ದೇಶದಲ್ಲಿ ಕ್ರೈಸ್ತರ ಮೇಲೆ ದಾಳಿ: ಕಠಿಣ ಕ್ರಮಕ್ಕೆ ಹಿರಿಯ ಕ್ರೈಸ್ತ ನಾಯಕರಿಂದ ರಾಷ್ಟ್ರಪತಿ, ಪ್ರಧಾನಿಗೆ ಮನವಿ
ದೇಶಾದ್ಯಂತ ಕ್ರೈಸ್ತರನ್ನು ಗುರಿಯಾಗಿಸಿ ನಡೆಯುತ್ತಿರುವ ಹಿಂಸಾಚಾರದ ವಿರುದ್ದ ತಕ್ಷಣ
ಕ್ರಮ ಕೈಗೊಳ್ಳುವಂತೆ ಕೋರಿ 400ಕ್ಕೂ ಹೆಚ್ಚು ಹಿರಿಯ ಕ್ರೈಸ್ತ ನಾಯಕರು ಮತ್ತು 30 ಚರ್ಚ್ ಗುಂಪುಗಳು ಡಿಸೆಂಬರ್ 31, 2024ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಕ್ರಿಸ್‌ಮಸ್ ವೇಳೆ ದೇಶದಾದ್ಯಂತ 14ಕ್ಕೂ ಹೆಚ್ಚು ಕ್ರಿಶ್ಚಿಯನ್ ಕೂಟಗಳನ್ನು ಗುರಿಯಾಗಿಸಿಕೊಂಡು ಹಿಂಸಾಚಾರ, ಬೆದರಿಕೆಯ ಘಟನೆಗಳು ನಡೆದ ಬಗ್ಗೆ ವರದಿಯಾದ ಬಳಿಕ ರಾಷ್ಟ್ರಪತಿ ಮತ್ತು ಪ್ರಧಾನಿಗೆ ಪತ್ರ ಬರೆಯಲಾಗಿದೆ.
ಪ್ರಮುಖ ಕ್ರೈಸ್ತ ನಾಯಕರಾದ ಥಾಮಸ್ ಅಬ್ರಹಾಂ, ಡೇವಿಡ್ ಒನೆಸಿಮು, ಜೋಬ್ ಲೋಹರಾ, ರಿಚರ್ಡ್ ಹೋವೆಲ್, ಮೇರಿ ಸ್ಕೇರಿಯಾ, ಸೆಡ್ರಿಕ್ ಪ್ರಕಾಶ್ ಎಸ್.ಜೆ., ಜಾನ್ ದಯಾಲ್, ಪ್ರಕಾಶ್ ಲೂಯಿಸ್ ಎಸ್.ಜೆ., ಝೆಲ್ಹೌ ಕೀಹೋ, ಇ.ಹೆಚ್. ಖಾರ್ಕೊಂಗೊರ್, ಅಲೆನ್ ಬ್ರೂಕ್ಸ್, ಕೆ. ಲೊಸಿ ಮಾವೊ, ಅಖಿಲೇಶ್ ಎಡ್ಗರ್, ಮೈಕೆಲ್ ವಿಲಮ್ಸ್, ಎ.ಸಿ. ಮೈಕೆಲ್ ಮತ್ತು ವಿಜಯೇಶ್ ಲಾಲ್ ಪತ್ರಕ್ಕೆ ಸಹಿ ಹಾಕಿದ್ದು, ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ದ್ವೇಷದ ಆತಂಕಕಾರಿ ಪ್ರವೃತ್ತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಮತಾಂತರ-ವಿರೋಧಿ ಕಾನೂನುಗಳ ದುರುಪಯೋಗ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಹೆಚ್ಚುತ್ತಿರುವ ಬೆದರಿಕೆಗಳು, ಹೆಚ್ಚುತ್ತಿರುವ ದ್ವೇಷದ ಮಾತುಗಳು ಮತ್ತು ದಲಿತ ಕ್ರಿಶ್ಚಿಯನ್ನರಿಗೆ ಪರಿಶಿಷ್ಟ ಜಾತಿ ಸ್ಥಾನಮಾನವನ್ನು ನಿರಾಕರಿಸುವ ಬಹಿಷ್ಕಾರ ನೀತಿಗಳು ಸೇರಿದಂತೆ ಹಲವು ವಿಷಯಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮೇ 2023 ರಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ 250ಕ್ಕೂ ಹೆಚ್ಚು ಸಾವುಗಳು ಸಂಭವಿಸಿದೆ. 360 ಚರ್ಚ್‌ಗಳನ್ನು ನಾಶಪಡಿಸಲಾಗಿದೆ. ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ಮಣಿಪುರದಲ್ಲಿ ಶಾಂತಿ, ಸಾಮರಸ್ಯವನ್ನು ಸ್ಥಾಪಿಸುವಲ್ಲಿ ಪ್ರಧಾನಿ ನೇತೃತ್ವ ವಹಿಸುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj