ಬಡಪಾಯಿ ಮೀನುಗಾರರು ಮಾಡಿದ ತಪ್ಪಾದರೂ ಏನು? | ಸಿಎಂಗೆ ಯು.ಟಿ.ಖಾದರ್ ಪ್ರಶ್ನೆ
20/05/2021
ಮಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರ ಪ್ಯಾಕೇಜ್ ನಲ್ಲಿ ಮೀನುಗಾರರಿಗೆ ಯಾವುದೇ ಪ್ಯಾಕೇಜ್ ನೀಡಲಾಗಿಲ್ಲ, ಅವರು ಮಾಡಿರುವ ತಪ್ಪಾದರೂ ಏನು ಎಂದು ಮಾಜಿ ಸಚಿವ, ಹಾಲಿ ಶಾಸಕ ಯು.ಟಿ.ಖಾದರ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಮಳೆಗಾಲ ಆರಂಭವಾದರೆ ಮತ್ತೆ 4 ತಿಂಗಳು ಮೀನುಗಾರರ ಬದುಕು ದಡದ ಪಾಲಾಗುತ್ತದೆ. ರಾಜ್ಯ ಸರ್ಕಾರ ಕರಾವಳಿಗೆ ಮೀನುಗಾರಿಕೆ ಮಂತ್ರಿ ಕೊಟ್ಟರೆ ಸಾಲದು. ಮೀನುಗಾರರಿಗೆ ನ್ಯಾಯಯುತವಾದ ವಿಶೇಷ ಪ್ಯಾಕೇಜ್ ಘೋಷಿಸಲೇಬೇಕು. ಇದು ನಮ್ಮ ಕರಾವಳಿ ಜನರ ಹಕ್ಕೊತ್ತಾಯ ಎಂದು ಅವರು ಆಗ್ರಹಿಸಿದ್ದಾರೆ.
ಬಡಪಾಯಿ ಮೀನುಗಾರರು ಮಾಡಿದ ತಪ್ಪಾದರೂ ಏನು? ಸ್ವಾಭಿಮಾನಿ ಕಡಲ ತಡಿಯ ಮಕ್ಕಳ ಡೀಸೆಲ್ ಸಬ್ಸಿಡಿ ಕಸಿದ ನಿಮ್ಮ ಸರ್ಕಾರ, ಮೀನುಗಾರರ ದೋಣಿ ಕಡಲಿಗೆ ಇಳಿಯದಂತೆ ಮಾಡಿತ್ತು. ಈಗ ನಿಮ್ಮದೇ ಸರ್ಕಾರದ ಅವೈಜ್ಞಾನಿಕ ಲಾಕ್ ಡೌನ್ ಮೀನುಗಾರರ ಬದುಕನ್ನು ದಿಕ್ಕಾಪಾಲಾಗಿಸಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.