ಅಸ್ಪೃಶ್ಯತೆಯ ನಿಷೇಧ: ಡಾ.ಅಂಬೇಡ್ಕರರು ಅಂದು ಏನೂ ಮಾತಾಡಲಿಲ್ಲ…!
- ರಘೋತ್ತಮ ಹೊಬ
ಭಾರತದ ಸಂವಿಧಾನದ ಶಿಲ್ಪಿ ಡಾ.ಅಂಬೇಡ್ಕರ್ ಎಂಬುದು ಎಲ್ಲರಿಗೂ ಗೊತ್ತು. ಭಾರತ ಸರ್ಕಾರ ಈ ಬಗ್ಗೆ ಸ್ವತಃ Dr.Ambedkar The Principal Architect of Constitution of India ಎಂಬ ಕೃತಿ ಹೊರತಂದಿದೆ. ಆ ಕೃತಿ ಹೆಚ್ಚು ಕಮ್ಮಿ 1300 ಕ್ಕೂ ಹೆಚ್ಚು ಪುಟಗಳನ್ನು ಒಳಗೊಂಡಿದೆ. ಅಲ್ಲಿ ಏನಿದೆ? ಸಂವಿಧಾನ ರಚನೆಯ ಸಂಪೂರ್ಣ ಚಿತ್ರಣ ಇದೆ. ಪ್ರತಿಯೊಂದು ಅನುಚ್ಛೇದ ಕುರಿತು ಅಂಬೇಡ್ಕರ್ ಸದಸ್ಯರಿಗೆ ನೀಡಿದ ಉತ್ತರಗಳು , ನಡೆಸಿದ ಚರ್ಚೆ ಅದರಲ್ಲಿದೆ.
ಆ ಕೃತಿಯಲ್ಲಿ ಒಂದು ಪುಟದಲ್ಲಿ ಅದೂ ಅವರಿಗೆ ತೀರಾ ಸಂಬಂಧಿಸಿದ ವಿಚಾರದಲ್ಲಿ
ಅಂಬೇಡ್ಕರ್ ರು ಮಾತನಾಡಲು ಹೋಗಿಲ್ಲ! ಅದನ್ನು ಓದಿದ ಯಾರಿಗಾದರೂ ಅರೆ, ಅಂಬೇಡ್ಕರರೇ ಮಾತಾಡಿಲ್ಲವಲ್ಲ ಎನಿಸದಿರದು. ಆ ಪುಟ ಯಾವುದೆಂದರೆ ಅಸ್ಪೃಶ್ಯತೆ ನಿಷೇಧಕ್ಕಾಗಿನ ಚರ್ಚೆಯ ಪುಟ.
ಮೂಲ ಕರಡಿನಲ್ಲಿ ಅನುಚ್ಛೇದ 11 (ಸಂವಿಧಾನದಲ್ಲಿ ಅನುಚ್ಛೇದ 17) ಎಂದಿದ್ದ ಅದು 30-11-1948 ರಲ್ಲಿ ಸದನದಲ್ಲಿ ಚರ್ಚೆಗೆ ಬಂದಿತು. ಆ ಅನುಚ್ಛೇದ ಕುರಿತು ಅನೇಕ ತಿದ್ದುಪಡಿಗಳು ಬಂದಿದ್ದವು. ಅದರ ಚರ್ಚೆಯ ಯತಾವಥ್ ಇಲ್ಲಿ ಪ್ರಸ್ತಾಪ ಮಾಡುವುದಾದರೆ,
ಗೌರವಾನ್ವಿತ ಡಾ.ಬಿ.ಆರ್. ಅಂಬೇಡ್ಕರ್: “ಸದಸ್ಯರಾದ ಶ್ರೀ ನಜೀರುದ್ದೀನ್ ಅಹ್ಮದ್ ರವರ ತಿದ್ದುಪಡಿಯನ್ನು ನಾನು ಒಪ್ಪುವುದಿಲ್ಲ.
ಮಾನ್ಯ ಉಪಾಧ್ಯಕ್ಷರು: ಡಾ.ಅಂಬೇಡ್ಕರ್ ರವರೇ , ನೀವು ಶ್ರೀ ಶಾ ರವರ (ಪ್ರೊ.ಕೆ.ಟಿ.ಶಾ) ಸಲಹೆಗಳಿಗೆ ಉತ್ತರಿಸುವಿರಾ?
ಗೌರವಾನ್ವಿತ ಡಾ.ಬಿ.ಆರ್. ಅಂಬೇಡ್ಕರ್: ಇಲ್ಲ.
ಮಾನ್ಯ ಉಪಾಧ್ಯಕ್ಷರು: ಈಗ ನಾನು ತಿದ್ದುಪಡಿ ಸಂ.372 ನ್ನು ಮತದಾನಕ್ಕೆ ಹಾಕುತ್ತಿದ್ದೇನೆ.
ಪ್ರಶ್ನೆ ಎಂದರೆ,
“ಅನುಚ್ಛೇದ 11 ಕ್ಕೆ ಈ ಕೆಳಗಿನ ಅನುಚ್ಛೇದವನ್ನು ಬದಲಿಯಾಗಿ ಸೇರಿಸಬೇಕು”
11.”ಧರ್ಮ ಅಥವಾ ಜಾತಿಯ ಆಧಾರದ ಮೇಲೆ ಯಾರನ್ನು ಕೂಡ ಅಸ್ಪೃಶ್ಯರು ಎಂದು ಪರಿಗಣಿಸುವಂತಿಲ್ಲ ಅಥವಾ ಹಾಗೆ ಕಾಣುವಂತಿಲ್ಲ. ಮತ್ತು ಅಸ್ಪೃಶ್ಯತೆ ಯನ್ನು ಅದನ್ನು ಯಾವುದೇ ರೂಪದಲ್ಲಿ ಆಚರಿಸಿದರೂ ಕಾನೂನು ಪ್ರಕಾರ ಅದು ಶಿಕ್ಷಾರ್ಹ ಅಪರಾಧ”.(ನಜೀರುದ್ದೀನ್ ಅಹ್ಮದ್ ರವರು ಸೂಚಿಸಿದ ಈ ತಿದ್ದುಪಡಿಯನ್ನು ತಿರಸ್ಕರಿಸಲಾಗಿದೆ)
ಈ ಬದಲಿಗೆ ಅನುಚ್ಛೇದ 11 ನ್ನು ಅಂಗೀಕರಿಸಲಾಗಿದೆ ಮತ್ತು ಅದನ್ನು ಸಂವಿಧಾನಕ್ಕೆ ಸೇರಿಸಲಾಗಿದೆ.
ಅನುಚ್ಛೇದ 11: “ಅಸ್ಪೃಶ್ಯತಾಚರಣೆಯನ್ನು ನಿಷೇಧಿಸಲಾಗಿದೆ ಮತ್ತು ಅದರ ಯಾವುದೇ ಬಗೆಯ ಆಚರಣೆಯನ್ನು ನಿರ್ಬಂಧಿಸಲಾಗಿದೆ. ಅಸ್ಪೃಶ್ಯತಾಚರಣೆಯ ಹಿನ್ನೆಲೆಯಲ್ಲಿ ಉದ್ಭವಿಸಬಹುದಾದ ಯಾವುದೇ ಬಗೆಯ ತಾರತಮ್ಯ/ ದೌರ್ಜನ್ಯವನ್ನು ಯಾರಾದರ ಮೇಲೆ ಹೇರಿದರೆ, ಎಸಗಿದರೆ ಅದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ”.
ಗೌರವಾನ್ವಿತ ಸದಸ್ಯರುಗಳು: ಮಹಾತ್ಮ ಗಾಂಧಿಯವರಿಗೆ ಜಯವಾಗಲಿ.
“ಈ ಸಂಬಂಧ 6 ಸದಸ್ಯರು ಮಾತನಾಡಿದರು. ಡಾ.ಅಂಬೇಡ್ಕರ್ ರವರು ಈ ಕುರಿತು ಏನೂ ಮಾತಾಡಲಿಲ್ಲ”.
ಕಡೆಯ ವಾಕ್ಯ ಗಮನಿಸಿ ಅಂಬೇಡ್ಕರ್ ರು ಏನು ಮಾತಾಡಲಿಲ್ಲ. ಹಾಗಿದ್ದರೆ ಅಂಬೇಡ್ಕರರಿಗೆ ಈ ಅನುಚ್ಛೇದ ಅಂಗೀಕಾರ ಕುರಿತಂತೆ ಬೇಸರವಿತ್ತೆಂದರ್ಥವೇ? ಊಹ್ಞೂಂ, ಅವರಿಗೆ ಏನೋ ಒಂದು ಅದ್ಭುತವಾದದನ್ನು ಸಾಧಿಸಿದೆ ಎಂಬ ಎದೆಯಾಳದ ಸಂತಸ. ಸದಸ್ಯರು ಗಾಂಧಿಗೆ ಜೈ ಅನ್ನುತ್ತಿದ್ದರೂ ಅಂಬೇಡ್ಕರ್ ರು ಅದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ಬದಲಿಗೆ ತಾನು ತನ್ನ ಜೀವನದಲ್ಲಿ ಏನನ್ನು ಸಾಧಿಸಬೇಕು ಎಂದುಕೊಂಡಿದ್ದೆನೊ ಅದನ್ನು ಸಂವಿಧಾನದಲ್ಲೇ ಸಾಧಿಸಿದ್ದರು. ಆ ಮೂಲಕ ಅಸಮಾನತೆಯ ಬಹುದೊಡ್ಡ ಪಿಡುಗಾದ ಅಸ್ಪೃಶ್ಯತಾಚರಣೆಗೆ ಅವರು ಸಂವಿಧಾನದಲ್ಲೇ ಪರಿಹಾರ ಸೂಚಿಸಿದ್ದರು. ಯಾಕೆಂದರೆ ಇಂದಿಗೂ ಅನೇಕ ಸಮಸ್ಯೆಗಳು ಸಂವಿಧಾನದಲ್ಲಿ ದನಿ ಕಾಣದೆ ಹಾಗೆಯೇ ಇವೆ. ಆದರೆ ಅಸ್ಪೃಶ್ಯತೆಯಂತಹ ಘನಘೋರ ಸಾಮಾಜಿಕ ಸಮಸ್ಯೆಗೆ ಸಂವಿಧಾನದಲ್ಲೇ ಪರಿಹಾರ ಕಾಣುವುದೆಂದರೆ? ಅದಕ್ಕೇ ಡಾ.ಅಂಬೇಡ್ಕರ್ ರಿಗೆ ತಾನು ಏನೋ ಅದ್ಭುತವಾದುದ್ದನ್ನು ಸಾಧಿಸಿದೆ ಎಂದು ತೃಪ್ತಿ, ಒಂದು ಬಗೆಯ ವಿಜಯ ಸಾಧಿಸಿದ ಹೆಮ್ಮೆ. ಅಂದಹಾಗೆ ಅದು ಅಂದು ಅಂದರೆ 30-11-1948 ರಂದೆ ಸಾರ್ವಜನಿಕವಾಗಿ ಭಾರಿ ವಿಜಯೋತ್ಸವವಾಗಿ ಆಚರಿಸಲ್ಪಟ್ಟಿತು. ದೆಹಲಿಯ ಪೂರ ಅಂದು ಅಂಬೇಡ್ಕರ್ ರ ನೇತೃತ್ವದ ರಾಜಕೀಯ ಪಕ್ಷ “ಪರಿಶಿಷ್ಟ ಜಾತಿಗಳ ಒಕ್ಕೂಟ”ದ ಸದಸ್ಯರು ಇಡೀ ದೆಹಲಿಯನ್ನು ವಿದ್ಯುದ್ದೀಪಗಳಿಂದ ಕಂಗೊಳಿಸಿದರು. ನೀಲಿ ಬಾವುಟಗಳು ಎಲ್ಲೆಲ್ಲೂ ರಾರಾಜಿಸಿದವು.
ಬಾಬಾಸಾಹೇಬ್ ಅಂಬೇಡ್ಕರರಿಗೆ ಜಯವಾಗಲಿ ಎಂಬ ಜಯಘೋಷ ಮುಗಿಲುಮುಟ್ಡಿತು.
ಆದರೆ ಸದನದಲ್ಲಿ ಅಂಬೇಡ್ಕರರು ಮೌನವಾಗಿದ್ದರು. ಆ ಮೌನ ಏನೋ ಅಸಾಧ್ಯವಾದುದನ್ನು ಸಾಧಿಸಿದೆ ಎಂಬ ಆತ್ಮತೃಪ್ತಿಯ ಮೌನ.