ಉಳ್ಳಾಲ: ಇಬ್ಬರು ಯುವಕರಿಗೆ ಬೈಕ್ ನಲ್ಲಿ ಡಿಕ್ಕಿ ಹೊಡೆದು, ಚೂರಿ ಇರಿತ
26/12/2020
ಉಳ್ಳಾಲ: ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಯುವಕರಿಬ್ಬರಿಗೆ ಅಪರಿಚಿತ ತಂಡವೊಂದು ಚೂರಿಯಲ್ಲಿ ಇರಿದು ಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ತಡರಾತ್ರಿ ಉಳ್ಳಾಲ ಠಾಣಾ ವ್ಯಾಪ್ತಿಯ ಕುತ್ತಾರು ಕೃಷ್ಣಕೋಡಿಯಲ್ಲಿ ನಡೆದಿದೆ.
ಇಲ್ಲಿನ ಸೇವಂತಿಗುಡ್ಡೆ ನಿವಾಸಿಗಳಾದ ಆದಿತ್ಯ(23) ಹಾಗೂ ಪಂಡಿತ್ ಹೌಸ್ ನಿವಾಸಿ ಪವನ್(27) ಗಾಯಗೊಂಡವರಾಗಿದ್ದಾರೆ. ಕೃಷ್ಣಕೋಡಿ ಬಳಿಯಲ್ಲಿ ಹಿಂಬದಿಯಿಂದ ಬಂದ ಬೈಕ್ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಸಂತ್ರಸ್ತ ಯುವಕರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಈ ಸಂದರ್ಭ ದುಷ್ಕರ್ಮಿಗಳು ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.’
ಚರ್ಚೊಂದರಲ್ಲಿ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ ಸಹೋದರನನ್ನು ಕರೆತರಲು ಆದಿತ್ಯ ಹಾಗೂ ಪವನ್ ಹೋಗುತ್ತಿದ್ದ ವೇಳೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಗಾಯಾಳುಗಳನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.