15 ದಿನ ಲಾಕ್ ಡೌನ್ ಮಾಡಿ, ಬಡ ಕುಟುಂಬಗಳಿಗೆ  5 ಸಾವಿರ ಧನಸಹಾಯ ನೀಡಿ | ಸಿಎಂಗೆ ಎನ್.ಮಹೇಶ್ ಪತ್ರ - Mahanayaka
6:04 AM Thursday 12 - December 2024

15 ದಿನ ಲಾಕ್ ಡೌನ್ ಮಾಡಿ, ಬಡ ಕುಟುಂಬಗಳಿಗೆ  5 ಸಾವಿರ ಧನಸಹಾಯ ನೀಡಿ | ಸಿಎಂಗೆ ಎನ್.ಮಹೇಶ್ ಪತ್ರ

n mahesh
07/05/2021

ಕೊಳ್ಳೇಗಾಲ: ಕೊವಿಡ್ 19  ಎರಡನೇ ಅಲೆ ನಿಯಂತ್ರಿಸಲು ಸರ್ಕಾರ ಸಾಕಷ್ಟು ತುರ್ತು ಕ್ರಮಗಳನ್ನು ಕೈಗೊಂಡರೂ,  ಕೊರೊನಾ ವಿಪರೀತ ವ್ಯಾಪಿಸಿದ್ದು, ವೈದ್ಯಕೀಯ ನಿಯಂತ್ರಣಕ್ಕೆ ಸಿಗದಿರುವ ಪರಿಸ್ಥಿತಿಗೆ ತಲುಪಿದೆ. ಪರಿಸ್ಥಿತಿಯನ್ನು ನಿಭಾಯಿಸಲು 15 ದಿನಗಳ ಕಾಲ 24x 7ಲಾಕ್ ಡೌನ್ ಜಾರಿಗೊಳಿಸುವುದು ಸೂಕ್ತ ಎಂದು ಮಾಜಿ ಸಚಿವ, ಕೊಳ್ಳೇಗಾಲ ಶಾಸಕ  ಎನ್.ಮಹೇಶ್ ಅವರು ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ನಮ್ಮ ರಾಜ್ಯದಲ್ಲಿ 1 ಕೋಟಿ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿವೆ ಎಂದು ಅಂದಾಜಿಸಲಾಗಿದ್ದು, ಈ 1 ಕೋಟಿ ಕುಟುಂಬ ಎಂದರೆ ಸುಮಾರು 4 ಕೋಟಿ ಜನರಿಗೆ ಪಡಿತರ ವ್ಯವಸ್ಥೆಯಾಗುತ್ತಿದೆ. ಈ 1 ಕೋಟಿ ಬಿಪಿಎಲ್ ಕುಟುಂಬಗಳಿಗೆ ಪಡಿತರದ ಜೊತೆಗೆ ಪ್ರತಿ ದಿನ 300 ರೂ.ಗಳಂತೆ 15 ದಿನಗಳಿಗೆ 5 ಸಾವಿರ ರೂಪಾಯಿ ಧನ ಸಹಾಯ ನೀಡುವುದು ಸೂಕ್ತ ಎಂದು ಎನ್.ಮಹೇಶ್ ಪತ್ರದಲ್ಲಿ ಸಲಹೆ ನೀಡಿದ್ದಾರೆ.

ಇನ್ನೂ ಲಾಕ್ ಡೌನ್ ಸಂದರ್ಭದಲ್ಲಿ ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲೆ ಸಂಚಾರವನ್ನು ಸಂಪೂರ್ಣ ಬಂದ್ ಮಾಡುವುದು ಸೂಕ್ತವಾಗಿದೆ. ಆದರೆ ಬಂದ್ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಸರಕು ಸಾಗಾಣಿಕೆಗೆ  ಬಿಗಿ ನಿಬಂಧನೆಗೊಳಪಟ್ಟು ಅವಕಾಶ ನೀಡುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.

ಜೀವ ಮತ್ತು ಜೀವನ ನಿರ್ವಹಣೆಯನ್ನು ಸಾಧಿಸುವ ನಿಟ್ಟಿನಲ್ಲಿ ರಾಜ್ಯದ ಹಣಕಾಸಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಈ ಸಲಹೆಗಳನ್ನು ನೀಡಿದ್ದು, ಹೀಗಾಗಿ ನನ್ನ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳುವಂತೆ ವಿನಂತಿಸುವುದಾಗಿ ಎನ್.ಮಹೇಶ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇತ್ತೀಚಿನ ಸುದ್ದಿ