ಬಂಧನವಾಗಿ 24 ಗಂಟೆಗಳೊಳಗೆ ಶ್ರೀರಾಮುಲು ಪಿಎ ಬಿಡುಗಡೆ!
ಬೆಂಗಳೂರು: ಸಚಿವರು ಮತ್ತು ಸಿಎಂ ಪುತ್ರ ಬಿ ವೈ ವಿಜಯೇಂದ್ರ ಅವರ ಹೆಸರು ಹೇಳಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಅವರ ಪಿಎ ರಾಜಣ್ಣನನ್ನು ಸಿಸಿಬಿ ಪೊಲೀಸರು ಶುಕ್ರವಾರ ಮಧ್ಯಾಹ್ನ ಬಿಡುಗಡೆ ಮಾಡಿದ್ದಾರೆ.
ನಿನ್ನೆ ರಾಜಣ್ಣನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು. ಇಂದು ಬೆಂಗಳೂರಿನ ಆಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಲ್ ನಲ್ಲಿ ವಿಚಾರಣೆ ನಡೆಸಿ ಅವರ ಧ್ವನಿ ಸ್ಯಾಂಪಲ್ ನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ವಿಚಾರಣೆಗೆ ಕರೆದಾಗಲೆಲ್ಲಾ ಹಾಜರಾಗುವಂತೆ ಷರತ್ತು ವಿಧಿಸಿ ಬಿಡುಗಡೆ ಮಾಡಿದ್ದಾರೆ ಎಂದು ವರದಿಯಾಗಿದೆ.
ರಾಜಕೀಯ ಪ್ರಭಾವಿಯಾಗಿರುವ ರಾಜಣ್ಣ ಬಿಡುಗಡೆಯ ಹಿಂದೆ ಬಿಜೆಪಿ ನಾಯಕರ ಒತ್ತಡ ಗಳಿವೆಯೇ?, ಪೊಲೀಸರ ಮೇಲೆ ನಾಯಕರು ತೀವ್ರ ಒತ್ತಡ ಹಾಕಿದರೇ ಎಂಬ ಅನುಮಾನಗಳು ಇದೀಗ ಕೇಳಿ ಬಂದಿವೆ.
ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕರು, ವಂಚನೆ ಪ್ರಕರಣದಲ್ಲಿ ಆಪ್ತನನ್ನು ರಕ್ಷಿಸುವ ಮೂಲಕ ಪರೋಕ್ಷವಾಗಿ ಭ್ರಷ್ಟಾಚಾರ, ವಂಚನೆಗೆ ಸಚಿವರುಗಳು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.