ಹಡಗು-ಬೋಟ್ ಡಿಕ್ಕಿ | ಬದುಕಿ ಬಂದವರು ಹೇಳಿದ ಆ ಭಯಾನಕ ಸ್ಟೋರಿ ಇದು
ಮಂಗಳೂರು: ಆಳ ಸಮುದ್ರದಲ್ಲಿ ಬೋಟ್ ಹಡಗಿಗೆ ಡಿಕ್ಕಿ ಹೊಡೆದ ಘಟನೆಯಲ್ಲಿ ಬದುಕಿ ಬಂದವರು ಬೋಟ್ ನಲ್ಲಿ ನಡೆದಘ ಬಗ್ಗೆ ವಿವರಿಸಿದ್ದು, ಆ ಭಯಾನಕ ಸ್ಟೋರಿ ಹೇಗಿದೆ ಗೊತ್ತಾ? ಕೆಲವೇ ಕ್ಷಣಗಳಲ್ಲಿ ನಡೆದ ಆ ಭಯಾನಕ ಘಟನೆಯನ್ನು ಈ ಘಟನೆಯಲ್ಲಿ ಬದುಕಿ ಬಂದಿರುವ ಕೇರಳ ಮೂಲದ ಮೀನುಗಾರಿಕಾ ಬೋಟ್ ನಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ಸುನೀಲ್ ದಾಸ್ ವಿವರಿಸಿದ್ದಾರೆ.
“ನಾವು ಇಂಜಿನ್ ರೂಮ್ ನ ಪಕ್ಕದಲ್ಲಿ ಕುಳಿತುಕೊಂಡಿದ್ದೆವು. ರಾತ್ರಿ ವೇಳೆ ನಾವು ವಾಪಸ್ ಆಗುತ್ತಿರುವುದರಿಂದಾಗಿ ಉಳಿದ ಕಾರ್ಮಿಕರೆಲ್ಲರೂ ಬೋಟ್ ನ ಬೇಸ್ಮೆಂಟ್ ನಲ್ಲಿರುವ ರೂಮ್ ನಲ್ಲಿ ಮಲಗಿದ್ದರು. ಚಾಲಕ ಅಲೆಕ್ಸಾಂಡರ್ ಬೋಟ್ ನಡೆಸುತ್ತಿದ್ದರು. ಭಾರೀ ಗಾಳಿ ಮಳೆಯಲ್ಲಿ ಅವರು, ಬೋಟನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರು. ಜೋರು ಮಳೆಯ ಕಾರಣದಿಂದಾಗಿ ಮುಂದೆ ಏನಿದೆ ಎಂದು ಕಾಣದಷ್ಟು ವಾತಾವರಣ ಕೆಟ್ಟಿತ್ತು. ಏಕಾಏಕಿ ಬೋಟ್ ನ ಸಮೀಪದಲ್ಲಿಯೇ ಹಡಗೊಂದು ನಮಗೆ ಕಾಣಿಸಿದೆ. ಅಲೆಕ್ಸಾಂಡರ್ ಅವರ ಎಲ್ಲ ಶಕ್ತಿ ಪ್ರಯೋಗಿಸಿ ಬೋಟ್ ನ್ನು ಬಲಕ್ಕೆ ತಿರುಗಿಸಿದ್ದಾರೆ ಆದರೆ ಅಷ್ಟರಲ್ಲೆ ಬೋಟ್ ಹಡಗಿಗೆ ಅಪ್ಪಳಿಸಿಯೇ ಬಿಟ್ಟಿತ್ತು.”
ಬೋಟ್ ಡಿಕ್ಕಿ ಹೊಡೆದ ವೇಗಕ್ಕೆ ನಾವು ಸಮುದ್ರಕ್ಕೆ ಎಸೆಯಲ್ಪಟ್ಟಿದ್ದೇವೆ. ಹಾಗಾಗಿ ನಾವು ಈಜಿ ಪಾರಾಗಿದ್ದೇವೆ. ಆದರೆ ಬೋಟ್ ನ ಬೇಸ್ ಮೆಂಟ್ ನಲ್ಲಿದ್ದವರ ಮೇಲೆ ಶೇಖರಿಸಿಡಲಾಗಿದ್ದ ಭಾರೀ ಪ್ರಮಾಣದ ಮೀನು, ಬಲೆ, ಮಂಜುಗಡ್ಡೆ ಬಿದ್ದಿರಬೇಕು ಹಾಗಾಗಿ ಅವರು ಅಲ್ಲಿಂದ ಹೊರ ಬರಲು ಸಾಧ್ಯವಾಗಿಲ್ಲ ಎಂದನಿಸುತ್ತಿದೆ ಎಂದು ಸುನೀಲ್ ಹೇಳುತ್ತಿದ್ದಾರೆ. ಇನ್ನೂ ಅಪಘಾತಕ್ಕೀಡಾಗಿರುವ ಬೋಟ್ ಕಡಲಿನ ಆಳಕ್ಕೆ ಜಾರಿದೆ. ಬೋಟ್ ನೊಳಗಿದ್ದವರ ಸ್ಥಿತಿ ಏನು ಗೊತ್ತಿಲ್ಲ ಎಂದು ಸುನೀಲ್ ಆತಂಕ ವ್ಯಕ್ತಪಡಿಸಿದ್ದಾರೆ.
ಮೊನ್ನೆ ಮಂಗಳೂರಿನ ಆಳ ಸಮುದ್ರದಲ್ಲಿ ಬೋಟೊಂದು ಹಡಗಿಗೆ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಮೂವರು ಮೀನುಗಾರರು ಮೃತಪಟ್ಟರೆ, ಇನ್ನಿಬ್ಬರನ್ನು ರಕ್ಷಣೆ ಮಾಡಲಾಗಿತ್ತು. ಇವರ ಪೈಕಿ ಇನ್ನೂ 9 ಮಂದಿ ಕಡಲಿನ ಗರ್ಭದಲ್ಲಿ ಮರೆಯಾಗಿ ನಾಪತ್ತೆಯಾಗಿದ್ದಾರೆ.