ಬಹುಜನಪರ ಚಿಂತಕ - ಸಂಸ್ಕೃತ ಪ್ರಾಧ್ಯಾಪಕ ಡಾ.ಸಿ.ಶಿವರಾಜು - Mahanayaka

ಬಹುಜನಪರ ಚಿಂತಕ — ಸಂಸ್ಕೃತ ಪ್ರಾಧ್ಯಾಪಕ ಡಾ.ಸಿ.ಶಿವರಾಜು

dr shivaraju
09/02/2023

ಅದೊಂದು ಕಾಲವಿತ್ತು, ನಿಮ್ನವರ್ಗಗಳಿಗೆ, ಶೋಷಿತ ಸಮುದಾಯಗಳಿಗೆ, ಅಸ್ಪೃಶ್ಯರಿಗೆ ಸಂಪೂರ್ಣವಾಗಿ ವಿದ್ಯೆಯನ್ನು ನಿರಾಕರಿಸಲಾಗಿತ್ತು. ವಿದ್ಯೆ ಕಲಿಯಬೇಕು ಎಂದು ಹೊರಟ ಜನಗಳಿಗೆ ವೈದಿಕ (ಮನು) ಪರಂಪರೆಯು ತನ್ನ ಶ್ರೇಷ್ಠತೆಯ ಸಿದ್ಧ ಶಿಕ್ಷಣ ಮಾದರಿಯನ್ನೇ ಬೋಧಿಸುತ್ತಿತ್ತು. ಅಲ್ಲದೆ ಸಮಾಜದಲ್ಲಿನ ಶ್ರೇಣೀಕೃತ ಜಾತಿ ವ್ಯವಸ್ಥೆಯ ಪರಿಪಾಲನೆಗೆ ಪೆಟ್ಟುಬೀಳದ ಹಾಗೆಯೇ ಸೂಕ್ಷ್ಮವಾಗಿ ಕಾಪಾಡಿಕೊಳ್ಳಲಾಗುತ್ತಿತ್ತು. ಹೀಗೆ ಕಾಪಾಡಿಕೊಳ್ಳುವ ವೈದಿಕ ವ್ಯವಸ್ಥೆಗೆ ಅಧಿಕಾರವೆಂಬುದು ನಿರಂತರವಾಗಿ ಬೆಂಬಲವಾಗಿತ್ತು. ಅಧಿಕಾರದ ಪಾಲನೆಗೆ ಜಾತಿಯ ಶ್ರೇಷ್ಠತೆಯೇ ಮುಖ್ಯವಾಗಿತ್ತು.  ಅಧಿಕಾರದಿಂದ ವಂಚನೆಗೊಳಗಾದವರು ಜಾತಿ ಶ್ರೇಷ್ಠತೆಯೇ ಮುಖ್ಯವೆಂದುಕೊಳ್ಳುವ ಹಾಗೆ ಮಾನಸಿಕ  ಬೇಡಿ ಹಾಕಲಾಗಿತ್ತು.

ವೈದಿಕ ಪರಂಪರೆಯ ಜನರು ತನ್ನ ಮುಂದಿನ ಪೀಳಿಗೆಗೆ ಗುರುಕುಲಗಳಲ್ಲೇ ವೇದ ಉಪನಿಷತ್ತುಗಳ ಬೋಧನೆ ಮಾಡಲಾಗುತ್ತಿತ್ತು. ಈ ಮಾನಸಿಕವಾದ ಗುಲಾಮಗಿರಿತನ ಎನ್ನುವುದು ಶತಮಾನಗಳಿಂದ   ವಿದ್ಯೆ, ಅಧಿಕಾರ, ಸಂಪತ್ತಿನ ಒಡೆತನದಿಂದ ಭಾರತೀಯ ಬಹುಜನರನ್ನು ವಂಚನೆಗೊಳಪಡಿಸಿತ್ತು. ವೈದಿಕ ಶಾಹಿಯ ಅಧ್ಯಯನಗಳಲ್ಲಿ ಜಾತಿ ಮತ್ತು ಭಾಷೆಯೇ ಸರ್ವಶ್ರೇಷ್ಠವಾಗಿತ್ತು. ಬ್ರಹ್ಮನ ತಲೆಯಿಂದ ಹುಟ್ಟಿದವರೇ ಶ್ರೇಷ್ಠರು ಎಂದು ಬದುಕುತ್ತಿದ್ದ ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದೆಲ್ಲಾ ಜನಾಂಗವು ವಿದ್ಯೆ ಕಲಿಯಲು ಮುಂದಾದಾಗ ಕಲಿಯುವ ಅವಕಾಶವನ್ನು ನಿರಾಕರಿಸಲಾಗಿತ್ತು. ಒಂದು ವೇಳೆ ಬ್ರಾಹ್ಮಣೇತರರು ವಿದ್ಯೆ ಕಲಿಯುವುದನ್ನು ಪ್ರಾರಂಭಿಸಿದರೆ ಶಿಕ್ಷೆಗೆ ಒಳಪಡಿಸಲಾಗುತ್ತಿತ್ತು.


ADS

ಸಂಸ್ಕೃತ ಭಾಷೆ ದೇವಲೋಕದ ಭಾಷೆಯೆಂದು, ಅದನ್ನು ದೇವರಿಗೆ ಸಮನಾದವರು ಮಾತ್ರ ಪಠಿಸಬೇಕು, ಕಲಿಯಬೇಕು, ಬೇರೆಯವರು ಕಲಿತರೆ ಧರ್ಮಕ್ಕೆ ಭಾಷೆಗೆ ಅಪವಿತ್ರವಾದಂತೆ ಎಂದು ಹೇಳಲಾಗುತ್ತಿತ್ತು.  ಭಾರತಕ್ಕೆ ಬ್ರಿಟೀಷರ ಆಗಮನದ ನಂತರ ಮಹಾತ್ಮ ಜ್ಯೋತಿ ಬಾ ಫುಲೆ, ಶಾಹು ಮಹಾರಾಜ್, ಬರೋಡಾದ ಗಾಯಕವಾಡ್, ನಾಲ್ವಡಿ ಕೃಷ್ಣರಾಜ ಒಡೆಯರ್ ಇವರುಗಳ ಸಾಮಾಜಿಕ ಕಳಕಳಿ ಮತ್ತು ಶಿಕ್ಷಣದ ಕ್ರಾಂತಿಯಿಂದ ಶೋಷಿತರು ಅಕ್ಷರ ಜ್ಞಾನದ ಕಡೆಗೆ ಮುಖಮಾಡಲು ಸಾಧ್ಯವಾಯಿತು.  ಇಂತಹ ಸಮಾಜ ಚಿಂತಕರ ಅವಿರತ ಪರಿಶ್ರಮದ ಪ್ರತಿಫಲವೇ ಬಾಬಾಸಾಹೇಬ್ ಡಾ ಅಂಬೇಡ್ಕರ್ ವಿದ್ಯೆಯನ್ನು ಕಲಿಯಲು ಸಾಧ್ಯವಾಯಿತು,    ಒಂದು ಭಾಷೆ ಅದನ್ನು ಅಪ್ಪಿದ ಜನಾಂಗವನ್ನು ಸದಾ ರಕ್ಷಿಸುತ್ತಿರುತ್ತದೆ.  ಅಧಿಕಾರವೆಂಬುದು ಇವೆರಡರ ಮಧ್ಯದಲ್ಲಿ ತನ್ನ ಕಾರ್ಯವನ್ನು ನಿರ್ವಹಿಸುತ್ತಾ ತನ್ನ ಪಟ್ಟಭದ್ರಹಿತಾಶಕ್ತಿಯನ್ನು ಕಾಪಾಡಿಕೊಳ್ಳುತ್ತಿರುತ್ತದೆ.

ಸಂಸ್ಕೃತ ಭಾಷೆ ಬ್ರಾಹ್ಮಣರ ಜೀವನಾಧಾರದ ಭಾಷೆಯಾಗಿದ್ದು,ಇದನ್ನು ದೇವನಾಗರಿ ಭಾಷೆ ಎಂತಲೂ,  ಅಧ್ಯಯನ ಮಾಡುವವರನ್ನು ದೇವರಿಗೆ ಸಮಾನರೆಂತಲೂ ಕರೆಯಲಾಗುತ್ತಿತ್ತು. ಕಾಲನಂತರ ಈ ಭಾಷೆಯನ್ನು ಮೃತ ಭಾಷೆ ಎಂದು ಕರೆಯಲಾಗಿತ್ತು ಎನ್ನುವುದು ಕೆಲವು ವಿದ್ವಾಂಸರ ನಿಲುವಾಗಿದೆ. ಆದರೆ ಸಂವಿಧಾನ ಜಾರಿಯಾಗಿ 75 ವರ್ಷಗಳ ಸ್ವಾತಂತ್ರ್ಯ ಅಮೃತ ಮಹೋತ್ಸವ  ಸಂಭ್ರಮವನ್ನು ಆಚರಿಸುವ ಸಂದರ್ಭದಲ್ಲಿ ಸಂಸ್ಕೃತ ಭಾಷೆಯನ್ನು ಎಲ್ಲಾ ಜನಾಂಗವು ತಾರತಮ್ಯವಿಲ್ಲದೆ ಶಾಲೆಗಳಲ್ಲಿ/ಶಿಕ್ಷಣ ಕ್ಷೇತ್ರದಲ್ಲಿ ಕಲಿಯಲೇಬೇಕು ಎಂದು ಜಾರಿಮಾಡುತ್ತಿದ್ದು ಇದರ  ಹಿಂದಿರುವ ಹುನ್ನಾರಗಳನ್ನು ನಾವು ಗಮನಿಸಬೇಕಾಗಿದೆ. ಈ ಸಂಸ್ಕೃತ  ಭಾಷೆಯನ್ನು ಮತ್ತೆ ಪುನರುಜ್ಜೀವನಗೊಳಿಸುವ ಮೂಲ ಉದ್ದೇಶ ಒಂದು ಕಡೆಯಾದರೆ, ಮತ್ತೆ ಗುರುಕುಲ ಮಾದರಿಯ ಶಿಕ್ಷಣ ಕ್ರಮವನ್ನು ಜಾರಿಮಾಡುವುದು ಇನ್ನೊಂದು ವಿಚಾರವಾದರೆ, ಪ್ರತೀ ಶಾಲೆಯಲ್ಲಿಯೂ ಸಂಸ್ಕೃತ ಭಾಷೆಯನ್ನು ಪಠ್ಯಕ್ರಮವಾಗಿ ಮಾಡಿದಾಗ, ಬೋಧಿಸುವ ಶಿಕ್ಷಕರು ಮತ್ತೆ ಬ್ರಾಹ್ಮಣರೇ ಆಗಿರುತ್ತಾರೆ.  ಭಾಷೆಯನ್ನು ಜಾರಿಮಾಡುವುದು ಹಾಗೂ ಬೋಧಿಸಲು ಉದ್ಯೋಗವನ್ನು ಸೃಷ್ಠಿ ಮಾಡಿ  ತನ್ನ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳುವುದು ಇವರ ಮತ್ತೊಂದು  ಮೂಲ ಉದ್ದೇಶವಾಗಿದೆ.

ಎಲ್ಲಾ ಜನಾಂಗಗಳಿಗೂ ಉದ್ಯೋಗ ಸಿಗುತ್ತಿದ್ದ ಇಲಾಖೆಗಳು ಖಾಸಗೀ ಒಡೆತನದ ಪಾಲಾದರೆ, ಸರ್ಕಾರಿ ಶಾಲೆಗಳಲ್ಲಿ ಸಂಸ್ಕೃತ ಭಾಷೆಯನ್ನು ಜಾರಿಮಾಡಿ ಉದ್ಯೋಗ ಸೃಷ್ಟಿಯ ಹೊಣೆಯನ್ನು ಅಧಿಕಾರವೆಂಬುದು ಚಾಚೂತಪ್ಪದೆ ತನ್ನ ಕರ್ತ್ಯವ್ಯವನ್ನು ನಿರ್ವಹಿಸುತ್ತಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.  ಇದನ್ನೇ ಬಾಬಾಸಾಹೇಬರು Political power is the master key ಎಂದು ಹೇಳಿರುವುದು. ಬ್ರಾಹ್ಮಣ ಸಮುದಾಯವು ತನ್ನ ಜನಾಂಗದ ಹೇಳಿಗೆಗಾಗಿ ಈ ರೀತಿಯ ತೀರ್ಮಾನವನ್ನು ತೆಗೆದುಕೊಳ್ಳುವಲ್ಲಿ ಮುಂದಾಗಿರುತ್ತದೆ. ಒಂದು ಕಾಲದಲ್ಲಿ ಸಂಸ್ಕೃತವನ್ನು ಪಠಿಸಿದರೆ/ಓದಿದರೆ ಭಾಷೆಗೆ ಅಪವಿತ್ರವಾಯಿತೆಂದು, ಧರ್ಮಕ್ಕೆ ಅಪಮಾನವಾಯಿತೆಂದು ನಾಲಿಗೆ ಕತ್ತರಿಸುವ, ಕಿವಿಗೆ ಕಾದ ಸೀಸವನ್ನು ಹಾಕುವ ಪದ್ಧತಿ ಇತ್ತು. ನಂತರ ಧರ್ಮದ ಪವಿತ್ರತೆಯನ್ನು ಕಳಚಿ   ತನ್ನ ಜನಾಂಗದ ಏಳಿಗೆಯ ಆರ್ಥಿಕ ಅಭಿವೃದ್ದಿಯ ಭದ್ರತೆಯ ಆಯಾಮವಾಗಿ ಪರಿವರ್ತನೆಯಾಯಿತು.

70 ರ ದಶಕದಲ್ಲಿ ದಲಿತ ಬಂಡಾಯ ಸಾಹಿತ್ಯ ಚಳುವಳಿ ನಡೆಯುತ್ತಿದ್ದಂತೆ, ದಲಿತರಲ್ಲಿ ಜಾಗೃತಿ ಮೂಡಲಾರಂಭಿಸಿತು. ಆದರೆ ಶಿಕ್ಷಣದ ಪಡೆದವರ ಸಂಖ್ಯೆ ಬಹಳ ಕಡಿಮೆಯಿತ್ತು. ಶೂದ್ರರಲ್ಲಿಯೂ ಇದೆ ಪರಿಸ್ಥಿತಿ ಇದ್ದಂತಹ ಸಂದರ್ಭದಲ್ಲಿ ಕೇವಲ ಬೆರಳೆಣಿಕೆಯಷ್ಟು ವಿದ್ಯಾವಂತರು, ಚಿಂತಕರು, ದಾರ್ಶನಿಕರು ತನ್ನ ಬರವಣಿಗೆಯನ್ನು ಪ್ರಾರಂಭಿಸಿದರು. ಆದರೆ ಸಂಸ್ಕೃತವನ್ನು ಕಲಿತು ಅದರ ಆಳವನ್ನು ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ವಿಫುಲವಾಗುತ್ತಿದ್ದ ಸಂದರ್ಭದಲ್ಲಿ ರಷಋಷಿ ಕುವೆಂಪುರವರ ಪರಿಶ್ರಮದ ಫಲವಾಗಿ ಶ್ರೀ ರಾಮಾಯಣ ದರ್ಶನಂ, ಬೆರಳ್ ಗೆ ಕೊರಳ್, ಜಲಗಾರ, ಏಕಲವ್ಯ ಇಂತಹ ಸಂಸ್ಕೃತ ಭೂಯಿಷ್ಟವಾದ ಕೃತಿಗಳನ್ನು ಬರೆಯುವುದರ ಜೊತೆಗೆ ಕೇವಲ ಒಂದೇ ಜಾತಿಗೆ ಸೀಮಿತವಾಗಿದ್ದ ಭಾಷೆಯನ್ನು ಸಾಮಾನ್ಯಕರಿಸಲು ಪ್ರಯತ್ನಿಸಿದರು.

ಕುವೆಂಪುರವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ, ಇಡೀ ವೈದಿಕ ಸಮುದಾಯದ ಕವಿಗಳು ಒಬ್ಬ ಶೂದ್ರನಿಗೆ ಬಂದಿರುವ ಜ್ಞಾನಪೀಠ ಪ್ರಶಸ್ತಿ ಅದು (ಅರೆ) ಅಜ್ಞಾನಪೀಠ ಪ್ರಶಸ್ತಿಯೇ ಹೊರತು ಪರಿಪೂರ್ಣವಾದದ್ದಲ್ಲಾ, ಒಬ್ಬ ಶೂದ್ರ ಸಮುದಾಯದ ವ್ಯಕ್ತಿ ಹೇಗೆ ಜ್ಞಾನಿಯಾಗಲು ಸಾಧ್ಯ, ಎನ್ನುವಂತೆ ಅಲ್ಲಗಳೆದರು.  ಜ್ಞಾನಪೀಠ ಪ್ರಶಸ್ತಿಯನ್ನು ಹಿಂತಿರುಗಿಸುವಂತೆ ಅವರ ಮನೆಯ ಮುಂದೆ ವೈದಿಕರ ದಂಡು ಪ್ರತಿಭಟಿಸಲಾಯಿತು.  ಇಂತಹ ನಿಕೃಷ್ಠವಾದ ವೈದಿಕ ಜಾತಿ ಪರಂಪರೆಯನ್ನು ಮೆಟ್ಟಿ ನಿಲ್ಲುವುದು ಅಷ್ಟು ಸಾಮಾನ್ಯದ ಕೆಲಸವಾಗಿರಲಿಲ್ಲಾ.ಆ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ನೇತಾರ ಪ್ರೊ ಬಿ ಕೃಷ್ಣಪ್ಪ ನವರು ಸಹ ಕುವೆಂಪು ಪರವಾಗಿ ಚಳುವಳಿಗೆ ನಿಂತರು.

ಬಾಬಾಸಾಹೇಬರು ಹೇಳಿರುವಂತೆ ಭಾರತದ ನಿಜವಾದ ಇತಿಹಾಸವಿರುವುದು ಬ್ರಾಹ್ಮಣರು ಮತ್ತು ದಲಿತರ ನಡುವಿನ ನಿರಂತರ ಹೋರಾಟವೇ ಹೊರತು ಬೇರೆ ಏನನ್ನು ಕಾಣಲು ಸಾಧ್ಯವಿಲ್ಲ. ಆದರೆ ವೈದಿಕರಿಂದ ವಂಚನೆಗೊಳಗಾಗಿದ್ದ ಎಲ್ಲಾ ಸಮಲತ್ತುಗಳು ದಲಿತ ಹೋರಾಟದ ಪ್ರತಿಫಲವಾಗಿವೆ. ಇತರೆ ಎಲ್ಲಾ ಜಾತಿಗಳು ಅವುಗಳನ್ನು ಅನುಭವಿಸುತ್ತಿವೆ. ಹೀಗೆ ಒಬ್ಬ ಶೂದ್ರನನ್ನೇ ಸಂಸ್ಕೃತವನ್ನು ಕಲಿಯಲು ಬಿಡದ ಅಧಿಕಾರದ ಶ್ರೇಷ್ಠತೆಯುಳ್ಳ ವೈದಿಕ ಸಮುದಾಯ ದಲಿತರು ಸಂಸ್ಕೃತ ಕಲಿಯಲು ಸಹಕರಿಸುತ್ತದೆ ಎನ್ನುವುದು ಬಹಳ ದೊಡ್ಡ ಸವಾಲಾಗಿದೆ.  ಭಾರತದ ಚಾರಿತ್ರಿಕ ಪರಂಪರೆಯಲ್ಲಿ ಯಾವ ಒಂದು ಸಮುದಾಯವನ್ನು ಊರಿನಿಂದ ಹೊರಗಡೆ ಇಡಲಾಗಿತ್ತೋ, ಯಾವ ಜನಾಂಗವು ವಿದ್ಯೆಯಿಂದ ವಂಚಿತವಾಗಿತ್ತೋ, ಯಾವ ಜನಾಂಗವು ಭೂಮಿಯ ಒಡೆತನದಿಂದ ದೂರವಿತ್ತೋ, ಯಾವ ಜನಾಂಗದ ನೆರಳನ್ನು ಮುಟ್ಟಲು ಮೇಲ್ವರ್ಗವು ನಿರಾಕರಿಸಲಾಗಿತ್ತೋ ಅಂತಹ ಜನಾಂಗದಲ್ಲಿ ಹುಟ್ಟಿದವರು  ವಿದ್ಯೆಯ ಕಡೆಗೆ ಮುಖಮಾಡುವುದು ಸಂವಿಧಾನಿಕ ಹಕ್ಕುಗಳಾಗಿತ್ತು. ಆದರೆ ಅದರಲ್ಲೂ ಸಂಸ್ಕೃತ ಕಲಿಯುವುದು ಇನ್ನೊಂದು ರೀತಿಯ ಹೋರಾಟದ ಬದುಕಾಗಿತ್ತು. ಒಬ್ಬ ದಲಿತ ಸಮುದಾಯದ ಯುವಕ ಸಂಸ್ಕೃತ ಕಲಿತು ತನ್ನ ಬದುಕನ್ನು ಆ ಭಾಷೆಯಿಂದಲೇ ಕಟ್ಟಿಕೊಳ್ಳುವುದು  ಒಂದು  ಹೊಸ ಚರಿತ್ರೆಯನ್ನು ಸೃಷ್ಟಿಸಿದಂತಾಯಿತು. ಕೇವಲ ಒಂದು ಸಮುದಾಯದ ವ್ಯಕ್ತಿ ತನ್ನ ಓದನ್ನೇ ಒಂದು ಸವಾಲಾಗಿ ಸ್ವೀಕರಿಸಿ ಬೆಳೆದು ಬಂದು ವಿಶ್ವವಿದ್ಯಾಲಯದ ಮಟ್ಟದಲ್ಲಿ ಬೆಳೆದು ಬಹುಜನಕ್ಕೆ ಬಹುದೊಡ್ಡ ಆಸ್ತಿಯಾಗಿ ಹೊರಹೊಮ್ಮಿ ಚಾರಿತ್ರಿಕ ಪುಟಗಳನ್ನು ಸೇರುವುದು ಬಹು ದೊಡ್ಡ ಸಾಧನೆಯೇ.!!!

ಅಂತಹವರ ಸಾಲಿನಲ್ಲಿ ನಿಲ್ಲುವವರು ಡಾ. ಸಿ ಶಿವರಾಜುರವರು. ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ನಲ್ಲಹಳ್ಳಿದೊಡ್ಡಿ ಕುಗ್ರಾಮದಲ್ಲಿ ಸಣ್ಣ ಬಡ ಕುಟುಂಬದಲ್ಲಿ ಜನಿಸಿದವರು, ಹಲವಾರು ಸ್ನೇಹಬಳಗವನ್ನು ಹೊಂದಿರುವ ಇವರು ಇಂದು ದೊಡ್ಡ ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ. ಕೇವಲ ವ್ಯಕ್ತಿಯಾಗಿ ಬಂದ ಇವರು ಶೋಷಿತ ಸಮುದಾಯದ ಬಹು ದೊಡ್ಡ ಆಸ್ತಿಯಾಗಿ, ಹೊರಹೊಮ್ಮುವುದಲ್ಲದೆ, ಯಾವ ಸಮಾಜ ವಿದ್ಯೆಯನ್ನು ನಿರಾಕರಿಸಲಾಗಿತ್ತೋ, ಯಾವ ವೈದಿಕ ಪರಂಪರೆ ಸಂಸ್ಕೃತವನ್ನು ಕಲಿತರೆ ಅಥವಾ ಕೇಳಿದರೆ ಶಿಕ್ಷೆಗೆ ಗುರಿಪಡಿಸಲಾಗುತ್ತಿತ್ತೋ ಅಂತಹ ಸಿದ್ದ ಮಾದರಿಯ ಶಿಕ್ಷಣದ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟವರು, ಡಾ. ಸಿ ಶಿವರಾಜು ರವರು.

ಇವರು ಬಹುಜನ ಸಮಾಜಕ್ಕೆ ಒಂದು ದೊಡ್ಡ ಅಸ್ಥಿಯಾಗಿ ರೂಪುಗೊಂಡು ಇಂದಿಗೂ ತಮ್ಮನ್ನು ತಾವು ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಒಳಗೊಂದು ಹೊರಗೊಂದು ಎನ್ನುವ ಭೇದವಿಲ್ಲದ ಈ ವಿಶಾಲ ಮನಸ್ಸಿನ ಮೇರು ವ್ಯಕ್ತಿತ್ವ ಸದಾ ಶೋಷಿತ, ದಲಿತ, ಅಸ್ಪೃಶ್ಯ ಸಮುದಾಯಗಳನ್ನೆಲ್ಲಾ ಒಂದೇ ಮಾತಿನಲ್ಲಿ ಬಹುಜನರೆಂದು ಕರೆದು  ಎಲ್ಲರನ್ನು ಒಂದುಗೂಡಿಸುವಲ್ಲಿ ಅವಿರತ ಶ್ರಮ ಇವರದಾಗಿದೆ. ಅದೆಷ್ಟೋ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಶ್ರಯದಾತರಾಗಿ ಪರಿಚಯಗೊಂಡ ಇವರು ಇಂದಿಗೂ ಈ ಸಮುದಾಯದ ಏಳಿಗೆಯ ಬಗ್ಗೆ ಮರುಕಪಡುವ ಸಹೃದಯಿಗಳು.  ಸಿದ್ದಾಂತಗಳ ವಿಚಾರ ಬಂದಾಗ ಯಾರೊಡನೆಯೂ ರಾಜಿ ಮಾಡಿಕೊಳ್ಳದ ನಿಷ್ಟೂರತೆಯ ನಿಜಗುಣವುಳ್ಳವರು.

ಡಾ.ಸಿ.ಶಿವರಾಜುರವರ ಹೋರಾಟದ ಹಾದಿ ಮತ್ತು ಬಹುಜನ ಪರ ಚಿಂತನೆಗಳು:

ಡಾ ಸಿ  ಶಿವರಾಜ್ ರವರು ಒಳ್ಳೆಯ ಸಹೃದಯಿಯಾಗಿದ್ದು, ತನ್ನ 5 ನೇ ತರಗತಿಯಿಂದಲೇ ಸಂಸ್ಕೃತ ಭಾಷೆಗೆ ಮಾರುಹೋದವರು. ತನ್ನ ಚಿಕ್ಕ ವಯಸ್ಸಿನಲ್ಲಿಯೇ ತನ್ನ ತಂದೆ ಚನ್ನಯ್ಯ ನವರ ಸಮಾಜಪರ ಕೆಲಸಗಳನ್ನು ಕಣ್ಣಾರೆ ನೋಡುತ್ತಿದ್ದರು. ತನ್ನ ತಂದೆಯ ಈ ಸೇವೆಯನ್ನು ತನ್ನಲ್ಲಿ ಅಳವಡಿಸಿಕೊಂಡಿದ್ದರು. ತನ್ನ ಪ್ರಾಥಮಿಕ ಶಿಕ್ಷಣವನ್ನು ತನ್ನ ಹುಟ್ಟೂರಿನಲ್ಲಿ ಮುಗಿಸಿದ್ದರು.  ಇವರ ಆಟ ಪಾಠಗಳನ್ನು ಗಮನಿಸಿದ ತಂದೆ ಕನಕಪುರದ ಮರಳೆಗವಿ ಮಠದಲ್ಲಿ 5 ನೇ ತರಗತಿಗೆ ಶಿಕ್ಷಣ ಪಡೆಯಲು ಶಾಲೆಗೆ ದಾಖಲಿಸಿದರು. ಇವರ ಬುದ್ದಿವಂತಿಕೆಯನ್ನು ಗಮನಿಸಿದ ಅಂದಿನ ಮಠದ ಸ್ವಾಮೀಜಿಗಳಾದ ಶ್ರೀಶ್ರೀಶ್ರೀ ಕಾಲಾಗ್ನಿ ರುದ್ರಮುನಿ ಸ್ವಾಮಿಗಳು ಇವರನ್ನು ಸಂಸ್ಕೃತದಲ್ಲಿ ಅಧ್ಯಯನ ಮಾಡುವಂತೆ ಪ್ರೇರೇಪಿಸಿದರು. ಪ್ರಾರಂಭದಲ್ಲಿ ಸ್ವಲ್ಪ ಮಟ್ಟಿಗೆ  ಗೊಂದಲವೆನಿಸಿದರು ಸ್ವಾಮಿಗಳ ಪಟ್ಟ ಶಿಷ್ಯನಾಗಿದ್ದ ಇವರಿಗೆ ಉತ್ತಮವಾಗಿ ಸಂಸ್ಕೃತವನ್ನು ಬೋಧಿಸಿದರು.

ಪ್ರೌಢಶಾಲೆಯ ಶಿಕ್ಷಣವನ್ನು ಅಲ್ಲಿಯೇ ಮುಂದುವರೆಸಿದ ನಂತರ 1984 ರಲ್ಲಿ ತನ್ನ ಮೆಟ್ರಿಕ್ ಕ್ಯುಲೇಷನ್ (SSLC) ಶಿಕ್ಷಣವನ್ನು ಮುಗಿಸಿದರು.  ಈತ ಮತ್ತೆ ಸಂಸ್ಕೃತ ಭಾಷೆಯನ್ನು ಬಿಟ್ಟು ಬೇರೆ ವಿಷಯಕ್ಕೆ ಮಾರುಹೋಗುವನೆಂದು   ಚಿಂತಿಸಿದ ಸ್ವಾಮೀಜಿಯವರು ತಮ್ಮ ವಯಕ್ತಿಕ ವಾಹನದಲ್ಲೇ ಕರೆತಂದು ಕನಕಪುರದ ಕರಿಯಪ್ಪನವರ ಗ್ರಾಮಾಂತರ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣಕ್ಕೆ ದಾಖಲು ಮಾಡಿಸಲಾಗಿತ್ತು.  ಅಲ್ಲಿಯೂ ತುಂಬಾ ಚಾಕುಚಕ್ಯತೆಯಿಂದ ವಿದ್ಯಾರ್ಥಿಗಳ ಮದ್ಯೇ ಒಬ್ಬ ನಾಯಕನಂತೆ ಕಾಣುತ್ತಿದ್ದ ಡಾ. ಸಿ ಶಿವರಾಜು  ರವರನ್ನು ಅಲ್ಲಿನ ಸಂಸ್ಕೃತ ಪಂಡಿತರಾದ ಶ್ರೀಯುತ KG ಕೃಷ್ಣಮೂರ್ತಿ ಯವರಿಗೆ ಪರಿಚಯಿಸಲಾಯಿತು. ಶ್ರೀಯುತರ  ಸಂಸ್ಕೃತ ಗರಡಿಯಲ್ಲಿ ಪಳಗಿ ಅಲ್ಲಿಂದ ತನ್ನ ಅಭ್ಯಾಸವನ್ನು ಮುಂದುವರೆಸಿದ ಇವರು ಪದವಿಯನ್ನು ಸಂಸ್ಕೃತ ವಿಷಯದಲ್ಲೇ ಅಭ್ಯಾಸ ಮಾಡಿ ಮುಗಿಸಿದರು.

ತಾನು ಪದವಿಗೆ ಸೇರಿದ ಸಂದರ್ಭದಲ್ಲಿ ದಿನನಿತ್ಯ ಬೆಂಗಳೂರಿನಿಂದ ಕನಕಪುರದ  ಕಾಲೇಜಿಗೆ ಓಡಾಡುತ್ತಿದ್ದ ಶ್ರೀಯುತರು ತನ್ನ ಹತ್ತಿರದ ಸಂಬಂಧಿಯಾದ ಎನ್ ಮಹೇಶ್ ಹಾಗೂ ಶ್ರೀಮತಿ ವಿಜಯಾ ಮಹೇಶ್ (ಈಗಿನ ಕೊಳ್ಳೇಗಾಲ ಮೀಸಲು ಕ್ಷೇತ್ರದ ಹಾಲಿ ಶಾಸಕರು) ರವರ ಆಶ್ರಯ ಪಡೆದರು.  ಮಹೇಶ್ ಮತ್ತು ವಿಜಯಕ್ಕ ಬಹುಜನ ಸೈದ್ಧಾಂತಿಕ ನೆಲೆಗಟ್ಟಿನ ಬರಹಗಾರರು ಮತ್ತು ಚಳುವಳಿಗಾರರಾಗಿದ್ದ ಕಾರಣ, ಅಲ್ಲಿಂದಲೇ ಇವರ ಹೋರಾಟದ ಕಿಚ್ಚು ಪ್ರಾರಂಭವಾಯಿತು. ಕನಕಪುರದಲ್ಲಿ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದಾಗ ಇವರಿಗೆ ಮೊದಲು ಹೋರಾಟ ಮಾಡಬೇಕು ಎನಿಸಿದ್ದು ಅಂದಿನ ಕಾಲಕ್ಕೆ ಇಡೀ ಕರ್ನಾಟಕದಲ್ಲಿ ಕನಕಪುರದಲ್ಲಿ ಜೀತ ಕಾರ್ಮಿಕರೇ ಹೆಚ್ಚಾಗಿದ್ದ ತಾಲ್ಲೂಕು ಆಗಿದ್ದರಿಂದ  ಶ್ರೀಯುತ ಎಂ ವೆಂಕಟಸ್ವಾಮಿ (ಈಗಿನ SSD ರಾಜ್ಯಾಧ್ಯಕ್ಷರು) ಯವರ ನಾಯಕತ್ವದಲ್ಲಿ ಜೀತ ವಿಮುಕ್ತಿ ಚಳುವಳಿ ಪ್ರಾರಂಭವಾಗಿತ್ತು. ಸುಮಾರು 5000 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಸಮಾವೇಶ ಮಾಡುತ್ತಿದ್ದ ಸಂದರ್ಭವನ್ನು ಬಳಸಿಕೊಂಡ ಶಿವರಾಜುರವರು ನೇರವಾಗಿ ವಿದ್ಯಾರ್ಥಿಗಳೊಡನೆ ಚಳುವಳಿಗೆ ಧುಮುಕಿದರು,

ಅಂದು ಪ್ರಾರಂಭಿಸಿದ ಸಮಾಜ ಬದಲಾವಣೆಯ ಚಳುವಳಿಯನ್ನು ಬೇರೆ ಬೇರೆ ರೂಪಗಳಾಗಿ  ಮಾರ್ಪಡಿಸಿಕೊಂಡು ಇಂದಿಗೂ ನಡೆಸುತ್ತಲೇ ಬರುತ್ತಿದ್ದಾರೆ.  ಇದಲ್ಲದೆ ಕನಕಪುರ ಪುರಸಭಾ ಪದವಿ ಪೂರ್ವ ಕಾಲೇಜಿನಲ್ಲಿ ದಲಿತ ಹಿಂದುಳಿದ ಅಲ್ಪಸಂಖ್ಯಾತ ಮಕ್ಕಳಿಗೆ ಹೆಚ್ಚಿನ ಶುಲ್ಕ ವಿಧಿಸಿದ್ದ ಕಾರಣ ಆಡಳಿತ ಮಂಡಳಿಯ ವಿರುದ್ಧ ಸಾವಿರಾರು ವಿದ್ಯಾರ್ಥಿಗಳೊಡನೆ ಚಳುವಳಿ ಪ್ರಾರಂಭಿಸಿದ್ದರು. ಇದರ  ಪರಿಣಾಮವಾಗಿ ಅಂದಿನ ಕನಕಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀಯುತ ಪಿ ಜಿ ಆರ್ ಸಿಂಧ್ಯಾ ರವರ ಕೆಂಗಣ್ಣಿಗೂ ಗುರಿಯಾದರು.  ಹೀಗೆ ಇವರ ಹೋರಾಟದ ಚಟುವಟಿಕೆಗಳನ್ನು ಗಮನಿಸಿದ ಎನ್ ಮಹೇಶ್ ರವರು  ಸಮಾಜಪರ ಕಾಳಜಿಯುಳ್ಳವರನ್ನೆಲ್ಲಾ ಒಂದು ಕಡೆ ಕಲೆಹಾಕಿ ಸುಮಾರು 15 ದಿನಗಳ ಕಾರ್ಯಾಗಾರ ಶಿಬಿರವನ್ನು ದೊಡ್ಡಬಳ್ಳಾಪುರದಲ್ಲಿ ನಡೆಸಿದರು.  ಅಲ್ಲಿ ಚರ್ಚಿಸಿದ ವಿಷಯಗಳು ಇವರಲ್ಲಿ ಹಾಗೆಯೇ ಮನೆ ಮಾಡಿಬಿಟ್ಟವು.  ಸಮಾಜದೊಳಗೆ ಇರುವ ವಿದ್ಯೆಯ ಅಸಮಾನತೆ, ಉದ್ಯೋಗದ ಅಸಮಾನತೆ, ಜಾತಿತಾರತಮ್ಯ, ದೇವಸ್ಥಾನಗಳ ಪ್ರವೇಶ ಇಲ್ಲದಿರುವಿಕೆ,  ಇವೆಲ್ಲವನ್ನೂ ಬಾಬಾಸಾಹೇಬ್ ಡಾ ಅಂಬೇಡ್ಕರ್ ರವರು ಹೇಗೆ ಎದುರಿಸಿ  ಸಾಧನೆ ಮಾಡಿದರು. ನಮ್ಮ ಯುವಜನತೆಯ ಮುಂದಿನ ಗುರಿಗಳೇನು ಎನ್ನುವುದನ್ನು ಶಿಬಿರದಲ್ಲಿ ಕಲಿತ  ಶಿವರಾಜು  ವಿದ್ಯಾರ್ಥಿಯಾಗಿದ್ದುದ್ದರ ಜೊತೆಗೆ ಒಂದು ಚಳುವಳಿಯ ನಾಯಕರಾಗಿ ಸಮಾಜ ಪರಿವರ್ತನೆಯ ನಾಯಕರೊಡನೆ ಸೇರತೊಡಗಿದರು.

ಆದರೂ ಇವರ ಮನೆಯಲ್ಲಿ ಇದ್ದದ್ದು ಹಸಿವಿನ ದಾಹ ನೀಗಬೇಕಾದರೆ ಉದ್ಯೋಗ ಪಡೆಯಲೇಬೇಕು ಎನ್ನುವುದು ಸಹ ಇವರ ಮನಸ್ಸಿನಲ್ಲಿ ಛಲವಾಗಿ ಮನೆಮಾಡಿತ್ತು. ತನ್ನ 15 ದಿನಗಳ ಶಿಬಿರವನ್ನು ಮುಗಿಸಿದ ಶ್ರೀಯುತರು ನಂತರ ಚುಂಚಿ ಮತ್ತು  ಆಲನತ್ತ ಭೂ ಹೋರಾಟದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು, ಅಂದಿನ ಹೋರಾಟದ ರೂವಾರಿಗಳು ಎಂ ಗೋಪಿನಾಥ್,   ಎಂ, ವೆಂಕಟಸ್ವಾಮಿ, ಎನ್ ಮಹೇಶ್,  ಲಕ್ಷ್ಮಿಅಕ್ಕ, ವಿಜಯಕ್ಕ,ಅಶ್ವತ್ ಅಂತ್ಯಜ ಮತ್ತು ಶಿವರಾಜು  ಹೀಗೆ ಹಲವಾರು ಸೈದ್ಧಾಂತಿಕ ನಾಯಕರ ಹೋರಾಟದ ಪ್ರತಿಫಲ ಸುಮಾರು ಕುಟುಂಬಗಳು ಇಂದಿಗೂ ಕೃಷಿಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಅಂದಿನ ಗೋಡೆ ಬರಹಗಳು ಇಂದಿಗೂ ಕನಕಪುರದ ಹಳೆಯ ಕಟ್ಟಡಗಳ ಮೇಲೆ ನಾವು ಕಾಣಬಹುದು. ಅಂದಿನ ಗೋಡೆಬರಹದ ರೂವಾರಿಗಳಾಗಿ  ಎಂ ಸಿ ನಾಗರಾಜು ಹಾಗೂ ಡಾ.ಶಿವರಾಜು ರವರೇ ನಿರ್ವಹಿಸುತ್ತಿರುತ್ತಾರೆ.  ಇವರ ಈ ಅವಿರತ ಹೋರಾಟವನ್ನು ಚುಂಚಿ, ಆಲನತ್ತ ಗ್ರಾಮದವರು ಮತ್ತು ಸುತ್ತಲಿನ ಕೃಷಿಕರು ದಲಿತರು ಶೋಷಿತರು ಮರೆಯುವಂತಿಲ್ಲಾ. ಇಂತಹ ಜನಪರ ಚಳುವಳಿಯಲ್ಲಿ ತೊಡಗಿಸಿಕೊಂಡು ದಮನಿತ ಧ್ವನಿಗಳಿಗೆ ಧನಿಯಾಗುವುದರಲ್ಲಿ ಶಿವರಾಜು ರವರದು ನಿಶ್ವಾರ್ಥ ಸೇವೆ ಎಂದರೆ ತಪ್ಪಾಗಲಾರದು.

ಚುಂಚಿ ಆಲನತ್ತ ಭೂ ಹೋರಾಟ ಅದೊಂದು ಐತಿಹಾಸಿಕ ಹೋರಾಟವೆಂದೇ ಹೇಳಬಹುದು. ಇಲ್ಲಿ ಹೋರಾಟದ ಮುಂಚೂಣಿಯಲ್ಲಿದ್ದ ಎಲ್ಲರನ್ನು ಅರಣ್ಯ ಅಧಿಕಾರಿಗಳ ಸಹಕಾರದಿಂದ  ಪೋಲೀಸರು ಬಂಧಿಸಿ ರಾಮನಗರ ಸಬ್ ಜೈಲ್ ಹಾಗೂ ಬೆಂಗಳೂರಿನ ಸೆಂಟರ್ ಜೈಲ್ ನಲ್ಲಿ ಇಡಲಾಗಿರುತ್ತದೆ. ಇವರನ್ನೆಲ್ಲಾ ಬಿಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾದಾಗ ಸರ್ಕಾರದ ವಿರುದ್ಧವಾಗಿ ಬೆಂಗಳೂರು ಅರಮನೆ ಮೈದಾನದಲ್ಲಿ ಪ್ರತಿಭಟಿಸಲಾಗುತ್ತದೆ.  ಕೊನೆಗೂ ಸರ್ಕಾರದ ಜನಪರ ನಿಲುವು ತೆಗೆದುಕೊಂಡಿತು. ಬಡವರ ಪರವಾಗಿ ಕೋರ್ಟಿನಿಂದ ಭೂಮಿಯನ್ನು ನೀಡಬೇಕೆಂದು ತೀರ್ಪನ್ನು ನೀಡಲಾಗುತ್ತದೆ.  ಇದು ಚುಂಚಿ ಆಲನತ್ತ ಭೂ ಹೋರಾಟಕ್ಕೆ ಸಿಕ್ಕ ಜಯವಾಗುತ್ತದೆ.  ಇಂದಿಗೂ ಎಲ್ಲಾ ಕೃಷಿಕರು ಈ ಹೋರಾಟಗಾರರನ್ನು ಮರೆಯುವಂತಿಲ್ಲಾ. ಹಾಗೆಯೇ ಈ ಹೋರಾಟಗಾರರು ಯಾರೂ ಒಂದು ತುಂಡು ಭೂಮಿಯನ್ನು ತಮ್ಮ ಹೆಸರಿಗೆ ತೇಗೆದುಕೊಂಡವರಲ್ಲಾ ಎನ್ನುವುದು ಭೀಮನಮೊಮ್ಮಕ್ಕಳ ಸ್ವಾಭಿಮಾನದ ಸಂಕೇತವಾಗಿದೆ.

1991 ರಲ್ಲಿ ಬಾಬಾಸಾಹೇಬರ 100 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಇಡೀ ದಕ್ಷಿಣ ಭಾರತದ ಸ್ವಾಭಿಮಾನ ಜಾಥಾ ಎಸ್ ಮರಿಸ್ವಾಮಿ ಯವರ ಅದ್ಯಕ್ಷತೆಯಲ್ಲಿ 38 ಸಾವಿರ ಕಿಲೋಮೀಟರ್ 34 ಸಾವಿರ ಹಳ್ಳಿಗಳನ್ನು ತಲುಪುವ ಪ್ರವಾಸ ಕೈಗೊಳ್ಳಲಾಯಿತು.  ಬಾಬಾಸಾಹೇಬರ ವಿಮೋಚನೆಯ ರಥವನ್ನು ಮುನ್ನಡೆಸುವ ರೂವಾರಿಗಳಂತೆ ಚಳಿವಳಿ ಮುಂದುವರೆಸಿದರು.  ಎಂ ಗೋಪಿನಾಥ್, ಅಶ್ವತ್ ಅಂತ್ಯಜ, ಎಂ ವೆಂಕಟಸ್ವಾಮಿ ಎಲ್ಲರೂ ಭಾಗವಹಿಸಿದ್ದರು. ಈ ಜಾತಕ್ಕಾಗಿ ಇವರು ಒಂದು ವರ್ಷಗಳ ಕಾಲ ತನ್ನ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬೇಕಾದ ಪತಿಸ್ಥಿತಿ ನಿರ್ಮಾಣವಾಯಿತು. ಜಾಥದ ಕೊನೆಯ ದಿನವಾದ  13-05-1991 ರಂದು ಸುಮಾರು 75 ಸಾವಿರ ಜನರನ್ನು ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಸೇರಿಸಿ ಅಂದು ಬಾಬಾಸಾಹೇಬರೇ ಸ್ಥಾಪಿಸಿದ SSD ಯನ್ನು ಕರ್ನಾಟಕದಲ್ಲಿ  ಘೋಷಿಸಲಾಯಿತು.

ನಂತರ ಶ್ರೀಯುತರು ಬೆಂಗಳೂರು ವಿ ವಿ ಗೆ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯುತ್ತಾರೆ. ಅದೇ ಸಂದರ್ಭದಲ್ಲಿ ಆಂದ್ರಪ್ರದೇಶದ ಚುಂಡೂರ್ ಎಂಬ ಹಳ್ಳಿಯಲ್ಲಿ ದಲಿತರು ಸವರ್ಣೀಯರ ನಡುವಿನ ಭೂಮಿಯ ವಿಚಾರವಾಗಿ ನಡೆದ ಗಲಭೆಯಲ್ಲಿ ಅಮಾನುಷವಾಗಿ 22 ದಲಿತರ ತಲೆಗಳನ್ನು ಕತ್ತರಿಸಲಾಗಿತ್ತು. ಅಂತಹ ಸಂದರ್ಭದಲ್ಲಿ ಅಮಾಯಕ ದಲಿತರಿಗೆ ನ್ಯಾಯ ದೊರಕಿಸಿಕೊಡಲು ದೊಡ್ಡ ಮಟ್ಟದ ಹೊರಟ ನಡೆಯುತ್ತಿದ್ದಾಗ ಅದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.  ನಂತರ ದೊಡ್ಡಬಳ್ಳಾಪುರ ಭೂ ಹೋರಾಟದಲ್ಲಿಯೂ ಭಾಗವಹಿಸಿ ಎಲ್ಲರನ್ನು ಹುರುದುಂಬಿಸುತ್ತಿದ್ದರು.  ಎಂ ಎ ಸಂಸ್ಕೃತ ವಿಭಾಗದಲ್ಲಿ ಪದವಿ ಪಡೆದ ಶ್ರೀಯುತರು ತಕ್ಷಣವೇ ಎಂ ಫಿಲ್ ಪದವಿಯನ್ನು ” vidhushaka in kalidasha’s Drames ”  ಎನ್ನುವ ವಿಷಯದಲ್ಲಿ ಪದವಿ ಪಡೆಯಲಾಯಿತು.

ನಂತರ 1994 ರಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ  ಸಂಸ್ಕೃತಿ ವಿಭಾಗದಲ್ಲಿ ಉಪನ್ಯಾಸಕರಾಗಿ  ಆಯ್ಕೆಯಾಗಿದ್ದ ಸಿ ಶಿವರಾಜು ರವರು  1995 ರಲ್ಲಿ  “Humoru in sanskrit literature  with special refarance to vidambana kavyas” ಎನ್ನುವ ವಿಷಯದಲ್ಲಿ ಬೆಂ ವಿ ವಿ ಯ ಸಂಸ್ಕೃತ ವಿಭಾಗದ ಅಧ್ಯಕ್ಷರಾಗಿದ್ದ  ಡಾ ಎಂ ಶಿವಕುಮಾರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಪಿ ಹೆಚ್ ಡಿ ಮಹಾ ಪ್ರಬಂಧವನ್ನು  ಮಂಡಿಸಲಾಯಿತು.  ನಂತರ 1998 ರಲ್ಲಿ ಡಾ. ಶಿವರಾಜು ರವರು ಪಿ ಹೆಚ್ ಡಿ ಪದವಿ ಪಡೆದು  ಎಲ್ಲರೊಡನೆ ಬೆರೆತು ಕರ್ತವ್ಯ ನಿರ್ವಹಿಸುವಲ್ಲಿ ಮುಂದಾಗುತ್ತಾರೆ.   ಇದಾದ ನಂತರ ಡಾ ಶಿವರಾಜು  ರವರು 1998 ಅಕ್ಟೋಬರ್  ರಂದು ಮೀನಾ ಎಸ್  ರವರೊಡನೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರ ಮೂಲ ಆದರ್ಶದಂತೆ ಏಳು ಹೆಣ್ಣುಮಕ್ಕಳಿದ್ದ ಕುಟುಂಬಕ್ಕೆ ನಾನು ಆಶ್ರಯದಾತರಾಗಬೇಕು ಎನ್ನುವುದು ಇವರ ಮೂಲ ಉದ್ದೇಶವಾಗಿತ್ತು. ನಯನ (ಖೇಮಾ)  ದರ್ಶನ್ (ಧಮ್ಮಸೇನ)  ಎನ್ನುವ  ಇಬ್ಬರು ಮಕ್ಕಳಿರುವ ಒಂದು ಪುಟ್ಟ ಕುಟುಂಬ ಇವರದಾಯಿತು. ಮುಂದೆ  ಬೆಂಗಳೂರು ವಿಶ್ವ ವಿದ್ಯಾಲಯಲ್ಲಿ  ವಿದ್ಯಾರ್ಥಿ ನಿಲಯಗಳಿಗೆ  4 ಬಾರಿ ಪ್ರಧಾನ ಕ್ಷೇಮಪಾಲಕರಾಗಿ ಕರ್ತವ್ಯನಿರ್ವಹಿಸಿ ಒಳ್ಳೆಯ ಸೇವೆ ಮಾಡುತ್ತಾರೆ.

ಅಷ್ಟೋತ್ತಿಗಾಗಲೇ ಕನಕಪುರದಲ್ಲಿ BVS (ಬಹುಜನ ವಿದ್ಯಾರ್ಥಿ ಸಂಘ) ಸ್ಥಾಪನೆಯಾಗಿದ್ದ, ಮೊದಲ ವರ್ಷದ ಸಮಾವೇಶ ಮಾಡುವ ಸಂದರ್ಭದಲ್ಲಿ ಕನಕಪುರದ ಬುದ್ಧದೇವ ಹಾಸ್ಟೆಲ್ ಆವರಣದಲ್ಲಿ ನಡೆದ ಈ ಸಮಾವೇಶದ ಮುಖ್ಯ ಅತಿಥಿಗಳಾಗಿದ್ದರು. ಶ್ರೀಮತಿ ವಿಜಯಾ ಮಹೇಶ್ ಹಾಗೂ ಡಾ. ಸಿ ಶಿವರಾಜು ರವರು ಇಡೀ ಸಮಾವೇಶವನ್ನು ಕುರಿತು ಎಲ್ಲರಲ್ಲೂ ಚಳುವಳಿಯ ಹೋರಾಟದ ಕಿಚ್ಚನ್ನು ಹಚ್ಚಿದರು. ನಂತರ ಶಿವರಾಜು ರವರು ಬಹುಜನ ಚಳುವಳಿಯ ಮೂಲಕ ಅಧಿಕಾರವನ್ನು ಹಿಡಿಯಲೇಬೇಕೆಂದು ಪಣ ತೊಟ್ಟುರು. ಅದಕ್ಕಾಗಿ ಎನ್ ಮಹೇಶ್ ರವರು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಲೇಬೇಕು ಎಂದು ಟೊಂಕಕಟ್ಟಿ ನಿಂತರು. ಇಡೀ ನಾಡಿನ ಎಲ್ಲಾ ದಲಿತ ಹಿಂದುಳಿದ ಅಲ್ಪಸಂಖ್ಯಾತ ನೌಕರರೆಲ್ಲರೂ ಒಂದುಗೂಡಿ ಆರ್ಥಿಕ ಸಹಾಯ ಮಾಡಬೇಕೆಂದು ತಿಳಿದು ಛಲದಿಂದ ಎಲ್ಲರನ್ನು ಒಂದುಗೂಡಿಸಿ ಜಸ್ಟಿಸ್ ಎನ್ನುವ ನೌಕರರ ಸಂಘವನ್ನು ನಿರ್ಮಾಣ ಮಾಡಿ ಅವಿರತವಾಗಿ ದುಡಿಯಲು ಪ್ರಾರಂಭಿಸಿದರು.

ಶ್ರೀಯುತ ಡಾ ಶಿವರಾಜು ರವರು ತಮ್ಮ ವೃತ್ತಿಯಲ್ಲಿ ತಮ್ಮನ್ನು ತಾವು ಹೆಚ್ಚು ತೊಡಗಿಸಿಕೊಂಡಿದ್ದು ಸುಮಾರು 20 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ.ಹಲವಾರು ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಇವರ 45 ಲೇಖನಗಳು  ಪ್ರಕಟವಾಗಿದ್ದು ಎಲ್ಲಾ ಬುದ್ದಿಜೀವಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.ಸಂಸ್ಕೃತ ಬೋಧನೆಗಷ್ಟೇ ಸೀಮಿತಗೊಳ್ಳದ ಇವರು ಬೆಂಗಳೂರು ವಿಶ್ವ ವಿದ್ಯಾಲಯದ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಘಟಕದ ವಿಶೇಷ ಅಧಿಕಾರಿಯಾಗಿ  ತಮ್ಮ ಕರ್ತವ್ಯ ನಿರ್ವಹಿಸುತ್ತಾ ಇಡೀ ದಲಿತ ಮಕ್ಕಳ ಆಧುನಿಕ ತಂತ್ರಜ್ಞಾನದ ವಿದ್ಯಬ್ಯಾಸಕ್ಕೆ ಹೆಚ್ಚು ಆದ್ಯತೆ ನೀಡಬೇಕೆಂದರು. ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ನೀಡುವ ವ್ಯವಸ್ಥೆಗೆ ಮುಂದಾಗಿ ಎಲ್ಲಾ ವಿದ್ಯಾರ್ಥಿಗಳ ಜನಮಾನಸದಲ್ಲಿ ನೆಲೆನಿಲ್ಲುತ್ತಾರೆ.

ಹಾಗೆಯೇ ನಂತರದ ದಿನಗಳಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವರಾಗಿ ಕರ್ತವ್ಯವನ್ನು ನಿರ್ವಹಿಸಿ ಅಲ್ಲಿ ಇದುವರೆವಿಗೂ ನಡೆದಿದ್ದ ಸಣ್ಣ ಪುಟ್ಟ ಲೋಪದೋಷಗಳನ್ನು ಸರಿಪಡಿಸುತ್ತಾ  ಯಶಸ್ಸಿನ ಕುಲಸಚಿವರು ಎನ್ನುವ ಪ್ರೀತಿಗೆ ಪಾತ್ರರಾಗುತ್ತಾರೆ.  ಹಾಗೆಯೇ ಪ್ರಸ್ತುತವಾಗಿ ಶ್ರೀಯುತರು ತಮ್ಮ ನಾಡಿನಾದ್ಯಂತ ವಿವಿಧ ಹಳ್ಳಿಗಳಿಂದ ವಿದ್ಯಾಭ್ಯಾಸಕ್ಕೆಂದು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಬಂದಂತಹ ಸಂದರ್ಭದಲ್ಲಿ ಸ್ವತಃ ತಾವೇ ಖುದ್ದು ನಿಂತು ಉತ್ತಮ ಸಲಹೆ ಸೂಚನೆ ನೀಡುವ ಮೂಲಕ ಮಾದರಿ ಪ್ರಾಧ್ಯಾಪಕರಾಗಿದ್ದಾರೆ.  ಇವರಿಗೆ ಪ್ರಾಂತೀಯತೆಯಾಗಲಿ ಅಥವಾ ಜಾತೀಯತೆಯಾಗಲಿ ಎಂದು ಯಾವ ವಿದ್ಯಾರ್ಥಿಗಳ ಮುಂದೆಯೂ ತೋರಿಸಿಕೊಂಡವರಲ್ಲಾ. ಕೆಲವೊಮ್ಮೆ ಅಸಹಾಯಕ ಬಡಮಕ್ಕಳಿಗೆ ಸಣ್ಣ ಪುಟ್ಟ ವಾರ್ಷಿಕ ಶುಲ್ಕವನ್ನು ಪಾವತಿಸಿದ್ದು ಇವರ ಹೃದಯಶ್ರೀಮಂತಿಕೆಯಾಗಿದೆ.

ಶ್ರೀಯುತರು ಇಂದಿಗೂ ಸಮಾಜ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾನೇನು ಕೊಡುತ್ತಿದ್ದೇನೆ ಎನ್ನುವ ದಿಕ್ಕಿನಲ್ಲಿ ಚಿಂತಿಸುತ್ತಾ ದಿನನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಬಡತನದ ವಿದ್ಯಾರ್ಥಿಗಳಿಗೆ ಆಶ್ರಯದಾತರಾಗಿ ನಿಂತಿದ್ದಾರೆ. ಬುದ್ಧ ಬಸವ ಅಂಬೇಡ್ಕರ್ ರವರ ಸಿದ್ದಾಂತವನ್ನು ಮೈಗೂಡಿಸಿಕೊಂಡ ಇವರು ಬಾಬಾಸಾಹೇಬರು ಹೇಳಿದಂತೆ ನನ್ನ ಶ್ರಮದ ಪ್ರತಿಫಲವನ್ನು ಅನುಭವಿಸುತ್ತಿರುವ ನೌಕರ ಬಂಧುಗಳು ಮುಂದಿನ ಯುವ ಪೀಳಿಗೆಯನ್ನು ಪ್ರಭುದ್ಧಭಾರತ ನಿರ್ಮಾಣ ಮಾಡುವ ದಿಕ್ಕಿಗೆ ಕರೆದೊಯ್ಯಬೇಕು, ಅಮಾಯಕರಾಗಿ ಹಳ್ಳಿಗಳಲ್ಲಿ ಬದುಕುತ್ತಿದ್ದು ಇಂದಿಗೂ ಶೋಷಣೆಗೆ ಒಳಗಾಗಾಗಿ ಯಾತನೆ ಅನುಭವಿಸುತ್ತಿರುವ ಜನರನ್ನು ಎಚ್ಚರಿಸುವ ಕೆಲಸ ಮಾಡುವ ಜವಾಬ್ದಾರಿ ಇವರ ಮೇಲಿದೆ.  ಇವರು ಆ ಕೆಲಸವನ್ನು ಮಾಡಿಯೇ ತೀರುತ್ತಾರೆ ಎಂದಿದ್ದರು. ಇವುಗಳನ್ನು ನಾವು ಮುಂದೆ ಉದ್ಯೋಗ ಪಡೆಯುವ ನೌಕರರಿಗೆ ಮನವರಿಕೆ ಮಾಡುವ ಕೆಲಸ ಮಾಡಬೇಕಾಗಿದೆ.ಅವರಿಗೆ ನಾವು ಆದರ್ಶವಾಗಬೇಕಾಗಿದೆ ಎನ್ನುತ್ತಾ ಪೇ ಬ್ಯಾಕ್ ಟು ಸೊಸೈಟಿ ಎನ್ನುವುದನ್ನು ಇಂದಿಗೂ ಮೈಗೂಡಿಸಿಕೊಂಡಿದ್ದಾರೆ.

ಇವರ ಈ ಸೇವೆಯನ್ನು ಗಮನಿಸಿ ಮೈಗೂಡಿಸಿಕೊಂಡ ಅದೆಷ್ಟೋ ವಿದ್ಯಾರ್ಥಿಗಳು ನೌಕರ ಬಂಧುಗಳು ಬಾಬಾಸಾಹೇಬರು ಕಂಡ ಕನಸ್ಸಿನ ಪ್ರಭುದ್ದ ಭಾರತದ ನಿರ್ಮಾಣದ ಕಡೆಗೆ ಮುಖ ಮಾಡಿದ್ದಾರೆ. ಇವರು ಇಂದಿಗೂ  ತನ್ನ ಹೋರಾಟದ, ಜನ ಸ್ಪಂದನೆಯ, ವಿದ್ಯಾರ್ಥಿಪರವಾದ, ಸಮುದಾಯದ ನೌಕರ ಬಂಧುಗಳ ಪರವಾದ ಕೆಲಸಗಳನ್ನು ಇಂದಿಗೂ ನಿಲ್ಲಿಸಿಲ್ಲಾ.  ಇವರನ್ನು ಇಂತಹ ಕೆಲಸಗಳಿಗೆ ಪ್ರಚೋದಿಸಿ ಸಮಾಜ ಪರ ಕೆಲಸ ಮಾಡಲು ಉತ್ತಮ ಆರೋಗ್ಯದ ರಕ್ಷಣೆ ಮಾಡುತ್ತಿರುವ ಇವರ ಹೃದಯ ಶ್ರೀಮಂತಿಕೆಯ ಶ್ರೀಮತಿ ಮೀನಾ (ಪ್ರೀತಿಯ ಚಿಕ್ಕು) ದರ್ಶನ್ (ಧಮ್ಮಸೇನ) ನಯನ (ಖೇಮಾ) ರವರಿಗೂ ಸಾವಿರಾರು ಬಹುಜನ ವಿದ್ಯಾರ್ಥಿ ಬಳಗದ ಕುಟುಂಬ, ಬಹುಜನ ವಿದ್ಯಾರ್ಥಿ ಸಂಘ, ಹಾಗೂ ಇಂದಿನ ಭಾರತೀಯ ವಿದ್ಯಾರ್ಥಿ ಸಂಘ ಸದಾ ಋಣಿಯಾಗಿದೆ. ಇವರ ಕುಟುಂಬ ಸುಖವಾಗಿ, ಸಂತೋಷವಾಗಿರಲಿ ಎಂದು ಭಗವಾನ್ ಬುದ್ಧನಲ್ಲಿ ಪ್ರಾರ್ಥಿಸುತ್ತದೆ.

ಓಕ್ ಮರದಂತೆ ಬೆಳೆದು ಏನನ್ನೂ ಸಾಧಿಸದೆ ಇರುವುದಕ್ಕಿಂತ ಉದಾತ್ತ ಧ್ಯೇಯ ಸಾಧನೆಗಾಗಿ ಸಣ್ಣ ವಯಸ್ಸಿನಲ್ಲಿ ಸಾಯುವುದೇ ಲೇಸು ಎನ್ನುವ ಬಾಬಾಸಾಹೇಬರ ಮಾತುಗಳನ್ನು ಎದೆಯಲ್ಲಿಟ್ಟುಕೊಂಡು ಅದರಂತೆ ನಡೆದುಕೊಂಡವರು  ನಮ್ಮ ಪ್ರಾಧ್ಯಾಪಕರಾದ ಶ್ರೀಯುತ  ಡಾ.ಸಿ.ಶಿವರಾಜ್ ರವರು.

ಇವರಂತೆ ನಾವು ಜಾಗೃತರಾಗೋಣ, ಜಾಗೃತರಾಗಿ ಚಿಂತಿಸಿ ಒಂದಾಗಿ ಈ ದೇಶವನ್ನು ಆಳಲು ಮುಂದಾಗಿ. ಪ್ರಭುದ್ದ ಭಾರತದ ಕನಸ್ಸು ಬಾಬಾಸಾಹೇಬರದು. ನನಸ್ಸು ಮಾಡುವ ಜವಾಬ್ದಾರಿ ನಮ್ಮದು, ನಿಮ್ಮದು, ನಮ್ಮೆಲ್ಲರದು.

-ಧಮ್ಮಪ್ರಿಯಾ, ಬೆಂಗಳೂರು

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ