ಅವಕಾಶವಾದಿ ರಾಜಕಾರಣ ಪ್ರಾದೇಶಿಕತೆಗೆ ಕುತ್ತು | ನಾ ದಿವಾಕರ - Mahanayaka
9:17 AM Tuesday 24 - December 2024

ಅವಕಾಶವಾದಿ ರಾಜಕಾರಣ ಪ್ರಾದೇಶಿಕತೆಗೆ ಕುತ್ತು | ನಾ ದಿವಾಕರ

political
13/09/2021

ಭಾರತದಲ್ಲಿ ಪ್ರಾದೇಶಿಕ ರಾಜಕೀಯ ಪಕ್ಷಗಳ ಸುದೀರ್ಘ ಇತಿಹಾಸವೇ ಇದೆ. ವಿಭಿನ್ನ ಕಾರಣಗಳಿಗಾಗಿ ರಾಷ್ಟ್ರ ರಾಜಕಾರಣದ ಪ್ರಾಬಲ್ಯ ಮತ್ತು ನಿಯಂತ್ರಣಗಳ ಹೊರತಾಗಿಯೂ ಕರ್ನಾಟಕವೂ ಸೇರಿದಂತೆ ಬಹುತೇಕ ಎಲ್ಲ ರಾಜ್ಯಗಳಲ್ಲೂ ಪ್ರಾದೇಶಿಕ ಪಕ್ಷಗಳು ತಮ್ಮ ಸುಭದ್ರ ನೆಲೆ ಕಂಡುಕೊಂಡಿವೆ. ಒಂದು ನಿರ್ದಿಷ್ಟ ಭೌಗೋಳಿಕ ವ್ಯಾಪ್ತಿಗೆ ಅನ್ವಯಿಸುವಂತಹ ರಾಜ್ಯ ಹಿತಾಸಕ್ತಿಗಳು, ಅಲ್ಲಿನ ಸ್ಥಳೀಯ ಜನಸಮುದಾಯಗಳ ಹಕ್ಕೊತ್ತಾಯಗಳು,  ಆ ರಾಜ್ಯಗಳಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪ್ರಾಬಲ್ಯ ಸಾಧಿಸಿರುವ ಕೆಲವು ಜಾತಿ ಸಮುದಾಯಗಳು ಮತ್ತು ಬಹುತ್ವ ಭಾರತವನ್ನು ಅಂದಿನಿಂದ ಇಂದಿನವರೆಗೂ ಕಾಡುತ್ತಿರುವ ಅಸ್ಮಿತೆಗಳ ಅಸ್ತಿತ್ವ ಹಾಗೂ ಉಳಿವು ಈ ಪ್ರಾದೇಶಿಕ ರಾಜಕಾರಣಕ್ಕೆ ಮೂಲ ನೆಲೆ ಒದಗಿಸುತ್ತವೆ.

ತಮಿಳುನಾಡು, ಈಶಾನ್ಯ ರಾಜ್ಯಗಳು, ಒಡಿಷಾ, ಪಶ್ಚಿಮ ಬಂಗಾಲ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಈಗಿನ ತೆಲಂಗಾಣ ಈ ರಾಜ್ಯಗಳಲ್ಲಿ ಒಂದು ರಾಜ್ಯದ ಜನತೆಯ ಅಸ್ಮಿತೆಯೇ ಪ್ರಾದೇಶಿಕತೆಯ ದನಿಗೆ ಬಲ ನೀಡಿವೆ. ತಮಿಳುನಾಡಿನಲ್ಲಿ ದ್ರಾವಿಡ ಚಳುವಳಿಯ ಮೂಲಕವೇ ಬೆಳೆದುಬಂದ ಪ್ರಾದೇಶಿಕತೆಯ ಅಸ್ಮಿತೆ ಇಂದು ಯಾವುದೇ ಕಾರಣಕ್ಕೂ ಶಿಥಿಲವಾಗದಷ್ಟು ಗಟ್ಟಿಯಾಗಿ ಬೇರೂರಿದೆ. ಬೇರಾವುದೇ ಪ್ರಾದೇಶಿಕ, ಸ್ಥಳೀಯ ಪಕ್ಷಗಳು ಉದಯಿಸಿದರೂ ಅದು ದ್ರಾವಿಡ ಅಸ್ಮಿತೆಯಿಂದ ಹೊರಬರಲಾಗುವುದಿಲ್ಲ. ಹಾಗಾಗಿಯೇ ಅಲ್ಲಿನ ಅನೇಕ ಪುಡಿ ಪಕ್ಷಗಳು ಮುಖ್ಯವಾಹಿನಿಯ ಬಾಲಂಗೋಚಿಗಳಾಗುತ್ತಿವೆ.

ಪ್ರಾದೇಶಿಕ ಪಕ್ಷದ ಸ್ಥಾಪನೆಗೆ ಕೆಲವು ನಿರ್ದಿಷ್ಟ ಆಯಾಮಗಳೂ ಇರುತ್ತವೆ. ಆ ರಾಜ್ಯದ ಸಾಮಾಜಿಕಾರ್ಥಿಕ ಪರಿಸ್ಥಿತಿ, ಅಲ್ಲಿನ ಸಂಪತ್ತು ಮತ್ತು ಸಂಪನ್ಮೂಲ, ಉತ್ಪಾದನಾ ಸಂಬಂಧಗಳು ಮತ್ತು ಉತ್ಪಾದನೆಯ ಮೂಲಗಳು, ಉತ್ಪಾದನಾ ಮೂಲಗಳ ಒಡೆತನ, ಉತ್ಪಾದಕೀಯ ಶಕ್ತಿಗಳ ಸ್ವಾವಲಂಬನೆ ಮತ್ತು ಇವೆಲ್ಲದರೊಂದಿಗೆ, ರಾಜ್ಯದಲ್ಲಿ ಸಾಮಾಜಿಕ ಮತ್ತು ಆರ್ಥಿಕ ನೆಲೆಯಲ್ಲಿ ಪ್ರಾಬಲ್ಯ ಪಡೆದಿರುವಂತಹ ನಿರ್ದಿಷ್ಟ ಜಾತಿ ಸಮುದಾಯಗಳು ಒಂದು ಪ್ರಾದೇಶಿಕ ಪಕ್ಷದ ಸ್ಥಾಪನೆಗೆ ಭೂಮಿಕೆಯನ್ನು ನಿರ್ಧರಿಸುತ್ತವೆ. ಈ ವಿಭಿನ್ನ ಆಯಾಮಗಳಿಂದ ಹೊರತಾಗಿ ಕೇವಲ ಅಧಿಕಾರ ರಾಜಕಾರಣದ ದೃಷ್ಟಿಯಿಂದ ಸ್ಥಾಪನೆಯಾಗುವ ಪ್ರಾದೇಶಿಕ ಪಕ್ಷಗಳು ಕಾಲಕ್ರಮೇಣ ರಾಜಕೀಯ ನೇಪಥ್ಯಕ್ಕೆ ಸರಿಯುತ್ತವೆ. ಕೇವಲ ಅಸ್ತಿತ್ವಕ್ಕಾಗಿ ಹೋರಾಡುವ ಸ್ಥಳೀಯ ರಾಜಕೀಯ ಪಕ್ಷಗಳಾಗಿ ಕೆಲವೊಮ್ಮೆ ಚುನಾವಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.

ಮುಖ್ಯವಾಹಿನಿಯ ರಾಷ್ಟ್ರೀಯ ಪಕ್ಷದಿಂದ ಬೇರ್ಪಟ್ಟ ಅನೇಕ ಪ್ರಾದೇಶಿಕ ಪಕ್ಷಗಳು ಇಂದು ಕೇವಲ ನಾಮಕಾವಸ್ಥೆ ಪಕ್ಷಗಳಾಗಿವೆ. ತುರ್ತುಪರಿಸ್ಥಿತಿಯ ನಂತರದಲ್ಲಿ ಏರ್ಪಟ್ಟ ವಿಶಿಷ್ಟ ಸಂದರ್ಭಗಳಲ್ಲಿ ಸ್ಥಾಪನೆಯಾದ ಹಲವು ಪಕ್ಷಗಳಲ್ಲಿ ಕೆಲವು ಮಾತ್ರ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಉತ್ತರ ಭಾರತದಲ್ಲಿ ಇಂದಿಗೂ ತಮ್ಮ ರಾಜಕೀಯ ಪ್ರಾಬಲ್ಯ ಉಳಿಸಿಕೊಂಡಿರುವ ಮುಲಾಯಂಸಿಂಗ್ ಅವರ ಸಮಾಜವಾದಿ ಪಕ್ಷ, ಲಲ್ಲೂ ಯಾದವ್ ಅವರ ಆರ್‍ಜೆಡಿ, ಒಡಿಷಾದ ಬಿಜು ಜನತಾದಳ, ಪಶ್ಚಿಮ ಬಂಗಾಲದ ತೃಣಮೂಲ ಕಾಂಗ್ರೆಸ್, ದ್ರಾವಿಡ ಚಳುವಳಿಯಂತೆಯೇ ಭಾಷಿಕ ಮತ್ತು ಸಾಮುದಾಯಿಕ ಅಸ್ಮಿತೆಯ ಮೇಲೆ ಸ್ಥಾಪನೆಯಾದ ಶಿವಸೇನೆ ಇಂದು ರಾಷ್ಟ್ರ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮಟ್ಟಿಗೆ ಬೆಳೆದಿವೆ. ಈ ಎಲ್ಲ ರಾಜಕೀಯ ಪಕ್ಷಗಳಿಗೂ ಒಂದು ನಿರ್ದಿಷ್ಟ ತತ್ವ ಸಿದ್ಧಾಂತಗಳಿವೆ, ತಮ್ಮ ರಾಜ್ಯದ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಬಂಡವಾಳ ಹೂಡಿಕೆ, ಉತ್ಪಾದನಾ ಸಂಬಂಧಗಳು ಮತ್ತು ಸಂಪನ್ಮೂಲಗಳನ್ನು ಹೊಂದಿಸುವ ನಿರ್ದಿಷ್ಟ ಮಾರ್ಗೋಪಾಯಗಳಿವೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಇಂದು ಇಂತಹ ಒಂದು ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಎಂದಿಗಿಂತಲೂ ಹೆಚ್ಚಾಗಿದೆ. 1980ರ ದಶಕದಲ್ಲಿ, ತುರ್ತುಪರಿಸ್ಥಿತಿಯ ನಂತರದಲ್ಲಿ ರೂಪುಗೊಂಡ ಜನತಾಪಕ್ಷ ಹಲವು ವಿಘಟನೆಗಳ ನಂತರ ಆಯಾರಾಂ ಗಯಾರಾಂ ಸಂಸ್ಕೃತಿಯ ವಿಭಿನ್ನ ಮಜಲುಗಳನ್ನೂ ಅನುಭವಿಸಿ ಈ ಜಾತ್ಯತೀತ ಜನತಾದಳದ ರೂಪದಲ್ಲಿ ಒಂದು ಪಕ್ಷ ಉಳಿದುಕೊಂಡಿದೆ. ಇದು ದೇವೇಗೌಡ ನಾಯಕತ್ವದ ಜಾತ್ಯತೀತ ಜನತಾದಳ.. ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ತನ್ನ ಪ್ರಭಾವವನ್ನು ಬೆಳೆಸಿಕೊಂಡಿರುವ ಜೆಡಿಎಸ್ ಹೆಸರಿನಲ್ಲಿ ಜಾತ್ಯತೀತತೆಯನ್ನು ಬಿಂಬಿಸಿದರೂ, ಹಲವಾರು ಸಂದರ್ಭಗಳಲ್ಲಿ ಬಲಪಂಥೀಯ ರಾಜಕಾರಣಕ್ಕೆ ಹಸಿರುಗಂಬಳಿ ಹಾಸಿ ಕರ್ನಾಟಕದಲ್ಲಿ ಬಿಜೆಪಿ ನೆಲೆಯೂರಲು ಸಾಕಷ್ಟು ಅವಕಾಶ ಮಾಡಿಕೊಟ್ಟ ಆರೋಪವನ್ನೂ ಎದುರಿಸುತ್ತಿದೆ.

ಒಂದು ನಿರ್ದಿಷ್ಟ ಆರ್ಥಿಕ ನೀತಿಯನ್ನಾಗಲೀ, ಸೈದ್ಧಾಂತಿಕ ಸ್ಪಷ್ಟತೆಯನ್ನಾಗಲೀ ಹೊಂದಿರದ ಜೆಡಿಎಸ್ ಮೂಲತಃ ಒಂದು ಕುಟುಂಬದಿಂದ ನಿರ್ವಹಿಸುವ ಪಕ್ಷವಾಗಿದ್ದು, ಇತರ ಎಲ್ಲ ಪಕ್ಷಗಳಂತೆಯೇ ಅಂತರಿಕ ಪ್ರಜಾಪ್ರಭುತ್ವದ ಛಾಯೆಯೂ ಇಲ್ಲದೆ ತನ್ನ ಚುನಾವಣೆ ಕೇಂದ್ರಿತ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಕರ್ನಾಟಕದ ಇಂದಿನ ಪರಿಸ್ಥಿತಿಯಲ್ಲಿ ನವ ಉದಾರವಾದ ಮತ್ತು ಕೋಮುವಾದಿ ಫ್ಯಾಸಿಸಂ ವ್ಯಾಪಕವಾಗಿ ತನ್ನ ಬಾಹುಗಳನ್ನು ಚಾಚುತ್ತಿದ್ದು, ಶಿಕ್ಷಣದ ಕೇಸರೀಕರಣವನ್ನೂ ಒಳಗೊಂಡಂತೆ ಹಿಂದುತ್ವ ರಾಜಕಾರಣದ ಪ್ರಯೋಗಶಾಲೆಯಾಗಿ ಕರ್ನಾಟಕವನ್ನು ಸಿದ್ಧಪಡಿಸುತ್ತಿರುವ ಸಂದರ್ಭದಲ್ಲಿ ಜೆಡಿಎಸ್ ಕರ್ನಾಟಕದ ಪ್ರಾದೇಶಿಕ ಅಸ್ಮಿತೆಯನ್ನು ಪ್ರತಿನಿಧಿಸುವ ಒಂದು ಪಕ್ಷವಾಗಿ ರೂಪುಗೊಳ್ಳಬೇಕಿತ್ತು.

ಆದರೆ ಚುನಾವಣಾ ರಾಜಕಾರಣದಿಂದಾಚೆಗೆ ಯಾವುದೇ ರಾಜಕೀಯ ಕಾರ್ಯಯೋಜನೆಯನ್ನಾಗಲೀ, ಕಾರ್ಯಸೂಚಿಯನ್ನಾಗಲೀ ಹೊಂದಿರದ ಜೆಡಿಎಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಅಧಿಕಾರ ರಾಜಕಾರಣದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸದಾ ಸಿದ್ಧವಾಗಿರುವ ಒಂದು ಪ್ರಾದೇಶಿಕ ಪಕ್ಷವಾಗಿ ರೂಪುಗೊಂಡಿದೆ. ಇಂದು ರಾಜ್ಯ ಎದುರಿಸುತ್ತಿರುವ ನವ ಉದಾರವಾದಿ ಮಾರುಕಟ್ಟೆ ಆರ್ಥಿಕ ನೀತಿಗಳ ಭೀಕರ ಪರಿಣಾಮಗಳು, ಗ್ರಾಮೀಣ ನಿರುದ್ಯೋಗ, ಕೃಷಿ ಕ್ಷೇತ್ರದಲ್ಲಿ ನೂತನ ಕೃಷಿ ಕಾಯ್ದೆಗಳು ಉಂಟುಮಾಡಿರುವ ವ್ಯತ್ಯಯಗಳು, ರಾಜ್ಯ ಸರ್ಕಾರವೇ ಜಾರಿಗೊಳಿಸಿರುವ ಭೂ ಸ್ವಾಧೀನ ಕಾಯ್ದೆಯಿಂದ ಉಂಟಾಗಬಹುದಾದ ಅಪಾಯಗಳು ಮತ್ತು ಇಂದಿಗೂ ಒಂದು ರಾಜಕೀಯ ಸ್ವರೂಪ ಪಡೆಯಲಾಗದ ಕನ್ನಡ ರಾಷ್ಟ್ರೀಯತೆ ಯಾವುದೇ ಪ್ರಾದೇಶಿಕ ಪಕ್ಷದ ಮುಖ್ಯ ಭೂಮಿಕೆಯಾಗಿರಬೇಕು.

ಆದರೆ ಜೆಡಿಎಸ್ ಈ ಯಾವುದೇ ಆಡಳಿತ ನೀತಿಗಳ ವಿರುದ್ಧ ಹೋರಾಟಗಳನ್ನು ರೂಪಿಸುತ್ತಿಲ್ಲ. ಬದಲಾಗಿ ಭೂ ಸ್ವಾಧೀನ ಕಾಯ್ದೆಯ ತಿದ್ದುಪಡಿಗೆ ತನ್ನ ಬೆಂಬಲ ವ್ಯಕ್ತಪಡಿಸಿದೆ. ಕರಾಳ ಕೃಷಿ ಕಾಯ್ದೆಗಳ ವಿರುದ್ಧ ಇಡೀ ರಾಜ್ಯದ ರೈತ ಸಮುದಾಯ ಹೋರಾಡುತ್ತಿದ್ದರೂ, ಜೆಡಿಎಸ್ ಒಂದು ಆಂದೋಲನವನ್ನು ರೂಪಿಸಿಲ್ಲ. ಭಾಷಾ ಮಾಧ್ಯಮದ ವಿಚಾರದಲ್ಲಿ, ಹಿಂದಿ ಹೇರಿಕೆಯನ್ನೂ ಒಳಗೊಂಡಂತೆ, ಒಕ್ಕೂಟ ಸರ್ಕಾರ ನೂತನ ಶಿಕ್ಷಣ ನೀತಿ, ಜಿಎಸ್‍ಟಿ ಪಾಲುದಾರಿಕೆ, ನೈಸರ್ಗಿಕ ವಿಕೋಪದ ಸಂದರ್ಭಗಳಲ್ಲಿ, ಪ್ರವಾಹ, ಅತಿವೃಷ್ಟಿ , ಭೂ ಕುಸಿತ ಮುಂತಾದ ಅವಘಡಗಳ ಹಿನ್ನೆಲೆಯಲ್ಲಿ ಕೇಂದ್ರದಿಂದ ಬರಬೇಕಾದ ಹಣಕಾಸು ನೆರವು ಮತ್ತು ಅನುದಾನ ಈ ಯಾವುದೇ ವಿಚಾರಗಳಲ್ಲೂ ಒಂದು ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ರಾಜ್ಯದ ಜನತೆಯ ದನಿಗೆ ದನಿಯಾಗಿ ನಿಂತಿಲ್ಲ ಎನ್ನುವುದು ವಾಸ್ತವ.

ಇಂದು ಕರ್ನಾಟಕ ಕೋಮುವಾದಿ ಫ್ಯಾಸಿಸಂ ಮತ್ತು ಕಾರ್ಪೋರೇಟ್ ಆರ್ಥಿಕ ನೀತಿಗಳ ಎರಡು ಅಲಗಿನ ಕತ್ತಿಯ ಮೇಲೆ ನಡೆಯುತ್ತಿದೆ. ಕೋವಿದ್ ಸಂಕ್ಷಷ್ಟದ ಹಿನ್ನೆಲೆಯಲ್ಲಿ 60 ಲಕ್ಷಕ್ಕೂ ಹೆಚ್ಚು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಅಧಿಕೃತ ವರದಿಗಳೇ ಹೇಳುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿದ್ದು, ಕೃಷಿ ಭೂಮಿಯನ್ನು ಕಳೆದುಕೊಳ್ಳುತ್ತಿರುವ ರೈತರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದು ಹೆಚ್ಚಾಗುತ್ತಿದೆ. ರೈತರ ಆತ್ಮಹತ್ಯೆ ಪ್ರಕರಣಗಳು, ಮಹಿಳೆಯರ ಮೇಲಿನ ಅತ್ಯಾಚಾರಗಳು, ದಲಿತರ ಮೇಲಿನ ದೌರ್ಜನ್ಯಗಳು, ಅಲ್ಪಸಂಖ್ಯಾತ ಸಮುದಾಯದ ಮೇಲಿನ ಹಲ್ಲೆ ಆಕ್ರಮಣಗಳು ಹೆಚ್ಚಾಗುತ್ತಲೇ ಇವೆ. ಇತ್ತೀಚಿನ ಉಡುಪಿ ಕ್ರೈಸ್ತ ಮಂದಿರದ ಮೇಲಿನ ಧಾಳಿ ಒಂದು ನಿದರ್ಶನ. ಈ ಯಾವುದೇ ಬೆಳವಣಿಗೆಗಳ ಬಗ್ಗೆ ಚಕಾರವೆತ್ತದ ಒಂದು ಪ್ರಾದೇಶಿಕ ಪಕ್ಷವನ್ನು ಹೇಗೆ ಬಣ್ಣಿಸಲು ಸಾಧ್ಯ ? ಇತ್ತ ತನ್ನ ಪ್ರಾದೇಶಿಕ ಅಸ್ಮಿತೆಯನ್ನೂ ಉಳಿಸಿಕೊಳ್ಳದೆ, ಅತ್ತ ರಾಜಕೀಯ ಪ್ರಾಬಲ್ಯವನ್ನೂ ವಿಸ್ತರಿಸಿಕೊಳ್ಳದೆ ಜೆಡಿಎಸ್ ಒಂದು ಕಿಂಗ್ ಮೇಕರ್ ಪಕ್ಷವಾಗಿ, ಚುನಾವಣಾ ರಾಜಕಾರಣದಲ್ಲಿ ನಿರತವಾಗಿರುವುದು ಸ್ಪಷ್ಟ.

ಕಲಬುರ್ಗಿ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಅಧಿಕಾರ ವಹಿಸಿಕೊಳ್ಳಲಿದೆ. ಆದರೆ ಮೇಯರ್ ಚುನಾವಣೆಗಳಲ್ಲಿ ಜೆಡಿಎಸ್ ಬಿಜೆಪಿಯ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಘೋಷಿಸಿರುವುದು ಅಚ್ಚರಿ ಮೂಡಿಸಿದೆ. ಜೆಡಿಎಸ್ ತಟಸ್ಥವಾಗಿದ್ದರೂ ಕಾಂಗ್ರೆಸ್ ಮೇಯರ್ ಸ್ಥಾನವನ್ನು ಗಳಿಸಲು ಸಾಧ್ಯವಾಗುತ್ತದೆ. ಆದರೆ ಜೆಡಿಎಸ್ ಮೈಸೂರು ಮಹಾನಗರ ಪಾಲಿಕೆಯಲ್ಲಿ ಮಾಡಿದಂತೆಯೇ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಮುಂದಾಗಿದೆ. ಈ ರೀತಿಯ ಅವಕಾಶವಾದಿ ಅಧಿಕಾರ ರಾಜಕಾರಣದಿಂದಲೇ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸರ್ಕಾರ ಕರ್ನಾಟಕದ ಪ್ರಪ್ರಥಮ ಬಿಜೆಪಿ ಸರ್ಕಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಯಡಿಯೂರಪ್ಪ ಪದಚ್ಯುತಿಯ ಸಂದರ್ಭದಲ್ಲೂ ಬಿಜೆಪಿಯಲ್ಲಿ ಒಮ್ಮತ ಮೂಡದೆ ಇದ್ದರೆ, ಯಡಿಯೂರಪ್ಪ ಬೆಂಬಲಿತ ಬಿಜೆಪಿಗೆ ಬೆಂಬಲ ನೀಡಲು ಜೆಡಿಎಸ್ ಸಿದ್ಧವಾಗಿತ್ತು.

ಇಲ್ಲಿ ರಾಜಕೀಯ ವೈಷಮ್ಯ ಮತ್ತು ವೈರುಧ್ಯಗಳಿಗಿಂತಲೂ ಮುಖ್ಯವಾಗಿ ನೋಡಬೇಕಿರುವುದು, ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕಾರ್ಥಿಕ, ಸಾಂಸ್ಕøತಿಕ ಸ್ಥಿತ್ಯಂತರಗಳನ್ನು. ಕರ್ನಾಟಕದ ಕೃಷಿ ಸಮುದಾಯಕ್ಕೆ, ರೈತರಿಗೆ ಮಾರಕವಾಗಬಹುದಾದ ಭೂ ಸ್ವಾಧೀನ ಕಾಯ್ದೆಯ ತಿದ್ದುಪಡಿಗಳನ್ನು ಬೆಂಬಲಿಸಿದ ಸಂದರ್ಭದಲ್ಲೂ ಜೆಡಿಎಸ್ ಬಿಜೆಪಿಯ ಪರವಾಗಿಯೇ ವಕಾಲತ್ತು ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು. 2023ರ ಚುನಾವಣೆಗಳಲ್ಲಿ ಯಾವುದೇ ಮೈತ್ರಿಕೂಟಕ್ಕೆ ಮುಂದಾಗದೆ ಸ್ವತಂತ್ರವಾಗಿಯೇ ಸ್ಪರ್ಧಿಸುವುದಾಗಿ ಹೇಳುತ್ತಿದ್ದರೂ, ಜೆಡಿಎಸ್‍ನ ರಾಜಕೀಯ ಪ್ರಭಾವಿ ವಲಯ ಬಹಳ ಸೀಮಿತವಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಹಾಗಾಗಿ ತನ್ನ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹಾಗೂ ಸಾಧ್ಯವಾದರೆ ಅಧಿಕಾರದಲ್ಲಿ ಅವಕಾಶ ಪಡೆಯಲು ಯಾವುದೇ ರೀತಿಯ ಹೊಂದಾಣಿಕೆಗೆ ಜೆಡಿಎಸ್ ಸಿದ್ಧವಾಗಿರುತ್ತದೆ.

ಭಾರತದ ಬಹುತೇಕ ಪ್ರಾದೇಶಿಕ ಪಕ್ಷಗಳಲ್ಲಿ ಈ ನ್ಯೂನತೆ ಇರುವುದಾದರೂ, ಮೇಲೆ ಉಲ್ಲೇಖಿಸಲಾದ ಉಳಿದ ಪ್ರಾದೇಶಿಕ ಪಕ್ಷಗಳಲ್ಲಿನ ಸೈದ್ಧಾಂತಿಕ ಸ್ಪಷ್ಟತೆ ಜೆಡಿಎಸ್ ಪಕ್ಷದಲ್ಲಿ ಇಲ್ಲದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈ ಅವಕಾಶವಾದಿ ರಾಜಕಾರಣದಿಂದಲೇ ಇಂದು ಮೈಸೂರಿನಲ್ಲಿ ಬಿಜೆಪಿ ಮೇಯರ್ ಪದವಿಯನ್ನು ಹೊಂದಿದೆ, ಕಲಬುರ್ಗಿಯನ್ನು ಆಕ್ರಮಿಸಲಿದೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮೆರೆದಿದ್ದಾರೆ ಎನ್ನುವುದನ್ನೂ ಈ ಸಂದರ್ಭದಲ್ಲಿ ಗಮನಿಸಬೇಕಿದೆ. ಒಂದು ಪ್ರಾದೇಶಿಕ ರಾಜಕೀಯ ಪಕ್ಷಕ್ಕೆ ಇರಬೇಕಾದ ಸೈದ್ಧಾಂತಿಕ ಸ್ಪಷ್ಟತೆ, ಪ್ರಾಂತೀಯ ನಿಲುವುಗಳು, ತಾತ್ವಿಕ ಬದ್ಧತೆ ಮತ್ತು ರಾಜ್ಯದ ಜನತೆಯ ಹಿತಾಸಕ್ತಿಗಳ ಬಗ್ಗೆ ಕಾಳಜಿ ಕರ್ನಾಟಕದ ಪ್ರಮುಖ ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾ ದಳದಲ್ಲಿ ಇಲ್ಲದಿರುವುದು, ಪರ್ಯಾಯ ರಾಜಕಾರಣದ ಪ್ರಯತ್ನಗಳಿಗೇ ಅಡ್ಡಿಯಾಗುತ್ತದೆ.

ಒಕ್ಕೂಟ ಸರ್ಕಾರ, ಬಿಜೆಪಿ ಆಳ್ವಿಕೆಯಲ್ಲಿ ತನ್ನ ನಿರಂಕುಶತ್ವದ ಧೋರಣೆಯನ್ನು ನೇರವಾಗಿಯೇ ಪ್ರದರ್ಶಿಸುತ್ತಿರುವ ಸಂದರ್ಭದಲ್ಲಿ, ದೇಶದ ಒಕ್ಕೂಟ ವ್ಯವಸ್ಥೆಗೇ ಸಂಚಕಾರ ಒದಗಿಬಂದಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಈ ಸಂದರ್ಭದಲ್ಲಿ ಒಂದು ಪ್ರಬಲ ಪ್ರಾದೇಶಿಕ ರಾಜಕೀಯ ಪಕ್ಷ, ಸ್ಪಷ್ಟ ಸೈದ್ಧಾಂತಿಕ ನಿಲುವುಗಳಿಂದ, ರಾಜ್ಯದ ಜನತೆಯ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ವಿಫಲವಾಗಿದೆ ಎನ್ನದೆ ವಿಧಿಯಿಲ್ಲ. ಜೆಡಿಎಸ್ ಪಕ್ಷದ ಅವಕಾಶವಾದಿ ರಾಜಕಾರಣದ ಲಾಭ ಪಡೆಯುತ್ತಿರುವ ಬಿಜೆಪಿ ರಾಜ್ಯದಲ್ಲಿ ಭದ್ರವಾಗಿ ನೆಲೆಯೂರುತ್ತಿದೆ. ಹಾಗಾಗಿ ಇಂದು ಕರ್ನಾಟಕಕ್ಕೆ ಒಕ್ಕೂಟ ವ್ಯವಸ್ಥೆಯ ಸಂರಕ್ಷಣೆಗೆ ಬದ್ಧವಾದ ಒಂದು ಪರ್ಯಾಯ ರಾಜಕೀಯ ಶಕ್ತಿಯ ಅನಿವಾರ್ಯತೆ ಎಂದಿಗಿಂತಲೂ ಇಂದು ಹೆಚ್ಚಾಗಿ ಕಾಣುತ್ತಿದೆ.

na divakara

ನಾ ದಿವಾಕರ

ಇತ್ತೀಚಿನ ಸುದ್ದಿ