ಅತ್ಯಾಚಾರದ ಆರೋಪ ಹೊರಿಸಿ ಯುವಕನ ಬರ್ಬರ ಹತ್ಯೆ: ಆರೋಪಿಗಳ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು - Mahanayaka

ಅತ್ಯಾಚಾರದ ಆರೋಪ ಹೊರಿಸಿ ಯುವಕನ ಬರ್ಬರ ಹತ್ಯೆ: ಆರೋಪಿಗಳ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು

haveri
03/10/2021

ಹಾವೇರಿ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಶುಕ್ರವಾರ ಆರೋಪಿಯೋರ್ವನ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆದರೆ, ಶನಿವಾರ ಆರೋಪಿಯ ಮೃತದೇಹವು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಇಲ್ಲಿನ ರಟ್ಟೀಹಳ್ಳಿ ತಾಲೂಕಿನ ಗಂಗಾಯಿಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಯುವಕನ ಪಾಲಕರು ಆರೋಪಿಸಿದ್ದಾರೆ. ಇದರಿಂದಾಗಿ ಪ್ರಕರಣ ಮತ್ತಷ್ಟು ಗಂಭೀರತೆಯನ್ನು ಪಡೆದುಕೊಂಡಿದೆ. ಇನ್ನೂ ಆರೋಪಿ ನಾಪತ್ತೆಯಾದ ಬಗ್ಗೆ ಪಾಲಕರು ದೂರು ನೀಡಲು ರಟ್ಟೀಹಳ್ಳಿ  ಠಾಣೆಗೆ ಹೋದ ವೇಳೆ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎನ್ನಲಾಗಿದೆ. ಈ ಸಂಬಂಧ ಕಾನ್ ಸ್ಟೇಬಲ್ ವೋರ್ವರನ್ನು ಅಮಾನತು ಮಾಡಲಾಗಿದೆ.

ಗಂಗಾಯಿಕೊಪ್ಪದ 28 ವರ್ಷ ವಯಸ್ಸಿನ  ರಾಜು ತಿಮ್ಮಪ್ಪ ಪೂಜಾರ ಮೃತ ಯುವಕನಾಗಿದ್ದು, ಈತ  16 ವರ್ಷ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿ ಬೈಕ್ ನಲ್ಲಿ ಕರೆದೊಯ್ದು ಗುಡ್ಡದಮಾದಾಪುರ ಹೊನ್ನಾಳಿ ರಸ್ತೆ ಸಮೀಪದಲ್ಲಿ ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ. ಈ ಸಂಬಂಧ ಈತನ ಮೇಲೆ ಶುಕ್ರವಾರ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ತನ್ನ ಮಗ ಕಾಣುತ್ತಿಲ್ಲ ಎಂದು ಮೃತನ ತಂದೆ ಶುಕ್ರವಾರ ಪೊಲೀಸರಿಗೆ ದೂರು ನೀಡಲು ಹೋದಾಗ ಅವರು ಪ್ರಕರಣ ದಾಖಲಿಸಿಕೊಳ್ಳಲಿಲ್ಲ. ಆದರೆ, ಯುವಕನ ಮೃತದೇಹ ಶನಿವಾರ ಬೆಳಗ್ಗೆ ಗುಡ್ಡದಮಾದಾಪುರ ಬಳಿ ರಸ್ತೆ ಪಕ್ಕದಲ್ಲಿಯೇ ಪತ್ತೆಯಾಗಿದೆ.

ಯುವಕನ ಪೋಷಕರು ಹೇಳುತ್ತಿರುವಂತೆ, ಯುವಕ ಹಾಗೂ ಬಾಲಕಿ ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಶುಕ್ರವಾರ ಇಬ್ಬರು ಕೂಡ ಎಲ್ಲಿಗೋ ಹೋಗಿ ಬರುತ್ತಿರುವುದನ್ನು ಕುಟುಂಬದವರು ನೋಡಿದ್ದಾರೆ. ಈ ವೇಳೆ ಗುಡ್ಡದಮಾದಾಪುರ ಬಳಿ ನನ್ನ ಮಗನ ಮೇಲೆ ಮನಬಂದಂತೆ ಹಲ್ಲೆ ನಡೆಸಲಾಗಿದೆ. ಬಳಿಕ ನನ್ನ ಮಗನ ಮೇಲೆ ಅತ್ಯಾಚಾರದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇವರ ಪ್ರೀತಿಗೆ ಜಾತಿ ಅಡ್ಡ ಬಂದಿದೆ. ಇಷ್ಟೆಲ್ಲ ಆಗಲು ಇದೇ ಮುಖ್ಯ ಕಾರಣ. ನನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಲು ಹೋದರೂ ದೂರು ತೆಗೆದುಕೊಳ್ಳಲಿಲ್ಲ ಎಂದು ಅವರು ತಿಳಿಸಿದ್ದರು.

ಇನ್ನೂ ಯುವಕನ ಕುಟುಂಬಸ್ಥರು ದೂರು ನೀಡಿದರೂ ಸ್ವೀಕರಿಸದ ಹಿನ್ನೆಲೆಯಲ್ಲಿ ರಟ್ಟೀಹಳ್ಳಿ ಠಾಣೆ ಹೆಡ್ ಕಾನ್ ಸ್ಟೇಬಲ್ ಡಿ.ಎಫ್.ಹೊಸಮನಿ ಎಂಬವರನ್ನು ಅಮಾನತುಗೊಳಿಸಲಾಗಿದ್ದು, ಯುವಕನ ಪೋಷಕರು ನೀಡಿದ ದೂರಿನನ್ವಯ ಹಲವರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಶನಿವಾರ ಬೆಳಗ್ಗೆ ಎಸ್ ಪಿ ಹನುಮಂತರಾಯ, ಹೆಚ್ಚುವರಿ ಎಸ್ ಪಿ ವಿಜಯಕುಮಾರ ಸಂತೋಷ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ. ಘಟನೆಯ ಬೆನ್ನಲ್ಲೇ ಆರೋಪಿಗಳನ್ನು ಬಂಧಿಸುವಂತೆ ಯುವಕನ ಕುಟುಂಬಸ್ಥರು ಹಾವೇರಿ ಜಿಲ್ಲಾಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದರು. ಸೂಕ್ತ ಭರವಸೆಯ ಬಳಿಕ ಪ್ರತಿಭಟನೆಯನ್ನು ಹಿಂಪಡೆದುಕೊಂಡರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಅಂಜನಾದ್ರಿ ಬೆಟ್ಟದಿಂದ ಅಂಗಡಿ ತೆರವು ಮಾಡಲು ಅನ್ಯ ಧರ್ಮೀಯರಿಗೆ ಬೆದರಿಕೆ: ಅತುಲ್ ಕುಮಾರ್ ವಿರುದ್ಧ ಎಫ್ ಐಆರ್

ಶಾಕಿಂಗ್ ನ್ಯೂಸ್: ರೇಬಿಸ್  ವೈರಸ್ ಗೆ ಕಾಲೇಜು ವಿದ್ಯಾರ್ಥಿನಿ ಬಲಿ

ಮಂಗಳೂರು: ಹೆಡ್ ಕಾನ್ ಸ್ಟೇಬಲ್ ಸಿದ್ಧಾರ್ಥ್ ಜೆ. ಹೃದಯಾಘಾತದಿಂದ ನಿಧನ

ಅಸ್ಪೃಶ್ಯತೆಯನ್ನು ಮುಚ್ಚಿಟ್ಟು ಮತಾಂತರದ ಹಿಂದೆ ಬಿದ್ದ ಬಿಜೆಪಿ ಪರಿವಾರ!

ಪರೀಕ್ಷೆ ಮುಗಿಸಿ ಹೊರ ಬಂದ ಸಹಪಾಠಿಯ ಕತ್ತು ಸೀಳಿ ಕೊಂದ ಪ್ರೇಮಿ!

ಇತ್ತೀಚಿನ ಸುದ್ದಿ