ಬಾಬಾ ರಾಮ್ ದೇವ್ ಪತಂಜಲಿ ಫುಡ್ಸ್ ನಿಂದ ಫಲ್ಗುಣಿಗೆ ಮಾರಕ: ಸ್ಥಳ ಪರಿಶೀಲನೆ
ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಬಾಬಾ ರಾಮ್ ದೇವ್ ಮಾಲಕತ್ವದ ಪತಂಜಲಿ ಫುಡ್ಸ್ (ರುಚಿ ಸೋಯಾ) ತುಳುನಾಡಿನ ಜೀವನದಿ ಫಲ್ಗುಣಿಗೆ ಮಾರಕ ಕೈಗಾರಿಕಾ ತ್ಯಾಜ್ಯ ಹರಿಸುವ ಕೊಳವೆಗಳು ಪತ್ತೆಯಾದ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ರೈತ, ದಲಿತ, ಕಾರ್ಮಿಕ, ಜನಪರ ಸಂಘಟನೆಗಳು ಹಾಗೂ ಎಡಪಕ್ಷಗಳ ಜಂಟಿ ನಿಯೋಗ ಇಂದು ಭೇಟಿ ಮಾಡಿ ಆಗಿರುವ ಹಾನಿಯನ್ನು ವೀಕ್ಷಿಸಿತು.
ನಿಯೋಗವು ಮಾಲಿನ್ಯ ಪತ್ತೆಯಾದ ಪತಂಜಲಿ ಫುಡ್ಸ್ ಮುಂಭಾಗ ತಲುಪಿದಾಗ ಕಂಪೆನಿಯ ಕಾರ್ಮಿಕರು ಜೆಸಿಬಿ ಹಾಗೂ ಟಿಪ್ಪರ್ ಬಳಸಿ ತೋಕೂರು ನಾಲದಲ್ಲಿ ಹರಿಯದೆ ಶೇಖರಣೆ ಗೊಂಡಿರುವ, ದಶಕಗಳಿಂದ ಮಣ್ಣಿನ ಆಳಕ್ಕೆ ಇಳಿದು ಜಿಡ್ಡು ಗಟ್ಟಿರುವ ತ್ಯಾಜ್ಯವನ್ನು ತೆರವುಗೊಳಿಸುವ ಕೆಲಸದಲ್ಲಿ ತೊಡಗಿದ್ದರು. ಸತತ ಆರು ದಿನಗಳಿಂದ ತೆರವು ಕಾರ್ಯಾಚರಣೆ ನಡೆಯುತ್ತಿದ್ದರೂ ಮಾಲಿನ್ಯ ಕಣ್ಣಿಗೆ ರಾಚುವಂತೆ ಎದ್ದು ಕಾಣುತ್ತಿತ್ತು.
ದೊಡ್ಡ ನಿಯೋಗವನ್ನು ಕಂಡು ವಿಚಲಿತರಾದ ಕಂಪೆನಿಯ ಅಧಿಕಾರಿಗಳು ಮುಖಂಡರೊಂದಿಗೆ ಮಾತಾಡಿ ತಿಪ್ಪೆ ಸಾರಿಸಲು ಯತ್ನಿಸಿದರು. ತಿಂಗಳ ಹಿಂದೆ ಅಡುಗೆ ತೈಲದ ಮೂಲ ದ್ರವ್ಯಹೊಂದಿದ್ದ ಟ್ಯಾಂಕರ್ ಒಂದು ಕಂಪೆನಿಯ ಒಳಗಡೆ ಮಗುಚಿ ಬಿದ್ದು 30 ಟನ್ ದ್ರವ್ಯ ತೋಕೂರು ಹಳ್ಳಕ್ಕೆ ಹರಿದಿದೆ ಎಂಬುದು ಕಂಪೆನಿಯ ಸಮಜಾಯಿಷಿ. ಒಂದು ಟ್ಯಾಂಕರ್ ಮಗುಚಿ ಬಿದ್ದರೆ, ಆರು ದಿನಗಳ ಕಾಲ ಟಿಪ್ಪರ್, ಟ್ಯಾಂಕರ್, ಜೆಸಿಬಿ ಬಳಸಿ ಹಗಲು ರಾತ್ರಿ ತೆರವುಗೊಳಿಸುತ್ತಿದ್ದರೂ ಕಾರ್ಯಾಚರಣೆ ಯಾಕೆ ಪೂರ್ಣ ಗೊಳ್ಳುತ್ತಿಲ್ಲ, ತಿಂಗಳ ಹಿಂದೆ ಟ್ಯಾಂಕರ್ ಮಗುಚಿ ತೋಕೂರು ಹಳ್ಳಕ್ಕೆ ಹರಿದಿದ್ದರೂ ನಾಲ್ಕು ವಾರ ತೈಲ ತೆರವಿಗೆ ಕಾರ್ಯಾಚರಣೆ ನಡೆಸದಿರುವುದು ಯಾಕೆ ? ಸಮಿತಿ ದೂರು ಸಲ್ಲಿಸಿ, ಪರಿಸರ ಅಧಿಕಾರಿಗಳು ಮಹಜರು ನಡೆಸಿದ ನಂತರ (ಈಗ ಆರು ದಿನಗಳಿಂದ) ತೆರವುಗೊಳಿಸಲು ಕಾರಣ ಏನು ? ಕೈಗಾರಿಕಾ ತ್ಯಾಜ್ಯ ಹರಿಸುವ ಕುರಿತು ವರ್ಷಗಳಿಂದ ಪ್ರತಿಭಟಿಸುತ್ತಿದ್ದೇವೆ, ಮಾಲಿನ್ಯ ಪತ್ತೆಯಾದ ಸ್ಥಳದಲ್ಲಿಯೂ ತ್ಯಾಜ್ಯ ನೆಲದ ಆಳಕ್ಕೆ ಇಳಿದಿದೆ, ವೈಟ್ ಸಿಮೆಂಟ್ ರೀತಿ ಗಟ್ಟಿಯಾಗಿ ಪರಿವರ್ತನೆ ಹೊಂದಿದೆ, ಟ್ಯಾಂಕರ್ ಮಗುಚಿರುವುದಾದರೆ ಇದು ಹೇಗೆ ಸಾಧ್ಯ ? ಎಂಬ ಪ್ರಶ್ನೆಗಳಿಗೆ ಕಂಪೆನಿಯ ಅಧಿಕಾರಿಗಳಲ್ಲಿ ಉತ್ತರವಿರಲಿಲ್ಲ. ಸ್ಥಳೀಯರಿಗೆ ಉದ್ಯೋಗ ನೀಡದಿರುವ ಕುರಿತು ಪ್ರಶ್ನಿಸಿದಾಗಲೂ ಹಾರಿಕೆಯ ಉತ್ತರ ಮಾತ್ರ ಸಿಕ್ಕಿತು.
ಅಲ್ಲಿಂದ ನಿಯೋಗ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ರವಿ ಅವರನ್ನು ಭೇಟಿ ಮಾಡಿತು. ಅಧಿಕಾರಿ ರವಿ, “ಪರಿಸರ ನಿಯಮಗಳ ಗಂಭೀರ ಉಲ್ಲಂಘನೆಗಾಗಿ ಪತಂಜಲಿ ಫುಡ್ಸ್ ಮುಚ್ಚಲು ಅನುಮತಿ ನೀಡುವಂತೆ ಈಗಾಗಲೆ ಮಾಲಿನ್ಯ ನಿಯಂತ್ರಣ ಮಂಡಳಿಯ ರಾಜ್ಯ ಅಧಿಕಾರಿಗೆ ಪತ್ರ ಬರೆಯಲಾಗಿದೆ, ಕ್ರಿಮಿನಲ್ ಮೊಕದ್ದಮೆ ಹೂಡಲೂ ಅನುಮತಿ ಕೇಳಲಾಗಿದೆ. ಮೇಲ್ಗಡೆಯ ಆದೇಶವನ್ನು ಕಾಯುತ್ತಿದ್ದೇವೆ” ಎಂದು ತಿಳಿಸಿದರು.
ತೋಕೂರು ಹಳ್ಳದಲ್ಲಿ ಶೇಖರಣೆ ಗೊಂಡಿರುವ ತ್ಯಾಜ್ಯವನ್ನು ತೆರುವುಗೊಳಿಸಲು ಕಂಪೆನಿಗೆ ಅವಕಾಶ ನೀಡಿರುವುದು ಯಾಕೆ ? ಸಂಗ್ರಹಿಸಿ ಕಂಪೆನಿಯ ಒಳಭಾಗಕ್ಕೆ ಕೊಂಡೊಯ್ದಿರುವ ತ್ಯಾಜ್ಯವನ್ನು ಕಂಪೆನಿ ಏನು ಮಾಡುತ್ತದೆ ? ಇದರಿಂದ ಸಾಕ್ಷಿ ನಾಶ ಆಗುವುದಿಲ್ಲವೇ ? ಎಂಬ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಗಲಿಲ್ಲ. ಕಂಪೆನಿಯ ಒಳಭಾಗ ತೆರಳಿ ಎಲ್ಲವನ್ನೂ ದಾಖಲಿಸಿಕೊಳ್ಳುವುದಾಗಿ ಸಮಾಧಾನಿಸಲು ಯತ್ನಿಸಿದರು.
ಈ ನಿಯೋಗದಲ್ಲಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ರಾಜ್ಯ ರೈತ ಸಂಘದ ಸನ್ನಿ ಡಿ ಸೋಜ, ಆದಿತ್ಯ ಕಲ್ಲಾಜೆ, ಪ್ರಾಂತ ರೈತ ಸಂಘದ ನಾಯಕ ಕೃಷ್ಣಪ್ಪ ಸಾಲ್ಯಾನ್, ದಲಿತ ಸಂಘರ್ಷ ಸಮಿತಿಯ ಎಂ ದೇವದಾಸ್, ರಘು ಎಕ್ಕಾರು, ಕಾರ್ಮಿಕ ಸಂಘಟನೆ ಸಿಐಟಿಯು ನ ಸುನಿಲ್ ಕುಮಾರ್ ಬಜಾಲ್, ಎಐಟಿಯುಸಿ ಕರುಣಾಕರ ಮಾರಿಪಳ್ಳ, ತಿಮ್ಮಪ್ಪ ಕಾವೂರು, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಶೇಖರ ಬಂಟ್ವಾಳ್, ಡಿವೈಎಫ್ಐ ಜಿಲ್ಲಾ ನಾಯಕರುಗಳಾದ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಶ್ರೀನಾಥ್ ಕುಲಾಲ್, ಆಶಾ ಬೋಳೂರು, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಜೋಕಟ್ಟೆ ಗ್ರಾಪಂ ಸದಸ್ಯರಾದ ಅಬೂಬಕ್ಕರ್ ಬಾವಾ, ಕೆವಿನ್ ಫೆರಾವೊ, ಪ್ರೆಸಿಲ್ಲಾ ಫೆರಾವೊ, ಪಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘದ ತಯ್ಯುಬ್ ಬೆಂಗ್ರೆ, ಸಾಮಾಜಿಕ ಕಾರ್ಯಕರ್ತರಾದ ಅಸುಂತಾ ಡಿ ಸೋಜ, ಪ್ರಮೀಳಾ ದೇವಾಡಿಗ, ಪ್ರಮೀಳಾ ಶಕ್ತಿನಗರ, ಸಿಲ್ವಿಯಾ, ಇಕ್ಬಾಲ್ ಜೋಕಟ್ಟೆ, ನಜೀರ್ ಜೋಕಟ್ಟೆ, ಹನೀಫ್, ಮುನಾಝ್ ಮತ್ತಿತರರು ಭಾಗಿಗಳಾಗಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw