ಆಸ್ಪತ್ರೆಯಲ್ಲಿಯೇ ಬಾಲಕನ ಹುಟ್ಟುಹಬ್ಬ ಆಚರಿಸಿದ ಸಿಬ್ಬಂದಿ | ಘಟನೆಯ ಹಿಂದಿದೆ ನೋವಿನ ಕಥೆ
17/05/2021
ಕೆ.ಆರ್.ಪುರಂ: ತಂದೆ ಕೊರೊನಾಕ್ಕೆ ಬಲಿಯಾಗಿದ್ದು, ತಾಯಿಯು ಮಗನ ಜೊತೆಗೆ ಕೊವಿಡ್ ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಆಸ್ಪತ್ರೆ ಸಿಬ್ಬಂದಿ ಮಗನ ಹುಟ್ಟು ಹಬ್ಬವನ್ನು ಆಸ್ಪತ್ರೆಯಲ್ಲಿಯೇ ಆಚರಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ಮೂಡಿಸಿದರು.
ಕಗ್ಗದಾಸಪುರ ಲಕ್ಷ್ಮೀ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಾಲಕ, ತನ್ನ ಹುಟ್ಟುಹಬ್ಬವನ್ನು ಪ್ರತೀ ವರ್ಷ ಅಪ್ಪ-ಅಮ್ಮ ಸೇರಿ ಮಾಡುತ್ತಿದ್ದರು ಎಂದು ಬಾಲಕ ಆರೋಗ್ಯ ಸಿಬ್ಬಂದಿಯ ಬಳಿ ಹೇಳಿಕೊಂಡಿದ್ದ ಎಂದು ಹೇಳಲಾಗಿದೆ. ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಮಾಲಕರಾದ ಡಾ.ಜಯಮಾಲಾ ಶಾಂಭೋಶಿವ ಮತ್ತು ಸಿಬ್ಬಂದಿ ಕೇಕ್ ತಂದು ಬಾಲಕನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಬಾಲಕನ ತಂದೆ ಕೆಲವು ದಿನಗಳ ಹಿಂದೆ ಕೊರೊನಾಕ್ಕೆ ಬಲಿಯಾಗಿದ್ದರು. ಹುಟ್ಟು ಹಬ್ಬದ ಸಂದರ್ಭದಲ್ಲಿ ಬಾಲಕ ತನ್ನ ತಂದೆಯನ್ನು ತೀವ್ರವಾಗಿ ನೆನಪು ಮಾಡಿಕೊಂಡಿದ್ದ. ಆಸ್ಪತ್ರೆಯ ಮಾಲಿಕರು ಹಾಗೂ ಸಿಬ್ಬಂದಿಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.