾಜ್ಯ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಕೆಟ್ಟ ಹೆಸರು ಬಂದಿದೆ. ಇವುಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಮತಾಂತರ ಹೋರಾಟ ನಡೆಸುತ್ತಿದೆ ಎಂದು ಜನ ಮಾತನಾಡುತ್ತಿದ್ದಾರೆ. ದೇವಸ್ಥಾನಗಳನ್ನು ನಾಶ ಮಾಡಿದ್ದಕ್ಕೆ ಬಿಜೆಪಿ ತನ್ನ ವಿರುದ್ಧವೇ ಒಂದು ಬಿಲ್ ಪಾಸ್ ಮಾಡಿಕೊಂಡು ತನ್ನ ಕೃತ್ಯವನ್ನು ತಾನೇ ಒಪ್ಪಿಕೊಳ್ಳುತ್ತದೆಯೇ? ಎನ್ನುವ ಪ್ರಶ್ನೆಗಳನ್ನು ಸಮಾಜದ ಶಾಂತಿಗಾಗಿ, ಸಮಾಜದ ಸುರಕ್ಷತೆಗಾಗಿ ಇಂದು ಕೇಳಲೇ ಬೇಕಿದೆ. ನೀವು ಇದಕ್ಕೆ ಉತ್ತರಿಸಲೇ ಬೇಕಿದೆ.
ಮೊದಲು ಹಿಂದೂ ಧರ್ಮದೊಳಗೆ ಇರುವ ಅಸಮಾನತೆಯನ್ನು ಕಳೆಯಬೇಕು. ಜಾತಿ ತಾರತಮ್ಯಗಳನ್ನು ಕಳೆಯಬೇಕು. ಆಗ ಮಾತ್ರವೇ ಹಿಂದೂ ಧರ್ಮದಿಂದ ಯಾರು ಕೂಡ ಬೇರೆ ಧರ್ಮಕ್ಕೆ ಮತಾಂತರವಾಗುವುದಿಲ್ಲ. ಎಲ್ಲರೂ ಸಮಾನತೆಯಿಂದ ಬದುಕಲು ಆಸೆಪಡುತ್ತಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಕೂಡ ಈ ಜಾತಿ ವ್ಯವಸ್ಥೆಯಿಂದ ನೊಂದು, “ನಾನು ಹಿಂದೂವಾಗಿ ಹುಟ್ಟಿ, ಹಿಂದೂವಾಗಿ ಸಾಯುವುದಿಲ್ಲ” ಎಂದು ಹೇಳಿದರು ಎನ್ನುವುದನ್ನು ಇಂದಿಗೂ ಈ ದೇಶ ಮರೆತಿಲ್ಲ. ಮತ್ತು ಜಾತಿ ತಾರತಮ್ಯಕ್ಕೆ ತನ್ನ ಜನರು ಬಲಿಪಶು ಆಗಬಾರದು ಎಂದು ಬೌದ್ಧ ಧರ್ಮ ಸ್ವೀಕರಿಸಿದರು. ಬಿಜೆಪಿಗೆ ಸಾಮರ್ಥ್ಯವಿದ್ದರೆ, ಮೊದಲು ಅಸ್ಪೃಶ್ಯತೆಯನ್ನು ನಾಶ ಮಾಡುವ ಪ್ರಬಲವಾದ ಬಿಲ್ ನ್ನು ಪಾಸ್ ಮಾಡಿ. ಜಾತಿ ಪೀಡೆಗಳನ್ನು ಮಟ್ಟ ಹಾಕಲಿ. ಧರ್ಮದೊಳಗೇ ಸಮಾನತೆ ಸೃಷ್ಟಿಸದ ನೀವುಗಳು, ಅದೇನು ಧರ್ಮ ರಕ್ಷಣೆ ಮಾಡುತ್ತಿದ್ದೀರಿ? ಎಂದು ಜನರು ಪ್ರಶ್ನಿಸಿದರೆ, ಅದಕ್ಕಿಂತಲೂ ಅಸಹ್ಯವಾದ ಅವಮಾನ ಬೇರೇನಾದರೂ ಬೇಕೇ? ಈ ದೇಶದಲ್ಲಿ ಸರ್ವಧರ್ಮೀಯರೂ ಸಮಾನರು. ಪ್ರತಿಯೊಬ್ಬರೂ ಆರ್ಥಿಕ, ಸಾಮಾಜಿಕ, ಧಾರ್ಮಿಕವಾಗಿ ಸ್ವತಂತ್ರರು ಎನ್ನುವುದನ್ನು ಒಪ್ಪಿಕೊಳ್ಳಬೇಕು. ರಾಜಕೀಯಕ್ಕೆ ಧಾರ್ಮಿಕತೆಯನ್ನು ಬಳಸಿಕೊಳ್ಳುವ ಅಸಭ್ಯ ಸಂಪ್ರದಾಯ ಇನ್ನಾದರೂ ಕೊನೆಯಾಗಲಿ ಎನ್ನುವುದೇ ನಮ್ಮ ಉದ್ದೇಶ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ:
https://chat.whatsapp.com/GprkhpfFmuL8YDKlAEmru9
ಇನ್ನಷ್ಟು ಸುದ್ದಿಗಳು…
ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ ‘ಜೈ ಭೀಮ್’ ಬಹುನಿರೀಕ್ಷಿತ ಚಿತ್ರ
ಅಕ್ಷರಸ್ಥರೇ ಇವತ್ತು ಬುದ್ಧ, ಬಸವ, ಅಂಬೇಡ್ಕರ್ ಅವರಿಗೆ ಮೋಸ ಮಾಡುತ್ತಿದ್ದಾರೆ | ಡಾ.ಎಚ್.ಟಿ. ಪೋತೆ