ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಬಜಾಲ್ ಕಟ್ಟಪುನಿ ಅಂಗನವಾಡಿ ಕೇಂದ್ರ!

ಮಂಗಳೂರು: ಬಜಾಲ್ ಕಟ್ಟಪುನಿ ಅಂಗನವಾಡಿ ಕೇಂದ್ರಕ್ಕೆ ಮೂಲಭೂತ ಸೌಕರ್ಯಗಳ ಒದಗಿಸಿಕೊಡಲು ಒತ್ತಾಯಿಸಿ ಬಜಾಲ್ ವಾರ್ಡ್ ಅಭಿವೃದ್ಧಿ ಸಮಿತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಂಗಳೂರು ನಗರ ಯೋಜನಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಬಜಾಲ್ ವಾರ್ಡಿನ ಕಟ್ಟಪುಣಿ ಎಂಬ ಪ್ರದೇಶದಲ್ಲಿರುವ ಅಂಗನವಾಡಿ ಕೇಂದ್ರವು ಕುಡಿಯುವ ನೀರು, ರಸ್ತೆ ಸಹಿತ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಕಾರ್ಯಾಚರಿಸುತ್ತಿದ್ದು ಈ ಬಗ್ಗೆ ಸ್ಥಳೀಯರು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಕಳೆದ ಹಲವು ತಿಂಗಳುಗಳಿಂದ ಈ ಕೇಂದ್ರದಲ್ಲಿರುವ ಮಕ್ಕಳು ಕುಡಿಯುವ ನೀರಿನ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಅಂಗನವಾಡಿ ಸಹಾಯಕಿ ದೂರದ ಬಾವಿ ನೀರನ್ನು ಆಶ್ರಯಿಸುವಂತಾಗಿದೆ. ಬೇಸಿಗೆಯಲ್ಲಿ ಬಾವಿ ನೀರು ಕೂಡ ಬಹಳ ಆಳಕ್ಕೆ ಇಳಿದಿದ್ದು ಒಂದು ಕೊಡ ನೀರು ಸಂಗ್ರಹಿಸಲು ಬಹಳಷ್ಟು ಕಷ್ಟ ಪಡುವ ಪರಿಸ್ಥಿತಿ ಎದುರಾಗಿದೆ. ಮತ್ತು ಅಂಗನವಾಡಿ ಎತ್ತರದ ಗುಡ್ಡ ಪ್ರದೇಶದಲ್ಲಿ ಇರೋದರಿಂದ ಕೇಂದ್ರಕ್ಕೆ ಸಾಗುವ ಕಾಲು ದಾರಿ ಸಂಪೂರ್ಣ ಹದಗೆಟ್ಟಿದ್ದು ಸರಿಯಾಗಿ ನಡೆದಾಡಲೂ ಆಗದಷ್ಟು ಕೆಟ್ಟದಾಗಿದ್ದು, ಸಣ್ಣ ಮಕ್ಕಳು ರಸ್ತೆಯಲ್ಲಿ ಸಾಗಲು ಸಾಧ್ಯವಾಗದೆ, ಪರದಾಡುವಂತಾಗಿದೆ. ಅಲ್ಲದೆ, ಈ ಕೇಂದ್ರದ ಹಿಂಭಾಗದಲ್ಲಿ ಕೈಗೆಟುವ ರೀತಿಯಲ್ಲಿ ವಿದ್ಯುತ್ ಸಂಪರ್ಕ ತಂತಿ ಹಾದು ಹೋಗಿರೋದರಿಂದ ಈ ರಸ್ತೆಯಲ್ಲಿ ಸಾಗುವ ಜನಸಾಮಾನ್ಯರಿಗೆ ಮತ್ತು ಮಕ್ಕಳಿಗೆ ಬಹಳ ಅಪಾಯಕಾರಿಯಾಗಿದ್ದು, ಇನ್ನೇನು ಜೀವಕ್ಕೆ ಹಾನಿಯಾಗುವ ಅವಘಡ ಸಂಭವಿಸುವ ಮೊದಲು ಇಲಾಖೆಯು ಎಚ್ಚೆತ್ತುಕೊಳ್ಳಬೇಕಾಗಿದೆ.
ಈ ಎಲ್ಲಾ ಹಿನ್ನಲೆಯಲ್ಲಿ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಕಟ್ಟಪುನಿ ಅಂಗನವಾಡಿ ಎದುರಿಸುತ್ತಿರುವ ಕುಡಿಯುವ ನೀರು ಸಹಿತ ರಸ್ತೆ, ಅಪಾಯಕಾರಿ ವಿದ್ಯುತ್ ತಂತಿ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಲು ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಸಂತೋಷ್ ಬಜಾಲ್, ಕಮಲಾಕ್ಷ ಬಜಾಲ್, ಅನ್ಸಾರ್ ಬಜಾಲ್ ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: