ಆಟೋ ಚಾಲಕನಿಂದ ನೆರೆಯ ಮನೆಯ ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ
ಮಂಡ್ಯ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ನೆರೆಯ ಮನೆಯ ಯುವಕನೋರ್ವ ಅತ್ಯಾಚಾರ ಎಸಗಿದ್ದು, ಬಾಲಕಿ ಗರ್ಭಿಣಿಯಾಗಿದ್ದರಿಂದಾಗಿ ಈ ವಿಚಾರ ಪೋಷಕರ ಗಮನಕ್ಕೆ ಬಂದಿದ್ದು, ಇದೀಗ ಪೋಷಕರ ದೂರಿನನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಚೆನ್ನಾಪುರ ಗ್ರಾಮದ ಆಟೋ ಚಾಲಕ ಲಕ್ಷ್ಮಣ ಎಂಬಾತ ತನ್ನ ನೆರೆಯ ಮನೆಯ 15 ವರ್ಷ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ನಡೆಸಿದ್ದು, ಆ ಬಳಿಕ, ನಾನು ನಿನ್ನನ್ನು ಮದುವೆಯಾಗುತ್ತೇನೆ. ಯಾರಿಗೂ ಈ ವಿಚಾರ ತಿಳಿಸಬಾರದು, ಯಾರಿಗಾದರೂ ಹೇಳಿದರೆ ಕೊಂದು ಹಾಕುತ್ತೇನೆ ಎಂದೂ ಬಾಲಕಿಗೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಬಾಲಕಿಗೆ ಅನಾರೋಗ್ಯ ಕಾಡಿದ್ದರಿಂದಾಗಿ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ವೇಳೆ ಬಾಲಕಿ 4 ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ಪೋಷಕರು ವಿಚಾರಿಸಿದ ಸಂದರ್ಭದಲ್ಲಿ ನಡೆದ ಘಟನೆಯನ್ನು ಬಾಲಕಿ ವಿವರಿಸಿದ್ದಾಳೆ.
ಘಟನೆ ಬೆಳಕಿಗೆ ಬಂದ ತಕ್ಷಣವೇ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಲಕ್ಷ್ಮಣನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.