ನಂದುತ್ತಿರುವ ಸರ್ಕಾರಿ ಉದ್ಯೋಗದ ಆಕಾಂಕ್ಷೆಗಳು! - Mahanayaka

ನಂದುತ್ತಿರುವ ಸರ್ಕಾರಿ ಉದ್ಯೋಗದ ಆಕಾಂಕ್ಷೆಗಳು!

unemployment in india
05/09/2022

  • ಶ್ರೀನಿವಾಸ್ ಕೆ.

ಕಷ್ಟಪಟ್ಟು ಓದಿದರೆ ಕೆಲಸ ಸಿಗುತ್ತೆ ಅನ್ನೋದು ಬಹಳ ಹಿಂದಿನ ಮಾತು. ಆದರೆ, ರಾಜ್ಯದಲ್ಲಿ ಜರಗುತ್ತಿರುವ ಪ್ರಚಲಿತ ವಿದ್ಯಮಾನಗಳನ್ನ ಗಮನಿಸಿದಾಗ ಸರ್ಕಾರಿ ಕೆಲಸವು ಮರೀಚಿಕೆಯಾಗಿದೆ. ಕೇವಲ ಹಣಬಲವಿದ್ದವರಷ್ಟೆ ಸರ್ಕಾರಿ ಉದ್ಯೋಗವನ್ನು ಗಳಿಸಲು ಸಾಧ್ಯವಾಗಿದೆ. ಎಷ್ಟೋ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ನಗರದ ಸಾರ್ವಜನಿಕ ಗ್ರಂಥಾಲಯಗಳನ್ನೆ ಆಶ್ರಯಿಸಿ ಊಟ, ನಿದ್ರೆಯನ್ನು ತ್ಯಜಿಸಿ ಓದಿ ಪರೀಕ್ಷೆಗಳನ್ನು ಎದುರಿಸಿದರೂ ಉದ್ಯೋಗವನ್ನು ಗಿಟ್ಟಿಸಿಕೊಳ್ಳಲಾಗುತ್ತಿಲ್ಲ. ಪ್ರಸ್ತುತ ದಿನಗಳಲ್ಲಿ ಹಣಬಲವುಳ್ಳವರು ಪ್ರಶ್ನೆ ಪತ್ರಿಕೆಗಳನ್ನೇ ಖರೀದಿ ಮಾಡುತ್ತಿದ್ದಾರೆ. ಕೇವಲ ತಮ್ಮ ಜ್ಞಾನವನ್ನೇ ಆಧರಿಸಿ ಎಷ್ಟೋ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ದಂಡಯಾತ್ರೆ ನಡಿಸುತ್ತಿದ್ದರೂ ಯಾವುದೇ ಪ್ರಯೋಜನವಾಗದೆ ಉದ್ಯೋಗದ ಆಶೆಗೆ ಎಳ್ಳು-ನೀರು ಬಿಡುತ್ತಿರುವುದನ್ನು ಕಾಣಬಹುದು. ಆಳುವ ಸರ್ಕಾರಗಳು ಯುವಜನತೆಯ ಕನಸ್ಸಿಗೆ ತಣ್ಣೀರೆರೆಚುವ ಕೆಲಸ ಮಾಡಿತ್ತಿವೆ. ಉದ್ಯೋಗ ಸೃಷ್ಟಿಯ ಮೂಲಗಳಾಗಿದ್ದ ಸರ್ಕಾರಿ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುತ್ತಿವೆ. ಹಣಬಲ, ಜನಬಲ ಹಾಗೂ ರಾಜಕೀಯ ಬಲವಿಲ್ಲದ ದಮನಿತ ಸಮುದಾಯಗಳ ಯುವಕರ ಕಟ್ಟಕಡೆಯ ಭರವಸೆಯಾಗಿದ್ದ ಸರ್ಕಾರಿ ಉದ್ಯೋಗದ ಆಕಾಂಕ್ಷೆಗೂ ಭ್ರಷ್ಟಾಚಾರದ ಗ್ರಹಣವಿಡಿದಿದೆ.

ಮೂರು ದಶಕದ ಹಿಂದೆ ನನ್ನ ತಾಯಿ ಹೇಳಿದ ಒಂದು ಮಾತು ನೆನಪಾಯಿತು. ಸಂಬಂಧಿಕರೊಬ್ಬರು ಜಮೀನು ಮಾರಾಟಮಾಡುತ್ತಿದ್ದ ಸುದ್ದಿ ತಿಳಿದು ನನ್ನ ತಾಯಿ ನೆರೆಯ ಜಮೀನ್ದಾರರ ಬಳಿ ಮೂರು ಸಾವಿರ ರೂಪಾಯಿ ಸಾಲ ಕೇಳಿದ್ದರಂತೆ. ಆಗ ಜಮೀನ್ದಾರರು ಹಣವೇಕೆ ಎಂದು ಪ್ರಶ್ನಿಸಲಾಗಿ ವೃತಾಂತವನ್ನು ನಮ್ಮ ತಾಯಿ ತಿಳಿಸಲಾಗಿ ‘ಅಯ್ಯೋ ನಾವೇ ಜಮೀನಿನಲ್ಲಿ ದುಡಿದು ತಿನ್ನೋಕೆ ಆಗ್ತಿಲ್ಲ, ಇನ್ನೂ ಈಗಿನ ಮಕ್ಕಳು ದುಡಿತಾವ ಹೋಗಮ್ಮ, ಅವರಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸು ಅವರಿಗೆ ಸರ್ಕಾರಿ ಕೆಲಸ ಸಿಗುತ್ತೆ’ ಎಂದಿದ್ದರಂತೆ. ಆದರೆ, ಇಂದು ಪರಿಸ್ಥಿತಿ ಜಮೀನ್ದಾರರ ನುಡಿಗಳಿಗೆ ತದ್ವಿರುದ್ಧವಾಗಿವೆ, ಬಹುಷಃ ಅಂದು ಅವರೇನಾದರೂ ಹಣದ ಸಹಾಯ ಮಾಡಿದಿದ್ದರೆ ನಮಗೊಂದಿಷ್ಟು ಜಮೀನಿರ್ತಿತ್ತು. ಬಹುಷಃ ಭೂ ಒಡೆತನದ ಮಹತ್ವ ನನ್ನ ತಾಯಿಗೆ ತಿಳಿದಿತ್ತು ಅನಿಸುತ್ತದೆ. ಇಂದು ಭೂ ಒಡೆತನವಿದ್ದವರಷ್ಟೇ ಉತ್ತಮ ಅಧಿಕಾರ, ಸ್ಥಾನಮಾನಗಳನ್ನು ಅಲಂಕರಿಸಲು ಸಾಧ್ಯವಾಗುತ್ತದೆ. ಕಡೆಕಾಲಕ್ಕೆ ಉದ್ಯೋಗವಿಲ್ಲದಿದ್ದರೂ ತಮ್ಮ ಹೊಟ್ಟೆ ಪೊರೆಯಲು ಜಮೀನು ಸಹಾಯಕ್ಕೆ ಬರುವುದುಂಟು. ಆದರೆ, ದೇಶದ ಶೇ.47.8%ರಷ್ಟು ಜನಸಂಖ್ಯೆಗೆ ಕನಿಷ್ಠ ಒಂದು ಅಡಿ ಭೂಮಿಯು ಇಲ್ಲದಿರುವುದು ಸಂಪತ್ತಿನ ಅಸಮಾನತೆಗಿಡಿದ ಕನ್ನಡಿಯಾಗಿದೆ.

ಭೂಮಿಯ ಮೇಲೆ ಗಾಳಿಯಿಲ್ಲದ ಜಾಗವಿಲ್ಲದಿರುವುದು ಹೇಗೋ, ಭ್ರಷ್ಟಾಚಾರವಿಲ್ಲದ ಜಾಗಗಳಿಲ್ಲ. ಪ್ರತಿಯೊಬ್ಬರು ಭ್ರಷ್ಟಾಚಾರಕ್ಕೆ ಶರಣಾಗಿರುವ ಸಮಾಜವಿದು. ತಮ್ಮ ವ್ಯವಹಾರಗಳು ಶೀಘ್ರ ಹಾಗೂ ಯಾವುದೇ ಅಡೆತಡೆಗಳಿಲ್ಲದೆ ಸುಲಲಿತವಾಗಿ ಸಾಗಬೇಕೆಂದರೆ ಹಣವನ್ನು ನೀಡಬೇಕಾಗಿದೆ. ಭ್ರಷ್ಟಾಚಾರವೆಂಬುದು ಇಂದು ನೆನ್ನೆಯದಲ್ಲ. ಶತಮಾನಗಳಿಂದಲೂ ಭ್ರಷ್ಟಾಚಾರದ ಉಲ್ಲೇಖಗಳು ನಮಗೆ ಸಿಗುತ್ತವೆ. ಮುಖ್ಯವಾಗಿ, ಕೌಟಿಲ್ಯನ ಅರ್ಥಶಾರ್ಥವು ಭ್ರಷ್ಟಾಚಾರದ ಬಗ್ಗೆ ಬೆಳಕು ಚೆಲ್ಲಿರುವ ಭಾರತೀಯ ನಿದರ್ಶನ. ಹಾಗೆಯೆ, ಪ್ಲೇಟೋ, ಅರಿಸ್ಟಾಟಲ್, ಡಾಂಟೆ ಹಾಗೂ ಶೇಕ್ಸ್‍ಪಿಯರ್ ಮೊದಲಾದ ತಜ್ಞರು ಮತ್ತು ಬರಹಗಾರರು ತಮ್ಮ ಕೃತಿಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಉಲ್ಲೇಖಿಸಿರುವುದನ್ನು ಗಮನಿಸಬಹುದು. ವಿಶ್ವಬ್ಯಾಂಕಿನ ಪ್ರಕಾರ ‘ವಯಕ್ತಿಕ ಲಾಭಕ್ಕಾಗಿ ಸಾರ್ವಜನಿಕ ಅಧಿಕಾರದ ದುರುಪಯೋಗವನ್ನ ಭ್ರಷ್ಟಾಚಾರ’ ಎಂದಿದೆ. ಇದೊಂದು ವ್ಯಾಖ್ಯಾನದಿಂದ ಭ್ರಷ್ಟಾಚಾರವನ್ನು ನಿರ್ಧರಿಸುವುದು ಸಾಧ್ಯವಿಲ್ಲ. ಭ್ರಷ್ಟಾಚಾರವು ಹಲವು ರೂಪಗಳಲ್ಲಿ ಚಾಲ್ತಿಯಲ್ಲಿದೆ ಎನ್ನಬಹುದು.

ಕರ್ನಾಟಕದಲ್ಲಿ ನಾಗರೀಕ ಸೇವೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ನೇಮಕ ಮಾಡಲು ಕರ್ನಾಟಕ ಲೋಕಸೇವಾ ಆಯೋಗವನ್ನು 1951ರಲ್ಲಿ ರಚಿಸಲಾಯಿತು. ಆಯೋಗವು ಇಲ್ಲಿಯವರೆಗೂ ಸರ್ಕಾರದ ವಿವಿಧ ಇಲಾಖೆಗಳಿಗೆ ಅಗತ್ಯವಾದ ನೌಕರರನ್ನು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಮೂಲಕ ನೇಮಿಸುತ್ತಾ ಬಂದಿದೆ. ಈ ಆಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಜರುಗಿದೆ ಅನೇಕ ಹಗರಣಗಳು ಸಂಸ್ಥೆಯ ವರ್ಚಸ್ಸು ಕುಂದಿಸಿವೆ. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಜರುಗಿದ ಬಹುಮುಖ್ಯ ಹಗರಣಗಳೆಂದರೆ 1998ರಲ್ಲಿ 389 ಹುದ್ದೆಗಳ ಭರ್ತಿಯಲ್ಲಿ ಜರುಗಿದ ಭ್ರಷ್ಟಾಚಾರವು ಪ್ರಮುಖವಾಗಿದೆ, 1999ರಲ್ಲಿ 191 ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಂತಿಮ ಮೌಲ್ಯಮಾಪನದ ಅಂಕಗಳಲ್ಲಿನ ವ್ಯತ್ಯಾಸವು ಸಿ.ಐ.ಡಿ ವರದಿಯಿಂದ ಬಹಿರಂಗವಾಗಿತ್ತು. 2004ರಲ್ಲಿ 152 ಅಭ್ಯರ್ಥಿಗಳ ನೇಮಕ ಪ್ರಕ್ರಿಯೆಯಲ್ಲಿ ಕಂಡುಬಂದ ಹಲವು ನ್ಯೂನತೆಗಳು ನೇಮಕಾತಿ ಪ್ರಕ್ರಿಯೆಯ ತಡೆಗೆ ಕಾರಣವಾಗಿತ್ತು. 2011ರಲ್ಲಿ 352ರ ಪ್ರೊಬೇಷನರಿ ಹುದ್ದೆಗಳಲ್ಲಿನ ಭ್ರಷ್ಟಾಚಾರವು ಉದ್ಯೋಗ ಆಕಾಂಕ್ಷಿಗಳ ಭರವಸೆಯನ್ನು ಕುಗ್ಗಿಸಿತು. ಹಾಗಯೆ, 2019ರ ರಾಜ್ಯ ಪೊಲೀಸ್ ಇಲಾಖೆಯ ಸಬ್ ಇನ್ಸ್‍ಪೆಕ್ಟರ್ ಹುದ್ದೆಗೆ ಜರುಗಬೇಕಾದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ, 2021ರ ಪಿ.ಡಬ್ಲ್ಯು ಜೂನಿಯರ್ ಹಾಗೂ ಸಹಾಯಕ ಎಂಜಿನಿಯರ್‍ರ ಪರೀಕ್ಷೆಯಲ್ಲಿನ ಹಗರಣ, 2022ರ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಜರುಗಬೇಕಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಸೋರಿಕೆ, 545 ಸಬ್ ಇನ್ಸ್‍ಪೆಕ್ಟರ್ ನೇಮಕ ಪರೀಕ್ಷೆಯಲ್ಲಿನ ಭ್ರಷ್ಟಾಚಾರ ಹಾಗೂ 141 ಮೋಟಾರು ವಾಹನ ನಿರೀಕ್ಷಕ ಹುದ್ದೆಯಲ್ಲಿ ಜರುಗಿರುವ ಭ್ರಷ್ಟಾಚಾರವು ಆಯೋಗದ ಪ್ರಾಮುಖ್ಯತೆಯನ್ನು ತಗ್ಗಿಸಿವೆ.

ಕರ್ನಾಟಕ ಲೋಕಸೇವಾ ಆಯೋಗದಲ್ಲಿನ ನ್ಯೂನತೆಗಳಿಂದ ಕೆಲವು ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ನಡೆಸಲು ‘ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ’ಕ್ಕೆ ವಹಿಸಹಿಕೊಡಲಾಗುವುದು. ಕರ್ನಾಟಕ ವಿದ್ಯುತ್ ಸರಬರಾಜು ನಿಗಮದಲ್ಲಿನ 1492 ಎಂಜಿನಿಯರ್ ಹುದ್ದೆಗಳ ಭರ್ತಿಗಾಗಿ ಜರುಗಿದ ಪರೀಕ್ಷೆಯಲ್ಲಿ ಅಕ್ರಮ ಜರುಗಿರುವುದು ಬೆಳಕಿಗೆ ಬಂದಿದೆ. ಭ್ರಷ್ಟಾಚಾರವನ್ನು ತಡೆಯಲು ಏನೆಲ್ಲಾ ನಿಬಂಧನೆಗಳನ್ನು ಕೈಗೊಂಡರೂ ನೇಮಕಾತಿಯಲ್ಲಿ ಜರುಗುತ್ತಿರುವ ಅವ್ಯವಹಾರಗಳನ್ನು ತಹಬಂಧಿಗೆ ತರಲಾಗುತ್ತಿಲ್ಲ. ಒಂದೆಡೆ ಪ್ರಶ್ನೆ ಪತ್ರಿಕೆಗಳೆ ಸೋರಿಕೆಯಾದರೆ ಮತ್ತೊಂದೆಡೆ ಎಲೆಕ್ಟ್ರಾನಿಕ್ ಪರಿಕರಗಳನ್ನು ಬಳಸಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಸಹಾಯ ಮಾಡುವಷ್ಟು ಭ್ರಷ್ಟ ವ್ಯವಸ್ಥೆ ಸೃಷ್ಟಿಯಾಗಿದೆ. ಇವೆಲ್ಲವನ್ನು ಗಮನಿಸಿದಾಗ ಸಮಾಜದಲ್ಲಿನ ಯುವಜನತೆಯ ಭರವಸೆಗಳು ಬತ್ತಿ ಹೋಗುವುದು ಸಹಜ. ಅಲ್ಲದೆ, ಅವರೂ ಸಹ ವಾಮಮಾರ್ಗದಲ್ಲಿ ಸಾಗಲು ಪ್ರೇರಣೆಯಾಗುವುದುಂಟು.

ಇದಲ್ಲದೆ ಕೇಂದ್ರ ಸರ್ಕಾರಿ ಹುದ್ದೆಗಳಾದ ಯು.ಪಿ.ಎಸ್.ಸಿ, ರೈಲ್ವೆ, ಸುರ್ಪೀಂಕೋರ್ಟ್ ನ್ಯಾಯದೀಶ ಹುದ್ದೆಗಳು, ಸ್ಟಾಫ್ ಸೆಲೆಕ್ಸನ್ ಕಮಿಷನ್ ಮೊದಲಾದ ವಿಭಾಗಗಳ ಪರೀಕ್ಷೆಯಲ್ಲಿ ಬಹಳಷ್ಟು ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ಇದು ಹಿಂದುಳಿದ, ದಮನಿತ ಹಾಗೂ ಅಲ್ಪ ಸಂಖ್ಯಾತ ಅಭ್ಯರ್ಥಿಗಳು ಆಯ್ಕೆಯಾಗುವುದನ್ನು ತಪ್ಪಿಸುವ ಹುನ್ನಾರವಾಗಿದೆ. ಈ ರೀತಿಯ ಅಡೆತಡೆಗಳನ್ನು ಜಯಿಸಿ ಮುಂದೆ ಬರುವ ಅಭ್ಯರ್ಥಿಗಳನ್ನು ಸಂದರ್ಶನದ ಹೆಸರಿನಲ್ಲಿ ನಪಾಸುಗೊಳಿಸಿರುವ ಅನೇಕ ನಿದರ್ಶನಗಳು ಕಾಣಸಿಗುತ್ತವೆ. ಇವೆಲ್ಲವೂ ಅಧಿಕಾರಸ್ಥ ಪಟ್ಟಭದ್ರ ಹಿತಾಶಕ್ತಿಗಳು ದೇಶದ ಶೋಷಿತ ಸಮುದಾಯಗಳ ಔನತ್ಯವನ್ನು ಸಹಿಸದ , ಅವುಗಳನ್ನು ಕುಗ್ಗಿಸಲು ಸೃಷ್ಠಿಸಿರುವ ಜಾಲವಾಗಿದೆ. ಈ ಎಲ್ಲಾ ಕುಠಿಲತೆಯಿಂದ ನಲುಗುತ್ತಿರುವುದೆ ದೇಶದ ಯುವಜನತೆ ಎಂಬುದು ವಿಷಾದನೀಯ.

ಅಂತರಾಷ್ಟ್ರೀಯ ಪಾರದರ್ಶಕ ಸಂಸ್ಥೆಯ ಭ್ರಷ್ಟಾಚಾರ ಗ್ರಹಿಕಾ ಸೂಚ್ಯಂಕ 2020ರನ್ವಯ ಭಾರತವು 180ರಾಷ್ಟ್ರಗಳ ಪಟ್ಟಿಯಲ್ಲಿ 40ನೇ ಸ್ಥಾನದಲ್ಲಿದೆ. ಅಂದರೆ, ಪ್ರಸ್ತುತ ಸಂಸ್ಥೆಯು 0-100 ಅಂಕಗಳ ಮಾನದಂಡವನ್ನು ಭ್ರಷ್ಟಾಚಾರದ ಮಾಪನಕ್ಕೆ ಬಳಸಿದ್ದು 100 ಅಂಕ ಗಳಿಸಿದ ರಾಷ್ಟ್ರವು ಭ್ರಷ್ಟಾಚಾರರಹಿತವಾದ ದೇಶವೆಂದು 0 ಅಂಕ ಗಳಿಸಿದ ರಾಷ್ಟ್ರವು ಅತೀ ಭ್ರಷ್ಟಾಚಾರದಿಂದ ಕೂಡಿದ ರಾಷ್ಟ್ರವೆಂದು ವರದಿಯಿಂದ ತಿಳಿದು ಬರುತ್ತದೆ. ಭಾರತ ಸಂವಿಧಾನದ 16ನೇ ಲೇಖನವು ಎಲ್ಲರಿಗೂ ಉದ್ಯೋಗದ ಸಮಾನ ಹಕ್ಕನ್ನು ನೀಡಿದೆ. ಅಲ್ಲದೆ, 41ನೇ ಲೇಖವು ರಾಜ್ಯ ಸರ್ಕಾರಗಳು ಎಲ್ಲರಿಗೂ ಅಗತ್ಯವಾದ ಉದ್ಯೋಗಗಳನ್ನು ಸೃಷ್ಟಿಸಬೇಕೆಂದು ತಿಳಿಸಿದೆ. ಆಡಳಿತರೂಢ ಸರ್ಕಾರಗಳು ಸ್ವಾರ್ಥ, ಸ್ವಜನ ಪಕ್ಷಪಾತ ಹಾಗೂ ಸ್ವಹಿತ ಸಾಧನೆಗಾಗಿ ಸ್ವಾಯತ್ತ ಸಂಸ್ಥೆಗಳಿಗೆ ತಮ್ಮ ಬೆಂಬಲಿಗರನ್ನು ನೇಮಿಸುವ ಅಥವಾ ಆಯೋಗಗಳ ಆಡಳಿತದಲ್ಲಿ ವಿನಾ ಕಾರಣ ತಲೆಹಾಕುವ ಮೂಲಕ ವ್ಯವಸ್ಥೆಯನ್ನು ಕಲುಷಿತ ಮಾಡುತ್ತಿವೆ. ಅಲ್ಲದೆ, ಭ್ರಷ್ಟಾಚಾರದ ಬಗ್ಗೆ ಸೊಲ್ಲೆತ್ತಿದ್ದರೆ ‘ಅಯ್ಯೋ ವ್ಯವಸ್ಥೆಯನ್ನು ಬದಲಾಯಿಸಲಾಗದು ಇದರೊಡನೆಯೆ ಬದುಕಬೇಕಷ್ಟೆ’ ಎನ್ನುವ ನುಡಿಗಳು ನಮ್ಮ ಸುತ್ತಲಿನ ಪರಿಸರದಲ್ಲಿ ಕೇಳಿಬರುವುದು ಸಹಜ.

ಒಟ್ಟಿನಲ್ಲಿ ಎಷ್ಟೇ ಸುಧಾರಣಾ ಕ್ರಮಗಳನ್ನು ತಂದರೂ ಅದನ್ನು ಭ್ರಷ್ಟಗೊಳಿಸುವ ಜಾಣ್ಮೆ ಈ ಸಮಾಜಕ್ಕಿದೆ. ಆಯೋಗವು ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ಹಾಜರಾಗಲು ಬಯೋಮೆಟ್ರಿಕ್ಸ್ ಅಳವಡಿಸಿಕೊಳ್ಳಬೇಕು. ಅಲ್ಲದೆ, ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿಗಳನ್ನು ಸಿ.ಸಿ.ಟಿವಿ ಕಣ್ಗಾವಲಿಗೆ ಒಳಪಡಿಸಬೇಕು. ಪರೀಕ್ಷೆ ಜರುಗಿದ ಕೆಲವೇ ದಿನಗಳಲ್ಲಿ ಪ್ರಶ್ನೆ ಪತ್ರಿಕೆಗಳಿಗೆ ಸರಿಯಾದ ಉತ್ತರಗಳನ್ನು ಪ್ರಕಟಿಸಬೇಕು. ಅಗತ್ಯವಿದ್ದರೆ ಅಭ್ಯರ್ಥಿಗಳಿಗೆ ತಮ್ಮ ಉತ್ತರ ಪತ್ರಿಕೆಯ ಸ್ಕಾನ್ ಪ್ರತಿ ದೊರಕಲು ಅನುವುಮಾಡಿಕೊಡಬೇಕು. ಹಗರಣಗಳಿಗೆ ಸಂಬಂಧಿಸಿದ ವಿಚಾರಣೆಗಳನ್ನು ತ್ವರಿತವಾಗಿ ಇತ್ಯರ್ಥ ಮಾಡುವುದರಿಂದ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತದೆ. ಕಾಲಕಾಲಕ್ಕೆ ಖಾಲಿ ಇರುವ ಹುದ್ದೆಗಳನ್ನು ಆಯೋಗವು ಭರ್ತಿಮಾಡಲು ಮುಂದಾಗಬೇಕು. ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗದಂತೆ ನಿಗಾವಹಿಸಿಬೇಕು. ಅಭ್ಯರ್ಥಿಗೆ ಬದಲು ಮತ್ತೊಬ್ಬರು (ಪ್ರಾಕ್ಸಿ) ಪರೀಕ್ಷೆ ಬರೆಯದಂತೆ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ಸಂಸ್ಥೆ(ಎ.ಸಿ.ಬಿ)ಮೊದಲಾದ ಸಂಸ್ಥೆಗಳಿಗೆ ದಕ್ಷ ಹಾಗೂ ಪ್ರಾಮಾಣಿಕರನ್ನು ನೇಮಿಸಿ ಹೆಚ್ಚಿನ ಅಧಿಕಾರವನ್ನು ನೀಡುವ ಮೂಲಕ ಭ್ರಷ್ಟಾಚಾರದ ವ್ಯವಸ್ಥೆಯನ್ನು ತಹಬಂದಿಗೆ ತರಬಹುದೆನ್ನಬಹುದು. ಇಲ್ಲವಾದಲ್ಲಿ ನಾಡಿನ ಯುವಜನತೆ ಭರವಸೆಯನ್ನು ಕಳೆದುಕೊಂಡು ವಾಮಮಾರ್ಗದಲ್ಲಿ ಸಾಗಲು ನಮ್ಮ ಭ್ರಷ್ಟ ಸಮಾಜವು ಕಾರಣವಾಗುವುದು ಎಷ್ಟು ಸರಿ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ