ಬಾಲಕಿಗೆ ಸಿಮ್ ತೆಗೆದುಕೊಟ್ಟ ತಂದೆ | ನಂಬರ್ ನೋಟ್ ಮಾಡಿಕೊಂಡು ಅಶ್ಲೀಲ ವಿಡಿಯೋ ಕಳಿಸಿದ ಮೊಬೈಲ್ ಅಂಗಡಿಯವ!
ಮಂಗಳೂರು: ಆನ್ ಲೈನ್ ತರಗತಿಗಾಗಿ ಬಾಲಕಿಗೆ ತಂದೆ ಸಿಮ್ ಖರೀದಿಸಿದ್ದು, ಈ ಸಿಮ್ ನಂಬರ್ ನ್ನು ನೋಟ್ ಮಾಡಿಕೊಂಡ ಮೊಬೈಲ್ ಅಂಗಡಿಯಾತ ಬಾಲಕಿಗೆ ಅಶ್ಲೀಲ ವಿಡಿಯೋ ಹಾಗೂ ಸಂದೇಶಗಳನ್ನು ಕಳುಹಿಸಿದ ಬಗ್ಗೆ ದೂರು ದಾಖಲಾಗಿದೆ.
ಘಟನೆ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್ ನ ಆಫ್ರಿದ್ ಹಾಗೂ ಮುನ್ನಾ ಎಂಬ ಇಬ್ಬರು ಆರೋಪಿಗಳ ಮೇಲೆ ಬಾಲಕಿಯರ ತಂದೆ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಾಲಕಿಯ ತಂದೆ ಆಫ್ರಿದ್ ಎಂಬಾತನ ಮೊಬೈಲ್ ಅಂಗಡಿಯಿಂದ ಸಿಮ್ ಖರೀದಿಸಿ ಬಾಲಕಿಗೆ ನೀಡಿದ್ದರು. ಆನ್ ಲೈನ್ ತರಗತಿ ಇರುವ ಹಿನ್ನೆಲೆಯಲ್ಲಿ ತಂದೆ ಬಾಲಕಿಗೆ ಮೊಬೈಲ್ ನೀಡಿದ್ದರು. ಆದರೆ ಸಿಮ್ ನೀಡಿದ ಬಳಿಕ ಆರೋಪಿ ಆಫ್ರಿದ್, ಬಾಲಕಿಗೆ ಈ ಸಿಮ್ ನೀಡಲಾಗುತ್ತಿದೆ ಎನ್ನುವುದು ತಿಳಿಯುತ್ತಿದ್ದಂತೆಯೇ ತನ್ನ ಕೆಟ್ಟ ಗುಣವನ್ನು ತೋರಿಸಿದ್ದು, ಅಶ್ಲೀಲ ಸಂದೇಶ ಹಾಗೂ ವಿಡಿಯೋಗಳನ್ನು ಬಾಲಕಿಗೆ ಕಳುಹಿಸಲು ಆರಂಭಿಸಿದ್ದಾನೆ.
ಈ ನಡುವೆ ಮಗಳ ಮೊಬೈಲ್ ಹಾಳಾಗಿದ್ದು, ತಂದೆ ಮತ್ತೆ ಇದೇ ಆಫ್ರಿದ್ ನ ಬಳಿಗೆ ಮೊಬೈಲ್ ರಿಪೇರಿಗಾಗಿ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಆರೋಪಿಯು ಬಾಲಕಿಯ ಫೋಟೋ ಹಾಗೂ ವಿಡಿಯೋಗಳನ್ನುಡೌನ್ ಲೋಡ್ ಮಾಡಿಕೊಂಡು ಮುನ್ನ ಎಂಬಾತನ ಮೂಲಕ ವೈರಲ್ ಮಾಡಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಇವರಿಬ್ಬರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಸಂತ್ರಸ್ತ ಬಾಲಕಿಯ ತಂದೆ ಮನವಿ ಮಾಡಿಕೊಂಡಿದ್ದಾರೆ.