ಬೆಂಗಳೂರು ವಾಸಕ್ಕೆ ಯೋಗ್ಯವಲ್ಲ ಅನ್ನೋ ಅಯೋಗ್ಯರು ಇಲ್ಲಿಗೆ ಬರಬೇಡಿ: ಬೆಂಗಳೂರಿನ ದುಸ್ಥಿತಿಯ ಬಗ್ಗೆ ಟೀಕೆಗೆ ಮುನಿರತ್ನ ಕಿಡಿ
ಬೆಂಗಳೂರು: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರು ಜಲಾವೃತವಾಗಿವೆ. ಈ ನಡುವೆ ಬೆಂಗಳೂರು ವಾಸಿಸಲು ಯೋಗ್ಯವಲ್ಲ ಎಂದು ಸಾಕಷ್ಟು ಜನರು ಸರ್ಕಾರವನ್ನು ಟೀಕಿಸುತ್ತಿದ್ದು, ಇದೀಗ ಟೀಕಾಕಾರರ ವಿರುದ್ಧ ಸಚಿವ ಮುನಿರತ್ನ ಕಿಡಿಕಾಡಿದ್ದಾರೆ.
ಬೆಂಗಳೂರು ವಾಸಕ್ಕೆ ಯೋಗ್ಯವಲ್ಲ ಅನ್ನೋ ಅಯೋಗ್ಯರು ಬೆಂಗಳೂರಿಗೆ ಬರಬಾರದು. ಇವರನ್ನು ಬೆಂಗಳೂರಿಗೆ ಬನ್ನಿ ಎಂದು ಯಾರೂ ಕರೆದಿಲ್ಲ ಎಂದು ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಅವರು, ಬೆಂಗಳೂರಿಗೆ ಬೈಯ್ಯುವವರು ತಿಂದ ತಟ್ಟೆಯಲ್ಲೇ ಹೇಸಿಗೆ ಮಾಡುತ್ತಾರೆ ಅನ್ನುವ ಗಾದೆ ರೀತಿಯೇ ಮಾಡುತ್ತಿದ್ದಾರೆ. ಬೆಂಗಳೂರಿನ ಅನ್ನ ಉಂಡು ಬೆಂಗಳೂರಿಗೆ ಬೈಯ್ಯುತ್ತಾರೆ ಎಂದಿದ್ದಾರೆ.
ಬೆಂಗಳೂರಿನ ದುಸ್ಥಿತಿ ಕುರಿತು ಸಾಕಷ್ಟು ಟ್ರೋಲ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬೆಂಗಳೂರಿನಲ್ಲಿ ಸೃಷ್ಟಿಯಾಗಿರುವ ಕೃತಕ ನೆರೆಗೆ ಸರ್ಕಾರ ಜವಾಬ್ದಾರಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇತ್ತ ಸಚಿವರು ಸಾರ್ವಜನಿಕರು ಪ್ರಶ್ನಿಸಬಾರದು ಎನ್ನುವಂತೆ ಮಾತನಾಡುತ್ತಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆಗಳು ಕೂಡ ಕೇಳಿ ಬಂದಿವೆ.
ಬೆಂಗಳೂರಿನಲ್ಲಿನ ಅವ್ಯವಸ್ಥೆಯಿಂದಾಗಿ, ಕಳಪೆ ಕಾಮಗಾರಿಗಳಿಂದಾಗಿ ಇಂದು ನಗರ ದುಸ್ಥಿತಿಗೆ ತಲುಪಿದೆ. ಇದನ್ನು ಪ್ರಶ್ನಿಸುವವರನ್ನು ಸಚಿವರು ಇಷ್ಟೊಂದು ಕೇವಲವಾದ ಭಾಷೆಯಲ್ಲಿ ಮಾತನಾಡಿರುವುದು ಸರಿಯೇ? ಬೆಂಗಳೂರಿಗೆ ಬಂದವರೂ, ಅಲ್ಲೇ ಇದ್ದವರೂ ಕೂಡ ಸರ್ಕಾರಕ್ಕೆ ತೆರಿಗೆ ಕಟ್ಟುತ್ತಾರೆ. ಜನರು ಪ್ರಶ್ನಿಸಬಾರದು ಎಂದರೆ ಹೇಗೆ ? ಎನ್ನುವ ಆಕ್ರೋಶದ ಮಾತುಗಳು ಕೂಡ ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka