ಬಂಡವಾಳ ವ್ಯವಸ್ಥೆಗೆ ಮಾನವೀಯತೆಯ ಸ್ಪರ್ಶ ಬೇಕಿದೆ
ಮೂಲ: ಅರುಣ್ ಮೈರ (ದ ಹಿಂದೂ 29-5-21)
ಅನುವಾದ : ನಾ ದಿವಾಕರ
ಮಾನವ ಸಮಾಜದ ಅವಶ್ಯಕತೆಗಳು ಮತ್ತು ಬಂಡವಾಳ ವ್ಯವಸ್ಥೆಯ ತತ್ವಗಳ ಸಂಘರ್ಷಕ್ಕೆ ಕೋವಿದ್ 19 ಲಸಿಕೆಯ ಬಿಕ್ಕಟ್ಟು ಮತ್ತೊಂದು ವೇದಿಕೆಯಾಗಿ ಪರಿಣಮಿಸಿದೆ. ಲಸಿಕೆಯ ಸಂಶೋಧನೆ ಮತ್ತು ಉತ್ಪಾದನೆಯಲ್ಲಿ ತಮ್ಮ ಬಂಡವಾಳ ಮತ್ತು ಶ್ರಮದ ಹೂಡಿಕೆಗಾಗಿ ಖಾಸಗಿ ಉತ್ಪಾದಕರು ಲಾಭ ಪಡೆಯುವುದು ಮಾರುಕಟ್ಟೆಯ ನಿಯಮ ಎಂದು ಬಂಡವಾಳಿಗರು ಪ್ರತಿಪಾದಿಸುತ್ತಾರೆ. ಇದು ಈ ಉತ್ಪಾದಕರಿಗೆ ಸಹಜವಾಗಿ ನೀಡಬೇಕಾದ ಪರಿಹಾರ ಎಂದೂ ವಾದಿಸಲಾಗುತ್ತದೆ. ಈ ಉತ್ಪಾದಕರು ವಿಧಿಸುವ ಮಾರುಕಟ್ಟೆಯ ಬೆಲೆ ಬಡ ಜನತೆಯ ಕೈಗೆ ಎಟುಕದೆ ಹೋದರೂ ಸಹ, ತಾವು ನಷ್ಟ ಅನುಭವಿಸಿ ಜನತೆಗೆ ಸೇವೆ ಸಲ್ಲಿಸುವುದು ಬಂಡವಾಳಿಗರ ನೈತಿಕ ಕರ್ತವ್ಯ ಅಲ್ಲ ಎಂದೂ ಬಂಡವಾಳ ಹೂಡಿಕೆದಾರರು ವಾದಿಸುತ್ತಾರೆ.
ಹಾಗಾದಲ್ಲಿ ಸರ್ಕಾರಗಳು ಮಧ್ಯ ಪ್ರವೇಶಿಸಿ ಖಾಸಗಿ ಉತ್ಪಾದಕರಿಂದ ಖರೀದಿಸಿ ಬಡ ಜನತೆಗೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಬೇಕಾಗುತ್ತದೆ. ಹೀಗೆ ಮಾಡಲು ಸರ್ಕಾರಗಳಿಗೆ ಆದಾಯ ಇರಬೇಕಾದುದೂ ಹೌದು. ಈ ಆದಾಯ ಗಳಿಸಲು ಸರ್ಕಾರಗಳು ಖಾಸಗಿ ಕಂಪನಿಗಳ ಮೇಲೆ ತೆರಿಗೆ ವಿಧಿಸಬೇಕಾಗುತ್ತದೆ. ಈ ಸನ್ನಿವೇಶದಲ್ಲಿ, ಖಾಸಗಿ ಉತ್ಪಾದಕರು ಮತ್ತು ಕಂಪನಿಗಳು ತಮ್ಮ ಬಂಡವಾಳ ಹೂಡಿಕೆ ಆಕರ್ಷಕವಾಗಬೇಕಾದಲ್ಲಿ ಸರ್ಕಾರಗಳು ವಾಣಿಜ್ಯ ಕ್ಷೇತ್ರದಿಂದ ಹೊರಗುಳಿಯುವಂತೆ ಮಾಡಲು ಅಥವಾ ತಮ್ಮ ಮೇರೆ ಹೇರಲಾಗುವ ತೆರಿಗೆ ದರ ಕಡಿಮೆ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಅಥವಾ ಸಾರ್ವಜನಿಕ ಉದ್ದಿಮೆಗಳು ಲಸಿಕೆ ಉತ್ಪಾದನೆಯ ಪ್ರಕ್ರಿಯೆಯಿಂದ ಹೊರಗುಳಿಯುವಂತೆ ಒತ್ತಾಯಿಸುತ್ತವೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಸೇವಾಕ್ಷೇತ್ರದಿಂದ ಹೊರಗುಳಿಯುವ ಒತ್ತಡವನ್ನೂ ಸರ್ಕಾರಗಳು ಎದುರಿಸಬೇಕಾಗುತ್ತದೆ. ಭಾರತ ಸರ್ಕಾರ ಸದ್ಯದ ಪರಿಸ್ಥಿತಿಯಲ್ಲಿ ಈ ಬಿಕಟ್ಟಿನ ಸನ್ನಿವೇಶವನ್ನು ಎದುರಿಸುತ್ತಿರುವುದು ಸ್ಪಷ್ಟ.
“ ಬಂಡವಾಳಶಾಹಿ ಹೇಗೆ ಅಂತ್ಯ ಕಾಣುತ್ತದೆ ? ” ಈ ಪ್ರಶ್ನೆ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಧ್ವನಿಸುತ್ತಿದೆ. ಇದೇ ಹೆಸರಿನ ಒಂದು ಪುಸ್ತಕವನ್ನೂ (How will capitalism end) ವೂಲ್ಪ್‍ಗೆಂಗ್ ಸ್ಟ್ರೆಕ್ ಮತ್ತು ಇತರ ಲೇಖಕರು ರಚಿಸಿದ್ದಾರೆ. ಇವರ ಅಭಿಪ್ರಾಯದಲ್ಲಿ ಬಂಡವಾಳ ವ್ಯವಸ್ಥೆಯನ್ನು ಬೆಂಬಲಿಸುವ ಶಕ್ತಿಗಳು ಸಂಪೂರ್ಣ ನಿರ್ನಾಮವಾದಾಗ ಈ ಬಂಡವಾಳಶಾಹಿಯೂ ಅಂತ್ಯವಾಗುತ್ತದೆ. ಜನಸಾಮಾನ್ಯರನ್ನು ಅಥವಾ ಜನಸಾಮಾನ್ಯರ ಬದುಕನ್ನು ಖಾಸಗಿ ಬಂಡವಾಳವನ್ನಾಗಿ ಪರಿವರ್ತಿಸುವ ಮೂಲಕವೇ ಬಂಡವಾಳಶಾಹಿ ವಿಸ್ತರಿಸುತ್ತಾ ಹೋಗುತ್ತದೆ. ಇದನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಅರ್ಥಶಾಸ್ತ್ರಜ್ಞರು ಸಮರ್ಥಿಸಿಕೊಳ್ಳುತ್ತಾರೆ. ಜನರು ತಮ್ಮದಲ್ಲದ ಯಾವುದೇ ವಸ್ತು ಅಥವಾ ವಿದ್ಯಮಾನದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ , ಇದು ದುರಂತ ಎನ್ನುತ್ತಾರೆ ಗಾರೆಟ್ ಹಾರ್ಡಿನ್. ಈ ಬೌದ್ಧಿಕ ಭೂಮಿಕೆಯನ್ನು ಆಧರಿಸಿಯೇ ಬಂಡವಾಳಿಗರು ಜಲ, ನೆಲ ಮತ್ತು ಅರಣ್ಯ ಸಂಪನ್ಮೂಲಗಳ ಮೇಲೆ ತಮ್ಮ ಒಡೆತನವನ್ನು ಸ್ಥಾಪಿಸುವ ನಿರಂತರ ಪ್ರಯತ್ನದಲ್ಲಿರುತ್ತಾರೆ.
ವಾಣಿಜ್ಯ ಮತ್ತು ಮಾರುಕಟ್ಟೆ ಸಹಜ ಬಂಡವಾಳವನ್ನು ಹಣಕಾಸು ಬಂಡವಾಳವನ್ನಾಗಿ ಪರಿವರ್ತಿಸುತ್ತದೆ. ಈ ಬಂಡವಾಳದ ಮೂಲಕ ಹೆಚ್ಚು ಲಾಭ ಗಳಿಸುವುದು ಮತ್ತು ತಮ್ಮ ಮರುಹೂಡಿಕೆಗೆ ಮತ್ತಷ್ಟು ಬಂಡವಾಳವನ್ನು ಕ್ರೋಢೀಕರಿಸಲು ನೆರವಾಗುತ್ತದೆ. ಅತಿ ಹೆಚ್ಚು ಲಾಭ ಗಳಿಸುವ ನಿಟ್ಟಿನಲ್ಲಿ ನಿಸರ್ಗದ ಸಂಪನ್ಮೂಲಗಳ ಅತಿಯಾದ ಬಳಕೆ ಮತ್ತು ದುರ್ಬಳಕೆಯ ಪರಿಣಾಮವಾಗಿಯೇ ಇಂದು ಹವಾಮಾನ ಬದಲಾವಣೆ, ಪರಿಸರನಾಶ ಮತ್ತು ಸುಸ್ಥಿರತೆ ಇಲ್ಲದ ಒಂದು ಪರಿಸರ ನೀತಿ ರೂಪುಗೊಂಡಿದೆ. ಸಂಪತ್ತನ್ನು ಸೃಷ್ಟಿಸುವಲ್ಲಿ ಸರಕುಗಳ ಮೇಲೆ ಅಥವಾ ಆಸ್ತಿಗಳ ಮೇಲೆ ಒಡೆತನವನ್ನು ಸ್ಥಾಪಿಸುವ ಒಂದು ಚಾರಿತ್ರಿಕ ಪರಂಪರೆಯನ್ನೂ ಇತಿಹಾಸದಲ್ಲಿ ನಾವು ಕಂಡಿದ್ದೇವೆ. ಬಂಡವಾಳಶಾಹಿ ಅಭಿವೃದ್ಧಿಪಥದಲ್ಲಿ ಮಾನವ ಹಕ್ಕುಗಳ ಸುಳಿವೂ ಇಲ್ಲದಂತಹ ಗುಲಾಮಗಿರಿ ಪದ್ಧತಿಗೆ ಇದು ಕಾರಣವಾಗಿದ್ದನ್ನೂ ಕಂಡಿದ್ದೇವೆ.
ಏಕಸ್ವಾಮ್ಯಗಳ ಕಾರುಬಾರು
ಭೂಮಿಯ ಸಂಪನ್ಮೂಲಗಳು ಸೀಮಿತವಾಗಿವೆ. ಗುಲಾಮಗಿರಿ ಪದ್ಧತಿ ನಿಷಿದ್ಧವಾಗಿದೆ. ಹಾಗಾಗಿಯೇ ಬಂಡವಾಳಶಾಹಿಯು ಜ್ಞಾನವನ್ನು ಅಥವಾ ಬುದ್ಧಿಮತ್ತೆಯನ್ನು ಖಾಸಗಿ ಆಸ್ತಿಯನ್ನಾಗಿ ಪರಿವರ್ತಿಸಲು ಮುಂದಾಗಿದೆ. ಬೌದ್ಧಿಕ ಆಸ್ತಿ ಹಕ್ಕುಗಳ ಪ್ರತಿಪಾದಕರು ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ಪ್ರಬಲವಾಗಿದ್ದು , ಬೌದ್ಧಿಕ ಆಸ್ತಿಯ ಏಕಸ್ವಾಮ್ಯವನ್ನು ಸ್ಥಾಪಿಸಲು ಬಂಡವಾಳಿಗರಿಗೆ ನೆರವಾಗುವ ವಕೀಲರ ಬೃಹತ್ ಸೇನೆಯನ್ನೇ ಆಧುನಿಕ ಆಡಳಿತ ವ್ಯವಸ್ಥೆಯಲ್ಲಿ ಸೃಷ್ಟಿಸಲಾಗಿದೆ. ಹಾಗಾಗಿ ಜನರು ತಮ್ಮ ಜ್ಞಾನವನ್ನು ಸ್ವತಃ ತಾವೇ ಬಳಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದಾರೆ. ಉದಾಹರಣೆಗೆ ಬೇವು ಮತ್ತು ಅರಿಶಿನದಂತಹ ನೈಸರ್ಗಿಕ ಸಂಪತ್ತು ಯಾವುದೋ ಒಂದು ಕಂಪನಿಯ ಸ್ವಾಮ್ಯಕ್ಕೆ ಒಳಪಟ್ಟಿರುತ್ತದೆ .
ಈ ಪದಾರ್ಥಗಳ ಬಳಕೆಯ ಬಗ್ಗೆ ಸಾಂಪ್ರದಾಯಿಕವಾಗಿ ತಿಳುವಳಿಕೆಯನ್ನು ರೂಪಿಸಿದ ಜನಸಮುದಾಯಗಳು ಈಗ ಈ ಜ್ಞಾನವನ್ನು ಬಳಸಬೇಕೆಂದರೆ, ಈ ಪದಾರ್ಥಗಳನ್ನು ತಮ್ಮಿಂದ ಕಸಿದುಕೊಂಡವರಿಗೇ ನಿರ್ದಿಷ್ಟ ಹಣ ನೀಡಬೇಕಾಗುತ್ತದೆ. ಅನೇಕ ಸಂದರ್ಭಗಳಲ್ಲಿ ವೈಜ್ಞಾನಿಕ ಜ್ಞಾನ ವಿಸ್ತರಣೆಯಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿರುತ್ತದೆ. ಸರ್ಕಾರಗಳ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳ ಮೂಲಕ, ಸರ್ಕಾರ ಒದಗಿಸುವ ಸಹಾಯಧನದ ಮೂಲಕ ಈ ಜ್ಞಾನಾರ್ಜನೆ ಸಾಧ್ಯವಾಗುತ್ತದೆ. ಅಮೆರಿಕದಲ್ಲಿ ಕೋವಿದ್ 19 ಲಸಿಕೆಗಳನ್ನು ಸಮರೋಪಾದಿಯಲ್ಲಿ ಕಂಡುಹಿಡಿಯಲು ಮೂಲತಃ ನೆರವಾಗಿದ್ದು ಇದೇ ರೀತಿಯ ಸಾರ್ವಜನಿಕ ವಲಯದ ಜ್ಞಾನವೇ ಎನ್ನುವುದನ್ನು ಗಮನಿಸಬೇಕು.
1995ರಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ ಸಂಬಂಧಿ ವಿಚಾರಗಳು ((TRIPS)) , ಒಪ್ಪಂದವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹುತೇಕ ಎಲ್ಲ ರಾಷ್ಟ್ರಗಳೂ ಮುಕ್ತವಾಗಿ ಸ್ವೀಕರಿಸಿದ್ದವು. ವಿಶ್ವದಾದ್ಯಂತ ಬೌದ್ಧಿಕ ಆಸ್ತಿಯ ಹಕ್ಕುಗಳು ಏಕರೂಪವಾಗಿರಬೇಕು ಎನ್ನುವ ಉದ್ದೇಶದಿಂದ ಈ ಒಪ್ಪಂದವನ್ನು ವಿಶ್ವ ವಾಣಿಜ್ಯ ಸಂಸ್ಥೆ ರೂಪಿಸಿತ್ತು . ಈ ಟ್ರಿಪ್ಸ್ ಒಪ್ಪಂದ ಮೂಲತಃ ‘ಉತ್ಪನ್ನ ಸ್ವಾಮ್ಯದ ’ ನೀತಿಯನ್ನು ಆಧರಿಸಿ ರೂಪಿಸಲಾಗಿತ್ತು. ಆದರೆ ಭಾರತ ಭಿನ್ನ ರೀತಿಯಲ್ಲಿ ಆಲೋಚಿಸಿ, ‘ ಪ್ರಕ್ರಿಯೆ ಸ್ವಾಮ್ಯದ ‘ ಪರವಾಗಿ ತನ್ನ ನೀತಿಯನ್ನು ರೂಪಿಸಲು ಸಿದ್ಧವಾಗಿತ್ತು. ಉತ್ಪನ್ನ ಸ್ವಾಮ್ಯವನ್ನು ಹೊಂದಿರುವ ಹೂಡಿಕೆದಾರರು ಒಂದು ಹೊಸ ಔಷಧಿಯನ್ನು ಹಲವು ವರ್ಷಗಳ ಕಾಲ ಒಬ್ಬರೇ ಉತ್ಪಾದಿಸಿ, ಮಾರಾಟ ಮಾಡುವ ಹಕ್ಕುಗಳನ್ನು ಹೊಂದಿದವರಾಗಿರುತ್ತಾರೆ. ಔಷಧಿಯ ಸಂಶೋಧನೆ, ಸಂಸ್ಕರಣೆ ಮತ್ತು ಉತ್ಪಾದನೆಯಲ್ಲಿ ತಾವು ತೊಡಗಿಸುವ ಬಂಡವಾಳದ ಮೇಲೆ ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ಈ ಹೂಡಿಕೆದಾರರು ತಮ್ಮ ಏಕಸ್ವಾಮ್ಯದ ಆಧಾರದ ಮೇಲೆ, ಹೆಚ್ಚಿನ ಬೆಲೆ ನಿಗದಿಪಡಿಸುವ ಅಧಿಕಾರವನ್ನೂ ಹೊಂದಿರುತ್ತಾರೆ. ಹಾಗಾಗಿ ಔಷಧಿಯ ಬೆಲೆಯನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಬೆಲೆಯನ್ನು ಮುಂದುವರೆಸಲು ಈ ಹೂಡಿಕೆದಾರರು ಉತ್ಪಾದನೆಯ ಪ್ರಮಾಣವನ್ನೇ ಕಡಿಮೆ ಮಾಡಿಬಿಡುತ್ತಾರೆ.
ಮತ್ತೊಂದೆಡೆ ಭಾರತದಲ್ಲಿ ಅನುಸರಿಸಿದ ‘ ಪ್ರಕ್ರಿಯೆ ಸ್ವಾಮ್ಯ ’ದ ಮಾರ್ಗದ ಅನುಸಾರ ಭಾರತದ ಉತ್ಪಾದಕರು ಕಡಿಮೆ ಬೆಲೆಯಲ್ಲಿ ಹೆಚ್ಚಿನ ಔಷಧಿ ಪದಾರ್ಥಗಳನ್ನು ಉತ್ಪಾದಿಸಲು ನೆರವಾಗುವಂತೆ ಹೊಸ ಸಂಸ್ಕರಣ ಪ್ರಕ್ರಿಯೆಗಳನ್ನು ಸಂಶೋಧಿಸುತ್ತಾ ಹೋಗಲು ಸಾಧ್ಯವಾಯಿತು. ಇದರಿಂದ ಕಡಿಮೆ ಬೆಲೆಯ ಜನರಿಕ್ ಔಷಧಿಗಳನ್ನು ಉತ್ಪಾದಿಸುವುದೂ ಸಾಧ್ಯವಾಯಿತು. ಈ ನೀತಿಯು ಭಾರತವನ್ನೂ ಸೇರಿದಂತೆ ಹಲವು ಬಡ ರಾಷ್ಟ್ರಗಳಿಗೆ ನೆರವಾಗಿತ್ತು. ಆದರೆ ಈ ಪ್ರಕ್ರಿಯೆಯಲ್ಲಿ ಜನರಿಕ್ ಔಷಧಿಗಳನ್ನು ಉತ್ಪಾದಿಸುತ್ತಿದ್ದ ಭಾರತದ ಉತ್ಪಾದಕರು, ಹೊಸ ಸಂಶೋಧನೆಗಳ ಮೂಲಕ ಔಷಧಿಗಳನ್ನು ಉತ್ಪಾದಿಸುತ್ತಿದ್ದ ಪಶ್ಚಿಮ ರಾಷ್ಟ್ಟಗಳ ಔಷಧಿ ಉತ್ಪಾದಕರ ದೃಷ್ಟಿಯಲ್ಲಿ ಅಪಾಯಕಾರಿಯಾಗಿ ಕಂಡುಬಂದರು.
TRIPS) ನಿಯಮಗಳ ಅನುಸಾರ ಯಾವುದೇ ದೇಶವು ಕಡ್ಡಾಯ ಪರವಾನಗಿ ಪಡೆಯುವ ನೀತಿಯನ್ನು ಉತ್ಪಾದಕರ ಮೇಲೆ ಹೇರಲು ಸಾಧ್ಯವಿದೆ. ಹೊಸ ಔಷಧವನ್ನು ಕಂಡುಹಿಡಿಯುವ ಕಂಪನಿಯು ತುರ್ತು ಪರಿಸ್ಥಿತಿಗಳಲ್ಲಿ ಔಷಧಿಗಳನ್ನು ಕಡಿಮೆ ಬೆಲೆಯಲ್ಲಿ ಜನರಿಗೆ ಪೂರೈಸಲು ಸ್ಥಳೀಯ ಉತ್ಪಾದಕರಿಗೆ ಅವಕಾಶ ಒದಗಿಸಬಹುದು. ಆದರೆ ಸಂಶೋಧಕ ಕಂಪನಿಗೆ ಸೂಕ್ತ ಪರಿಹಾರ ನೀಡುವುದು ಕಡ್ಡಾಯವಾಗಿರುತ್ತದೆ. ಆದರೆ ಪಶ್ಚಿಮ ರಾಷ್ಟ್ರಗಳ ಕಂಪನಿಗಳು ಈ ನಿಯಮಗಳನ್ನು ಒಪ್ಪುವುದಿಲ್ಲ. ಈ ಹಿಂದೆ ಆಫ್ರಿಕಾದ ದೇಶಗಳಲ್ಲಿ ಏಡ್ಸ್ ಪಿಡುಗು ಸಾಂಕ್ರಾಮಿಕದಂತೆ ಹಬ್ಬಿದ ಸಂದರ್ಭದಲ್ಲಿ, ಅಲ್ಲಿನ ಸರ್ಕಾರಗಳು ಪಶ್ಚಿಮ ರಾಷ್ಟ್ರಗಳ ಉತ್ಪಾದಕರಿಂದ ದುಬಾರಿ ಬೆಲೆಯ ಔಷಧಿಗಳನ್ನು ಖರೀದಿಸಲಾಗದೆ, ಭಾರತದ ಕಡಿಮೆ ಬೆಲೆಯ ಉತ್ಪನ್ನಗಳನ್ನು ಖರೀದಿಸಿದ್ದವು. ಈಗ ಈ ನಿಯಮವನ್ನು ಮುಕ್ತಗೊಳಿಸಲು ಭಾರತ ಮತ್ತು ಆಫ್ರಿಕಾದ ದೇಶಗಳು ಪ್ರಯತ್ನಿಸುತ್ತಿದ್ದು, ತನ್ಮೂಲಕ ಅಮೆರಿಕ ಸಂಶೋಧಿತ ಕೋವಿದ್ 19 ಲಸಿಕೆಯಯನ್ನು ತಮ್ಮಲ್ಲೇ ಉತ್ಪಾದಿಸಲು ಅವಕಾಶ ಕಲ್ಪಿಸಲು ಆಲೋಚಿಸುತ್ತಿವೆ. ಅಮೆರಿಕದಲ್ಲಿ ಉತ್ಪಾದಿಸಲಾಗುತ್ತಿರುವ ಲಸಿಕೆಯ ಬೆಲೆ ಬಡ ರಾಷ್ಟ್ರಗಳ ಪಾಲಿಗೆ ದುಬಾರಿಯಾಗಿ ಪರಿಣಮಿಸುತ್ತಿದೆ.
ಔಷಧಿಗಳನ್ನು, ಸಮರ್ಪಕವಾದ ಪ್ರಮಾಣದಲ್ಲಿ , ಜನಸಾಮಾನ್ಯರ ಕೈಗೆಟುಕುವ ಬೆಲೆಯಲ್ಲಿ ಉತ್ಪಾದಿಸುವ ಪ್ರಕ್ರಿಯೆಯಲ್ಲಿ ಮೂರು ಭಾಗಿದಾರರನ್ನು ಗುರುತಿಸಬಹುದು. ಔಷಧಿಗಳ ಅವಶ್ಯಕತೆ ಇರುವ ಜನಸಾಮಾನ್ಯರು, ಈ ಔಷಧಿಗಳನ್ನು ಪೂರೈಸುವ ಜವಾಬ್ದಾರಿ ಇರುವ ಸರ್ಕಾರಗಳು ಮತ್ತು ಔಷಧಿಗಳನ್ನು ಉತ್ಪಾದಿಸಿ ಮಾರಾಟ ಮಾಡುವ ಉತ್ಪಾದಕರು. ಒಂದು ವೇಳೆ ಉತ್ಪಾದಕರು, ಸಾರ್ವಜನಿಕರ ಸೌಖ್ಯ ತಮ್ಮ ಜವಾಬ್ದಾರಿಯಲ್ಲ, ತಾವೇನಿದ್ದರೂ ಉತ್ಪಾದನೆ ಮತ್ತು ಮಾರಾಟಕ್ಕೆ ಬದ್ಧರು ಎಂದು ಹೇಳಿದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಬೇಕಾಗುತ್ತದೆ. ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಬೆಲೆ ನಿಯಂತ್ರಿಸಲು ಸೂಕ್ತ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. ಆದರೆ ಸರ್ಕಾರದ ಈ ಹಸ್ತಕ್ಷೇಪದ ಪರಿಣಾಮ ಮಾರುಕಟ್ಟೆಯಲ್ಲಿ ವ್ಯತ್ಯಯವಾಗುತ್ತದೆ ಎಂಬ ಕಾರಣಕ್ಕೆ ಖಾಸಗಿ ಉತ್ಪಾದಕರು ಮತ್ತು ಅವರನ್ನು ಬೆಂಬಲಿಸುವ ಅರ್ಥಶಾಸ್ತ್ರಜ್ಞರು, ಆಕ್ಷೇಪ ವ್ಯಕ್ತಪಡಿಸಿದರೆ ಅಥವಾ ತಮ್ಮ ಬಂಡವಾಳ ಹೂಡಿಕೆಯನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಸರ್ಕಾರಗಳು ತೆರಿಗೆಯ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದಲ್ಲಿ, ಆಗ ಸರ್ಕಾರಗಳ ಕೈ ಕಟ್ಟಿದಂತಾಗುತ್ತದೆ. ಅನಿವಾರ್ಯವಾಗಿ ಸರ್ಕಾರಗಳು ಇಂತಹ ಸಂದರ್ಭಗಳಲ್ಲಿ ಸಂಕಷ್ಟದಲ್ಲಿರುವ ಜನಸಾಮಾನ್ಯರ ನೆರವಿಗೆ ಧಾವಿಸಬೇಕಾಗುತ್ತದೆ.
ಸಾರ್ವಜನಿಕ ಮತ್ತು ಖಾಸಗಿ ಉದ್ದಿಮೆ
ಬಹುತೇಕ ಅರ್ಥಶಾಸ್ತ್ರಜ್ಞರು ಸಾರ್ವಜನಿಕ ಕ್ಷೇತ್ರದ ಔದ್ಯಮಿಕ ಬೆಳವಣಿಗೆಯನ್ನು ಬೆಂಬಲಿಸುವುದಿಲ್ಲ. ಸರ್ಕಾರಗಳು ಬ್ಯಾಂಕು, ಆಸ್ಪತ್ರೆ, ಶಾಲೆ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾರ್ವಜನಿಕ ಸಂಸ್ಥೆಗಳನ್ನು ಸ್ಥಾಪಿಸಿದ ಕೂಡಲೇ ಈ ಅರ್ಥಶಾಸ್ತ್ರಜ್ಞರು ತಮ್ಮದೇ ಆದ ವ್ಯಾಖ್ಯಾನದೊಂದಿಗೆ ಮುಂದೆಬರುತ್ತಾರೆ. ಇದೇ ಉದ್ದಿಮೆ ಅಥವಾ ಸೇವಾ ಕ್ಷೇತ್ರವನ್ನು ಖಾಸಗಿ ವಲಯದಲ್ಲಿ ಸ್ಥಾಪಿಸಿದರೆ ಪಾಲುದಾರರಿಗೆ ಇನ್ನೂ ಹೆಚ್ಚಿನ ಉತ್ಪಾದನೆ ಮತ್ತು ಲಾಭ ತಂದುಕೊಡುತ್ತದೆ ಎಂಬ ವಾದ ಮಂಡಿಸುತ್ತಾರೆ. ಒಂದು ವೇಳೆ ಈ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸಿದರೆ, ಒಡೆತನ ಹೊಂದಿರುವವರ ಪ್ರಥಮ ಆದ್ಯತೆ ಬಂಡವಾಳ ಹೂಡಿಕೆದಾರರಿಗೆ ಅತಿ ಹೆಚ್ಚು ಲಾಭ ದೊರಕಿಸಿಕೊಡುವುದೇ ಆಗಿರುತ್ತದೆ. ಈ ಪ್ರಕ್ರಿಯೆಯಲ್ಲಿ ಸಾರ್ವಜನಿಕ ಲಾಭ ಅಥವಾ ಉಪಯುಕ್ತತೆ ನಿರ್ಲಕ್ಷ್ಯಕ್ಕೊಳಗಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಪಾಲುದಾರರ ಲಾಭ ಗಳಿಕೆಯ ದೃಷ್ಟಿಯಿಂದ ಸಾರ್ವಜನಿಕ ಹೂಡಿಕೆಗಿಂತಲೂ ಖಾಸಗಿ ಹೂಡಿಕೆ ಹೆಚ್ಚು ಫಲಪ್ರದ ಎನಿಸುತ್ತದೆ.
ಸರ್ಕಾರಗಳ ಮೂಲ ಉದ್ದೇಶ, ತನ್ನ ಪ್ರಜೆಗಳ ಸರ್ವತೋಮುಖ ಪ್ರಗತಿ ಮತ್ತು ಸಾರ್ವತ್ರಿಕ ಸೌಖ್ಯ ಆಗಿರಬೇಕೇ ಹೊರತು, ಹೆಚ್ಚಿನ ಬೆಲೆ ತೆರುವ ಸಾಮರ್ಥ್ಯ ಇರುವವರಿಗೆ ಸರಕುಗಳನ್ನು ಒದಗಿಸುವುದಲ್ಲ. ತಮ್ಮ ಬಂಡವಾಳ ಹೂಡಿಕೆದಾರರಿಗೆ ಹೆಚ್ಚಿನ ಲಾಭ ಗಳಿಸಿಕೊಡಲು ಖಾಸಗಿ ಉದ್ದಿಮೆಗಳು ಈ ಮಾರ್ಗವನ್ನು ಅನುಸರಿಸುತ್ತವೆ. ಬಂಡವಾಳಶಾಹಿ ವ್ಯವಸ್ಥೆಯು ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಲು ಅಸಮರ್ಥವಾಗಿದೆ ಎನ್ನುವುದನ್ನು ಕೋವಿದ್ 19 ಬಿಕ್ಕಟ್ಟು ಸ್ಪಷ್ಟವಾಗಿ ನಿರೂಪಿಸಿದೆ. ಖಾಸಗಿ ಬಂಡವಾಳಶಾಹಿ ಉದ್ದಿಮೆಗಳು ಸಾರ್ವಜನಿಕ ಉದ್ದೇಶಗಳನ್ನು ಈಡೇರಿಸುವುದು ಸಾಧ್ಯವಿಲ್ಲ ಎನ್ನುವುದಾದರೆ, ಆಗ ಸರ್ಕಾರವು ಹೆಚ್ಚು ಸಾರ್ವಜನಿಕ ಉದ್ದಿಮೆಗಳನ್ನೇ ಸ್ಥಾಪಿಸುವ ಮೂಲಕ, ಎಲ್ಲ ಪ್ರಜೆಗಳಿಗೂ ಸಮಾನ ಪ್ರಮಾಣದಲ್ಲಿ ವಸ್ತುಗಳನ್ನು ಪೂರೈಸಲು ಅವಕಾಶ ಮಾಡಿಕೊಡಬೇಕಾಗುತ್ತದೆ.
ಅನಿಯಂತ್ರಿತ ಆರ್ಥಿಕ ಅಭಿವೃದ್ಧಿಯ ಪರಿಣಾಮ ಮನುಕುಲಕ್ಕೆ ಆಸರೆಯಾಗಿರುವ ಭೂಮಿಯ ಸಂಪನ್ಮೂಲಗಳು ಬರಿದಾಗುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಕೃತಕ ಬುದ್ಧಿಮತ್ತೆಯ ಪ್ರಯತ್ನಗಳು ಹೆಚ್ಚಾಗುತ್ತಿರುವಂತೆಲ್ಲಾ, ಬಂಡವಾಳಶಾಹಿ ಉದ್ದಿಮೆಗಳು ಮಾನವನ ಮನಸ್ಸನ್ನೂ ನಿರ್ವಹಿಸಲು ಪ್ರಯತ್ನಿಸುತ್ತಿವೆ. ಈ ಕ್ಷೇತ್ರದಲ್ಲಿ ಬಂಡವಾಳ ಹೂಡುತ್ತಿರುವವರು ಭೂ ಖಂಡದ ಅತ್ಯಂತ ಶ್ರೀಮಂತರಾಗುತ್ತಿದ್ದಾರೆ. ಕೋವಿದ್ 19 ಲಸಿಕೆಯ ತಯಾರಿಕೆಯಲ್ಲಿ ಬಳಸಲಾಗುವ (mRNA) ಎಮ್‍ಆರ್‍ಎನ್‍ಎ ತಂತ್ರಜ್ಞಾನಗಳು, ಮಾನವನ ದೇಹದ ಸಂಯೋಜನೆಯನ್ನೂ ನಿರ್ವಹಿಸಲು ನೆರವಾಗುತ್ತವೆ. ಹಾಗಾಗಿ ಬಂಡವಾಳಗಾರರು ಮಾನವನ ದೇಹವನ್ನೇ ಬಳಸಿಕೊಂಡು ಇನ್ನೂ ಹೆಚ್ಚಿನ ಸಂಪತ್ತನ್ನು ಗಳಿಸಲು ಸಾಧ್ಯವಾಗುತ್ತದೆ.
ಧನ ದಾಹಿ ಬಂಡವಾಳಶಾಹಿ ಮೌಲ್ಯಗಳು ಮಾನವೀಯ ಮೌಲ್ಯಗಳಿಂದ ಬಹುದೂರ ಸಾಗಿಬಿಟ್ಟಿವೆ. ಎಲ್ಲ ಕ್ಷೇತ್ರಗಳಲ್ಲೂ, ಎಲ್ಲ ವಲಯಗಳಲ್ಲೂ ಹಣವೇ ಯಶಸ್ಸಿನ ಮುಖ್ಯ ಮಾನದಂಡವಾಗಿ ಪರಿಣಮಿಸಿದೆ. ವ್ಯಕ್ತಿಗಳ ಸಂಪತ್ತು, ಕಂಪನಿಗಳ ಗಾತ್ರ ಮತ್ತು ದೇಶಗಳ ಆರ್ಥಿಕತೆಗಳಿಗೂ ಇದೇ ಮಾನದಂಡವನ್ನು ಅನ್ವಯಿಸಲಾಗುತ್ತಿದೆ. ಮನುಷ್ಯರು ಮತ್ತು ಮಾನವ ಸಮಾಜವನ್ನೊಳಗೊಂಡ ಸಂಕೀರ್ಣ ವ್ಯವಸ್ಥೆಯ ಸುಸ್ಥಿರ ಸೌಖ್ಯ ಅಥವಾ ಆರೋಗ್ಯ , ಬಹುಪಾಲು ನಿರ್ಲಕ್ಷ್ಯಕ್ಕೊಳಗಾಗಿದೆ. ಕೋವಿದ್ 19 ಪರಿಣಾಮವಾಗಿ ಬಂಡವಾಳಶಾಹಿ ಅಂತ್ಯವಾಗುವುದಿಲ್ಲ. ಆದರೆ ತನ್ನ ಉಳಿವಿಗಾಗಿ ಬಂಡವಾಳಶಾಹಿ ವ್ಯವಸ್ಥೆ ರೂಪಾಂತರಗೊಳ್ಳಬೇಕಾಗುತ್ತದೆ. ಕಂಪನಿಗಳು ತಮ್ಮ ಅಸ್ತಿತ್ವದ ಉದ್ದೇಶವನ್ನು ಕುರಿತು ಯೋಚಿಸಬೇಕಿದೆ. ಇಂದಿನ ಸನ್ನಿವೇಶದಲ್ಲಿ ಹೆಚ್ಚಿನ ಮಾನವೀಯ ಮೌಲ್ಯಗಳನ್ನು ಹೊಂದಿದ, ಕನಿಷ್ಠ ಮಾರುಕಟ್ಟೆ ಮೌಲ್ಯದ ಸಮಾಜವನ್ನು ರೂಪಿಸುವತ್ತ ಮುನ್ನಡೆಯಬೇಕಿದೆ.
( A billion fire flies- Critical conversations to shape a New post pandemic World– ಲೇಖಕರು ಈ ಕೃತಿಯ ರಚಯಿತರು).