ಅತ್ತೆಗೆ ಟಿವಿ ಹುಚ್ಚು, ಸೊಸೆಗೆ ಮೊಬೈಲ್ ಹುಚ್ಚು! | ಅತ್ತೆ- ಸೊಸೆಯ ದೂರು ಕೇಳಿ ಸುಸ್ತಾದ ಪೊಲೀಸರು!
ಲಕ್ನೋ: ಅತ್ತೆ ತನಗೆ ಕಾಟ ಕೊಡುತ್ತಿದ್ದಾಳೆ ಎಂದು ಸೊಸೆ ಪೊಲೀಸ್ ಠಾಣೆಗೆ ಕರೆ ಮಾಡಿ ಹೇಳಿದ್ದು, ಘಟನಾ ಸ್ಥಳಕ್ಕೆ ಬಂದ ಪೊಲೀಸರು ಶಾಕ್ ಗೊಳಗಾಗಿದ್ದು, ಪೊಲೀಸರಿಗೆ ಇದೊಂದು ತಲೆನೋವಿನ ಪ್ರಸಂಗವಾಗಿ ಪರಿಣಮಿಸಿದೆ.
ಈ ಘಟನೆ ನಡೆದದ್ದು ಉತ್ತರಪ್ರದೇಶದಲ್ಲಿ. ಪೊಲೀಸರಿಗೆ ಸೊಸೆ ಕರೆ ಮಾಡಿದ್ದರಿಂದ ಪೊಲೀಸರು ಮನೆಗೆ ಬಂದಿದ್ದಾರೆ. ಈ ವೇಳೆ ಸೊಸೆಯು ತನ್ನ ವಿಚಿತ್ರ ಸಮಸ್ಯೆಯನ್ನು ಹೇಳಿಕೊಂಡಿದ್ದಾಳೆ.
ನನ್ನ ಅತ್ತೆಗೆ ವಿಪರೀತ ಟಿವಿಯ ಹುಚ್ಚು. ಹಾಗಾಗಿ ಅವರು ಅಡುಗೆ ಮಾಡುವುದಿಲ್ಲ, ನನಗೆ ಹಿಂದಿನ ದಿನದ ಅನ್ನವನ್ನು ನೀಡುತ್ತಿದ್ದಾರೆ. ಇದರಿಂದಾಗಿ ನನ್ನ ಆರೋಗ್ಯ ಹಾಳಾಗುತ್ತಿದೆ ಎಂದು ಹೇಳಿದ್ದಾಳೆ.
ಸೊಸೆ ಮಾಡಿರುವ ಆರೋಪವನ್ನು ತಳ್ಳಿ ಹಾಕಿರುವ ಅತ್ತೆ, ನಾನು ಪ್ರತೀ ದಿನ ಸೊಸೆಗೆ ಆಹಾರ ತಯಾರಿಸಿ ನೀಡುತ್ತಿದ್ದೇನೆ. ಆದರೆ ಸೊಸೆ ಇಡೀ ದಿನ ಮೊಬೈಲ್ ನಲ್ಲಿ ಬ್ಯುಸಿಯಾಗಿರುತ್ತಿದ್ದಾಳೆ ಎಂದು ಹೇಳಿದ್ದಾಳೆ.
ಏನೋ ಗಂಭೀರ ಸಮಸ್ಯೆ ಎಂದು ಸ್ಥಳಕ್ಕೆ ಬಂದಿದ್ದ ಪೊಲೀಸರು ಅತ್ತೆ-ಸೊಸೆಯ ಹುಚ್ಚಾಟ ಕಂಡು ಕಂಗಾಲಾಗಿದ್ದಾರೆ. ಇನ್ನೂ ಪಕ್ಕದ ಮನೆಯವರ ಬಳಿಯಲ್ಲಿ ಈ ಅತ್ತೆ ಸೊಸೆಯ ಬಗ್ಗೆ ವಿಚಾರಿಸಿದಾಗ ಅವರು ಇವರಿಬ್ಬರ ಬಗ್ಗೆ ಉದ್ದುದ್ದ ದೂರು ಹೇಳಿದ್ದು, ಇದರಿಂದ ಪೊಲೀಸರಿಗೆ ತಲೆಕೆಟ್ಟು ಹೋಗಿದೆ.
ಅಂದ ಹಾಗೆ ಈ ಇಬ್ಬರು ಅತ್ತೆ ಸೊಸೆಯ ಗಂಡಂದಿರು ಕೆಲಸದ ನಿಮಿತ್ತ ಹೊರ ಊರುಗಳಿಗೆ ಹೋಗಿದ್ದಾರೆ. ಹಾಗಾಗಿ ಮನೆಯಲ್ಲಿ ಅತ್ತೆ ಸೊಸೆ ಇಬ್ಬರದ್ದೇ ಕಾರುಬಾರು. ಇವರ ಕಿರಿಕಿರಿ ಸಹಿಸಲಾಗದೇ ಗಂಡಂದಿರು ಹೊರ ಊರಿಗೆ ಹೋಗಿದ್ದಾರೆ ಎಂದು ಕೂಡ ನೆರೆ ಹೊರೆಯವರು ಪೊಲೀಸರಲ್ಲಿ ದೂರಿದ್ದಾರೆ.