ದಾಳಿ ನಡೆಸಿದ ಕಾಡುಕೋಣ: ಗಂಭೀರವಾಗಿ ಗಾಯಗೊಂಡ ಕೃಷಿಕ

ಕೃಷಿಕರೊಬ್ಬರ ಮೇಲೆ ಕಾಡುಕೋಣ ದಾಳಿ ನಡೆಸಿದ ಘಟನೆ ನಡೆದಿದ್ದು, ಘಟನೆಯಿಂದಾಗಿ ಕೃಷಿಕ ತೀವ್ರವಾಗಿ ಗಾಯಗೊಂಡಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ, ದುರ್ಗದಹಳ್ಳಿ ಸಮೀಪ ಮಂಗಳವಾರ ಸಂಜೆ ಈ ದುರ್ಘಟನೆ ನಡೆದಿದೆ.
ದುರ್ಗದಹಳ್ಳಿ ಗ್ರಾಮದ ಹಲಗಡ್ಕ ನಿವಾಸಿ ರಾಜೇಶ್ ಕಾಡುಕೋಣದಿಂದ ದಾಳಿಗೊಳಗಾದ ರೈತ. ಮಂಗಳವಾರ ಸಂಜೆ ತನ್ನ ಜಮೀನಿನಲ್ಲಿ ಇದ್ದಾಗ ಕಾಡುಕೋಣವೊಂದು ರಾಜೇಶ್ ಮೇಲೆ ದಾಳಿ ನಡೆಸಿದ್ದು, ಕಾಡುಕೋಣ ದಾಳಿಯಿಂದ ರಾಜೇಶ್ ತೀವ್ರವಾಗಿ ಗಾಯಗೊಂಡಿದ್ದಾರೆ. ಕಾಡುಕೋಣದ ತಿವಿತದಿಂದ ರಾಜೇಶ್ ಅವರ ತಲೆ, ಹೊಟ್ಟೆ ಮತ್ತು ಕಾಲಿನ ಭಾಗಕ್ಕೆ ತೀವ್ರವಾಗ ಪೆಟ್ಟಾಗಿದೆ. ತಲೆ ಮತ್ತು ಹೊಟ್ಟೆ ಭಾಗದಲ್ಲಿ ಆಳವಾದ ಗಾಯಗಳಾಗಿವೆ.
ಕಾಡುಕೋಣ ರಾಜೇಶ್ ಅವರನ್ನು ತನ್ನ ಕೊಂಬಿನ ಮೇಲಿರಿಸಿ ಸುಮಾರು ದೂರ ಎಳೆದೊಯ್ದಿತ್ತು ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ರಾಜೇಶ್ ಅವರನ್ನು ಸ್ಥಳೀಯರು ಕಳಸ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆಯ ನಂತರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಿಸಲಾಗಿದೆ. ಅಲ್ಲಿ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಭಾಗದಲ್ಲಿ ಕಾಡುಕೋಣಗಳ ಹಾವಳಿ ಮಿತಿಮೀರಿದ್ದು, ಕಳೆದ ಕೆಲ ದಿನಗಳ ಹಿಂದೆ ಜಾವಳಿ ಸಮೀಪದ ಮೂವರ ಮೇಲೆ ಕಾಡುಕೋಣಗಳು ದಾಳಿ ನಡೆಸಿ ಗಾಯಗೊಳಿಸಿದ್ದವು. ಕಾಡುಕೋಣಗಳ ಹಾವಳಿಯಿಂದಾಗಿ ಜನರು ಕಾರ್ಮಿಕರು ತಮ್ಮ ಜಮೀನುಗಳಿಗೆ ಹೋಗಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth