ಬಹುಜನ ಸಂತೆ-ರಘೋತ್ತಮ ಹೊ.ಬ. - Mahanayaka
8:09 PM Friday 20 - September 2024

ಬಹುಜನ ಸಂತೆ-ರಘೋತ್ತಮ ಹೊ.ಬ.

bahujana sante
05/06/2021

ವೈಯಕ್ತಿಕವಾಗಿ ಬಹಳ ಹಿಂದೆ ನಾನೇ ಬರೆದ ಪುಸ್ತಕಗಳನ್ನು ನಾನೇ ಮಾರಾಟ ಮಾಡುತ್ತಿದ್ದೆ. ಎಲ್ಲಿ ಮಾರಾಟ ಮಾಡುತ್ತಿದ್ದೆ? ಅಂಬೇಡ್ಕರ್ ಜಯಂತಿಗಳಲ್ಲಿ, ಬಹುಜನ ಸಮಾವೇಶಗಳಲ್ಲಿ, ದಲಿತ ಸಮಾವೇಶಗಳಲ್ಲಿ, ಬುದ್ಧ ಜಯಂತಿಗಳಲ್ಲಿ… ಹೀಗೆ. ಯಾಕೆ ಅಲ್ಲೇ ಮಾರಾಟ ಮಾಡುತ್ತಿದ್ದೆ, ಆ ಸಂದರ್ಭಗಳಲ್ಲೇ ಮಾರಾಟ ಮಾಡುತ್ತಿದ್ದೆ? ಉತ್ತರ: ಅಲ್ಲಿ ನಮ್ಮ ಪುಸ್ತಕಗಳ ಗ್ರಾಹಕರು ಬರುತ್ತಿದ್ದರು. ಆ ಕಾರಣ ನನಗೆ ಒಂಚೂರು ಗ್ರಾಹಕ ಸಮುದಾಯದ ಕೊರತೆ ಕಾಣುತ್ತಿರಲಿಲ್ಲ. ಪರಿಣಾಮ ವ್ಯಾಪಾರ ಆಗುತ್ತಿತ್ತು, ಲಾಭ ಬರುತ್ತಿತ್ತು.

ನನ್ನ ಉದಾಹರಣೆಯ ಈ ಅರ್ಥ? ಎಲ್ಲಿ ನಮ್ಮ ಗ್ರಾಹಕರು ಒಂದೆಡೆ ಸೇರುವರೊ ಅಲ್ಲಿ ನಾವು ವ್ಯಾಪಾರ- ವ್ಯವಹಾರ ಮಾಡಬೇಕು ಎಂಬುದು. ಮತ್ತೆ ಹೇಳುವುದಾದರೆ, ಅಂಬೇಡ್ಕರ್ ಜಯಂತಿ, ಬುದ್ಧ ಜಯಂತಿ, ದಲಿತ ಸಮಾವೇಶ, ಬಹುಜನ ಸಮಾವೇಶ… ಹೀಗೆ ತನ್ನದೆ ಸಮುದಾಯದ ಕನಿಷ್ಠ ಪಕ್ಷ 100 ರಿಂದ 500 ಜನ ಸೇರುವ ಜಾಗದಲ್ಲಿ ದಲಿತರು ವ್ಯಾಪಾರ ವ್ಯವಹಾರ ಅದು ಯಾವುದೇ ಬಗೆಯದೇ ಆಗಲಿ ಮಾಡಬೇಕು ಎಂಬುದು. ನಾನು ಪುಸ್ತಕ ಮಾರಾಟ ಮಾಡುತ್ತಿದ್ದೆ. ಅದೇ ರೀತಿ ದಿನಸಿ ಮಾರಾಟ, ಬಟ್ಟೆ ಮಾರಾಟ, ಹಣ್ಣು ತರಕಾರಿ ಮಾರಾಟ, ಮೊಬೈಲ್ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ, ಫರ್ನಿಚರ್ ಮಾರಾಟ.. ಹೀಗೆ ಮಾರಾಟವನ್ನು ದಲಿತ ಸಮುದಾಯಗಳು ಸದರಿ ಸಮಾವೇಶಗಳಲ್ಲಿ ಮಾಡಬಹುದು.

ಇದರಿಂದ ದಲಿತ ಸಮುದಾಯಕ್ಕೆ ದೊರಕುವುದು? ಅನುಭವ, ಕೌಶಲ, ತಾಳ್ಮೆ, ಹಣ ಸಂಪಾದನೆಯ ಮಾರ್ಗದ ಪರಿಚಯ, ಮುಖ್ಯವಾಗಿ ಅಸ್ಪೃಶ್ಯತೆ ಮುಕ್ತ ವಾತಾವರಣ. ಹಾಗೆಯೇ ಅಲ್ಲಿ ಮಾರುಕಟ್ಟೆಯ ಇತರ ಕ್ಷೇತ್ರಗಳ ಬಗ್ಗೆಯೂ ಪರಸ್ಪರ ವ್ಯಕ್ತಿಗಳಲ್ಲಿ ಮಾತುಕತೆ ನಡೆದೇ ನಡೆಯುತ್ತದೆ. ಅದು ಕಟ್ಟಡ ನಿರ್ಮಾಣ ಕ್ಷೇತ್ರ, ರಿಯಲ್ ಎಸ್ಟೇಟ್ ಕ್ಷೇತ್ರ, ಹೊಟೆಲ್ ಉದ್ಯಮದ ಕ್ಷೇತ್ರ… ಹೀಗೆ ಮಾತುಕತೆ ನಡೆದೇ ನಡೆಯುತ್ತದೆ. ಅಂದಹಾಗೆ ಬೇರೆ ಕಡೆ ಹೊಟೆಲ್, ಟೀ ಅಂಗಡಿ ತೆರೆದರೆ ಅಲ್ಲಿ ಅಸ್ಪೃಶ್ಯತೆ ನಡೆಯುತ್ತದೆ ಎಂಬ ಭಯ. ಆದರೆ ಇಂತಹ ಸಮಾವೇಶಗಳಲ್ಲಿ ತಾತ್ಕಾಲಿಕ ಹೊಟೆಲ್, ಟೀ ಅಂಗಡಿ ತೆರೆದರೆ ಅಲ್ಲಿ ಯಾವುದೇ ಭಯ ಇರುವುದಿಲ್ಲ. ಮುಕ್ತವಾಗಿ ದಲಿತರು ತಮಗೆ ಇಷ್ಟ ಬಂದ ಹಾಗೆ ಖರೀದಿಸಬಹುದು, ಮಾರಬಹುದು, ತಿನ್ನಬಹುದು.


Provided by

ಹೀಗೆ ಮಾರಾಟ ಸಂದರ್ಭಗಳನ್ನು ಕೇವಲ ಇಂತಹ ಸಮಾವೇಶ ಸಂದರ್ಭಗಳಲ್ಲಿ ಮಾತ್ರ ಮಾಡಲು ಕಾಯಬೇಕೆ? ಅಗತ್ಯವಿಲ್ಲ, ಇದಕ್ಕಾಗಿ ತಿಂಗಳಿಗೊಂದು ಮಾರಾಟ ಮೇಳವನ್ನು ಸಂಘಟಕರು ಯಾವುದಾದರೂ ಒಂದು ನೆಪ ಒಡ್ಡಿ ನಡೆಸಬಹುದು. ಸರ್ಕಾರ ಕೂಡ ಇದಕ್ಕೆ ನೆರವು ನೀಡಬಹುದು ಅರ್ಥಾತ್ ಸರ್ಕಾರದ ನೆರವು ಪಡೆಯಬಹುದು. ಹೇಗೆ ವಾರಕ್ಕೊಮ್ಮೆ ಪಟ್ಟಣಗಳಲ್ಲಿ ಸಂತೆ ನಡೆಯುತ್ತದೆಯೋ ಹಾಗೆ ಇಂತಹ ಸಂತೆಗಳನ್ನು, ಮಾರಾಟ ಮೇಳಗಳನ್ನು ಯಾವುದಾದರೊಂದು ಸಂಘ ಜವಾಬ್ದಾರಿ ವಹಿಸಿಕೊಂಡು ಮಾಡಬಹುದು. ಮೊದಲೆ ಹೇಳಿದ ಹಾಗೆ ಎಲ್ಲಾ ಬಗೆಯ ಇತರೆ ಸಮಾವೇಶಗಳಲ್ಲಿ ಕಡ್ಡಾಯವಾಗಿ ಇಂತಹ ಮಾರಾಟ ಸಂತೆ, ಮೇಳ ನಡೆಯಲೇಬೇಕು. ಹಾಗೆ ಅಲ್ಲೆಲ್ಲ ವ್ಯಾಪಾರ – ವ್ಯವಹಾರದ ಮಹತ್ವ, ನಮ್ಮ ವಿಮೋಚನೆಗೆ ಆರ್ಥಿಕ ಕ್ಷೇತ್ರ, ನಾವು ಪಾಲ್ಗೊಳ್ಳಬೇಕಾದ ಅಗತ್ಯ ಎಲ್ಲವನ್ನೂ ತಿಳಿದವರು ಹೇಳುವುದು ಸೂಕ್ತ. ವಿಶೇಷವಾಗಿ ಶೋಷಿತ ಸಮುದಾಯಗಳ ವೇತನದಾರರು ತಿಂಗಳಿಗೊಮ್ಮೆ ಇಂತಹ ವ್ಯಾಪಾರ ಮೇಳಗಳನ್ನು ತಮ್ಮ ಸಂಬಂಧಿಗಳ ಸ್ನೇಹಿತರ ಮೂಲಕ ಏರ್ಪಡಿಸಿ ತಾವೇ ಅದರ ಗ್ರಾಹಕರಾಗಿ ತಿಂಗಳ ದಿನಸಿಯನ್ನು ಅಲ್ಲೇ ಕೊಂಡುಕೊಳ್ಳಬೇಕು. ಆ ಮೂಲಕ ಗ್ರಾಹಕರು ಸೃಷ್ಟಿಯಾಗುತ್ತಾರೆ, ವ್ಯಾಪಾರಗಾರರಂತು ಅಕ್ಷರಶಃ ಸೃಷ್ಟಿಯಾಗುತ್ತಾರೆ.

ದಲಿತ ಸಮುದಾಯಕ್ಕೆ ಈ ಪ್ರಕ್ರಿಯೆ ಕಷ್ಟವೇ? ಖಂಡಿತ ಇಲ್ಲ. ಯಾಕೆಂದರೆ ಸದಾ ಏನಾದರೊಂದು ಸಮಾವೇಶ, ಸಂಘಟನೆ ಮಾಡುವ ಸಮುದಾಯ ಸ್ವಾಭಾವಿಕವಾಗಿ ಇಂತಹ ಪ್ರಕ್ರಿಯೆಯಲ್ಲಿ ಯಶಸ್ಸು ಕಂಡೆ ಕಾಣುತ್ತದೆ. ಇದರ ಪರಿಣಾಮ? ಉಳಿದ ಸಮುದಾಯಗಳು ಕಣ್ತೆರೆಯಬಹುದು. ಎಲ್ಲಿ ತಮಗೆ ಗ್ರಾಹಕರು ಮಿಸ್ ಆಗುತ್ತಾರೋ ಎಂದು ಅಂತಹವರು ಅಸ್ಪೃಶ್ಯತಾಚರಣೆ ನಿಧಾನವಾಗಿ ನಿಲ್ಲಿಸಬಹುದು. ನಿಲ್ಲಿಸದಿದ್ದರೂ ಪರವಾಗಿಲ್ಲ ಇಂತಹ ಪ್ರತ್ಯೇಕ ಮಾರಾಟ ಸಮಾವೇಶ ಅಥವಾ ಸಮಾವೇಶಗಳಲ್ಲಿ ಮಾರಾಟ ಖಂಡಿತ ಶೋಷಿತ ಸಮುದಾಯಗಳಲ್ಲಿ ಸದೃಢ ಆರ್ಥಿಕ ಶಕ್ತಿ ತುಂಬುತ್ತದೆ, ಸ್ವಾಭಿಮಾನದ ಶಕ್ತಿ ನೀಡುತ್ತದೆ, ಸಮುದಾಯಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಈ ನಿಟ್ಟಿನಲ್ಲಿ ಬಹುಜನ ಸಂತೆ ( ಜೈಭೀಮ್ ಸಂತೆ, ಅಂಬೇಡ್ಕರ್ ಸಂತೆ, ದಲಿತ ಸಂತೆ…ಹೀಗೆ ಬೇರೆ ಹೆಸರು ಕೂಡ ಬಳಸಬಹುದು) ಎಲ್ಲಾ ಕಡೆ ಆರಂಭಗೊಳ್ಳಲಿ. ಶೋಷಿತ ಸಮುದಾಯ ಸ್ವಂತ ಆರ್ಥಿಕ ಶಕ್ತಿ ಗಳಿಸುವ ನಿಟ್ಟಿನಲ್ಲಿ ಪ್ರಬಲವಾಗಿ ದೃಢ ಹೆಜ್ಜೆಯೊಡನೆ ಮುನ್ನಡೆಯಲಿ ಎಂಬುದೇ ಕಳಕಳಿ.

-ರಘೋತ್ತಮ ಹೊ.ಬ.

ಇತ್ತೀಚಿನ ಸುದ್ದಿ