ನವದಂಪತಿಗಳಿಂದ ಬಂಗಾಡಿ ಬೀಡಿಗೆ ವೀಳ್ಯದೆಲೆ ಸಮರ್ಪಣೆ: ತುಳುನಾಡಿನ ಅವಳಿ ವೀರರು ಕಾನದ—ಕಟದರು | ಸಂಚಿಕೆ: 08 - Mahanayaka
4:19 AM Wednesday 11 - December 2024

ನವದಂಪತಿಗಳಿಂದ ಬಂಗಾಡಿ ಬೀಡಿಗೆ ವೀಳ್ಯದೆಲೆ ಸಮರ್ಪಣೆ: ತುಳುನಾಡಿನ ಅವಳಿ ವೀರರು ಕಾನದ—ಕಟದರು | ಸಂಚಿಕೆ: 08

kanada katada
30/11/2021

  • ಸತೀಶ್ ಕಕ್ಕೆಪದವು

ಬಂಗಾಡಿಯ ಅರಸರ ಬೀಡಿಗೆ ಮದುಮಗಳು ಬೊಲ್ಲೆ, ಮದುಮಗ ಹಂದ್ರ ಹಿರಿಯರೊಡಗೂಡಿಕೊಂಡುಬರುತ್ತಾರೆ. ಸೂರ್ಯೋದಯದ ಹೊಂಗಿರಣ ಬೀಡಿನ ಚಾವಡಿಯ ಸತ್ಯ ದೈವಗಳ ಮುಗ ಮೂರ್ತಿಯ ಮುಖ ಮುದ್ರೆಯನ್ನು ಸ್ಪರ್ಶಿಸಿ ಭಕ್ತಿ ಪೂರ್ಣವಾಗಿ ತಲೆತಗ್ಗಿಸಿ ನಿಂತ ನವದಂಪತಿಗಳಿಗೆ ಆಶೀರ್ವಾದದ ಸಿಂಚನವನ್ನು ಸಿಂಪಡಿಸುವಂತಿತ್ತು. ಬೀಡಿನ ಚಾವಡಿಯ ಮುಂಭಾಗದಲ್ಲಿ ಬಾಳೆಗೊನೆಯೊಂದನ್ನು ಕಾಯಿ ಕಾಣಿಕೆಯಾಗಿ ಅರ್ಪಿಸಿ, ಫಲ ಪುಷ್ಪಗಳೊಂದಿಗೆ ಕಾವಲೆ ವೀಳ್ಯದೆಲೆಯ ಜೊತೆಗೆ ಅಡಿಕೆಯೊಂದನ್ನು ಇರಿಸಿ, ಹಿರಿಯರ ಚರಣಾರವಿಂದಗಳಿಗೆ ನಮಿಸಿ ಚಾವಡಿಯ ಸತ್ಯ ದೈವಗಳನ್ನು ಸ್ಮರಿಸಿ ನಿಂತಲ್ಲಿಂದಲೇ ಅಡ್ಡ ಬಿದ್ದು ಎದ್ದು ನಿಲ್ಲುತ್ತಾರೆ.

ಆಗಷ್ಟೇ ಬಂಗಾಡಿ ಅರಸರು ಜಲಕ ಮುಗಿಸಿ ಗಂಧವ ಲೇಪಿಸಿ ಜಪ ತಪಗಳ ಮೌನ ಧ್ಯಾನ ಮುದ್ರೆಯ ಬಳಿಕ ಸತ್ಯ ದೈವಗಳ ಚಾವಡಿಯ ಬಾಗಿಲು ತೆರೆದು ದೈವಗಳ ಸನ್ನಿಧಿಯಲ್ಲಿ ನವದಂಪತಿಗಳಿಗೆ ಒಳಿತಾಗುವಂತೆ ಪ್ರಾರ್ಥಿಸಿ ಮನೆಮಂಚವುನಲ್ಲಿ ಇರಿಸಲಾದ ಗಿಂಡ್ಯೆ ನೀರನ್ನು ವಧು ವರರಿಗೆ ಸಿಂಪಡಿಸಿ, ಸಜ್ಜನಿಕೆಯ ಬೊಲ್ಲೆಯ ಸೆರಗಿನ ತುದಿಗೆ ಮುಗ ಮೂರ್ತಿಯನ್ನು ಶೃಂಗಾರಿಸಿದ ಪುಷ್ಪ ವೊಂದನ್ನು ತೆಗೆದು ಎತ್ತಿ ಹಾಕುತ್ತಾರೆ. ಹಾಗೆಯೇ ಬಂಗಾಡಿ ಬೀಡಿನ ಒಕ್ಕಲು ಜನರು,ಅದರಲ್ಲೂ ವಿಶೇಷವಾಗಿ ಕಪ್ಪದಮಾನಿ ಹಂದ್ರನ ಕೈಹಿಡಿದ ಸೌಮ್ಯ ಸ್ವಭಾವದ ಮದುಮಗಳು ಬೊಲ್ಲೆಯನ್ನು ಕುರಿತಾಗಿ ಬಂಗಾಡಿ ಅರಸರು ದಮ್ಮೊಪದೇಶದ ಮಾತುಗಳನ್ನು ಆಡುತ್ತಾರೆ. ದಂಪತಿಗಳು ಒಬ್ಬರಿಗೊಬ್ಬರು ಪರಸ್ಪರ ಹೊಂದಿಕೊಂಡು ಬದುಕಿನ ಉದ್ದಕೂ ಸಾಗ ಬೇಕಾದ ರೀತಿ ನೀತಿಗಳ ಮೌಲ್ಯವನ್ನು ಬೋಧಿಸುತ್ತಾರೆ. ಗಂಡ ದಂಟೆ ಹಿಡಿದಾಗ ಹೆಂಡತಿ ಗೆರಟೆ ಹಿಡಿಯಲೂ ಸಿದ್ಧ ಆದಾಗ ಮಾತ್ರ ಗಂಡ ಹೆಂಡಿರ ಬದುಕು ಸಾರ್ಥಕ ಎನಿಸುತ್ತದೆ. ಗಂಡ ಹೆಂಡತಿ ಕಷ್ಟ ಸುಖಗಳನ್ನು ಹಂಚಿಕೊಂಡು ಬಾಳಬೇಕು.  ಬದುಕಿನ ಸಂಜೆಯ ಕಾಲದವರೆಗೂ ಒಬ್ಬರಿಗೊಬ್ಬರು ಜೊತೆ ಜೊತೆಯಲ್ಲಿ ಸಾಗಬೇಕು, ಎಂಬಿತ್ಯಾದಿ ಉಪದೇಶಗಳನ್ನು ಈಗ ತಾನೆ ಮದುವೆಯಾಗಿ ಚಾವಡಿಗೆ ಗೌರವಾರ್ಪಣೆಗೆ ಆಗಮಿಸಿದ ಬೊಲ್ಲೆ-ಹಂದ್ರರಿಗೆ ಬೋಧಿಸುತ್ತಾರೆ.

ಅದರೊಂದಿಗೆ ಮದುವೆಯ ಹೊಸ್ತಿಲಲ್ಲಿ ಅನಾದಿಕಾಲದಿಂದಲೂ ಆಚರಿಸುತ್ತಿದ್ದ ಬೀಡಿನ ಸಂಪ್ರದಾಯದಂತೆ ಚಾವಡಿಯ ಸತ್ಯ ದೈವಗಳಿಗೆ ವೀಳ್ಯದೆಲೆ ಇಡುವ ( ಬಚ್ಚಿರೆ ದೀಪುನ ) ಕ್ರಮವನ್ನು ಅರ್ಪಣಾ ಮನೋಭಾವದಿಂದ ಸಮರ್ಪಿಸಿದ ದಂಪತಿಗಳ ಧನ್ಯತೆಯ ಮುಖ ಮುದ್ರೆಯನ್ನು ಗಮನಿಸಿದ ಬಂಗಾಡಿ ಅರಸ ಗೌರವದ ಸಂಕೇತವಾಗಿ ತನ್ನ ಕತ್ತಲ್ಲಿ ಧರಿಸಿರುವ ಬಂಗಾರದ ಕೊತ್ತಂಬರಿ ಸರವನ್ನು ಮದುಮಗಳು ಬೊಲ್ಲೆಯ ಹಸ್ತಕ್ಕೆ ಕೈಯೆತ್ತಿ ಹಾಕಲು ಮುಂದಾದಾಗ ಎರಡೂ ಕೈಗಳನ್ನು ಚಾಚಿ ವಿನಯ ಪೂರ್ವಕವಾಗಿ  ತಗ್ಗಿ ಬಗ್ಗಿ ತಲೆಬಾಗಿ ಸ್ವೀಕರಿಸುತ್ತಾಳೆ. ಇದನ್ನು ಕಂಡ ಮಂತ್ರಿ ಬುದ್ಯಂತರು ಖಾಲಿ ಗುಡ್ಡ ಪ್ರದೇಶವನ್ನು ಸ್ವರವೆತ್ತಿ ಗೊತ್ತು ಪಡಿಸಿ  ( ಮೂಜಿಮುಡಿ ಬುಲೆತ್ತ ಕೋಡಿ ಕೊಲೆಂಜಿದ ಬರಿತ ಬೋರುಗುಡ್ಡೆ ) ದಂಪತಿಗಳಿಗೆ ಬಿಟ್ಟು ಕೊಡಲು ನಿರ್ಧರಿಸುತ್ತಾರೆ. ಇಷ್ಟಲ್ಲದೆ ಬಂಗಾಡಿ ಅರಸರು ನಿಷ್ಠಾವಂತ ಕಪ್ಪದ ಮಾನಿ ಹಂದ್ರ ಹಾಗೂ ಸದ್ಗುಣ ಸಂಸ್ಕಾರಗಳನ್ನು ಹೊಂದಿರುವ ಬೊಲ್ಲೆಯ ನಿಯತ್ತನ್ನು ಮನಃಪೂರ್ವಕವಾಗಿ ಗೌರವಿಸಿ ಇನ್ನೂ ಏನಾದರೂ ಬಯಕೆ ಹೊಂದಿದ್ದಲ್ಲಿ ಕೇಳಿ ಕೊಳ್ಳಲು ಸಮ್ಮತಿಸುತ್ತಾರೆ. ಆಗ ಮದುಮಗಳು ಬೊಲ್ಲೆಯು ಉದಾರ ಭಾವನೆಯಿಂದ ನನಗೇನೂ ಬೇಡ,ಆದರೆ ಮುಂದಕ್ಕೆ ನನ್ನ ಹೊಟ್ಟೆಯಲ್ಲಿ ಹುಟ್ಟಿ ಬರುವ ಮಗು ಹೆಣ್ಣಾಗಲಿ, ಗಂಡಾಗಲಿ ಮುಂದೊಂದು ದಿನ ತಮ್ಮಲ್ಲಿ ಬಂದು ಕೇಳಿದರೆ,  ದಯವಿಟ್ಟು ದಯಪಾಲಿಸಿ ಉಲ್ಲಾಯ ಎಂಬುದಾಗಿ ವಿನಮ್ರ ವಿನಂತಿಯನ್ನು ಮಾಡಿಕೊಳ್ಳುತ್ತಾಳೆ. ಆಕೆಯ ವಿನಯಪೂರ್ವಕ ಒಡಲಾಳದ ಭಾವನೆಗೆ ತಲೆದೂಗುತ್ತ ಸಮ್ಮತಿಸರಲ್ಲದೆ ಬೆಳಗ್ಗಿನ ಉಪಹಾರವನ್ನು ಸ್ವೀಕರಿಸಲು ಸೂಚಿಸಿ , ಯಾವುದೇ ದುಃಖ ದುಗುಡ ದುಮ್ಮಾನಗಳು ಎದುರಾದರೆ

ಬಂದು ನಿವೇದಿಸಿಕೊಳ್ಳಿ ಯಾವತ್ತೂ ಬಿಟ್ಟುಹಾಕುವುದಿಲ್ಲ, ಎಂಬ ಭರವಸೆಯ ಮಾತನ್ನಿತ್ತು ನವದಂಪತಿಗಳಿಗೆ ಹಾರೈಸಿ ಕಳುಹಿಸಿ ಕೊಡುತ್ತಾರೆ.

 ಹೀಗೆ ಈಂದೊಟ್ಟುವಿನ  ಬುಡಾರವೊಂದರಲ್ಲಿ ಬೊಲ್ಲೆ ಹಂದ್ರರ ದಾಂಪತ್ಯ ಜೀವನ ನವೋಲ್ಲಸದಿಂದ ಆರಂಭವಾಗುತ್ತದೆ. ( ಮುಂದಿನ ಸಂಚಿಕೆ: ಸತ್ಯದಪ್ಪೆ ಬೊಲ್ಲೆಯ ಸೀಮಂತ/ಬಯಕೆ ಕಾರ್ಯಕ್ರಮ)

ಹಿಂದಿನ ಸಂಚಿಕೆಗಳು:

ತುಳುನಾಡಿನ ಅಪ್ರತಿಮ ಅವಳಿ ವೀರರು ಕಾನದ-ಕಟದರು | ಸಂಚಿಕೆ-01

ಸಮಾಜ ಪರಿವರ್ತನಾ ಚಳುವಳಿಯಲ್ಲಿ ಕಾನದ– ಕಟದರ ಹೆಜ್ಜೆ ಗುರುತು:

ಬೊಲ್ಲೆಯ ಜನ್ಮ ವೃತ್ತಾಂತ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 03

ಬೊಲ್ಲೆಯ ನಾಮಕರಣ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 04

ಸ್ವಾಭಾವಿಕ ಸ್ವಭಾವ ಬೆಳೆಸಿಕೊಂಡ ಸತ್ಯದಪ್ಪೆ ಬೊಲ್ಲೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 05

ಸತ್ಯದಪ್ಪೆ ಬೊಲ್ಲೆಯ ನೀರ ಮದುವೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 06

ಕಪ್ಪದ ಮಾನಿ ಹಂದ್ರನ ಬೇಟಿ/ ಪೊದು ಸಂಬಂಧ/ಮದುವೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು: ಸಂಚಿಕೆ: 07

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

 

ಇತ್ತೀಚಿನ ಸುದ್ದಿ