ನಂಬರ್ ಪ್ಲೇಟ್ ಗೆ ಗಮ್ ಟೇಪ್ ಅಂಟಿಸಿದ್ರೆ ಕ್ರಿಮಿನಲ್ ಕೇಸ್: ವಾಹನ ಸವಾರರಿಗೆ ಶಾಕ್ ಕೊಟ್ಟ ಪೊಲೀಸರು

ಬೆಂಗಳೂರು: ದಂಡ ಪಾವತಿಸುವುದರಿಂದ ಪಾರಾಗಲು ವಾಹನ ಸವಾರರು ನಂಬರ್ ಪ್ಲೇಟ್ ಗೆ ಗಮ್ ಟೇಪ್ ಅಂಟಿಸಿ ಪ್ರಯಾಣಿಸುತ್ತಿರುವ ವಿಚಾರ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಇದೀಗ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಶಾಕ್ ನೀಡಿದ್ದಾರೆ.
ಬೆಂಗಳೂರು ನಗರದಲ್ಲಿ ನಂಬರ್ ಪ್ಲೇಟ್ ಗೆ ಗಮ್ ಟೇಪ್ ಹಚ್ಚಿ ಸಂಚರಿಸುತ್ತಿದ್ದ ವಾಹನ ಸವಾರರ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಪೊಲೀಸರ ಕಾರ್ಯಾಚರಣೆ ವೇಳೆ 1,13,517 ಕೇಸ್ ಗಳನ್ನು ದಾಖಲಿಸಿಕೊಂಡಿದ್ದು, ನಂಬರ್ ಪ್ಲೇಟ್ ಇಲ್ಲದ 1535 ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 22 ಜನರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಮೂಲಕ ವಾಹನ ಸವಾರರಿಗೆ ಬಿಸಿಮುಟ್ಟಿಸಿದ್ದಾರೆ.
ಬೆಂಗಳೂರು ನಗರದಲ್ಲಿ ವಾಹನ ಸವಾರರು ನಂಬರ್ ಪ್ಲೇಟ್ ಗೆ ಗಮ್ ಟೇಪ್ ಅಂಟಿಸುವುದು, ಮಹಿಳಾ ಪ್ರಯಾಣಿಕರು ವೇಲ್ ಮೂಲಕ ನಂಬರ್ ಪ್ಲೇಟ್ ನ್ನು ಮುಚ್ಚುವುದು ಮೊದಲಾದ ಪ್ರಕರಣಗಳು ಪತ್ತೆಯಾಗಿದ್ದವು. ವಾಹನ ಸವಾರರ ಚಾಣಾಕ್ಷತನಗಳು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ವೈರಲ್ ಆಗಿದ್ದವು. ಸಾಕಷ್ಟು ಜನರ ರೀಲ್ಸ್ ಗಳಲ್ಲಿ ಈ ವಿಡಿಯೋಗಳು ರಾರಾಜಿಸಿದ್ದವು. ಇದೀಗ ನಂಬರ್ ಪ್ಲೇಟ್ ವಿಚಾರದಲ್ಲಿ ಆಟವಾಡುತ್ತಿದ್ದ ವಾಹನ ಸವಾರರಿಗೆ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದಾರೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗುವ ಸಾಧ್ಯತೆಗಳು ಹೆಚ್ಚಿವೆ.