ಬಾಲ್ಯವಿವಾಹ ವಿರೋಧಿಸಿದ ವೃದ್ಧ ಹಾಗೂ ಆತನ ಕುಟುಂಬಕ್ಕೆ 12 ವರ್ಷ ಬಹಿಷ್ಕಾರ ಹಾಕಿದ ಪಂಚಾಯತ್
ಜೈಪುರ: ಬಾಲ್ಯ ವಿವಾಹವನ್ನು ವಿರೋಧಿಸಿದ್ದಕ್ಕಾಗಿ ವೃದ್ಧ ಹಾಗೂ ಅವರ ಕುಟುಂಬಕ್ಕೆ 12 ವರ್ಷಗಳ ಕಾಲ ನಿಷೇಧ ವಿಧಿಸಿ ಪಂಚಾಯತ್ ಒಂದು ಆದೇಶ ನೀಡಿದ್ದು, ಈ ಸಂಬಂಧ 11 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಚಿತ್ತೂರ್ ಜಿಲ್ಲೆಯ ಖಾಪ್ ಪಂಚಾಯತ್ ನಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಈ ಸಂಬಂಧ ವೃದ್ಧ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಕಳೆದ ಜುಲೈನಲ್ಲಿ ನಡೆದ ಪಂಚಾಯತಿ ಸಭೆಯಲ್ಲಿ ಬಾಲ್ಯ ವಿವಾಹದ ಪರವಾಗಿ ಚರ್ಚಿಸಲಾಗಿತ್ತು. ಈ ವೇಳೆ ಸತ್ಖಂಡ್ ನಿವಾಸಿ 65 ವರ್ಷದ ಶಿವಲಾಲ್ ವಿರೋಧ ವ್ಯಕ್ತಪಡಿಸಿದ್ದು, ಬಾಲ್ಯವಿವಾಹ ನಡೆಸಬಾರದು ಎಂದು ವಾದಿಸಿ, ಆಕ್ಷೇಪಿಸಿದ್ದರು. ಈ ವೇಳೆ ಮನುವಾದಿಗಳು ಬಾಲ್ಯವಿವಾಹವನ್ನು ನಡೆಸಬೇಕು ಎಂದು ವಾದಿಸಿ, ಇದರ ವಿರುದ್ಧ ಮಾತನಾಡಿದ ಶಿವಲಾಲ್ ಹಾಗೂ ಅವರ ಕುಟುಂಬಸ್ಥರ ಮೇಲೆ ನಿಷೇಧ ಹೇರಿತ್ತು.
ಪಂಚಾಯತ್, ತನ್ನ ಮನುವಾದಿ ನಿರ್ಧಾರವನ್ನು ವಿರೋಧಿಸಿದಕ್ಕಾಗಿ ಶಿವಲಾಲ್ ಗೆ ಮೊದಲೇ ಎಚ್ಚರಿಕೆ ನೀಡಿದ್ದು, ನಮ್ಮನ್ನು ವಿರೋಧಿಸಿದ್ದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿತ್ತು. ಆ ಬಳಿಕ ಸೆಪ್ಟಂಬರ್ ನಲ್ಲಿ ನಿಷೇಧ ಆಜ್ಞೆ ಹೊರಡಿಸಿತ್ತು. ಅಲ್ಲದೇ ಶಿವಲಾಲ್ ಜೊತೆಗೆ ವ್ಯವಹರಿಸುವವರಿಗೆ 1.1 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ಹೇಳಿತ್ತು. ಇದಾದ ಬಳಿಕ ಶಿವಲಾಲ್ ಅವರು ಪಂಚಾಯತ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಇದೀಗ 11 ಮಂದಿ ವಿಕೃತರನ್ನು ಬಂಧಿಸಲಾಗಿದೆ.