ಬಾಲಕಿಗೆ ದೌರ್ಜನ್ಯ ಎಸಗಿ ಕಟ್ಟಡದಿಂದ ಕೆಳಕ್ಕೆಸೆದ ಪಾಪಿಗಳು!
ಲಕ್ನೋ: ಮನೆಗೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಮನೆಯವರನ್ನು ಥಳಿಸಿ 17 ವರ್ಷ ವಯಸ್ಸಿನ ಬಾಲಕಿಯನ್ನು ಎರಡನೇ ಮಹಡಿಗೆ ಕೊಂಡೊಯ್ದು ದೌರ್ಜನ್ಯ ನಡೆಸಿ, ಕಟ್ಟಡದ ಮೇಲಿನಿಂದ ಕೆಳಗಡೆ ಎಸೆದ ಅಮಾನವೀಯ ಘಟನೆ ನಡೆದಿದೆ.
ಸೋಮವಾರ ರಾತ್ರಿ ಉತ್ತರ ಪ್ರದೇಶದ ಮಥುರಾದಲ್ಲಿ ಈ ಘಟನೆ ನಡೆದಿದ್ದು, ಬಾಲಕಿಯು ಕಟ್ಟಡದಿಂದ ಕೆಳಗೆ ಬೀಳುತ್ತಿರುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. “ಆರೋಪಿಗಳು ಕಳೆದ ಒಂದು ವರ್ಷಗಳಿಂದಲೂ ನನ್ನ ಸಹೋದರಿಗೆ ಕಿರುಕುಳ ನೀಡುತ್ತಿದ್ದರು. ಸೋಮವಾರ ರಾತ್ರಿ 8 ಗಂಟೆಗೆ ಅಪರಿಚಿತ ವ್ಯಕ್ತಿಗಳು ನನ್ನ ತಂದೆಗೆ ಕರೆ ಮಾಡಿದರು. ಆ ಬಳಿಕ ಕೆಲವೇ ಹೊತ್ತಿನಲ್ಲಿ ಬೈಕ್ ನಲ್ಲಿ ಬಂದು ಮನೆಯ ಬಾಗಿಲು ಮುರಿದು ನಮ್ಮ ಮೇಲೆ ದಾಳಿ ಮಾಡಿದ್ದಾರೆ. ಸಹೋದರಿಯನ್ನು ಇಬ್ಬರು ಯುವಕರು ಮಹಡಿ ಮೇಲೆ ಕರೆದೊಯ್ದು ದೌರ್ಜನ್ಯ ನಡೆಸಿ ಕಟ್ಟಡದಿಂದ ಕೆಳಕ್ಕೆ ಎಸೆದಿದ್ದಾರೆ” ಎಂದು ಬಾಲಕಿಯ ಸಹೋದರ ಘಟನೆಯನ್ನು ವಿವರಿಸಿದ್ದಾನೆ.
ಎರಡನೇ ಮಹಡಿಯಿಂದ ಎಸೆಯಲ್ಪಟ್ಟ ಬಾಲಕಿ ನೆಲಕ್ಕೆ ಬಿದ್ದಿದ್ದು, ಈ ವೇಳೆ ಸ್ಥಳೀಯರು ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲು ಕುಟುಂಬಸ್ಥರಿಗೆ ನೆರವಾಗಿದ್ದಾರೆ. ಸದ್ಯ ಬಾಲಕಿಯ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿದೆ ಎಂದು ತಿಳಿದು ಬಂದಿದೆ.
ಇನ್ನೂ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಥುರಾ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದು, ಇನ್ನಷ್ಟು ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.