ಆಟವಾಡುತ್ತಿದ್ದ ಮಕ್ಕಳಿಗೆ ಬಡಿದ ಸಿಡಿಲು!
20/04/2021
ಹಳೆಯಂಗಡಿ: ಆಟವಾಡುತ್ತಿದ್ದ ಇಬ್ಬರು ಮಕ್ಕಳಿಗೆ ಸಿಡಿಲು ಬಡಿದಿದ್ದು, ಪರಿಣಾಮವಾಗಿ ಇಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಸದ್ಯದ ಮಾಹಿತಿಯ ಪ್ರಕಾರ ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಇಲ್ಲಿನ ಇಂದಿರಾನಗರ ಬೊಳ್ಳೂರು ಮಸೀದಿ ಹಿಂಭಾಗದ ಮನೆಯಲ್ಲಿ ಇಬ್ಬರು ಮಕ್ಕಳು ಆಟವಾಡುತ್ತಿದ್ದು, ಈ ವೇಳೆ ಏಕಾಏಕಿ ಸಿಡಿಲು ಬಡಿದಿದೆ. ಮನ್ಸೂರ್ ಎಂಬವರ 5 ವರ್ಷದ ಮಗು ಹಾಗೂ ಗಂಗಾವತಿ ಮೂಲದ ದುರ್ಗಪ್ಪ ಎಂಬವರ 6 ವರ್ಷದ ಮಗ ಮಾರುತಿ ಸಿಡಿಲು ಬಡಿತಕ್ಕೆ ಸಿಲುಕಿದವರಾಗಿದ್ದಾರೆ.
ಸಿಡಿಲು ಬಡಿದ ಪರಿಣಾಮ ಇಬ್ಬರು ಮಕ್ಕಳು ಕೂಡ ಮೂರ್ಛೆ ಹೋಗಿದ್ದರು ಎಂದು ತಿಳಿದು ಬಂದಿದೆ. ತಕ್ಷಣವೇ ಗಂಭೀರ ಸ್ಥಿತಿಯಲ್ಲಿದ್ದ ಮಕ್ಕಳನ್ನು ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಮಕ್ಕಳಿಗೆ ಕೂಡ ಕೃತಕ ಉಸಿರಾಟ ನೀಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸದ್ಯ ಮಾಹಿತಿ ಬಂದಿದೆ.