ಆಕ್ಸಿಜನ್ ಸಿಲಿಂಡರ್ ನೊಂದಿಗೆ ಆಟೋದಲ್ಲಿ ಆಸ್ಪತ್ರೆಗೆ ಅಲೆದಾಡಿದ ಮಹಿಳೆ
ಕಲಬುರ್ಗಿ: ಯಡಿಯೂರಪ್ಪ ಸರ್ಕಾರ ಚುನಾವಣೆಯಲ್ಲಿ ಮೈಮರೆತಿದ್ದ ನಡುವೆಯೇ ಕೊರೊನಾ ರಾಜ್ಯವನ್ನು ಮುಕ್ಕಿ ಹಾಕಲು ಸಜ್ಜಾಗಿದೆ. ಈ ನಡುವೆ ಬೆಂತಗಳೂರಿನ ಸ್ಥಿತಿ ಊಹಿಸಲು ಸಾಧ್ಯವಿಲ್ಲದಂತಾಗಿದೆ. ಇತ್ತ ಕಲಬುರಗಿ ಜಿಲ್ಲೆಯಲ್ಲಿ ಹಾಸಿಗೆ ಸಿಗದ ಕಾರಣ ಭಾನುವಾರ ಮಹಿಳೆಯೊಬ್ಬರು ಆಟೋದಲ್ಲಿ ಆಕ್ಸಿಜನ್ ಸಿಲಿಂಡರ್‌ನೊಂದಿಗೆ ಆಸ್ಪತ್ರೆಗಳಿಗೆ ಅಲೆದಾಡಿರುವ ಘಟನೆ ನಡೆದಿದೆ.
ಇಲ್ಲಿನ ಬಸವ ನಗರದ 55 ವರ್ಷದ ಮಹಿಳೆ ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥಗೊಂಡ ಕಾರಣ ಅವರನ್ನು ಕುಟುಂಬದವರು ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದರು. ಐಸಿಯು ಹಾಸಿಗೆ ಖಾಲಿ ಇಲ್ಲ ಎಂದು ಹೇಳಿ ಆಸ್ಪತ್ರೆಯವರು ಆಕ್ಸಿಜನ್ ಸಿಲಿಂಡರ್ ಅಳವಡಿಸಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಿದರು.
ಐಸಿಯು ಹಾಸಿಗೆಗಾಗಿ ಆಕ್ಸಿಜನ್ ಸಿಲಿಂಡರ್‌ನೊಂದಿಗೆ ಆಟೊದಲ್ಲಿ ನಾಲ್ಕು ಖಾಸಗಿ ಆಸ್ಪತ್ರೆಗಳು ಮತ್ತು ಇಎಸ್ ಐ ಆಸ್ಪತ್ರೆಗೆ ಅಲೆದು ಜಿಮ್ಸ್ ಆಸ್ಪತ್ರೆಗೆ ಹೋದೆವು. ಆದರೆ, ಎಲ್ಲಿಯೂ ಹಾಸಿಗೆ ಸೌಲಭ್ಯವಾಗಲಿಲ್ಲ. ಮೂರು ಗಂಟೆಯವರೆಗೆ ಆಸ್ಪತ್ರೆ ಹೊರಗಡೆಯೇ ಉಳಿಯಬೇಕಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ಮಧ್ಯಾಹ್ನದ ವೇಳೆಗೆ ಜಿಮ್ಸ್ ಆಸ್ಪತ್ರೆಯವರೇ ಐಸಿಯು ಘಟಕದಲ್ಲಿ ಮತ್ತೊಂದು ಹಾಸಿಗೆ ವ್ಯವಸ್ಥೆ ಮಾಡಿ, ಒಂದೇ ಯಂತ್ರಕ್ಕೆ ಎರಡು ‘ಫ್ಲೋ ಮೀಟರ್’ ಅಳವಡಿಸಿ ಚಿಕಿತ್ಸೆ ನೀಡಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಂಬಾರಾಯ ರುದ್ರವಾಡಿ, ಆಕ್ಸಿಜನ್ ಸಿಲಿಂಡರ್‌ನೊಂದಿಗೆ ಮಹಿಳೆ ಆಸ್ಪತ್ರೆಗೆ ಬಂದಿರುವ ಮಾಹಿತಿ ತಿಳಿಯುತ್ತಿದ್ದಂತೆ ಹಾಸಿಗೆ ಇಲ್ಲದಿದ್ದರೂ ಐಸಿಯುನಲ್ಲಿ ಮತ್ತೊಂದು ಹಾಸಿಗೆ ವ್ಯವಸ್ಥೆ ಮಾಡಿದೆವು. ಕೊರೊನಾ ತಪಾಸಣೆಯನ್ನೂ ಮಾಡಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದರು.
ಮತ್ತೊಂದು ಪ್ರಕರಣದಲ್ಲಿ ಕೋವಿಡ್‌ನಿಂದ ಬಳಲುತ್ತಿರುವ ವೃದ್ಧರೊಬ್ಬರು ಆಟೊದಲ್ಲಿ ವಿವಿಧ ಆಸ್ಪತ್ರೆಗಳಿಗೆ ಅಲೆದಾಡಿದರು. ಆದರೆ, ಎಲ್ಲಿಯೂ ಅವರಿಗೆ ಹಾಸಿಗೆ ದೊರೆಯಲಿಲ್ಲ.