ಅತಿಥಿಯಾಗಲು ಸದಾ ಸಿದ್ಧ ಆತಿಥೇಯರಾಗುವಿರಾ ? - Mahanayaka
3:23 AM Wednesday 11 - December 2024

ಅತಿಥಿಯಾಗಲು ಸದಾ ಸಿದ್ಧ ಆತಿಥೇಯರಾಗುವಿರಾ ?

hamsalekha
18/11/2021

  • ನಾ ದಿವಾಕರ

ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಆಧಾರ ಸ್ತಂಭಗಳಲ್ಲಿ ಪ್ರಮುಖವಾದವು ಎರಡು. ಮೊದಲನೆಯದು ಮನುಷ್ಯನ ಹುಟ್ಟು, ಎರಡನೆಯದು ಅವನ ಆಹಾರ ಪದ್ಧತಿ. ವ್ಯಕ್ತಿಗತ ನೆಲೆಯಲ್ಲಿ ಈ ಎರಡು ನಿರ್ಣಾಯಕ ಅಂಶಗಳು ಜಾತಿಪದ್ಧತಿಯನ್ನು ಸಂರಕ್ಷಿಸುವಂತೆಯೇ ಬೇರೂರುವಂತೆಯೂ ಮಾಡುತ್ತವೆ. ಇನ್ನೆರಡು ಸ್ತಂಭಗಳು ಸಾಮಾಜಿಕ ನೆಲೆಯಲ್ಲಿ ವ್ಯಕ್ತವಾಗುತ್ತವೆ. ಮೊದಲನೆಯದು ಸಾಮುದಾಯಿಕ ಅಸ್ತಿತ್ವ ಮತ್ತು ಎರಡನೆಯದು ಸಾಮಾಜಿಕ ಸ್ಥಾನಮಾನ. ಈ ಎರಡೂ ಸ್ತಂಭಗಳು ಕೊಂಚ ನಮ್ಯವಾಗಿರುತ್ತವೆ. ಕೂಡಿ ಬಾಳಬೇಕಾದ ಸಮಾಜದಲ್ಲಿ ಜಾತಿ ವ್ಯವಸ್ಥೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ನಮ್ಯ ಎನ್ನಬಹುದಾದ ಸ್ತಂಭಗಳನ್ನು ಆಧರಿಸುತ್ತದೆ. ಮೊದಲೆರಡು ಜಾತಿ ವ್ಯವಸ್ಥೆಯ ಬೇರುಗಳನ್ನು ಪೋಷಿಸಿದರೆ, ಇನ್ನೆರಡು ಸ್ತಂಭಗಳು ಅದರ ಅಸ್ತಿತ್ವಕ್ಕೆ ಸಂಚಕಾರ ಬರದಂತೆ ಎಚ್ಚರವಹಿಸುತ್ತವೆ. “ ಎಲ್ಲಿದೆ ಜಾತಿ ? ಜಾತಿ ಗೀತಿ ಏನಿಲ್ಲ ,,,,” ಎಂದು ರಾಗ ಎಳೆಯುವವರಿಗೆ ಈ ಎರಡು ಮಾತ್ರ ಗೋಚರಿಸುತ್ತದೆ.

ಆಹಾರ ಪದ್ಧತಿಯ ಸಾರ್ವತ್ರೀಕರಣವಾದರೆ ಜಾತಿ ವ್ಯವಸ್ಥೆಯ ಅವನತಿಗೆ ನಾಂದಿ ಹಾಡಿದಂತೆಯೇ ಸರಿ. ಏಕೆಂದರೆ ಈ ಜಾತಿ ವ್ಯವಸ್ಥೆಯ ಬೇರುಗಳನ್ನು ಗಟ್ಟಿಯಾಗಿಸುತ್ತಲೇ ಇರುವ ವೈದಿಕ ಸಂಪ್ರದಾಯಗಳು ಮತ್ತು ಬ್ರಾಹ್ಮಣಶಾಹಿಯ ಕವಲುಗಳು ಎಲ್ಲ ಸಾಮಾಜಿಕ-ಸಾಂಸ್ಕøತಿಕ ವಲಯಗಳಲ್ಲೂ ಜಾತಿ ತಾರತಮ್ಯಗಳನ್ನು ಮತ್ತು ಅಂತರಗಳನ್ನು ಕಾಪಾಡಿಕೊಂಡುಬರಲು ಆಹಾರ ಪದ್ಧತಿಯನ್ನೇ ಆಶ್ರಯಿಸುತ್ತದೆ. ಇದು ಕೇವಲ ವಿವಿಧ ಜಾತಿಗಳ ನಡುವಿನ ವಿದ್ಯಮಾನ ಅಲ್ಲ. ಪ್ರತಿಯೊಂದು ಜಾತಿಯ ಆಂತರ್ಯದಲ್ಲೂ ಆಹಾರ ಭೇದವೇ ಉಪಜಾತಿಗಳ ಅಥವಾ ಪಂಥಗಳ ಸ್ಥಾನಮಾನಗಳನ್ನು ನಿರ್ಧರಿಸುತ್ತವೆ. ಉಪ ಜಾತಿಗಳೂ ಸಹ ತಮ್ಮ ಆಹಾರ ಪದ್ಧತಿಯನ್ನು ಅನುಸರಿಸಿಯೇ ಸಂಬಂಧಗಳನ್ನು ಕಲ್ಪಿಸಿಕೊಳ್ಳುತ್ತವೆ. ಪೂರ್ಣ ಸಸ್ಯಾಹಾರಿ ಬ್ರಾಹ್ಮಣರಲ್ಲೂ ಈ ಭೇದಗಳು ಮನುಜ ಸಂಬಂಧಗಳ ನಡುವೆ ಅಡ್ಡಗೋಡೆಯಂತೆ ನಿಲ್ಲುವುದನ್ನು ಗಮನಿಸಬಹುದು.

ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ವಿರುದ್ಧ ನಡೆಯುತ್ತಿರುವ ಜಾತಿ ಪೀಡಿತರ ಮತ್ತು ಮತಾಂಧರ ಧಾಳಿಯನ್ನು ಈ ಹಿನ್ನೆಲೆಯಲ್ಲೇ ನೋಡಬೇಕಿದೆ. ಕರ್ನಾಟಕದಲ್ಲಿ ರಾಜಕೀಯ ನಾಯಕರು ಆರಂಭಿಸಿದ ಗ್ರಾಮ ವಾಸ್ತವ್ಯದ ಪ್ರಹಸನಗಳು ಮತ್ತು ದಲಿತರ ಮನೆಯಲ್ಲಿ ಊಟ ಮಾಡುವ ಮೂಲಕ ತಮಗಂಟಿರಬಹುದಾದ ಜಾತಿ ಕಳಂಕವನ್ನು ತೊಡೆದುಹಾಕಿಕೊಳ್ಳುವ ಪ್ರಾಯಶ್ಚಿತ್ತದ ಕ್ರಿಯೆಗಳಿಗೆ ಹಂಸಲೇಖ ಒಂದು ತಾತ್ವಿಕ ಆಯಾಮವನ್ನು ನೀಡಿದ್ದಾರೆಂದೇ ಹೇಳಬೇಕು. ದಲಿತ ಕೇರಿಗಳಲ್ಲಿ ಪಾದಯಾತ್ರೆ ನಡೆಸುವ ಮೂಲಕ ಸ್ವರ್ಗಸ್ಥರಾಗಿರುವ ಪೇಜಾವರ ಶ್ರೀಗಳೂ ಸಹ ಈ ಪರಂಪರೆಯನ್ನು ತಮ್ಮದೇ ಆದ ರೀತಿಯಲ್ಲಿ ಮುಂದುವರೆಸಿದ್ದರು. ದಲಿತರ ಬೀದಿಗಳಲ್ಲಿ ಸಂಚರಿಸಿ, ದಲಿತರ ಮನೆಯ ಭೋಜನ ಸವಿದು ತಾವು ಈ ಜಾತಿ ತಾರತಮ್ಯವನ್ನು ಹೋಗಲಾಡಿಸುತ್ತಿದ್ದೇವೆ ಎಂಬ ಭ್ರಮೆಯನ್ನು ಬಿತ್ತುವುದರಲ್ಲಿ ಪೇಜಾವರ ಶ್ರೀಗಳು ಬಹುಮಟ್ಟಿಗೆ ಯಶಸ್ವಿಯಾಗಿದ್ದರು. ಬಹುತೇಕ ಸಂದರ್ಭಗಳಲ್ಲಿ ದಲಿತ ಮೇಲ್ವರ್ಗಗಳೂ ಇದನ್ನು ಅನುಮೋದಿಸಿದ್ದು ದುರಂತವಾದರೂ ಸತ್ಯ.

“ ಅನ್ಯರನ್ನು” ಅಪ್ಪಿಕೊಂಡಿದ್ದೇವೆ ಎಂದು ಹೇಳುವುದೇ ನಮ್ಮ ನಡುವಿನ ತಾರತಮ್ಯ ಮತ್ತು ಬೌದ್ಧಿಕ ಅಸ್ಪøಶ್ಯತೆಯ ಸೂಚನೆ ಎಂದೇಕೆ ನಾವು ಭಾವಿಸುವುದಿಲ್ಲ. “ನಾವು” “ನಿಮ್ಮನ್ನು” ಅಪ್ಪಿಕೊಳ್ಳಲು, ಒಪ್ಪಿಕೊಳ್ಳಲು ಸಿದ್ಧರಾಗಿದ್ದೇವೆ ಎಂದು ಹೇಳುವುದರ ಮೂಲಕವೇ ಒಂದು ಪ್ರತ್ಯೇಕತೆಯ ಗೋಡೆಯನ್ನು, ಪರಕೀಯತೆಯ ಭಾವನೆಯನ್ನು ಹುಟ್ಟುಹಾಕುವ ವಿಕೃತ ಮನಸ್ಥಿತಿಯನ್ನು ಇಲ್ಲಿ ಕಾಣಲು ಸಾಧ್ಯ ಅಲ್ಲವೇ ? ಇಲ್ಲಿ ‘ ನಾವು ’ ಎಂದರೆ ಯಾರು, ‘ ನಿಮ್ಮನ್ನು ’ ಅಂದರೆ ಅರ್ಥವೇನು ? ನಾವೆಲ್ಲಾ ಹಿಂದೂ ಎಂದೋ, ನಾವೆಲ್ಲಾ ಒಂದು ಎಂದೋ ಘೋಷಿಸಿದ ಮೇಲೆ ಅಥವಾ “ ನಾವು ಮನುಜರು ” ಎಂದು ಒಪ್ಪಿಕೊಂಡ ಮೇಲೆ ಅಭಿವ್ಯಕ್ತಿಯ ಸಾಧನವಾಗಿ ‘ನಾವು’ ಮಾತ್ರ ಉಳಿಯಬೇಕಲ್ಲವೇ. ಇಲ್ಲಿ ‘ಅವರು’ ಸೃಷ್ಟಿಯಾದ ಕೂಡಲೇ ನಮ್ಮವರಲ್ಲದವರು ಎದುರಾಗುತ್ತಾರೆ. ಈ ‘ಅವರನ್ನು’ ಒಪ್ಪಿಕೊಳ್ಳುವ ಮೂಲಕ ನಾವು ನಮ್ಮೊಳಗಿನ ಪಾಪಪ್ರಜ್ಞೆಯನ್ನು ಕಳೆದುಕೊಳ್ಳಲೆತ್ನಿಸುತ್ತೇವೆ ಅಥವಾ ಹೊರ ಜಗತ್ತಿಗೆ ಕಾಣುವಂತೆ ನಮ್ಮ ಸಮಾನತೆಯ ಮನಸ್ಥಿತಿಯನ್ನು ಬಿಂಬಿಸಲು ಯತ್ನಿಸುತ್ತೇವೆ. ಪೇಜಾವರರ ದಲಿತ ಕೇರಿಯ ಪಾದಯಾತ್ರೆಯನ್ನು ಈ ಹಿನ್ನೆಲೆಯಲ್ಲೇ ನೋಡಲು ಸಾಧ್ಯ.

ಅತಿಥಿ ಮತ್ತು ಆತಿಥ್ಯ ಎರಡೂ ಸಹ ಮನುಜ ಸಂಬಂಧಗಳನ್ನು ಗಟ್ಟಿಗೊಳಿಸುವಂತಹ ಅಂಶಗಳು. ಒಂದು ಸಮುದಾಯದ ಅಥವಾ ಜಾತಿಯ ಆತಿಥ್ಯ ಬಯಸುವ ಅತಿಥಿಗಳು ತಾವು ಸೇವಿಸಬಹುದಾದದ್ದನ್ನು, ಪಡೆಯಬಹುದದ್ದಾದನ್ನು ತಾವೇ ನಿರ್ಧರಿಸುವುದು ವೈದಿಕ ಪರಂಪರೆಯಲ್ಲಿ ಬೆಳೆದುಬಂದಿರುವ ಒಂದು ವಿದ್ಯಮಾನ. ಮಹಾಸತಿ ಅನುಸೂಯ ಅತಿಥಿಗಳಾಗಿ ಬಂದ ಋಷಿಗಳಿಂದ ಇದೇ ರೀತಿಯ ಆತಿಥ್ಯದ ಬಯಕೆ ಎದುರಿಸುವುದನ್ನು ಪುರಾಣಗಳಲ್ಲಿ ನೋಡಿದ್ದೇವೆ. ಈ ಪರಂಪರೆ ಇಂದಿಗೂ ಮುಂದುವರೆದಿದೆ. ಅತಿಥೇಯರ ಆದ್ಯತೆಗಳನ್ನು ಅಥವಾ ಆಯ್ಕೆಗಳನ್ನು ಬದಿಗಿಟ್ಟು, ಅತಿಥಿಗಳ ಮನತಣಿಸುವಂತೆ ಸೇವೆ ಸಲ್ಲಿಸುವುದು ಸ್ನೇಹ ಬಾಂಧವ್ಯಗಳನ್ನು ಬೆಸೆಯುವುದಿಲ್ಲ, ಮನುಜ ಸಂಬಂಧಗಳನ್ನೂ ಗಟ್ಟಿಗೊಳಿಸುವುದಿಲ್ಲ. ಏಕೆಂದರೆ ನಡುವೆ ಇರಬಹುದಾದ ಗೋಡೆಗಳನ್ನು ಕೆಡವಲು ಇದು ಸಹಾಯಕವಾಗುವುದಿಲ್ಲ.

ಹಂಸಲೇಖ ಅವರು ಈ ಪರಂಪರೆಯನ್ನೇ ಪ್ರಶ್ನಿಸಿದ್ದಾರೆ. “ ನೀವು ನಮ್ಮ ಕೇರಿಗೆ ಬರುವಿರಾದರೆ ನಾವು ನೀಡಿದ್ದನ್ನು ಸ್ವೀಕರಿಸುವಿರಾ ” ಎಂಬ ಸವಾಲಿನ ಪ್ರಶ್ನೆಯನ್ನೇ ಹಾಕಿದ್ದಾರೆ. ಇದು ಪೇಜಾವರರಿಗೆ ಮಾತ್ರವೇ ಅಲ್ಲ ರಾಜಕೀಯ ನಾಯಕರಿಗೂ ಅನ್ವಯಿಸುತ್ತದೆ. ದಲಿತ ಕೇರಿಯಲ್ಲಿ ಅಥವಾ ಮತ್ತಾವುದೇ ಬಹಿಷ್ಕøತ/ದೂರೀಕರಿಸಲ್ಪಟ್ಟ ಜನಸಮುದಾಯಗಳನ್ನು ತಲುಪಲು ಇರುವ ಅಡ್ಡಗೋಡೆಗಳನ್ನು ಕೆಡವುವುದೇ ಆದರೆ ಆ ಭಂಜಕ ಕ್ರಿಯೆಯಲ್ಲಿ ಪ್ರಾಮಾಣಿಕತೆ ಇರಬೇಕು. ಈ ಜನಸಮುದಾಯಗಳಿರುವ ರಸ್ತೆಗಳಲ್ಲಿ ಪಾದ ಬೆಳೆಸಿದ ಮಾತ್ರಕ್ಕೆ ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಶತಮಾನಗಳಿಂದ ನಿರ್ಮಿತವಾಗಿರುವ ಗೋಡೆಗಳು ಕುಸಿಯುವುದಿಲ್ಲ. ಬೇಲಿ ಹಾರುವುದರ ಮೂಲಕ ತರತಮಗಳನ್ನು ಅಂತರಗಳನ್ನು ಕಡಿಮೆ ಮಾಡಲಾಗುವುದಿಲ್ಲ, ಬೇಲಿಗಳನ್ನು ಕಿತ್ತೊಗೆಯಬೇಕು.

ಈ ಬೇಲಿಗಳನ್ನು ಕಿತ್ತೊಗೆಯಬೇಕಾದರೆ, ನಮ್ಮೊಳಗಿರುವ ನಾನತ್ವವನ್ನು ಬದಿಗಿಟ್ಟು ಸಮತೆಯ ಹಾದಿ ಅನುಸರಿಸಬೇಕು. ಪೇಜಾವರರು ದಲಿತ ಕೇರಿಗಳಲ್ಲಿ ಪಾದಯಾತ್ರೆಗಳನ್ನು ಕೈಗೊಂಡು, ದಲಿತರ ಮನೆಯನ್ನು ಪ್ರವೇಶಿಸಿ, ಪಾದಪೂಜೆಯನ್ನು ಮಾಡಿಸಿಕೊಂಡ ಪ್ರಹಸನಗಳಿಂದ ವೈದಿಕ ಸಮುದಾಯದಲ್ಲಿ ಬೌದ್ಧಿಕ ಪರಿವರ್ತನೆ ಆಗಿದೆಯೇ ? ಅಥವಾ ಪಾದ ಪೂಜೆ ಮಾಡಿದಂತಹ ದಲಿತರ ಕೇರಿಗಳಲ್ಲಿ ಬಾಹ್ಯ ಜಗತ್ತಿನೊಡಗಿನ ಸಮಾನತೆಯ ಛಾಯೆ ಕಂಡುಬಂದಿದೆಯೇ ? ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಜನ್ಮ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಮತ್ತು ಸಾಮಾಜಿಕ-ಸಾಂಸ್ಕøತಿಕ ವಲಯದಲ್ಲಿ ಪಾರಮ್ಯ ಬಯಸುವ ಪ್ರತಿನಿಧಿಯೊಬ್ಬರು, ಸಂತರ ರೂಪದಲ್ಲೋ ಸ್ವಾಮೀಜಿಯ ರೂಪದಲ್ಲೋ ಅಸ್ಪøಶ್ಯರ ಕೇರಿಗೆ ಪಾದ ಬೆಳೆಸಿ ಅಲ್ಲಿ ಪಾದ ಪೂಜೆ ಮಾಡಿಸಿಕೊಳ್ಳುವುದು, ಜಾತಿ ಶ್ರೇಷ್ಠತೆಯ ಪ್ರತಿಮೆಯನ್ನು ಆ ಶೋಷಿತ ಸಮುದಾಯಗಳ ನಡುವೆ ಪ್ರತಿಷ್ಠಾಪಿಸಿದಂತೆಯೇ ಆಗುವುದಲ್ಲವೇ ? ಮೇಲುಕೀಳುಗಳ ಅರಿವೇ ಇಲ್ಲದ, ಸಾಂಸ್ಕøತಿಕ ತರತಮಗಳ ಪರಿವೆಯೇ ಇಲ್ಲದ ಒಂದು ಮುಗ್ಧ ಜನಸಮುದಾಯದ ನಡುವೆ ಶ್ರೇಷ್ಠತೆಯ ಪ್ರತಿಮೆಯನ್ನು ಸ್ಥಾಪಿಸುವುದರಿಂದ ಜಾತಿ ವ್ಯವಸ್ಥೆಯ ಬೇರುಗಳು ಮತ್ತಷ್ಟು ಗಟ್ಟಿಯಾಗುತ್ತವೆ.

ಇಲ್ಲಿ ಆತಿಥ್ಯದ ಪರಿಕಲ್ಪನೆಯನ್ನು ಸೂಕ್ಷ್ಮದರ್ಶಕದೊಂದಿಗೆ ನೋಡುವುದು ಅಗತ್ಯ. ಅತಿಥಿಯ ಆಯ್ಕೆ ಆದ್ಯತೆಗಳಂತೆ ಒದಗಿಸಲಾಗುವ ಆತಿಥ್ಯ ಪರೋಕ್ಷವಾಗಿ ಹೇರಿಕೆಯಾಗುವುದೇ ಅಲ್ಲದೆ, ಅಪ್ರಜಾತಾಂತ್ರಿಕವೂ ಆಗುವುದಲ್ಲವೇ ? “ ನೀವು ನಮ್ಮ ದೇಶಕ್ಕೆ, ಅಂದರೆ ಭಾರತಕ್ಕೆ, ಬಂದಿದ್ದೀರಿ, ಇಲ್ಲಿನ ರೀತಿ ರಿವಾಜುಗಳಂತೆ ಇರಬೇಕಾದ್ದು ನಿಮ್ಮ ನೈತಿಕ ಕರ್ತವ್ಯ ” ಎಂದು ಬಾಹ್ಯ ಜಗತ್ತಿನಲ್ಲಿ ಕೂಗಿ ಹೇಳುವ ನಾವು, ಒಂದು ದಲಿತ ಕೇರಿಯಲ್ಲಿ ಇದೇ ದನಿ ಮೊಳಗಿದರೆ ಸಿಟ್ಟಾಗುವುದೇಕೆ ? ಹೆಮ್ಮೆ ಪಡಬೇಕಲ್ಲವೇ ? “ ನೀವು ನಮ್ಮವರಾಗಲು ನಮ್ಮೆಡೆಗೆ ಬಂದಿರುವಿರೋ ಅಥವಾ ನಿಮ್ಮತನವನ್ನು ಗಟ್ಟಿಗೊಳಿಸಲು ನಮ್ಮ ನೆಲೆಯನ್ನು ಚಿಮ್ಮುಹಲಗೆಯಾಗಿ ಬಳಸಿಕೊಳ್ಳಲು ಬಂದಿರುವಿರೋ ?” ಈ ಪ್ರಶ್ನೆಯನ್ನು ಪ್ರತಿಯೊಂದು ದಲಿತ ಕೇರಿಯಲ್ಲೂ ಮೊಳಗಿಸಿದರೆ ಆಗ ವೈದಿಕ ಸಮಾಜದಿಂದ, ಬಾಹ್ಯ ಜಗತ್ತಿನ ಮೇಲ್ವರ್ಗದ ಜನ ಸಮುದಾಯಗಳಿಂದ ವಸ್ತುನಿಷ್ಠ ಉತ್ತರ ದೊರೆಯಲು ಸಾಧ್ಯವೇ ? ಈ ಪ್ರಶ್ನೆ ಕೇಳಲು ನಾವು ಸಿದ್ಧರಾಗಿದ್ದೇವೆಯೇ ? ಹಂಸಲೇಖ ಅವರ ಪರ ವಿರೋಧ ನಿಲುವಿನೊಂದಿಗೇ ನಮ್ಮನ್ನು ಕಾಡಬೇಕಾದ ಪ್ರಶ್ನೆ ಇದು.

ಮನುಜ ಸ್ಪರ್ಶವನ್ನೇ ಬಯಸದ ಮನಸುಗಳು ನೆಲಸ್ಪರ್ಶದ ಮೂಲಕ ಅಸ್ಪøಶ್ಯತೆಯನ್ನು ಹೋಗಲಾಡಿಸುವುದಾದರೂ ಹೇಗೆ ? ಹಾಗೊಮ್ಮೆ ಮನುಜ ಸ್ಪರ್ಶವನ್ನು ಬಯಸುವುದೇ ಆದರೆ ನೆಲ ಸ್ಪರ್ಶದ ಅವಶ್ಯಕತೆಯೇ ಉದ್ಭವಿಸುವುದಿಲ್ಲ ಅಲ್ಲವೇ ? ಈ ಪ್ರಶ್ನೆ ನಮ್ಮನ್ನು ಕಾಡಲೇಬೇಕಿದೆ. ಜಾತಿ ವ್ಯವಸ್ಥೆಯ ಕ್ರೌರ್ಯ ಅಡಗಿರುವುದು ಸ್ಥಾವರಗಳಿಗಿಂತಲೂ ಹೆಚ್ಚಾಗಿ ಜಂಗಮ ಸ್ವರೂಪಿ ಮನಸುಗಳಲ್ಲಿ ಅಲ್ಲವೇ? ಈ ಮನಸುಗಳನ್ನು ಸರಿಪಡಿಸಬೇಕೆಂದರೆ ಕ್ರೌರ್ಯದಿಂದ ಮುಕ್ತರಾಗಬೇಕು. ಈ ಕ್ರೌರ್ಯವನ್ನು ಸಮಾಜದ ಎಲ್ಲ ಸ್ತರಗಳಲ್ಲೂ ತೊಡೆದುಹಾಕುವ ದೃಢ ಸಂಕಲ್ಪ ನಮ್ಮದಾಗಬೇಕು. ಇದು ಪಾದಸ್ಪರ್ಶ ಅಥವಾ ಪಾದಗಳ ನೆಲಸ್ಪರ್ಶದಿಂದಾಗುವ ಕೆಲಸವಲ್ಲ. ಅಸ್ಪøಶ್ಯರನ್ನು ಸ್ಪರ್ಶಿಸುವುದಕ್ಕೂ ಅಸ್ಪøಶ್ಯತೆಯನ್ನು ತೊಡೆದುಹಾಕುವುದಕ್ಕೂ ಅಪಾರ ಅಂತರವಿದೆ. ದೈಹಿಕ ಸ್ಪರ್ಶ ಆ ಕ್ಷಣದ ಪಾಪ ನಿವೇದನೆಯಾಗಿ ಮರುಕ್ಷಣದಲ್ಲೇ ನಿಷ್ಕ್ರಿಯವಾಗಿಬಿಡುತ್ತದೆ. ಬೌದ್ಧಿಕ ಸ್ಪರ್ಶ ಶಾಶ್ವತವಾಗಿ ಮನದಾಳದಲ್ಲಿ ನೆಲೆಯೂರುತ್ತದೆ. ಈ ಬೌದ್ಧಿಕ ಸ್ಪರ್ಶವನ್ನು ಸಾಧಿಸಬೇಕೆಂದರೆ ವೈಜ್ಞಾನಿಕ ಮನೋಧರ್ಮ ಮತ್ತು ವೈಚಾರಿಕ ಚಿಂತನೆ ಅತ್ಯಗತ್ಯ

ಕರ್ಮಠ ವಿಧಿವಿಧಾನಗಳನ್ನು ಅನುಸರಿಸುತ್ತಲೇ ಬೌದ್ಧಿಕ ಸ್ಪರ್ಶದ ಅನುಭಾವಕ್ಕಾಗಿ ಹಾತೊರೆಯುವುದು ಹೊಳೆಯಲ್ಲಿ ಹುಣಿಸೆ ತೊಳೆದಂತಾಗುತ್ತದೆ. ಭಾರತಕ್ಕೆ ಇಂದು ಬೇಕಿರುವುದು ಈ ಬೌದ್ಧಿಕ ಸ್ಪರ್ಶದ ಅನುಭಾವ. ಭಾರತದಲ್ಲಿ ಇಂದು ಕೊರತೆ ಇರುವುದು ಈ ಬೌದ್ಧಿಕ ಸ್ಪರ್ಶದ ಮನಸ್ಥಿತಿ. ಈ ಮನಸ್ಥಿತಿಯನ್ನು ಸರಿಪಡಿಸಲು ಬೇಕಿರುವುದು ವಿಚಾರಕ್ರಾಂತಿಯೇ ಹೊರತು ಸಾಂಕೇತಿಕ ಪ್ರತಿರೋಧದ ಪಾಪನಿವೇದನೆಗಳಲ್ಲ. ಡಾ ಬಿ ಆರ್ ಅಂಬೇಡ್ಕರ್ ಕನಸಿನ, ಜಾತಿ ಪ್ರಜ್ಞೆ ಇಲ್ಲದ ಸಮ ಸಮಾಜದ ನಿರ್ಮಾಣಕ್ಕಾಗಿ, ಕುವೆಂಪು ಕನಸಿನ ವಿಶ್ವಮಾನವತೆಯ ಸಮಾಜದ ನಿರ್ಮಾಣಕ್ಕಾಗಿ ವೈಚಾರಿಕ ನೆಲೆಯ ವೈಜ್ಞಾನಿಕ ಮನೋಧರ್ಮ ಮುಖ್ಯವಾಗುತ್ತದೆ. ಯಾವುದೇ ಒಂದು ಮತದ ಚೌಕಟ್ಟಿನಲ್ಲಿದ್ದರೂ ಈ ಮನೋಧರ್ಮ ದಕ್ಕುವುದು ಸಾಧ್ಯವಿಲ್ಲ. ಏಕೆಂದರೆ ಮತಗಳ ಆಚರಣೆಗಳಲ್ಲಿ, ವಿಧಿವಿಧಾನಗಳಲ್ಲಿ, ಆರಾಧನಾ ಸಂಸ್ಕøತಿಯಲ್ಲಿ ಮಾನವನ ಅಭಿವ್ಯಕ್ತಿ ಯಾವುದೋ ಒಂದು ಸೂತ್ರದಲ್ಲಿ ಬಂಧಿಯಾಗಿರುತ್ತದೆ.

ಇಂದು ಹಂಸಲೇಖ ಅವರ ವಿರುದ್ಧ ಧಾಳಿ ನಡೆಸುತ್ತಿರುವವರು ಈ ಪ್ರಶ್ನೆಗಳಿಗೆ ಉತ್ತರ ಶೋಧಿಸಬೇಕಿದೆ. ಹಂಸಲೇಖ ತಮ್ಮದೇ ಕಾರಣಗಳಿಗಾಗಿ, ಅನಗತ್ಯವಾಗಿ, ಕ್ಷಮೆ ಕೋರಿದ್ದಾರೆ. ಅವರು ಎತ್ತಿರುವ ಪ್ರಶ್ನೆಗಳಿಗೆ ಸಾಮುದಾಯಿಕ ಅಸ್ತಿತ್ವ ಇದೆ. ಈ ಪ್ರಶ್ನೆಯಿಂದ ಬಸವಣ್ಣನಿಂದ ಅಂಬೇಡ್ಕರ್‍ವರೆಗೂ ಕೇಳುತ್ತಲೇ ಬರಲಾಗಿದೆ. ಆದರೆ ಸಾಂಸ್ಕøತಿಕ ರಾಜಕಾರಣದೊಂದಿಗೆ ಆಹಾರ ರಾಜಕಾರಣವೂ ಸಮ್ಮಿಲನವಾಗಿರುವುದರಿಂದ ಪ್ರಸ್ತುತ ಸಂದರ್ಭದಲ್ಲಿ ವೈದಿಕ ಮನಸುಗಳನ್ನು , ಸಾಂಸ್ಕøತಿಕ ಹರಿಕಾರರನ್ನು ಈ ಪ್ರಶ್ನೆ ವಿಚಲಿತಗೊಳಿಸಿದೆ. ಸ್ಪøಶ್ಯಾಸ್ಪøಶ್ಯತೆಯನ್ನು ನಿರ್ಧರಿಸುವ ಮಾನದಂಡ ಕೇವಲ ಹುಟ್ಟಿನ ಮೂಲದಲ್ಲಿ ಇಲ್ಲ ಅದು ನಮ್ಮ ಆಹಾರ ಪದ್ಧತಿಯಲ್ಲೂ ಇದೆ ಎನ್ನುವುದನ್ನು ಮತ್ತೆ ಮತ್ತೆ ನೆನಪಿಸಲಾಗುತ್ತಿದೆ. ಇದೇನೂ ಹೊಸ ವಿದ್ಯಮಾನವಲ್ಲ. ಭಾರತದ ಪ್ರತಿಯೊಂದು ಕುಟುಂಬದಲ್ಲೂ, ಕಚೇರಿಯಲ್ಲೂ, ಸಾರ್ವಜನಿಕ ವಲಯದಲ್ಲೂ ಈ ಭೇದ ಢಾಳಾಗಿ ಕಾಣಿಸುತ್ತಲೇ ಇದೆ.

ಭಾರತದಲ್ಲಿ ಬೇರೂರುತ್ತಿರುವ ಮತೀಯ ಸಾಂಸ್ಕøತಿಕ ರಾಜಕಾರಣದಲ್ಲಿ, ಶ್ರೇಣೀಕೃತ ಜಾತಿ ವ್ಯವಸ್ಥೆಯ ಬೇರುಗಳನ್ನು ಗಟ್ಟಿಗೊಳಿಸುವ ಮೂಲಕವೇ ಬಹುತ್ವದ ನೆಲೆಗಳನ್ನು ನಾಶಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಅಸ್ಪøಶ್ಯ ಸಮುದಾಯಗಳನ್ನು, ದಲಿತರು, ಆದಿವಾಸಿಗಳು ಮತ್ತು ಶೋಷಿತರನ್ನು ಪ್ರತಿನಿಧಿಸುವ ಆಳುವ ವರ್ಗಗಳು ಮತ್ತು ಸಾಮಾಜಿಕ ಸಂಘಟನೆಗಳು ಈ ಅಪಾಯವನ್ನು ಅರಿತೇ ಮುನ್ನಡೆಯಬೇಕಿದೆ. ಇಲ್ಲಿ ಜನಸಂಖ್ಯೆಯ ಪ್ರಮಾಣಕ್ಕಿಂತಲೂ, ಬೌದ್ಧಿಕ ಚಿಂತನೆಯ ಪಾರಮ್ಯವೇ ಮೇಲುಗೈ ಸಾಧಿಸುತ್ತಿರುವುದರಿಂದಲೇ ಬೃಹತ್ ಜನಸಮುದಾಯವನ್ನು ಪ್ರತಿನಿಧಿಸುವ ಹಂಸಲೇಖ ಒಂದು ಸಣ್ಣ ಗುಂಪಿನ ಒತ್ತಡಕ್ಕೆ ಮಣಿಯಬೇಕಾಗುತ್ತದೆ. ಇದು ಹಂಸಲೇಖ ಅವರ ವ್ಯಕ್ತಿಗತ ವಿಚಾರವೇ ಆದರೂ ಈ ಬೆಳವಣಿಗೆಗಳ ಹಿಂದೆ ಅಡಗಿರುವ ಸಾಂಸ್ಕøತಿಕ ರಾಜಕಾರಣವನ್ನು ಗುರುತಿಸದೆ ಹೋದರೆ, ಬಹುಶಃ ಭಾರತದ ಬಹುತ್ವದ ನೆಲೆಗಳು ದುರ್ಬಲವಾಗುತ್ತಲೇ ಹೋಗುತ್ತದೆ. ಅಧಿಕಾರ ಮತ್ತು ಪಕ್ಷ ರಾಜಕಾರಣದ ಲಾಲಸೆಗೆ ಸಿಲುಕಿ ತಮ್ಮ ಅಸ್ಮಿತೆಗಳನ್ನೇ ಮರೆಯುತ್ತಿರುವ ಒಂದು ಬೃಹತ್ ಜನವರ್ಗ ಇಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ.

ತಮ್ಮ ಶತಮಾನಗಳ ಕೊಳೆಯನ್ನು ತೊಳೆದುಕೊಳ್ಳಲು ಅಥವಾ ಬೇರೂರಿದ ಪಾಪಪ್ರಜ್ಞೆಯನ್ನು ಕಳೆದುಕೊಳ್ಳಲು ಆತಿಥ್ಯವನ್ನು ಬಯಸುವ ಮನಸುಗಳು, ಇದೇ ಶೋಷಿತ ಸಮುದಾಯಗಳ ಪಾಲಿಗೆ ಅತಿಥೇಯರಾಗಲು ಸಾಧ್ಯವೇ ? ಅನ್ಯರ ಪಾದಸ್ಪರ್ಶವನ್ನೂ ಮಲಿನ ಎಂದು ಭಾವಿಸುವ ವಿಕೃತ ಮನಸುಗಳು ತಮ್ಮ ಶ್ರೇಷ್ಠತೆಯ ಪಾರಮ್ಯವನ್ನು ಸಾಧಿಸಲು ಪಾದಪೂಜೆಯನ್ನು ಬಯಸುವ ಒಂದು ಊಳಿಗಮಾನ್ಯ-ಅಪ್ರಜಾತಾಂತ್ರಿಕ ಧೋರಣೆಯನ್ನೇ ಇಂದು ಧಿಕ್ಕರಿಸಬೇಕಿದೆ. 1978ರಲ್ಲಿ ಜಗಜೀವನ್ ರಾಮ್ ಕೇಂದ್ರ ರಕ್ಷಣಾ ಸಚಿವರಾಗಿದ್ದಾಗ ವಾರಣಾಸಿಯಲ್ಲಿ ಸಂಪೂರ್ಣಾನಂದರ ಪ್ರತಿಮೆಯನ್ನು ಉದ್ಘಾಟಿಸಿದ್ದರು. ಈ ಸಮಾರಂಭದ ನಂತರ ಕೆಲವು ಬ್ರಾಹ್ಮಣರು ಗಂಗಾಜಲದಲ್ಲಿ ಪ್ರತಿಮೆಯನ್ನು ತೊಳೆಯುವ ಮೂಲಕ ಶುದ್ಧೀಕರಿಸಿದ್ದರು. ದಲಿತನೊಬ್ಬನ ಸ್ಪರ್ಶದಿಂದ ಉಂಟಾದ ಸಂಭಾವ್ಯ ಮೈಲಿಗೆಯನ್ನು ತೊಳೆಯುವ ಈ ಪ್ರವೃತ್ತಿ ಇಂದಿಗೂ ಜೀವಂತವಾಗಿದೆ.

ಅಸ್ಪøಶ್ಯತೆ ಈ ದೇಶಕ್ಕಂಟಿದ ಶಾಪ ಮಾತ್ರವೇ ಅಲ್ಲ ಅದು ಇಲ್ಲಿನ ಸಾಮಾಜಿಕ ವ್ಯವಸ್ಥೆಯ ಒಂದು ಸ್ತಂಭ. ಈ ಸ್ತಂಭವನ್ನು ಕೆಡವಿ, ಸಮತೆಯ ಸ್ತಂಭವನ್ನು ನೆಡುವ ನಿಟ್ಟಿನಲ್ಲಿ ಸಮಾಜ ಮುನ್ನಡೆಯಬೇಕಿದೆ. ದುರಂತ ಎಂದರೆ ಭಾರತ ಹಿಂದಕ್ಕೆ ಚಲಿಸುತ್ತಿದೆ. ವೈದಿಕಶಾಹಿಯು ನಮ್ಮ ಸಮಾಜವನ್ನು ಶತಮಾನಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತಿದೆ. ಈ ಹಿಂಚಲನೆಯಲ್ಲಿ ಶತಮಾನಗಳ ಅಪಮಾನಕ್ಕೊಳಗಾಗಿರುವ ಜನಸಮುದಾಯಗಳ ರಾಜಕೀಯ-ಸಾಮಾಜಿಕ-ಸಾಂಸ್ಕøತಿಕ ಪ್ರತಿನಿಧಿಗಳೂ ಭಾಗಿಯಾಗಿರುವುದು ದುರಂತವಷ್ಟೆ. ಹಂಸಲೇಖ ಅವರೊಟ್ಟಿಗೆ ನಿಲ್ಲೋಣ. ಆದರೆ ಈ ವಿಚಾರಗಳ ಬಗ್ಗೆಯೂ ಯೋಚಿಸೋಣ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಏಷ್ಯಾ ಪೆಸಿಫಿಕ್‌ ರಾಷ್ಟ್ರಗಳಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಡಿಜಿಟಲ್ ಬ್ರಾಂಡ್‌ ಗಳಲ್ಲಿ ಪ್ರಮುಖ ಸ್ಥಾನ ಪಡೆದ ‘ಕೂ’ ಅಪ್ಲಿಕೇಶನ್

ಮನೆ ಕೆಲಸದವರನ್ನು ಕೊಂದು 95 ಲಕ್ಷ ರೂ. ದೋಚಿದ ಐವರು ದರೋಡೆಕೋರರು ಅರೆಸ್ಟ್

ದ್ವಿತೀಯ ಪಿಯು ಮಧ್ಯ ವಾರ್ಷಿಕ ಪರೀಕ್ಷೆ ಮುಂದೂಡಿಕೆಯಾಗುವ ಸಾಧ್ಯತೆ!

ಕಾಲುಂಗುರ, ಕಾಲ್ಗೆಜ್ಜೆ ಕಳವು ಮಾಡಲು ಮಹಿಳೆಯ ಪಾದವನ್ನೇ ಕತ್ತರಿಸಿದ ದರೋಡೆಕೋರರು!

ಮಾರಮ್ಮ, ಮಹಾಕಾಳಿಯೂ ಮಾಂಸಾಹಾರಿಗಳಲ್ಲವೇ? | ಹಂಸಲೇಖರನ್ನು ವಿಲನ್ ಮಾಡಿದ ಮಾಧ್ಯಮಗಳು

ಸಿನಿಮಾಗೆ ಪ್ರೇರಣೆಯಾದ ಪಾರ್ವತಿ ಅಮ್ಮಾಳ್ ಅವರ ಹೆಸರಿಗೆ 10 ಲಕ್ಷ ರೂ. ಠೇವಣಿ ಇಡಲಿರುವ ನಟ ಸೂರ್ಯ!

ಇತ್ತೀಚಿನ ಸುದ್ದಿ